ಬಿಸಿಲಲ್ಲೇ ಬಸ್ ಕಾಯೋ ಶಿಕ್ಷೆ!

gida
ಬೆಳ್ಮಣ್ ಬಸ್ ತಂಗುದಾಣದಲ್ಲಿ ಕಡಿಯಲಾದ ಬೃಹತ್ ಮರವಿದ್ದ ಜಾಗದಲ್ಲಿ ಹುಲ್ಲು ಪೊದೆ ಬೆಳೆದಿರುವುದು
Published on

ಹರಿಪ್ರಸಾದ್ ನಂದಳಿಕೆ ಕಾರ್ಕಳ

ಬೆಳ್ಮಣ್ ಪೇಟೆ ಬಸ್ ನಿಲ್ದಾಣದಲ್ಲಿ ಸುಮಾರು 30-40ಕ್ಕೂ ಅಧಿಕ ವರ್ಷಗಳ ಹಳೆಯ ಮರವನ್ನು ವರ್ಷಗಳ ಹಿಂದೆ ಕಡಿದ ಪರಿಣಾಮ ಇದೀಗ ಪ್ರಯಾಣಿಕರು ಬಿಸಿಲಲ್ಲೇ ಬಸ್‌ಗಾಗಿ ಕಾಯುತ್ತಾ ನಿಲ್ಲುವ ಸ್ಥಿತಿ ನಿರ್ಮಾಣವಾಗಿದೆ.

ಇಡೀ ಬೆಳ್ಮಣ್ ಪೇಟೆ ಪ್ರದೇಶದಕ್ಕೆ ನೆರಳು ನೀಡುತ್ತಿದ್ದ, ಅದೆಷ್ಟೋ ಹಕ್ಕಿಗಳಿಗೆ ಆಶ್ರಯ ನೀಡಿದ ಮರವನ್ನು ಮರದ ಕೊಂಬೆ ತೆರವು ಮಾಡಿ ಬಳಿಕ ಇಡೀ ಮರವನ್ನೇ ಬುಡ ಸಮೇತ ಕಡಿದು ಹಾಕಲಾಯಿತು. ಪರಿಣಾಮ ಇಡೀ ಪೇಟೆ ಪರಿಸರ ಬಿಸಿಲಿನಿಂದ ಕೂಡಿದೆ. ತಂಗುದಾಣದಲ್ಲಿದ್ದ ಬೃಹತ್ ಮರದ ಬುಡಕ್ಕೆ ಇಲ್ಲಿನ ಬಸ್ ಟೈಮ್ ಕೀಪರ್ ಹಾಗೂ ಬಸ್ ಏಜೆಂಟರ ಬಳಗ ವತಿಯಿಂದ ಸುಂದರ ಕಟ್ಟೆ ಕಟ್ಟಲಾಗಿತ್ತು. ಈಗ ಮರದೊಂದಿಗೆ ಕಟ್ಟೆಯೂ ಕೆಡವಿದ್ದು, ಅವಶೇಷ ಮಾತ್ರ ಉಳಿದಿದೆ.

ಅಂಗಡಿಗಳ ಆಶ್ರಯ

ದೂರದ ಊರಿಂದ ಬರುವ ಅದೆಷ್ಟೋ ಪ್ರಯಾಣಿಕರು ತಂಗುದಾಣದಲ್ಲಿ ಜಾಗವಿಲ್ಲದ ಸಂದರ್ಭ ಮರದಡಿ ಬಸ್‌ಗೆ ಕಾದು ಬಳಿಕ ಪ್ರಯಾಣಿಸುತ್ತಿದ್ದರು. ಇದೀಗ ಇಡೀ ತಂಗುದಾಣ ಬಿಸಿಲಿನಿಂದ ಕೂಡಿದ್ದು, ಪ್ರಯಾಣಿಕರು ಅಂಗಡಿ ಮುಗ್ಗಟ್ಟುಗಳ ಮುಂದೆ ಆಶ್ರಯಿಸುವುದು ಅನಿವಾರ್ಯ.

2023ರಲ್ಲಿ ಮರದ ಕಡಿತ

ಕಾರ್ಕಳ ಪಡುಬಿದ್ರಿ ಸಾಗುವ ರಾಜ್ಯ ಹೆದ್ದಾರಿ 1ರ ಬೆಳ್ಮಣ್ ಪೇಟೆಯಲ್ಲೇ ಹೆದ್ದಾರಿ ಬದಿಯಲ್ಲಿದ್ದ ಅಶ್ವತ್ಥ ಮರವೊಂದು 2023ರ ಜೂನ್ 6ರಂದು ರಾತ್ರಿ ಬೀಸಿದ ಗಾಳಿ ಮಳೆಗೆ ರಸ್ತೆಗೆ ಉರುಳಿ ಬಿದ್ದ ಪರಿಣಾಮ ಬೈಕ್ ಸವಾರನೊಬ್ಬ ಸ್ಥಳದಲ್ಲೇ ಮೃತಪಟ್ಟಿದ್ದ. ಆ ಬಳಿಕ ರಸ್ತೆಗೆ ಉರುಳಿದ ಮರವನ್ನು ಹಾಗೂ ವಿಸ್ತಾರವಾಗಿ ಹಲವು ವರ್ಷಗಳ ಕಾಲದಿಂದ ಬೆಳೆದು ನಿಂತಿದ್ದ ಬಸ್ ನಿಲ್ದಾಣದಲ್ಲಿದ್ದ ಮರವನ್ನೂ ಅದೇ ಸಂದರ್ಭ ಕಡಿದು ಹಾಕಲಾಯಿತು.

ಗಿಡ ನೆಡಲು ಒತ್ತಾಯ

ಮರ ಕಡಿದ ಬಳಿಕ ಅದೇ ಜಾಗದಲ್ಲಿ ಮತ್ತೆ ಗಿಡ ನೆಟ್ಟಿದ್ದರೆ ಪ್ರಯಾಣಿಕರಿಗೆ ಅನುಕೂಲವಾಗಿತ್ತು. ಇದ್ಯಾವುದಕ್ಕೂ ಸ್ಥಳೀಯ ಪಂಚಾಯಿತಿ ಹಾಗೂ ಅರಣ್ಯ ಇಲಾಖೆ ಅಥವಾ ಸಂಬಂಧಪಟ್ಟ ಅಧಿಕಾರಿಗಳು ಮನಸ್ಸು ಮಾಡುತ್ತಿಲ್ಲ. ಬೆಳ್ಮಣ್ ಪೇಟೆಗೆ ಸುಂದರ ಮೆರುಗು ನೀಡುತ್ತಿದ್ದ ಬೃಹತ್ ಗಾತ್ರದ ಮರ ಕಡಿದು ಹಾಕಿದ್ದು ಆಶ್ರಯ ಪಡೆದಿದ್ದ ನೂರಾರು ಹಕ್ಕಿಗಳು ಮರೆಯಾಗಿದೆ. ಪರಿಸರದ ಮೇಲಿನ ಕಾಳಜಿಯಿಂದ ಮತ್ತೆ ಅದೇ ಜಾಗದಲ್ಲಿ ಗಿಡ ಬೆಳೆಸಿದರೆ ನೂರಾರು ಪ್ರಯಾಣಿಕರಿಗೆ ನೆರಳಿನ ಜತೆಗೆ ಹಕ್ಕಿಗಳಿಗೂ ಆಶ್ರಯವಾಗುತ್ತದೆ. ಹೀಗಾಗಿ ಇಲ್ಲೊಂದು ಕಟ್ಟೆ ನಿರ್ಮಿಸಿ ಗಿಡ ನೆಡುವಂತೆ ಪ್ರಯಾಣಿಕರು ಹಾಗೂ ಗ್ರಾಮಸ್ಥರು ಬೇಡಿಕೆ ಇಟ್ಟಿದ್ದಾರೆ. ಅಲ್ಲದೆ ಸಾಕಷ್ಟು ಮಂದಿ ಈಗಾಗಲೇ ಸಂಬಂಧಪಟ್ಟವರನ್ನು ಒತ್ತಾಯಿಸಿದ್ದಾರೆ.

ಹಿಂದೆ ಹಲವು ವರ್ಷಗಳಿಂದ ವಿಸ್ತಾರವಾಗಿ ಬೆಳೆದಿದ್ದ ಮರದಿಂದ ನೆರಳು ಹಾಗೂ ಹಕ್ಕಿಗಳಿಗೂ ಆಶ್ರಯವಾಗುತ್ತಿತ್ತು. ಆದರೆ ಮರ ಕಡಿದ ಬಳಿಕ ಇಡೀ ತಂಗುದಾಣದಲ್ಲಿ ಬಿಸಿಲಿನಿಂದ ನಿಲ್ಲಲು ಪ್ರಯಾಣಿಕರಿಗೆ ಸಾಧ್ಯವಾಗುತ್ತಿಲ್ಲ.-ರವಿ, ಬೆಳ್ಮಣ್ ಟೈಮ್ ಕೀಪರ್

ಇಲ್ಲಿನ ತಂಗುದಾಣವೂ ಚಿಕ್ಕದಾಗಿದ್ದು, ಕೆಲವೇ ಮಂದಿ ಕುಳಿತುಕೊಳ್ಳಲು ಸಾಧ್ಯ. ಆದರೆ ಹಿಂದೆ ಮರವಿದ್ದಾಗ ಅದರ ಬುಡದಲ್ಲಿದ್ದ ಕಟ್ಟೆಯಲ್ಲಿಯಾದರೂ ಜನ ಕುಳಿತು ಬಳಿಕ ಪ್ರಯಾಣ ಬೆಳೆಸುತ್ತಿದ್ದರು. ಇದೀಗ ಕಳೆದೊಂದು ವರ್ಷಗಳಿಂದ ಇಡೀ ಪರಿಸರ ಬಿಸಿಲಿನಿಂದ ಕೂಡಿದೆ.-ಸುದೇಶ್ ಕುಮಾರ್, ಪ್ರಯಾಣಿಕ

ಮರ ಕಡಿದ ಬಳಿಕ ಅದೇ ಜಾಗದಲ್ಲಿ ಮತ್ತೆ ಗಿಡ ಬೆಳೆಸುವಲ್ಲಿ ಅಧಿಕಾರಿಗಳು ಮನಸ್ಸು ಮಾಡಬೇಕಿತ್ತು. ಆದರೆ ಇಲ್ಲಿ ಯಾವುದೂ ನಡೆಯದೆ ಕಟ್ಟೆ ಅವಶೇಷ ಮಾತ್ರ ಉಳಿದು ಅದೇ ಜಾಗದಲ್ಲಿ ಹುಲ್ಲು ಪೊದೆ ಬೆಳೆದು ನಿಂತಿದೆ. ಇನ್ನಾದರೂ ಎಚ್ಚೆತ್ತು ಸುಂದರ ಕಟ್ಟೆ ನಿರ್ಮಿಸಿ ಗಿಡವನ್ನು ಬೆಳೆಸುವಲ್ಲಿ ಪರಿಸರ ಪ್ರೇಮಿಗಳು ಹಾಗೂ ಸಂಬಂಧಿಸಿದ ಅಧಿಕಾರಿಗಳು ಮುಂದಾಗಬೇಕಾಗಿದೆ.-ಸತೀಶ್ ಕುಮಾರ್, ಗ್ರಾಮಸ್ಥರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net