ರಾಷ್ಟ್ರೀಕೃತ ಬ್ಯಾಂಕ್​ಗಳಲ್ಲಿ ಕನ್ನಡ ಭಾಷಿಕ ಸಿಬ್ಬಂದಿ ನೇಮಿಸಲು ಸೂಚನೆ

udp-8-kota 1
Published on

ಉಡುಪಿ: ರಾಷ್ಟ್ರೀಕೃತ ಬ್ಯಾಂಕ್​ಗಳಲ್ಲಿ ಕನ್ನಡ ಭಾಷಿಕ ಸಿಬ್ಬಂದಿ ಅಥವಾ ಅಧಿಕಾರಿಗಳನ್ನು ಕಡ್ಡಾಯವಾಗಿ ನೇಮಿಸಬೇಕು ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಸೂಚನೆ ನೀಡಿದರು.

ಮಣಿಪಾಲ ರಜತಾದ್ರಿಯ ಅಟಲ್​ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ, ಕೆನರಾ ಬ್ಯಾಂಕ್​ ವತಿಯಿಂದ ಕೇಂದ್ರ ಸರ್ಕಾರದ ಪಿ.ಎಂ ವಿಶ್ವಕರ್ಮ ಯೋಜನೆ, ಸ್ವನಿಧಿ ಯೋಜನೆ, ಮುದ್ರಾ ಯೋಜನೆ ಮತ್ತು ಇತರ ಸಾಲ ಯೋಜನೆಗಳ ಸಂಪರ್ಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ರಾಷ್ಟ್ರೀಕೃತ ಬ್ಯಾಂಕ್​ ಜನಸಾಮಾನ್ಯರ ಬ್ಯಾಂಕ್​ ಆಗಿರಬೇಕು. ಆದರೆ ಸ್ಥಳಿಯ ಭಾಷಿಕರಲ್ಲದ ಸಿಬ್ಬಂದಿ ನೇಮಿಸಿ ಜನಸಾಮಾನ್ಯರಿಂದ ದೂರವಾಗುತ್ತಿದೆ. ಈ ಬಗ್ಗೆ ಕೇಂದ್ರ ಹಣಕಾಸು ಮಂತ್ರಿಗಳಿಗೆ ಪತ್ರ ಬರೆದಿದ್ದು, ಹೊರ ರಾಜ್ಯದ ಸಿಬ್ಬಂದಿ ಇದ್ದರೂ ಸ್ಥಳಿಯ ಭಾಷೆಯನ್ನು ಕಲಿತ ಬಳಿಕ ನೇಮಿಸಿ ಇದರಿಂದ ಸಾರ್ವಜನಿಕರಿಗೆ ಉಪಯೋಗವಾಗುತ್ತದೆ ಎಂದರು.

ಭಾರತ ದೇಶದಲ್ಲಿರುವ ಪರಂಪರೆಯುತವಾದ ಕುಲಕಸುಬುಗಳಿಗೆ ಶಕ್ತಿ ನೀಡುವ ಉದ್ದೇಶದಿಂದ ಪ್ರಧಾನ ಮಂತ್ರಿಗಳು ಪಿ.ಎಂ. ವಿಶ್ವಕರ್ಮ ಯೋಜನೆಯನ್ನು ರೂಪಿಸಿದ್ದು, ಈ ಯೋಜನೆಯಡಿ ಬಡಗಿಗಳು, ಅಕ್ಕಸಾಲಿಗರು, ಕುಂಬಾರಿಕೆ, ಗಾರೆ ಕೆಲಸದವರು ಸೇರಿದಂತೆ ಸುಮಾರು 18 ಪಾರಂಪರಿಕ ವೃತ್ತಿ ನಡೆಸುವವರಿಗೆ ಕೌಶಲ್ಯಾಭಿವೃದ್ಧಿ ಹಾಗೂ ಆರ್ಥಿಕ ಸೌಲಭ್ಯಗಳೊಂದಿಗೆ ಉಪಕರಣಗಳನ್ನು ನೀಡಲಾಗುತ್ತಿದ್ದು, ಸಾಮಾನ್ಯ ಬಡಜನರು ಇದರ ಸದುಪಯೋಗ ಪಡೆದುಕೊಳ್ಳುವಂತೆ ತಿಳಿಸಿದರು.

ಜಿಲ್ಲೆಯಲ್ಲಿ ಪಿ.ಎಂ ವಿಶ್ವಕರ್ಮ ಯೋಜನೆಯಡಿ ಒಟ್ಟು 16309 ಅರ್ಜಿಗಳು ಸ್ವೀಕೃತವಾಗಿದೆ. ರಾಜ್ಯ ಸಮಿತಿಗೆ ಒಟ್ಟು 8022 ಅರ್ಜಿಗಳನ್ನು ಶಿಫಾರಸ್ಸು ಮಾಡಲಾಗಿದ್ದು, ರಾಜ್ಯ ಸಮಿತಿಯಿಂದ ಒಟ್ಟು 6723 ಅರ್ಜಿಗಳು ಅನುಮೋದನೆಗೊಂಡಿವೆ ಎಂದರು.

ಪಿ.ಎಂ ಉದ್ಯೋಗ ಸೃಜನಾ ಯೋಜನೆಯಡಿ ಜಿಲ್ಲೆಗೆ ಒಟ್ಟು 131 ಗುರಿ ನೀಡಲಾಗಿದ್ದು, ಈವರೆಗೆ ಒಟ್ಟು 434 ಅರ್ಜಿಗಳು ಸ್ವೀಕೃತಗೊಂಡು, 203 ಫಲಾನುಭವಿಗಳಿಗೆ ಒಟ್ಟು 21.12 ಕೋಟಿ ರೂ. ಸಾಲ ಮಂಜೂರಾಗಿ, 53 ಫಲಾನುಭವಿಗಳಿಗೆ ಒಟ್ಟು 161.04 ಲಕ್ಷ ರೂ. ಬಿಡುಗಡೆಯಾಗಿದೆ. ಪ್ರಧಾನ ಮಂತ್ರಿ ಯವರ ಮುದ್ರಾ ಯೋಜನೆಯಡಿ 18521 ಫಲಾನುಭವಿಗಳಿಗೆ 306 ಕೋಟಿ ರೂ. ಸಾಲ ಬಿಡುಗಡೆ ಮಾಡಲಾಗಿದೆ. ಬೀದಿ ಬದಿ ವ್ಯಾಪಾರಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಜಾರಿಗೊಳಿಸಲಾದ ಪ್ರಧಾನಮಂತ್ರಿ ಸ್ವ-ನಿಧಿ ಯೋಜನೆಯಡಿ ಅರ್ಹ ಫಲಾನುಭವಿಗಳಿಗೆ ಮೂರು ಹಂತದಲ್ಲಿ ಸಾಲ ಸೌಲಭ್ಯಗಳನ್ನು ನೀಡಲಾಗಿದ್ದು, ಕೇಂದ್ರ ಸರ್ಕಾರದ ಎಲ್ಲಾ ಸಾಲಯೋಜನೆಗಳು ಜನಸಾಮಾನ್ಯರಿಗೆ ಪರಿಣಾಮಕಾರಿಯಾಗಿ ತಲುಪಲು ಅಧಿಕಾರಿಗಳು ಸ್ಪಂದಿಸಬೇಕು ಎಂದರು.

ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಉದ್ಯೋಗಕ್ಕೆ ಹೆಚ್ಚಿನ ಬೇಡಿಕೆಯಿದ್ದು, ಯುವಜನತೆಗೆ ದಾರಿ ತೋರಿಸುವ ಕೆಲಸ ಸರ್ಕಾರ ಹಾಗೂ ಸಮಾಜದ ಜವಾಬ್ದಾರಿಯಾಗಿದೆ ಎಂದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತಿಕ್​ ಬಾಯಲ್​ ಹಾಗೂ ಶಾಸಕ ಗುರ್ಮೆ ಸುರೇಶ್​ ಶೆಟ್ಟಿ ಮಾತನಾಡಿದರು. ಶಾಸಕರಾದ ಎ. ಕಿರಣ್​ ಕುಮಾರ್​ ಕೊಡ್ಗಿ, ನಗರಾಭಿವೃಧ್ದಿ ಪ್ರಾಧಿಕಾರದ ಅಧ್ಯಕ್ಷ ದಿನಕರ ಹೇರೂರು, ಮಣಿಪಾಲ ಕೆನರಾ ಬ್ಯಾಂಕ್​ ವೃತ್ತ ಕಚೇರಿ ಮುಖ್ಯ ಪ್ರಬಂಧಕ ಜಯಪ್ರಕಾಶ್​, ಪಿ.ಎಂ. ವಿಶ್ವಕರ್ಮ ಅನುಷ್ಠಾನ ಸಮಿತಿ ನಾಮ ನಿರ್ದೇಶಿತ ಸದಸ್ಯರಾದ ಶ್ರೀನಿಧಿ ಹೆಗಡೆ ಹಾಗೂ ಸುರೇಂದ್ರ ಫಣಿಯೂರು ಮತ್ತಿತರರು ಉಪಸ್ಥಿತರಿದ್ದರು.

ಜಿಲ್ಲಾ ಲೀಡ್​ ಬ್ಯಾಂಕ್​ ಮ್ಯಾನೇಜರ್​ ಹರೀಶ್​ ಜಿ. ಸ್ವಾಗತಿಸಿ, ಪ್ರಶಾಂತ್​ ಹಾವಂಜೆ ನಿರೂಪಿಸಿ, ಕೆನರಾ ಬ್ಯಾಂಕ್​ ಪ್ರಾದೇಶಿಕ ಕಚೇರಿ-1 ರ ಉಪ ಮಹಾ ಪ್ರಬಂಧಕಿ ಶೀಬಾ ಸಹಜನ್​ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net