ಪುತ್ತೂರು ಗ್ರಾಮಾಂತರ: ಛತ್ತೀಸ್ಗಢದ ನೋಂದಣಿಯ ಕಾರೊಂದರಲ್ಲಿ ಬೆಟ್ಟಂಪಾಡಿ ಗ್ರಾಮ ವ್ಯಾಪ್ತಿಯ ಮನೆಗಳಿಗೆ ಬಂದು ಗೃಹೋಪಯೋಗಿ ವಸ್ತುಗಳನ್ನು ರಿಯಾಯಿತಿ ದರದಲ್ಲಿ ಕೊಡುವುದಾಗಿ ಹಾಗೂ ಜತೆಗೆ ‘ಸ್ಕ್ರಾಚ್ ಆಂಡ್ ವಿನ್’ ಕೂಪನ್ ಬಳಸಿ ಲೈನ್ ಸೇಲ್ ಮಾಡುತ್ತಿದ್ದ ಇಬ್ಬರನ್ನು ಬೆಟ್ಟಂಪಾಡಿಯ ಸ್ಥಳೀಯರು ಸಂಪ್ಯ ಪೊಲೀಸರಿಗೆ ಒಪ್ಪಿಸಿದ ಘಟನೆ ಬುಧವಾರ ನಡೆದಿದೆ.
‘ಬಾಲಾಜಿ ಮಾರ್ಕೆಟಿಂಗ್ ಆ್ಯಂಡ್ ಸೇಲ್ಸ್’ ಹೆಸರಿನ ಕೂಪನ್ ಹೊಂದಿದ್ದ ವ್ಯಕ್ತಿಗಳಿಬ್ಬರು ಛತ್ತೀಸ್ಗಢದ ನೋಂದಣಿಯ ಕಾರಿನಲ್ಲಿ ಬೆಟ್ಟಂಪಾಡಿ ವ್ಯಾಪ್ತಿಯ ಮನೆಗಳಿಗೆ ತೆರಳಿ ಟಿವಿ, ಮಿಕ್ಸಿ, ಫ್ರಿಜ್ ಮೊದಲಾದ ಗೃಹೋಪಯೋಗಿ ಇಲೆಕ್ಟ್ರಾನಿಕ್ಸ್ ಉಪಕರಣಗಳನ್ನು ರಿಯಾಯಿತಿ ದರದಲ್ಲಿ ನೀಡುವುದಾಗಿ ಹಾಗೂ ಕೂಪನ್ ಸ್ಕ್ರಾಚ್ ಮಾಡಿದಾಗ ಅದರೊಳಗೆ ಇರುವ ವಸ್ತು ಕೊಡುವುದಾಗಿ ಹೇಳಿದ್ದರು. ಇದರಿಂದ ಸಂಶಯಗೊಂಡ ಸ್ಥಳೀಯರು ಬೆಟ್ಟಂಪಾಡಿ ಗ್ರಾಪಂಗೆ ಕರೆದುಕೊಂಡು ಬಂದು ಬಳಿಕ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಈ ವೇಳೆ ಬೆಟ್ಟಂಪಾಡಿ ಗ್ರಾ.ಪಂ. ಉಪಾಧ್ಯಕ್ಷ ಮಹೇಶ್ ಕೋರ್ಮಂಡ, ಸದಸ್ಯ ಪ್ರಕಾಶ್ ರೈ ಬೈಲಾಡಿ ಸೇರಿದಂತೆ ಗ್ರಾಮಸ್ಥರು ಜಮಾಯಿಸಿದ್ದರು.
ಸಂಪ್ಯ ಠಾಣೆಯ ಪೊಲೀಸರು ಬಂದಾಗ ಇವರ ಮಾರ್ಕೆಟಿಂಗ್ ಸಂಸ್ಥೆಯ ಕಚೇರಿ ವಿಳಾಸ ಕೊಲ್ಲಾಪುರ ಗಾಂಧಿನಗರ ಎಂದಿದೆ. ಮಂಗಳೂರು ಸೇರಿದಂತೆ 10 ಕಡೆ ಶಾಖೆಗಳಿವೆ ಎಂದು ನಮೂದಿಸಲಾಗಿದೆ. ಆದರೆ ಇವರಲ್ಲಿ ಜಿಲ್ಲಾಡಳಿತ ಇಲ್ಲವೇ ಸ್ಥಳೀಯಾಡಳಿತದ ಯಾವುದೇ ಅಧಿಕೃತ ಪರವಾನಗಿ ಇಲ್ಲ. ಇಂತಹ ಅಪರಿಚಿತ ವ್ಯಕ್ತಿಗಳ ವಿರುದ್ಧ ಸಾರ್ವಜನಿಕ ಹಿತದೃಷ್ಟಿಯಿಂದ ಪೊಲೀಸ್ ಇಲಾಖೆ ಸೂಕ್ತಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದರು.
ಎಸ್ಐ ಜಂಬೂರಾಜ್ ಮಹಾಜನ್ ಠಾಣೆಗೆ ಕರೆದುಕೊಂಡು ಹೋಗಿದ್ದು, ಸೂಕ್ತ ದಾಖಲೆಗಳಿದ್ದುದರಿಂದ ವಿಳಾಸ ಮಾಹಿತಿ ಪಡೆದು ಅವರಿಬ್ಬರನ್ನು ಬಿಟ್ಟಿದ್ದಾರೆ.