ಕೋವಿಡ್ ಬಳಿಕ ಮಾನಸಿಕ ಖಿನ್ನತೆ ಹೆಚ್ಚು: ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್.ಪಾಟೀಲ ಅಭಿಮತ

1 (1)
Published on

ಮಂಡ್ಯ: ಕೋವಿಡ್ ನಂತರದ ದಿನಗಳಲ್ಲಿ ಮಕ್ಕಳು ಮತ್ತು ಹದಿಹರೆಯದವರಲ್ಲಿ ಮಾನಸಿಕ ಖಿನ್ನತೆ ಹೆಚ್ಚಾಗುತ್ತಿದೆ. ಆದ್ದರಿಂದ ಇದಕ್ಕೆ ಕಾರಣಗಳನ್ನು ಹುಡುಕಿ ಪರಿಹರಿಸುವ ಕೆಲಸವಾಗಬೇಕಿದೆ ಎಂದು ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್.ಪಾಟೀಲ ತಿಳಿಸಿದರು.

ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಅಂತಾರಾಷ್ಟ್ರೀಯ ಲಯನ್ಸ್ ಸಂಸ್ಥೆಗಳ ವತಿಯಿಂದ ಆಯೋಜಿಸಿದ್ದ ಪ್ರಾಂತೀಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು, ಮನೆಯಲ್ಲಿ ಎಲ್ಲರೂ ಒಂದಲ್ಲ ಒಂದು ರೀತಿ ಒತ್ತಡದಲ್ಲೇ ಬದುಕುವಂತಾಗಿದೆ. ಇದರ ಪರಿಣಾಮ ಮಕ್ಕಳ ಮನಸ್ಸಿನ ಮೇಲೆ ತೀವ್ರ ಪರಿಣಾಮ ಬೀರುತ್ತಿದೆ. ಮನೆಯ ವಾತಾವರಣದಲ್ಲಿ ಪ್ರೀತಿ, ವಿಶ್ವಾಸ ಇಲ್ಲದೆ, ಸಂಕಷ್ಟ, ತುಮುಲ ಇದ್ದಲ್ಲಿ ಇಂತಹ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಇದರಿಂದ ಮಕ್ಕಳ ಮನಸ್ಸಿನ ಮೇಲೆ ತೀವ್ರ ಪರಿಣಾಮ ಉಂಟಾಗುತ್ತದೆ ಎಂದು ಹೇಳಿದರು.

ಆಳುವ ಸರ್ಕಾರಗಳು ಎಷ್ಟೇ ಪ್ರಯತ್ನ ನಡೆಸಿದರೂ, ಇನ್ನೂ ಹಸಿವು ಮುಕ್ತ ಮಾಡಲು ಸಾಧ್ಯವಾಗಿಲ್ಲ. ಹಸಿವಿನಿಂದ ಬಳಲುವವರನ್ನು ಸಂಕಕ್ಷಿಸುವುದು, ಹಸಿವನ್ನು ಒಡೆದೋಡಿಸುವ ಕಾರ್ಯ ಮಾಡಬೇಕಾಗಿದೆ. ಹಸಿವು ಇರಬೇಕು. ಅದಕ್ಕೆ ತಕ್ಕಂತೆ ಆಹಾರವೂ ಇರಬೇಕು. ಹಸಿವಿನಿಂದ ಸಾವು ಸಂಭವಿಸುತ್ತಿದೆ. ಇದು ಅತ್ಯಂತ ಭೀಕರವಾದ ಘಟನೆಗಳಾಗಿವೆ. ಆಹಾರ ಸಿಗದೆ ಒಬ್ಬ ವ್ಯಕ್ತಿ ಜೀವ ಬಿಡುತ್ತಾರೆಂ ಎಂದರೆ ಇದಕ್ಕಿಂತ ಭೀಕರತೆ, ಅಮಾನವೀಯತೆ ಬೇರೊಂದಿಲ್ಲ ಎಂದು ಆತಂಕ ವ್ಯಕ್ತಪಡಿಸಿದರು.

ಸರ್ಕಾರ ಉದ್ಯೋಗ ಖಾತ್ರಿ ಯೋಜನೆ ಮಾಡಿದೆ. ಯಾರಿಗೆ ಕೆಲಸ ಇಲ್ಲ ಅವರಿಗೆ ಕೆಲಸ ಕೊಡುವುದು, ಆಹಾರವನ್ನೂ ಕೊಡುವುದು. ಹಸಿವಿನಿಂದ ಯಾರೂ ಬಳಲಬಾರದು ಎಂಬ ಯೋಜನೆ ರೂಪಿಸಿದ್ದರೂ, ಅದು ಸರಿಯಾದ ರೀತಿಯಲ್ಲಿ ಲ ನೀಡುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ ಅವರು, ಲಯನ್ಸ್ ಸಂಸ್ಥೆ ಇಂತಹ ಹಸಿವು ಮುಕ್ತ ಮಾಡುವುದು, ಕೋವಿಡ್ ಸಂದರ್ಭದಲ್ಲಿ ಸೇವೆ ಮಾಡುವುದು ಹಲವಾರು ಸೇವಾ ಕಾರ್ಯಗಳನ್ನು ಮಾಡಿದೆ. ವೈದ್ಯಕೀಯ ಕ್ಷೇತ್ರದಲ್ಲೂ ಕಣ್ಣಿಗೆ ಸಂಬಂಧಿಸಿದಂತೆ ಶಿಬಿರಗಳನ್ನು ನಡೆಸಿದೆ. ಉಚಿತವಾಗಿ ಶಸ ಚಿಕಿತ್ಸೆಯಂತಹ ಕಾರ್ಯಗಳನ್ನು ಮಾಡಿದೆ ಎಂದು ಲಯನ್ಸ್‌ನ ಸೇವಾ ಕಾರ್ಯಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಕ್ಷಣಿಕ ಸಂತೋಷ ಬಿಟ್ಟು ಶಾಶ್ವತ ಸಂತಸದ ಕಡೆಗೆ ಹೋಗುವುದು ಮುಖ್ಯ. ಪರೀಕ್ಷೆ ಬರೆದು ಒಳ್ಳೆಯ ಅಂಕ ಬಂದರೆ ಆ ಕ್ಷಣದಲ್ಲಿ ಸಂತಸವಾಗುತ್ತದೆ. ಆದರೆ ನಾವು ಮಾಡುವ ನಿರಂತರ ಕಾರ್ಯಗಳಿಂದ ಶಾಶ್ವತವಾಗಿ ಸಂತೋಷ ಕಾಣುವಂತಾಗಬೇಕು. ಸೇವಾ ಕಾರ್ಯಗಳನ್ನು ಮಾಡಿದಾಗ ಸಿಗುಂತಹ ಆನಂದ ಬೇರೆ ಯಾವುದರಲ್ಲೂ ದೊರೆಯದು ಎಂದು ಅಭಿಪ್ರಾಯಿಸಿದರು.

ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಟಿ.ಜಿ.ಶಿವಶಂಕರೇಗೌಡ ಅವರು ಕಾನೂನಿನ ಬಗ್ಗೆ ಹಾಗೂ ಮೈಸೂರು ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ಹೃದಯ ತಜ್ಞ ಡಾ.ಕೆ.ಎಸ್.ಸದಾನಂದ ಅವರು ಆರೋಗ್ಯದ ಬಗ್ಗೆ ಉಪನ್ಯಾಸ ನೀಡಿದರು. ಈ ವೇಳೆ ಇಬ್ಬರನ್ನು ಅಭಿನಂದಿಸಲಾಯಿತು.

ಪ್ರಾಂತೀಯ ಸಮ್ಮೇಳನದ ಅಧ್ಯಕ್ಷ ಎಚ್.ಎಲ್.ವಿಶಾಲರಘು, ಜಿಲ್ಲಾ ಗವರ್ನರ್ ಡಾ.ಶ್ರೀವಿದ್ಯಾ, ಪ್ರಾಂತೀಯ ಅಧ್ಯಕ್ಷರಾದ ಡಾ. ವೈ.ಎಚ್.ರತ್ನಮ್ಮ, ಅಪ್ಪಾಜಿ, ಎಚ್.ಆರ್.ಪದ್ಮನಾಭ, ರೆಡ್‌ಕ್ರಾಸ್ ಸಭಾಧ್ಯಕ್ಷೆ ಮೀರಾ ಶಿವಲಿಂಗಯ್ಯ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net