ಅಬಕಾರಿ ಇಲಾಖೆಯಿಂದ ಭರ್ಜರಿ ಮದ್ಯ ಬೇಟೆ

Abakari
ಕಾರ್ಕಳ ತಾಲೂಕಿನ ಬೋಳ ಗ್ರಾಮದ ಎರಡು ಮನೆಗೆ ದಾಳಿ ನಡೆಸಿದ ಉಡುಪಿ ಅಬಕಾರಿ ಪೊಲೀಸರು ವಶಪಡಿಸಿಕೊಂಡ ಅಕ್ರಮ ಗೋವಾ ಮದ್ಯದ ಬಾಕ್ಸ್‌ಗಳು
Published on

ವಿಜಯವಾಣಿ ಸುದ್ದಿಜಾಲ ಕಾರ್ಕಳ

ಉಡುಪಿ ಜಿಲ್ಲಾ ಅಬಕಾರಿ ಪೊಲೀಸರು ಗುರುವಾರ ಬೆಳಗಿನ ಜಾವ 4:50ಕ್ಕೆ ಕಾರ್ಕಳ ತಾಲೂಕಿನಲ್ಲಿ ದಾಳಿ ನಡೆಸಿದ್ದು, ಅಕ್ರಮವಾಗಿ ಸಂಗ್ರಹಿಸಿದ್ದ 15 ಲಕ್ಷ ರೂ. ಮೌಲ್ಯದ ಗೋವಾ ಮದ್ಯ ವಶಪಡಿಸಿಕೊಂಡಿದ್ದಾರೆ.

ಬೋಳ ಗ್ರಾಮದ ಅನಡ್ಕದಲ್ಲಿರುವ ಅವಿನಾಶ್ ಮಲ್ಲಿ ಎಂಬುವರಿಗೆ ಸೇರಿದ ‘ಅವನಿ ನಿಲಯ’ ಮನೆ ಹಾಗೂ ಅದೇ ಗ್ರಾಮದ ‘ಮರಿವಾರು ಗುತ್ತು’ ಎಂಬ ಮನೆಗೆ ಏಕಕಾಲದಲ್ಲಿ ಅಬಕಾರಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಎರಡೂ ಮನೆಗಳಲ್ಲಿ 272 ಬಾಕ್ಸ್ ಲಭಿಸಿದ್ದು, 2,360.850 ಲೀಟರ್‌ನ ವಿವಿಧ ಬ್ರಾೃಂಡ್‌ಗಳ ಗೋವಾ ಮದ್ಯವನ್ನು ಅಕ್ರಮವಾಗಿ ದಾಸ್ತಾನು ಇಡಲಾಗಿತ್ತು. ಅದನ್ನು ಪತ್ತೆ ಹಚ್ಚಿದ ಪೊಲೀಸರು, ಎರಡು ಪ್ರತ್ಯೇಕ ಪ್ರಕರಣ ದಾಖಲಿಸಿದ್ದಾರೆ.

ಆರೋಪಿಗಳು ಪರಾರಿ

ಪೊಲೀಸರು ದಾಳಿ ನಡೆಸಿದ ಸಂದರ್ಭ ಆರೋಪಿಗಳಾದ ಉಡುಪಿ ತಾಲೂಕಿನ ಆದಿ ಉಡುಪಿಯ ಪ್ರಶಾಂತ್ ಸುವರ್ಣ ಮತ್ತು ಕಾರ್ಕಳ ತಾಲೂಕಿನ ಬೋಳ ಗ್ರಾಮದ ಅನಡ್ಕದ ಅವಿನಾಶ್ ಮಲ್ಲಿ ಎಂಬುವರು ಪರಾರಿಯಾಗಿದ್ದಾರೆ.

ಪ್ರಕರಣ ದಾಖಲು

ಉಡುಪಿ ಜಿಲ್ಲಾ ಅಬಕಾರಿ ಅಧೀಕ್ಷಕ ಶಿವಪ್ರಸಾದ್ ನೇತೃತ್ವದಲ್ಲಿ ದಾಳಿ ನಡೆಸಲಾಗಿತ್ತು. ಉಡುಪಿ ಉಪವಿಭಾಗದ ಅಬಕಾರಿ ಉಪ ಅಧೀಕ್ಷಕ ಗುರುಮೂರ್ತಿ ಡಿ.ಪಾಲೇಕರ್, ಉಡುಪಿ ಜಿಲ್ಲಾ ತಂಡದ ಅಬಕಾರಿ ಉಪನಿರೀಕ್ಷಕ ರಾವೇಂದ್ರ ಪ್ರಕರಣ ದಾಖಲಿಸಿದ್ದಾರೆ. ಅಬಕಾರಿ ನಿರೀಕ್ಷಕರಾದ ಜ್ಯೋತಿ, ಮಿಲ್ಲರ್ ಡಿಸೋಜ, ಉಪನಿರೀಕ್ಷಕರಾದ ಕೃಷ್ಣ, ನಿತ್ಯಾನಂದ್, ಶಿವಶಂಕರ್, ದಿವಾಕರ್, ಚಂದ್ರ ಮೊಗವೀರ ಹಾಗೂ ಸಿಬ್ಬಂದಿ ಚಂದ್ರಶೇಖರ್ ಪಾಟೀಲ್, ನಿರ್ಮಲಾ ನಾಯಕ್, ಶಂಕರಾನಂದ, ನಂಜುಂಡಸ್ವಾಮಿ, ಪ್ರಹ್ಲಾದ್, ರಾಜಶೇಖರ್, ಖಾಜ ಮೈನುಸಾಬ್, ತಿಪ್ಪಣ್ಣ ಹೊಸಮನಿ, ಕೃಷ್ಣ ಆಚಾರಿ, ಮಹಾಂತೇಶ್ ಹಾಗೂ ವಾಹನ ಚಾಲಕರಾದ ದಿನೇಶ್, ವೆಂಕಟರಮಣ ಗೊಲ್ಲ, ಪ್ರದೀಪ್, ಸುಧಾಕರ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ಕಾಂಗ್ರೆಸ್ ಮುಖಂಡ

ಅವಿನಾಶ್ ಮಲ್ಲಿ ಬೋಳ ಅವರು ಬೋಳ ಗ್ರಾಪಂ ಕಾಂಗ್ರೆಸ್ ಬೆಂಬಲಿತ ಮಾಜಿ ಸದಸ್ಯರಾಗಿದ್ದು, ಪಕ್ಷದಲ್ಲಿ ವಿವಿಧ ಜವಾಬ್ದಾರಿ ನಿರ್ವಹಿಸಿದ್ದರು. ಗೋವಾ ಮದ್ಯ ಇಷ್ಟು ಪ್ರಮಾಣದಲ್ಲಿ ಬೋಳ ಗ್ರಾಮಕ್ಕೆ ಹೇಗೆ ಬಂತು ಹಾಗೂ ಈ ಮದ್ಯ ಕೆಲವೊಂದು ವೈನ್‌ಶಾಪ್, ಬಾರ್ ಹಾಗೂ ಕೇರಳ ರಾಜ್ಯಕ್ಕೂ ಅಕ್ರಮವಾಗಿ ಮಾರಾಟವಾಗುತ್ತಿದ್ದ ಬಗ್ಗೆ ಅನುಮಾನ ವ್ಯಕ್ತವಾಗಿದ್ದು, ಅಬಕಾರಿ ಅಧಿಕಾರಿಗಳು ತನಿಖೆ ಮುಂದುವರಿಸಿದ್ದಾರೆ.

ಮಂಗಳೂರಿನ ಜಾರಿ ಮತ್ತು ತನಿಖೆ ವಿಭಾಗದ ಅಬಕಾರಿ ಜಂಟಿ ಆಯುಕ್ತ ಡಾ.ಸಿ.ಎಚ್.ಬಾಲಕೃಷ್ಣ ಹಾಗೂ ಉಡುಪಿ ಜಿಲ್ಲಾ ಅಬಕಾರಿ ಉಪ ಆಯುಕ್ತೆ ಬಿಂದುಶ್ರೀ ವಾರ್ಗದರ್ಶನದಲ್ಲಿ ಕಾರ್ಕಳ ತಾಲೂಕಿನ ಬೋಳ ಗ್ರಾಮದ ಎರಡು ಮನೆಗೆ ದಾಳಿ ನಡೆಸಿದ್ದೆವು. ಅಪಾರ ಪ್ರಮಾಣದಲ್ಲಿ ಅಕ್ರಮವಾಗಿ ಗೋವಾ ಮದ್ಯ ದಾಸ್ತಾನು ಮಾಡಿದ್ದು, ಕಾರ್ಯಾಚರಣೆ ವೇಳೆ ಮನೆಯ ಮಾಲೀಕರಿಬ್ಬರೂ ತಪ್ಪಿಸಿಕೊಂಡಿದ್ದು, ಅವರ ಬಂಧನಕ್ಕೆ ಮುಂದಿನ ಕ್ರಮ ಕೈಗೊಂಡಿದ್ದೇವೆ. -ಶಿವಪ್ರಸಾದ್ ಉಡುಪಿ ಜಿಲ್ಲಾ ಅಬಕಾರಿ ಅಧೀಕ್ಷಕ https://www.vijayavani.net/improving-health-through-blood-donation https://www.vijayavani.net/lack-of-doctors-in-veterinary-clinics

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net