ವಿಜಯವಾಣಿ ಸುದ್ದಿಜಾಲ ಗಂಗೊಳ್ಳಿ
ಗಂಗೊಳ್ಳಿ ಬಂದರಿನಲ್ಲಿ ನಿಷೇಧಿತ ಲೈಟ್ ಫಿಶಿಂಗ್ ಮೀನುಗಾರಿಕೆ ಅವ್ಯಾಹತವಾಗಿ ನಡೆಯುತ್ತಿದ್ದು, ಸರ್ಕಾರದ ಆದೇಶಗಳಿಗೆ ಕಿಂಚಿತ್ತೂ ಬೆಲೆಯೇ ಇಲ್ಲದಂತಾಗಿದೆ.
ಕೇಂದ್ರ ಮತ್ತು ರಾಜ್ಯ ಸರ್ಕಾರ ನೀರಿನ ಮೇಲೆ ಅಥವಾ ಒಳಗೆ ಯಾವುದೇ ಕೃತಕ ದೀಪ ಬಳಸಿ ಮಾಡುವ ಪರ್ಸೀನ್, ಗಿಲ್‌ನೆಟ್ ಮೀನುಗಾರಿಕೆ ನಿಷೇಧಿಸಿದ್ದು, ಸರ್ಕಾರದ ಆದೇಶ ಉಲ್ಲಂಘಿಸುವವರ ಡೀಸೆಲ್ ಸಹಾಯಧನ ತಡೆ, ಮೀನುಗಾರಿಕಾ ಲೈಸೆನ್ಸ್, ನೋಂದಣಿ ರದ್ದು ಮಾಡಿ ಕಾನೂನು ಕ್ರಮ ಜರಗಿಸುವ ಎಚ್ಚರಿಕೆ ನೀಡಿತ್ತು. ಆದರೆ ಸರ್ಕಾರದ ಆದೇಶ ಧಿಕ್ಕರಿಸಿ ಅನೇಕ ಮೀನುಗಾರಿಕಾ ಬೋಟುಗಳು ಲೈಟ್ ಫಿಶಿಂಗ್ ನಡೆಸುತ್ತಿದೆ. ಬೋಟುಗಳಲ್ಲಿ ಅಧಿಕ ಸಾಮರ್ಥ್ಯದ ಜನರೇಟರ್ ಅಳವಡಿಸಿ ದೊಡ್ಡ ದೊಡ್ಡ ಲೈಟ್ ಬಳಸಿಕೊಂಡು ನಿಷೇಧಿತ ಲೈಟ್ ಫಿಶಿಂಗ್ ಮೀನುಗಾರಿಕೆ ನಡೆಸುತ್ತಿದ್ದಾರೆ ಎಂಬ ಆರೋಪ ಮೀನುಗಾರ ವಲಯದಲ್ಲಿ ಕೇಳಿ ಬರುತ್ತಿದೆ.
ಲೈಟ್ ಫಿಶಿಂಗ್ ವಿರುದ್ಧ ಸಂಬಂಧಪಟ್ಟ ಇಲಾಖೆ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗುತ್ತಿದ್ದರೂ ಮೀನುಗಾರರು ಅಧಿಕಾರಿಗಳ ಕಣ್ಣು ತಪ್ಪಿಸಿ ನಿಷೇಧಿತ ಮೀನುಗಾರಿಕೆ ನಡೆಸುತ್ತಿರುವುದು ಮುಂದಿನ ದಿನಗಳಲ್ಲಿ ಸಮಸ್ಯೆಗೆ ಕಾರಣವಾಗುವ ಸಾಧ್ಯತೆ ಇದೆ. ಲೈಟ್ ಫಿಶಿಂಗ್ ಬಗ್ಗೆ ಕ್ರಮಕೈಗೊಳ್ಳುವಂತೆ ಕರ್ನಾಟಕ ರಾಜ್ಯ ಸಾಂಪ್ರದಾಯಿಕ ನಾಡದೋಣಿ ಮೀನುಗಾರರ ಒಕ್ಕೂಟ ಕಳೆದ ಕೆಲವು ತಿಂಗಳ ಹಿಂದೆ ರಾಜ್ಯದ ಮೀನುಗಾರಿಕೆ ಇಲಾಖೆ ಸಚಿವರಿಗೆ ಮನವಿ ಸಲ್ಲಿಸಿತ್ತು. ಆದರೂ ಯಾವುದೇ ಪ್ರಯೋಜನವಾಗಿಲ್ಲ. ಪ್ರಸಕ್ತ ಲೈಟ್ ಫಿಶಿಂಗ್ ವಿರುದ್ಧ ಪ್ರತಿಭಟನೆಗೆ ನಾಡದೋಣಿ ಮೀನುಗಾರರು ಸಿದ್ಧತೆ ನಡೆಸುತ್ತಿದ್ದಾರೆ.
ಅಧಿಕ ಸಾಮರ್ಥ್ಯದ ಜನರೇಟರ್ ಬಳಕೆ
ನಿಷೇಧಿತ ಮೀನುಗಾರಿಕೆ ನಡೆಸದಂತೆ ಮೀನುಗಾರಿಕಾ ಇಲಾಖೆ ಅನೇಕ ಬಾರಿ ಎಚ್ಚರಿಕೆ ನೀಡಿದ್ದರೂ ಮೀನುಗಾರರು ಆದೇಶ, ಎಚ್ಚರಿಕೆಯನ್ನು ನಿರ್ಲಕ್ಷಿಸಿ ಲೈಟ್ ಫಿಶಿಂಗ್ ಮೀನುಗಾರಿಕೆಯಲ್ಲಿ ತೊಡಗಿಸಿಕೊಂಡಿರುವುದು ವ್ಯವಸ್ಥೆಯನ್ನು ನಾಚಿಸುವಂತಾಗಿದೆ. ಗಂಗೊಳ್ಳಿ ಬಂದರು ಮೂಲಕ ಮೀನುಗಾರಿಕೆ ನಡೆಸುವ ಅನೇಕ ಬೋಟುಗಳಲ್ಲಿ ಲೈಟ್ ಫಿಶಿಂಗ್ ನಡೆಸಲು ಬಳಸಲಾಗುವ ಸಾಮಗ್ರಿ ಮತ್ತು ಅಧಿಕ ಸಾಮರ್ಥ್ಯದ ಜನರೇಟರ್ ಅಳವಡಿಸಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದ್ದು, ಲೈಟ್ ಫಿಶಿಂಗ್ ನಡೆಸುತ್ತಿರುವುದನ್ನು ಪುಷ್ಟೀಕರಿಸಿದೆ.
ಕಾನೂನುಬಾಹಿರವಾಗಿ ಲೈಟ್ ಫಿಶಿಂಗ್ ನಡೆಸುತ್ತಿರುವ ಬಗ್ಗೆ ಕ್ರಮಕೈಗೊಳ್ಳಲು ಟಾಸ್ಕ್‌ಫೋರ್ಸ್ ಟೀಮ್ ರಚಿಸಲಾಗಿದ್ದು, ಅವರು ವರದಿ ನೀಡುತ್ತಿದ್ದಾರೆ. ಲೈಟ್ ಫಿಶಿಂಗ್ ಮಾಡಿ ದಡಕ್ಕೆ ಬರುವ ಬೋಟುಗಳ ವಿರುದ್ಧ ಕ್ರಮಕೈಗೊಳ್ಳಲಾಗುತ್ತಿದೆ. ಈ ಬಗ್ಗೆ ಸಭೆ ಕರೆದು ಮುಂದಿನ ಕ್ರಮದ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು
-ವಿವೇಕ್ ಆರ್., ಜಂಟಿ ನಿರ್ದೇಶಕರು, ಮೀನುಗಾರಿಕೆ ಇಲಾಖೆ, ಮಲ್ಪೆ