ಗೂಡ್ಸ್​ ರೈಲು ಬರುವ ಸಮಯದಲ್ಲೇ ಹಳಿಗಳ ಮೇಲೆ ಬಂದ ಸಿಂಹಗಳು! ನಂತರ ನಡೆದಿದ್ದಿಷ್ಟು…

Lion
Published on

ಗಾಂಧಿನಗರ: ರೈಲು ಬರುತ್ತಿದ್ದ ಸಮಯದಲ್ಲೇ ರೈಲ್ವೆ ಹಳಿಯ ಮೇಲೆ ಅಲೆದಾಡುತ್ತಿದ್ದ ಎರಡು ಸಿಂಹಗಳ ಜೀವವನ್ನು ರಕ್ಷಣೆ ಮಾಡುವ ಮೂಲಕ ಲೋಕೋ ಪೈಲಟ್‌ಗಳು ಸಮಯ ಪ್ರಜ್ಞೆ ಮೆರೆದಿದ್ದಾರೆ.

ಗುಜರಾತ್‌ನ ಅಮ್ರೇಲಿ ಜಿಲ್ಲೆಯ ಪಿಪಾವವ್-ರಾಜುಲಾ ವಿಭಾಗದಲ್ಲಿ ನಿನ್ನೆ (ಆ.19) ಮುಂಜಾನೆ 5.30ರ ಸುಮಾರಿಗೆ ಈ ಘಟನೆ ನಡೆದಿದೆ. ಸಮಯ ಪ್ರಜ್ಞೆ ಮೆರೆದು ಸಿಂಹಗಳ ಜೀವ ಉಳಿಸಿದ ಗೂಡ್ಸ್ ಟ್ರೈನ್ ಲೋಕೋ ಪೈಲಟ್ ವಿವೇಕ್ ಶರ್ಮ ಮತ್ತು ಸಹಾಯಕ ಲೋಕೋ ಪೈಲಟ್ ರಾಹುಲ್ ಸೋಲಂಕಿ ಅವರಿಗೆ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ.

ರೈಲು ಹಳಿಗೆ ಸಿಲುಕಿ ಸಾಕಷ್ಟು ವನ್ಯಜೀವಿಗಳು ಪ್ರಾಣ ಕಳೆದುಕೊಂಡಿರುವ ಸಾಕಷ್ಟು ದುರ್ಘಟನೆಗಳು ನಮ್ಮ ಕಣ್ಣ ಮುಂದಿವೆ. ಹೀಗಾಗಿ ಕಾಡುಪ್ರಾಣಿಗಳ ರಕ್ಷಣೆಗೆ ಎಲ್ಲ ರಾಜ್ಯಗಳ ಅರಣ್ಯ ಇಲಾಖೆ ವಿಶೇಷ ಗಮನ ಹರಿಸುತ್ತಿದೆ. ರೈಲು ಹಳಿಯ ಮೇಲೆ ಎರಡು ಸಿಂಹಗಳು ತಿರುಗಾಡುತ್ತಿರುವ ಬಗ್ಗೆ ಟ್ರ್ಯಾಕರ್‌ಗಳು ಲೋಕೋ ಪೈಲಟ್‌ಗಳಿಗೆ ಎಚ್ಚರಿಕೆ ನೀಡಿದ ತಕ್ಷಣ ಪೈಲಟ್‌ಗಳು ತುರ್ತು ಬ್ರೇಕ್‌ ಹೊಡೆಯುವ ಮೂಲಕ ಮೂಕ ಪ್ರಾಣಿಗಳ ಜೀವ ಉಳಿಸಿದ್ದಾರೆ.

ಸಿಂಹಗಳು ಟ್ರ್ಯಾಕ್‌ನಿಂದ ದೂರ ಸರಿದಾಗ ಟ್ರ್ಯಾಕರ್‌ಗಳಾದ ಭರತ್ ಭಾಯ್ ಮತ್ತು ಭೋಲಾಭಾಯಿ ಹಸಿರು ನಿಶಾನೆ ತೋರಿದರು. ಅದರ ನಂತರ ರೈಲು ಹೊರಟಿತು. ಸಿಂಹಗಳ ಜೀವ ಉಳಿಸಿದ ಲೋಕೋ ಪೈಲಟ್‌ಗಳನ್ನು ರೈಲ್ವೆ ಹಿರಿಯ ಅಧಿಕಾರಿಗಳು ಅಭಿನಂದಿಸಿದ್ದಾರೆ.

ವರದಿಯ ಪ್ರಕಾರ, ಭಾವನಗರ ರೈಲ್ವೆ ವಿಭಾಗದ ಲೋಕೋ ಪೈಲಟ್‌ಗಳು ಏಪ್ರಿಲ್‌ನಿಂದ ಇಲ್ಲಿಯವರೆಗೆ 44 ಸಿಂಹಗಳನ್ನು ರಕ್ಷಿಸಿದ್ದಾರೆ. ಸಿಂಹಗಳ ರಕ್ಷಣೆಗೆ ಅರಣ್ಯ ಇಲಾಖೆ ಹಳಿ ಮೇಲೆ ಬೇಲಿ ಹಾಕಿದ್ದು, ಅಧಿಕಾರಿಗಳನ್ನು ನಿಯೋಜಿಸಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net