

ಬೆಂಗಳೂರು: ಬಸವ ಸಂಸ್ಕೃತಿ ಅಭಿಯಾನದಲ್ಲಿ ಪಾಲ್ಗೊಂಡ ಲಿಂಗಾಯತ ಮಠಾಧೀಶರ ಬಗ್ಗೆ ಅಶ್ಲೀಲ ಮತ್ತು ಅಸಭ್ಯವಾಗಿ ಟೀಕೆ ಮಾಡಿರುವ ಕೊಲ್ಲಾಪುರ ಕನೇರಿ ಮಠದ ಶ್ರೀ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ನಾಡಿನ ಬಸವ ಭಕ್ತರ ಕ್ಷಮೆ ಕೇಳಬೇಕು ಎಂದು ಲಿಂಗಾಯತ ಮಠಾಧಿಪತಿಗಳ ಒಕ್ಕೂಟ ಆಗ್ರಹಿಸಿದೆ.
ಬೆಂಗಳೂರಿನ ಗಾಂಧಿಭವನದಲ್ಲಿ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಒಕ್ಕೂಟದ ಕಾರ್ಯದರ್ಶಿ ಹಂದಿಗುಂದದ ಸಿದ್ದೇಶ್ವರ ಮಠದ ಶ್ರೀಶಿವಾನಂದ ಸ್ವಾಮೀಜಿ, ಕನೇರಿ ಶ್ರೀಗಳು ಸ್ವಾಮೀಜಿಯಾಗಿ ನಾಲಿಗೆ ಮೇಲೆ ಹಿಡಿತವಿಲ್ಲದಂತೆ ಮಾತನಾಡಿದ್ದಾರೆ. ನಾವು ನಮ್ಮ ತಾಯಿಗಿಂತಲೂ ಅವರ ತಾಯಿ ಬಗ್ಗೆ ಹೆಚ್ಚಿನ ಗೌರವ ಇರಿಸಿಕೊಂಡಿದ್ದೇವೆ. ಇನ್ನೊಬ್ಬರ ತಾಯಿ, ಅಕ್ಕ, ತಂಗಿ, ಹೆಣ್ಣುಮಕ್ಕಳನ್ನು ಅಗೌರವದಿಂದ ಟೀಕಿಸುವುದು ಅವರ ವ್ಯಕ್ತಿತ್ವವನ್ನು ತೋರುತ್ತದೆ. ವಿಜಯಪುರದ ಶ್ರೀಸಿದ್ದೇಶ್ವರ ಸ್ವಾಮೀಜಿಯವರ ಆಶ್ರಮದಲ್ಲಿ ದಶಕಗಳ ಕಾಲ ಕಳೆದಿರುವ ಶ್ರೀಗಳ ನಡತೆ ಸಿದ್ದೇಶ್ವರ ಸ್ವಾಮೀಜಿಯವರಿಗೆ ಮಾಡಿದ ಅವಮಾನ. ಹಿಂದೊಮ್ಮೆ ಬಸವ ತಾಲಿಬಾನಿಗಳು ಎಂಬ ಪದವನ್ನು ಬಳಕೆ ಮಾಡಿದ್ದರು. ಇದರಿಂದ ಬಸವ ಭಕ್ತರು ಆಘಾತಗೊಂಡಿದ್ದಾರೆ. ಬಹಳ ನೊಂದಿದ್ದಾರೆ. ಆದ್ದರಿಂದ ಪೂಜ್ಯರು ಕೂಡಲೇ ನಾಡಿನ ಕ್ಷಮೆ ಕೇಳಿ ಈ ಪ್ರಕರಣವನ್ನು ಇಲ್ಲಿಗೆ ಮುಕ್ತಾಯಗೊಳಿಸಬೇಕು ಎಂದರು.
ಸ್ವಾಮೀಜಿಯವರ ನಡವಳಿಕೆಯಿಂದ ಸಮಾಜದ ಸ್ವಾಸ್ತ್ಯ ಮತ್ತು ಕಾನೂನು ಸುವ್ಯವಸ್ಥೆ ಹದಗೆಡುವುದನ್ನು ನಿಯಂತ್ರಿಸಲು ಸರ್ಕಾರ ವಿಜಯಪುರ ಜಿಲ್ಲಾ ಪ್ರವೇಶಕ್ಕೆ ನಿರ್ಬಂಧ ವಿಧಿಸಿದ್ದು ಸೂಕ್ತವಾಗಿದೆ. ಸರ್ಕಾರದ ಕ್ರಮವನ್ನು ಹೈಕೋರ್ಟ್ ಕೂಡಾ ಪುಷ್ಟೀಕರಿಸಿದೆ ಎಂದು ಶ್ರೀಗಳು ಇದೇ ವೇಳೆ ವಿವರಿಸಿದರು.
ಒಕ್ಕೂಟದ ಅಧ್ಯಕ್ಷರಾದ ಭಾಲ್ಕಿ ಹಿರೇಮಠದ ಶ್ರೀಬಸವಲಿಂಗ ಪಟ್ಟದ್ದೇವರು ಮಾತನಾಡಿ, ಬಸವ ತತ್ವದ ಪ್ರಚಾರಕ್ಕಾಗಿ ಎಲ್ಲ ಮಠಾಧೀಶರು ತಮ್ಮ ಮಠದಿಂದ ಐದು, ಹತ್ತು ಲಕ್ಷ ಹಣವನ್ನು ಖರ್ಚು ಮಾಡಿಕೊಂಡು ಕಾರ್ಯಕ್ರಮ ಮಾಡಿದ್ದೇವೆ. ನಾವು ಯಾವ ಪಕ್ಷದವರೂ ಅಲ್ಲ; ನಮ್ಮದು ಬಸವ ಪಕ್ಷ. ಕನೇರಿ ಶ್ರೀಗಳು ತಮ್ಮ ಹೇಳಿಕೆಯಿಂದ ಸನಾತನ ಸಂಸ್ಕೃತಿ, ಹಿಂದು ಸಂಸ್ಕೃತಿ, ಭಾರತೀಯ ಸಂಸ್ಕೃತಿಗೆ ಮಸಿ ಬಳಿದಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಭಾಲ್ಕಿ ಹಿರೇಮಠದ ಕಿರಿಯ ಶ್ರೀಗುರುಬಸವ ಪಟ್ಟದ್ದೇವರು, ಅಥಣಿಯ ಶ್ರೀ ಚನ್ನಬಸವ ಸ್ವಾಮೀಜಿ ಮತ್ತಿತರರು ಉಪಸ್ಥಿತರಿದ್ದರು.
-ಜಗದ್ಗುರು ತೋಂಟದ ಸಿದ್ಧರಾಮ ಸ್ವಾಮೀಜಿ, ಗದಗ