ಮದ್ಯ ಮಾರಾಟಗಾರರಿಂದ ಪ್ರತಿಭಟನೆ, ಜಿಲ್ಲಾಡಳಿತದ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ, ಅಬಕಾರಿ ಶುಲ್ಕ ಕಡಿಮೆ ಮಾಡಿ-ಹೆಚ್ಚಿನ ಲಾಭಾಂಶ ನೀಡಿ

LIKKER ASSOCIATION PROTEST
ವಿಜಯಪುರ ಜಿಲ್ಲಾಡಳಿತ ಕಚೇರಿ ಎದುರು ಜಿಲ್ಲಾ ಮಧ್ಯ ಮಾರಾಟಗಾರರ ಸಂಘದ ಪದಾಧಿಕಾರಿಗಳು ಸಾಂಕೇತಿಕವಾಗಿ ಪ್ರತಿಭಟನೆ ನಡೆಸಿದರು. ಎಸ್.ಎಂ. ಮಠ, ಎನ್.ಜಿ. ಇಜೇರಿ, ಪಿಎಂ. ಕಟ್ಟಿಮನಿ. ಬಿ.ಎಂ. ಸಾಹೇಬ ಮತ್ತಿತರರಿದ್ದಾರೆ.
Published on

ವಿಜಯಪುರ: ಚಿಲ್ಲರೆ ಮದ್ಯ ಮಾರಾಟ ಮೇಲೆ ಕನಿಷ್ಠ ಶೇ. 20 ಲಾಭಾಂಶ ನೀಡುವುದು, ಹೆಚ್ಚುವರಿ ಅಬಕಾರಿ ಶುಲ್ಕ ಕಡಿಮೆ ಮಾಡುವುದು, ಸನ್ನದು ಶುಲ್ಕ ಹೆಚ್ಚಳ ಮಾಡದೇ ಇರುವುದು, ಸಿಎಲ್-2 ಮಳಿಗೆಗಳಲ್ಲಿ ಮದ್ಯ ಸೇವನೆಗೆ ಅವಕಾಶ ಕಲ್ಪಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಜಿಲ್ಲಾ ಮಧ್ಯ ಮಾರಾಟಗಾರರ ಸಂಘದ ಪದಾಧಿಕಾರಿಗಳು ಶುಕ್ರವಾರ ಸಾಂಕೇತಿಕವಾಗಿ ಪ್ರತಿಭಟನೆ ನಡೆಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.

ನಗರದ ಜಿಲ್ಲಾಡಳಿತ ಕಚೇರಿ ಎದುರು ಕೆಲ ಕಾಲ ಘೋಷಣೆ ಮೊಳಗಿಸಿದ ಪದಾಧಿಕಾರಿಗಳು ಬಳಿಕ ಜಿಲ್ಲಾಡಳಿತದ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.

ಪ್ರಸ್ತುತ ಮದ್ಯ ಮಾರಾಟ ಉದ್ಯಮ ನಷ್ಟದಲ್ಲಿದೆ. ಮದ್ಯ ಮಾರಾಟಗಾರರು ತೀವ್ರ ಸಂಕಷ್ಟದಲ್ಲಿದ್ದಾರೆ. ಹೀಗಾಗಿ ಸರ್ಕಾರ ಪ್ರಮುಖ ಬೇಡಿಕೆಗಳನ್ನು ಈಡೇರಿಸುವುದರ ಜೊತೆಗೆ ಈಗಾಗಲೇ ತಿದ್ದುಪಡಿ ಆಗಿರುವ ಕಾನೂನುಗಳನ್ನು ಪರಾಮರ್ಶೆ ಮಾಡಬೇಕು. 2005ರಲ್ಲಿ ತಿದ್ದು ಪಡಿ ಆಗಿರುವ ಅಬಕಾರಿ ಕಾಯ್ದೆ ಕಲಂ 29ನ್ನು ಪುನರ್ ವಿಮರ್ಶಿಸಿ ತಿದ್ದುಪಡಿ ಮಾಡಬೇಕು. ಎಂಎಸ್‌ಐಎಲ್ ಸನ್ನದುಗಳ ಕುರಿತು ನ್ಯಾಯ ಸಮ್ಮತವಾದ ತೀರ್ಮಾನ ಕೈಗೊಳ್ಳಬೇಕು. ಗ್ರಾಮಾಂತರ ಪ್ರದೇಶಗಳಲ್ಲಿ ಸನ್ನದುಗಳನ್ನೇ ತೆರೆಯದೇ ನಗರದ ಮಧ್ಯಭಾಗದಲ್ಲಿ ತೆರೆಯುತ್ತಿದ್ದಾರೆ. ನಿರೀಕ್ಷಿತ ವ್ಯವಹಾರ ಇಲ್ಲದೇ ಇರುವ ಸನ್ನದುಗಳನ್ನು ಬೇರೆಡೆಗೆ ಸ್ಥಳಾಂತರಿಸಬೇಕು ಎಂದರು.

ಮಿಲಿಟರಿ ಕ್ಯಾಂಟೀನ್ ಸ್ಟೋರ್‌ಗಳ, ಡ್ಯುಟಿ ಫ್ರೀ ಹೆಸರಿನಲ್ಲಿ ಬರುವ ನಕಲಿ ಮದ್ಯ, ಗೋವಾದಿಂದ ಬರುವ ಮದ್ಯ ಮತ್ತು ನಕಲಿ ಮದ್ಯ ತಯಾರಕರ ಕಳ್ಳಭಟ್ಟಿ ಕೇಂದ್ರಗಳ ಬಗ್ಗೆ ಕಠಿಣ ಕ್ರಮ ಕೈಗೊಳ್ಳಬೇಕು. ಪೊಲೀಸ್ ಇಲಾಖೆಯ ಹಸ್ತಕ್ಷೇಪ ಮತ್ತು ಅನಗತ್ಯವಾಗಿ ಸನ್ನದುಗಳನ್ನು ಬಂದ್ ಮಾಡುತ್ತಿರುವ ಕುರಿತು ಸರ್ಕಾರ ಮಧ್ಯ ಪ್ರವೇಶಿಸಿ ಇಲಾಖೆಗೆ ಸೂಕ್ತ ನಿರ್ದೇಶನ ನೀಡಬೇಕು. ಸನ್ನದುದಾರರಿಗೆ ವಿಧಿಸುವ ಸಾಮಾನ್ಯ ಮೊಕದ್ದಮೆಗಳಿಗೆ ರಾಜಿ ಮೂಲಕ ವಿಧಿಸುವ ದಂಡನೆ ಕಡಿಮೆ ಮಾಡಿ ಲೈಸನ್ಸ್ ರಹಿತವಾಗಿ ಮದ್ಯ ಮಾರಾಟ ಮಾಡುವವರ ದಂಡನೆ ಹೆಚ್ಚಳ ಮಾಡುವ ಕುರಿತು ಮತ್ತು ಡಾಬಾ, ಮಾಂಸಾಹಾರಿ ಹೊಟೇಲ್, ಹಳ್ಳಿಗಳಲ್ಲಿ ಮದ್ಯ ಮಾರಾಟ ಮಾಡುವುದನ್ನು ನಿಯಂತ್ರಿಸಲು ಇನ್ನೂ ಕಠಿಣ ಕಾನೂನು ರಚಿಸಬೇಕು ಎಂದರು.

ಎಲ್ಲಕ್ಕಿಂತ ಹೆಚ್ಚಾಗಿ ಭ್ರಷ್ಠಾಚಾರ ಪ್ರತಿಬಂಧಕ ಕಾಯ್ದೆ 1988ರ ಅಡಿಯಲ್ಲಿ ಸಂಬಂಧಿಸಿದ ಪೊಲೀಸ್ ವಿಭಾಗದಿಂದ ಟ್ರಾೃಪ್ ಅಥವಾ ದಾಳಿಗೊಳಗಾದ ಅಬಕಾರಿ ಅಧಿಕಾರಿಗಳನ್ನು ಅಮಾನತಿನ ನಂತರ ಸೇವೆಗೆ ಪುನರ್ ಸ್ಥಾಪಿಸುವ ಸಂದರ್ಭದಲ್ಲಿ ಯಾವುದೇ ಜಿಲ್ಲೆಯಲ್ಲಿ ಕಾರ್ಯ ನಿರ್ವಾಹಕ ಹುದ್ದೆ ನೀಡಬಾರದು. ರಾಜ್ಯಾದ್ಯಂತ ಅಬಕಾರಿ ಅಧಿಕಾರಿಗಳ ಮಿತಿಮೀರಿದ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಬೇಕು. ಅಬಕಾರಿ ಕಾನೂನು ದುರುಪಯೋಗ ಪಡಿಸಿಕೊಳ್ಳುತ್ತಿರುವ ಅಧಿಕಾರಿಗಳ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕೆಂದರಲ್ಲದೇ ಇನ್ನೂ ಅನೇಕ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿದರು.

ಸಂಘದ ಪ್ರಮುಖರಾದ ಎಸ್.ಎಂ. ಮಠ, ಎನ್.ಜಿ. ಇಜೇರಿ, ಪಿಎಂ. ಕಟ್ಟಿಮನಿ. ಬಿ.ಎಂ. ಸಾಹೇಬ, ಚಂದ್ರಶೇಖರ ಅರಕೇರಿ, ಸಂದೇಶ ಪಾರಿ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net