

ಹನೂರು: ಪಟ್ಟಣದ ತಹಸೀಲ್ದಾರ್ ಕಚೇರಿಗೆ ತೆರಳುವ ಪ್ರವೇಶದ್ವಾರದ ಬಳಿ ಪಟ್ಟಣ ಪಂಚಾಯಿತಿಯಿಂದ ನಿರ್ಮಿಸಿರುವ ಶೌಚಗೃಹಕ್ಕೆ ಬೀಗ ಹಾಕಲಾಗಿದ್ದು, ಬಳಕೆಗೆ ನೀಡುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.
ತಾಲೂಕು ಕೇಂದ್ರವಾದ ಹನೂರು ತಹಸೀಲ್ದಾರ್ ಕಚೇರಿಗೆ ಕಾರ್ಯ ನಿಮಿತ್ತ ನಿತ್ಯ ನೂರಾರು ಜನರು ಆಗಮಿಸುತ್ತಾರೆ. ಆದರೆ ಶೌಚಗೃಹದ ಇಲ್ಲದ ಪರಿಣಾಮ ಸಾರ್ವಜನಿಕರು ಸರ್ಕಾರಿ ಹಾಗೂ ಖಾಸಗಿ ಬಸ್ ನಿಲ್ದಾಣದ ಶೌಚಗೃಹ ಹಾಗೂ ಬಯಲಿನ ಮೊರೆ ಹೋಗಬೇಕಿತ್ತು. ಇದರಿಂದ ಮಹಿಳೆಯರು ಹಾಗೂ ವೃದ್ಧರು ಹೆಚ್ಚಿನ ತೊಂದರೆ ಅನುಭವಿಸುವಂತಾಗಿತ್ತು. ಈ ಬಗ್ಗೆ ಸಾರ್ವಜನಿಕರಿಂದ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಪಪಂ ವತಿಯಿಂದ ಸುಮಾರು 3 ಲಕ್ಷ ರೂ. ವೆಚ್ಚದಲ್ಲಿ ಕಚೇರಿಗೆ ತೆರಳುವ ಪ್ರವೇಶ ದ್ವಾರದ ಬಳಿ ಒಂದು ವರ್ಷದ ಹಿಂದೆ ಮಹಿಳೆಯರು ಹಾಗೂ ಪುರುಷರಿಗೆ ಪ್ರತ್ಯೇಕವಾಗಿ ಶೌಚಗೃಹ ನಿರ್ಮಿಸಲಾಗಿತ್ತು. ಆದರೆ ನೀರಿನ ಸೌಕರ್ಯ ಕಲ್ಪಿಸದ ಪರಿಣಾಮ ಶೌಚಗೃಹಕ್ಕೆ ಬೀಗ ಹಾಕಲಾಗಿತ್ತು. ಈ ಬಗ್ಗೆ ಸಾರ್ವಜನಿಕರು ಆಕ್ಷೇಪ ವ್ಯಕ್ತಪಡಿಸಿದ್ದು, ನೀರಿನ ಸೌಕರ್ಯ ಕಲ್ಪಿಸಿ ಬಳಕೆಗೆ ನೀಡುವಂತೆ ಒತ್ತಾಯಿಸಿದ್ದರು.
ಈ ಹಿನ್ನೆಲೆ ಶೌಚಗೃಹಕ್ಕೆ ಕಳೆದ ತಿಂಗಳ ಹಿಂದೆಯಷ್ಟೇ ನೀರಿನ ಸೌಕರ್ಯವನ್ನು ಕಲ್ಪಿಸಿ ಸಾರ್ವಜನಿಕರ ಸೇವೆಗೆ ನೀಡಲಾಗಿತ್ತು. ಆದರೆ ಸಮರ್ಪಕ ನಿರ್ವಹಣೆ ಇಲ್ಲದ ಪರಿಣಾಮ ವಾರದಿಂದ ಶೌಚಗೃಹಕ್ಕೆ ಮತ್ತೆ ಬೀಗ ಹಾಕಲಾಗಿದೆ. ಇದರಿಂದ ಶೌಚಕ್ಕಾಗಿ ಜನರು ಸಮಸ್ಯೆ ಎದುರಿಸುವಂತಾಗಿದ್ದು, ಸಂಬಂಧಪಟ್ಟ ಅಧಿಕಾರಿಗಳು ಗಮನಹರಿಸಬೇಕೆಂದು ಆಗ್ರಹಿಸಿದ್ದಾರೆ.