

ಬೆಂಗಳೂರು: ಕರೊನಾ ಸೋಂಕಿನಿಂದ ಬೆಂಗಳೂರು ಸೇರಿ ದೇಶದ ಜನರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಇದರ ನಡುವೆಯೇ ಸಂತಸದ ಸುದ್ದಿಯೆಂದರೆ ರಾಜಧಾನಿ ಬೆಂಗಳೂರಿನ ಮಾಲಿನ್ಯ ಪ್ರಮಾಣ ಗಣನೀಯವಾಗಿ ತಗ್ಗಿದೆ.
ಕರೊನಾ ಕಾರಣಕ್ಕೆ ಲಾಕ್ಡೌನ್ ಆಗುವುದಕ್ಕೂ ಮುಂಚಿನ ಸ್ಥಿತಿಗೆ ಹೋಲಿಸಿದರೆ ಬೆಂಗಳೂರಿನ ಪ್ರಮುಖ ಸ್ಥಳಗಳಲ್ಲಿ ಶೇ.65ರವರೆಗೆ ಮಾಲಿನ್ಯ ತಗ್ಗಿದೆ. ಈಗ್ಗೆ ಸರಿಯಾಗಿ ಒಂದು ವರ್ಷದ ಹಿಂದಿನ ಸ್ಥಿತಿಗೆ ಹೋಲಿಕೆ ಮಾಡಿದರೆ ಶೇ.70ರವರೆಗೆ ಮಾಲಿನ್ಯ ತಗ್ಗಿದೆ. ಎಲ್ಲಕ್ಕಿಂತ ಮುಖ್ಯವಾಗಿ, ಸಂಚಾರ ದಟ್ಟಣೆ ಹಾಗೂ ಮಾಲಿನ್ಯಕ್ಕೆ ಕುಖ್ಯಾತಿ ಪಡೆದ ಕೇಂದ್ರ ರೇಷ್ಮೆ ಮಂಡಳಿ (ಸೆಂಟ್ರಲ್ ಸಿಲ್ಕ್ ಬೋರ್ಡ್) ಪ್ರದೇಶದಲ್ಲಿ ಅಸಾಧ್ಯ ಎನ್ನುವಷ್ಟರ ಮಟ್ಟಿಗೆ ಗಾಳಿ ಶುದ್ಧವಾಗಿರುವುದು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಆನ್ಲೈನ್ನಲ್ಲಿ ಸಂಗ್ರಹಿಸುವ ದತ್ತಾಂಶಗಳ ವಿಶ್ಲೇಷಣೆಯಿಂದ ತಿಳಿದುಬಂದಿದೆ.
ಬಿಟಿಎಂ ಲೇಔಟ್ನಲ್ಲಿ 2019ರ ಮಾ.31ಕ್ಕೆ ಪ್ರತಿ ಘನ ಮೀಟರ್ ವಿಸ್ತೀರ್ಣದಲ್ಲಿ 80.77 ಇದ್ದ ಪಿಎಂ 2.5 ಧೂಳಿನ ಕಣಗಳು 2020ರ ಮಾ.31ಕ್ಕೆ ಶೇ.70 ಕುಸಿದು ಕೇವಲ ಶೇ.23.89 ಆಗಿದೆ. ಈ ಪ್ರಮಾಣ ಇದೇ ವರ್ಷದ ಕಳೆದ ತಿಂಗಳಿಗೆ ಹೋಲಿಸಿದರೆ ಶೇ.9.5 ಕುಸಿತ ಕಂಡಿದೆ. ಕೆಲವು ಪ್ರದೇಶಗಳಲ್ಲಿ ಧೂಳಿನ ಕಣಗಳು ತುಸು ಏರಿಕೆ ಕಂಡಿದೆ. ಇದಕ್ಕೆ ರಸ್ತೆ ಮೇಲಿನ ಮಣ್ಣು ಬಿಸಿಲು ಹಾಗೂ ಗಾಳಿಗೆ ಚದುರಿರುವುದು ಕಾರಣ ಎನ್ನಲಾಗುತ್ತಿದೆ. ಕಾಡುಬೀಸನಹಳ್ಳಿ ಪ್ರದೇಶದಲ್ಲಿ ಕಳೆದ ವರ್ಷವಿದ್ದ 51.46ರಿಂದ ಶೇ.10 ಹೆಚ್ಚಳವಾಗಿದೆ.
ರೇಷ್ಮೆ ಮಂಡಳಿ ಬಳಿ ಅಚ್ಚರಿ: ಬೆಂಗಳೂರಿನಲ್ಲಿ ಅತಿ ಹೆಚ್ಚು ಸಂಚಾರ ದಟ್ಟಣೆಗೆ ಕುಖ್ಯಾತಿ ಪಡೆದಿರುವುದು ಕೇಂದ್ರ ರೇಷ್ಮೆ ಮಂಡಳಿ ಜಂಕ್ಷನ್. ಅತಿ ಹೆಚ್ಚು ಹೊತ್ತು ದಟ್ಟಣೆಯಲ್ಲಿ ವಾಹನಗಳು ಸಿಲುಕುವ ಕಾರಣ ವಾಯುಮಾಲಿನ್ಯವೂ ಹೆಚ್ಚಿನ ಪ್ರಮಾಣದಲ್ಲಿ್ಲ ಇರುತ್ತದೆ. ವಿವಿಧ ಅಂಶಗಳನ್ನು ಆಧರಿಸಿ ನೀಡಲಾಗುವ ವಾಯು ಗುಣಮಟ್ಟ ಸೂಚ್ಯಂಕ (ಎಕ್ಯುಐ) ಈ ಪ್ರದೇಶದಲ್ಲಿ ಬೆಂಗಳೂರಿನ ಇತರೆ ಪ್ರದೇಶಗಳಿಂದ ಹೆಚ್ಚೇ ಇರುತ್ತಿತ್ತು. 2017ರ ಮಾರ್ಚ್ನಲ್ಲಿ 127, 2018ರ ಮಾರ್ಚ್ ನಲ್ಲಿ 115 ಹಾಗೂ 2019ರ ಮಾರ್ಚ್ನಲ್ಲಿ 135 ಇದ್ದ ಎಕ್ಯುಐ ಪ್ರಮಾಣ ಇದೀಗ ಕೇವಲ 42 ದಾಖಲಾಗಿದೆ. ಎಕ್ಯುಐ ಪ್ರಮಾಣ 0-50ರವರೆಗಿದ್ದರೆ ಅತ್ಯುತ್ತಮ, 51-100 ಇದ್ದರೆ ಸಮಾಧಾನಕರ, 101-200ರವರೆಗಿದ್ದರೆ ಮಧ್ಯಮ, 201-300ರವರೆಗಿದ್ದರೆ ಕನಿಷ್ಠ, 301-400ರವರೆಗಿದ್ದರೆ ಅತಿ ಕನಿಷ್ಠ ಹಾಗೂ 401ಕ್ಕಿಂತ ಹೆಚ್ಚಿದ್ದರೆ ಅಪಾಯಕಾರಿ. ಅನೇಕ ವರ್ಷಗಳಿಂದ ರೇಷ್ಮೆ ಮಂಡಳಿಯ ಎಕ್ಯುಐ ಮಧ್ಯಮದಲ್ಲೆ ಇದ್ದು, ನಿಧಾನವಾಗಿ ಕನಿಷ್ಠದತ್ತ ಸಾಗುತ್ತದೆಯೇ ಎಂಬ ಚಿಂತೆ ಮೂಡಿಸುತ್ತಿತ್ತು. ಆದರೆ ಇದೀಗ ಲಾಕ್ಡೌನ್ ಕಾರಣಕ್ಕೆ ನೇರವಾಗಿ ಎರಡು ಹಂತಗಳನ್ನು ಗೆದ್ದು ಅತ್ಯುತ್ತಮ ಹಂತಕ್ಕೆ ಬಂದಿದೆ.
ಕಾರಣಗಳು ಹಲವು: ಲಾಕ್ಡೌನ್ ಕಾರಣಕ್ಕೆ ಕೇವಲ ವಾಹನ ಸಂಚಾರ ಇಲ್ಲದಿರುವುದೇ ಕಾರಣವಲ್ಲ. ಮಾಲಿನ್ಯಕ್ಕೆ ಪ್ರಮುಖವಾಗಿ ಬೆಂಗಳೂರಿನಲ್ಲಿ ನಿರಂತರವಾಗಿ ನಡೆಯುತ್ತಿರುವ ರಸ್ತೆ ನಿರ್ವಣ, ಕಟ್ಟಡ ನಿರ್ಮಾಣ ಕಾಮಗಾರಿ, ರಸ್ತೆ ಬದಿಯಲ್ಲಿರುವ ಮಣ್ಣು, ಮೆಟ್ರೋ ನಿರ್ಮಾಣ ಕಾಮಗಾರಿಗಳಿಂದ ಹೊರಬರುವ ಧೂಳು ಕಾರಣ. ಲಾಕ್ಡೌನ್ ಅವಧಿಯಲ್ಲಿ ನಿರ್ಮಾಣ ಕಾಮಗಾರಿಯೂ ಸಂಪೂರ್ಣ ಸ್ತಬ್ಧವಾಗಿರುವುದು ವಾಯು ಗುಣಮಟ್ಟ ಹೆಚ್ಚಳಕ್ಕೆ ಕಾರಣವಾಗಿದೆ ಎನ್ನಲಾಗಿದೆ.
ರಮೇಶ ದೊಡ್ಡಪುರ