

ಬೈಂದೂರು: ಪುರಾತನ ಕಾಲದಿಂದಲೂ ಗ್ರಾಮೀಣ ಭಾಗದ ಸೊಗಡು ಸಂಸ್ಕೃತಿ ಮತ್ತು ಸಾಹಿತ್ಯದಲ್ಲಿ ಪಸರಿಸಿದೆ. ಇಂದಿಗೂ ಅನೇಕ ಗ್ರಾಮೀಣ ಕಲೆಗಳು ಸಾಹಿತ್ಯದಲ್ಲಿ ಅಡಕಗೊಂಡಿವೆೆ. ಬದಲಾಗುತ್ತಿರುವ ವ್ಯವಸ್ಥೆಯಲ್ಲಿ ಸಂಸ್ಕೃತಿ, ಸಂಸ್ಕಾರವನ್ನು ಅರ್ಥಮಾಡಿಕೊಂಡಾಗ ಸಾಹಿತ್ಯ ಇನ್ನಷ್ಟು ಗಟ್ಟಿಯಾಗುತ್ತದೆ ಎಂದು ಬೊಳಂಬಳ್ಳಿ ಶ್ರೀ ಪದ್ಮಾವತಿ ದೇವಸ್ಥಾನದ ಆಡಳಿತ ಧರ್ಮದರ್ಶಿ ಧರ್ಮರಾಜ್ ಜೈನ್ ಹೇಳಿದರು.
ಉಪ್ಪುಂದ ರೈತಸಿರಿ ಸಭಾಂಗಣದಲ್ಲಿ ಭಾನುವಾರ ಲಕ್ಷ್ಮೀ ನಾಗಪ್ಪಯ್ಯ ನಾಯಕ್ ಸದ್ಭಾವನಾ ವೇದಿಕೆ ಹಾಗೂ ಅವನ್ಯಾ ಪ್ರಕಾಶನ ನಾಯ್ಕನಕಟ್ಟೆ ಆಶ್ರಯದಲ್ಲಿ ಸಾಹಿತಿ ಕೆ.ಪುಂಡಲೀಕ ನಾಯಕ್ ರಚನೆಯ ಕೃತಿಗಳ ಅನಾವರಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಹಿರಿಯ ವಕೀಲ, ಸಾಹಿತಿ ಎ.ಎಸ್.ಎನ್.ಹೆಬ್ಬಾರ್ ಅಧ್ಯಕ್ಷತೆ ವಹಿಸಿದ್ದರು. ಭಾವಸ್ಮತಿ ಆತ್ಮಕಥನ ಕೃತಿಯನ್ನು ಸಾಲಿಗ್ರಾಮ ಚಿತ್ರಪಾಡಿ ಹಿತರಕ್ಷಣಾ ವೇದಿಕೆ ಅಧ್ಯಕ್ಷ, ಸಾಹಿತಿ ಪ್ರೊ.ಉಪೇಂದ್ರ ಸೋಮಯಾಜಿ, ಚುಕ್ಕಿಗಳ ಲೋಕದಲ್ಲಿ ಕವನ ಸಂಕಲನವನ್ನು ಹಿರಿಯ ಕವಿ, ಸಾಹಿತಿ ಡಾ.ಎಂ.ಜಿ.ದೇಶಪಾಂಡೆ ಬೀದರ್ ಹಾಗೂ ಬದುಕು-ಬೆಳಕು ಕವನ ಸಂಕಲನವನ್ನು ಗೋಪಾಲಕೃಷ್ಣ ಅಡಿಗ ಸ್ಮಾರಕ ಟ್ರಸ್ಟ್ ಪ್ರವರ್ತಕ ಮೊಗೇರಿ ಜಯರಾಮ ಅಡಿಗ ಬೆಂಗಳೂರು ಅನಾವರಣಗೊಳಿಸಿದರು.
ಸಹಕಾರರತ್ನ ರಾಜ್ಯಪ್ರಶಸ್ತಿ ಪುರಸ್ಕೃತ ಖಂಬದಕೋಣೆ ರೈತ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಎಸ್.ಪ್ರಕಾಶ್ಚಂದ್ರ ಶೆಟ್ಟಿ ಅವರನ್ನು ಸದ್ಭಾವನಾ ವೇದಿಕೆ ವತಿಯಿಂದ ಸನ್ಮಾನಿಸಲಾಯಿತು. ಶಾಸಕ ಗುರುರಾಜ ಗಂಟಿಹೊಳೆ ಶುಭಾಶಂಸನೆಗೈದರು. ನಿವೃತ್ತ ಯೋಧ ಬೈಂದೂರು ಚಂದ್ರಶೇಖರ ನಾವಡ ಆಶಯನುಡಿ, ಸಂಪನ್ಮೂಲ ವ್ಯಕ್ತಿ ಪೂರ್ಣಿಮಾ ಕಮಲಶಿಲೆ, ಸಾಹಿತಿ ಪ್ರವೀಣ್ ಶೆಟ್ಟಿ ಬೈಂದೂರು, ಲೇಖಕ ಮಂಜುನಾಥ ಮರವಂತೆ ಕೃತಿಗಳನ್ನು ಪರಿಚಯಿಸಿದರು.
ಕಸಾಪ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ಕಸಾಪ ಜಿಲ್ಲಾ ಗೌರವ ಕಾರ್ಯದರ್ಶಿ ಸುಬ್ರಹ್ಮಣ್ಯ ಶೆಟ್ಟಿ, ಪತ್ರಿಕೋದ್ಯಮಿ ಯು. ಎಸ್.ಶೆಣೈ, ಕಸಾಪ ಬೈಂದೂರು ಘಟಕ ಅಧ್ಯಕ್ಷ ಅರುಣಕುಮಾರ್ ಶಿರೂರು, ರಾಷ್ಟ್ರೀಯ ಸಂಪನ್ಮೂಲ ವ್ಯಕ್ತಿ, ಶಿಕ್ಷಕ ಸುರೇಂದ್ರ ಗುಡ್ಡೆಹೊಟೇಲ್ ನಾಡ ಉಪಸ್ಥಿತರಿದ್ದರು. ಪ್ರಾರ್ಥನಾ ನಾಯಕ್, ಪ್ರಣಮ್ಯಾ ನಾಯಕ್ ಪ್ರಾರ್ಥಿಸಿದರು. ಕೆ.ಪುಂಡಲೀಕ ನಾಯಕ್ ಸ್ವಾಗತಿಸಿದರು. ಉಪನ್ಯಾಸಕ ಉದಯ್ ನಾಯ್ಕ ಹುಲ್ಕಡಿಕೆ ನಿರೂಪಿಸಿದರು.