

ಕೆಲದಿನಕ್ಕಾಗುಷ್ಟು ಮಾತ್ರ ಇದೆ ಪಡಿತರ | ಎದುರಾಗಿದೆ ಮೂಲಸೌಕರ್ಯಗಳ ಕೊರತೆ
ಲಿಂಗಸುಗೂರು: ನಾರಾಯಣಪುರ ಜಲಾಶಯದಿಂದ ಕೃಷ್ಣಾ ನದಿಗೆ 1.80 ಲಕ್ಷ ಕ್ಯೂಸೆಕ್ ನೀರು ಹರಿಬಿಟ್ಟಿದ್ದರಿಂದ ನದಿಯಲ್ಲಿ ಪ್ರವಾಹ ಉಂಟಾಗಿ ನಡುಗಡ್ಡೆಯಲ್ಲಿ ಸಿಲುಕಿದ ರೈತರ ಕುಟುಂಬಗಳು ಬಾಹ್ಯ ಸಂಪರ್ಕ ಕಡಿದುಕೊಂಡಿವೆ.
ತಾಲೂಕಿನ ಯರಗೋಡಿ ಮತ್ತು ಯಳಗುಂದಿ ಗ್ರಾಮಗಳ ಹತ್ತಿರ ಕೃಷ್ಣಾ ನದಿ ಕವಲೊಡೆದ ಮಧ್ಯದ ಪ್ರದೇಶದಲ್ಲಿರುವ ಮ್ಯಾದರಗಡ್ಡಿಯಲ್ಲಿ 3 ಕುಟುಂಬಗಳ 16 ಜನರ ಪೈಕಿ 14 ಮಂದಿ ಜಾನುವಾರು ಸಹಿತ ಗಡ್ಡಿಯಲ್ಲೇ ಸಿಲುಕಿದ್ದಾರೆ. ಕಳೆದ ಬಾರಿ ಹೀಗೆ ಆದಾಗ ರಕ್ಷಣಾ ಬೋಟ್ ಬಳಸಿ ಎನ್‌ಡಿಆರ್‌ಎಫ್ ತಂಡ ಇವರನ್ನು ರಕ್ಷಿಸಿ, ಯರಗೋಡಿಯ ಗಂಜಿ ಕೇಂದ್ರಕ್ಕೆ ಸ್ಥಳಾಂತರಿಸಿತ್ತು. ಈಗ ಮತ್ತೆ ಇದೇ ಸ್ಥಿತಿ ಎದುರಾಗಿದ್ದು, ಜಿಲ್ಲಾಡಳಿತ, ತಾಲೂಕು ಆಡಳಿತಕ್ಕೆ ತಲೆ ನೋವಾಗಿದೆ.
ಮ್ಯಾದರಗಡ್ಡಿಯಲ್ಲಿ ಸಿಲುಕಿರುವ ರೈತರಾದ ಸಣ್ಣಮಲ್ಲಪ್ಪ ಹಾಗೂ ಇತರರನ್ನು ದೂರವಾಣಿ ಮೂಲಕ ಸಂಪರ್ಕಿಸಿದಾಗ, ಈ ಬಾರಿ ನಾವು ಜಮೀನಿನಲ್ಲಿ ಬಿತ್ತನೆ ಮಾಡಿಲ್ಲ. ಪ್ರವಾಹಕ್ಕೂ ಮುಂಚೆ ನ್ಯಾಯಬೆಲೆ ಅಂಗಡಿಯಿಂದ 5-6 ಕೆ.ಜಿ. ಅಕ್ಕಿ ಪಡೆಯಲು ಸೂಚಿಸಿದ್ದರು. ನಮಗೆ ಸಾಕಾಗುವುದಿಲ್ಲ ಬೇಡವೆಂದು ತಿರಸ್ಕರಿಸಿದೆವು. ಈವರೆಗೂ ನಮ್ಮ ಬಗ್ಗೆ ಕಾಳಜಿ ವಹಿಸಿಲ್ಲ. ಹೀಗಾಗಿ ಗಡ್ಡಿಯಲ್ಲೇ ಉಳಿದಿದ್ದೇವೆ. ಸ್ವಲ್ಪ ದಿನಕ್ಕಾಗುವಷ್ಟು ಆಹಾರಧಾನ್ಯವಿದ್ದು, ಮೂಲಸೌಕರ್ಯ ಕೊರತೆ ಎದುರಾಗುವ ಸಾಧ್ಯತೆ ಇದೆ ಎಂದು ಅಳಳು ತೋಡಿಕೊಂಡರು.