ಹೃದಯಾಘಾತ ನಿಯಂತ್ರಣದ ಮಾರ್ಗೋಪಾಯಗಳ ಕುರಿತು ಡಾ. ಜಿ.ಬಿ. ಸತ್ತೂರ ಮಾಹಿತಿ

Published on

ಈ ಅಂಕಣದಲ್ಲಿ ಇದುವರೆಗೆ ಹೃದಯಾಘಾತವನ್ನು ನಿಯಂತ್ರಿಸಬಲ್ಲ (Modifiable Risk Factors) ಕಾರಣಗಳಾದ ಮಧುಮೇಹ, ಬಿ.ಪಿ., ತಂಬಾಕು ಸೇವನೆ, ಬೊಜ್ಜು, ವ್ಯಾಯಾಮ ಇಲ್ಲದಿರುವುದು ಮುಂತಾದವುಗಳನ್ನು ತಿಳಿದುಕೊಂಡದ್ದಾಗಿದೆ. ನಿಯಂತ್ರಿಸಲಾಗದ, ಅನಿಯಂತ್ರಿತ ಹೃದಯಾಘಾತದ ಕಾರಣಗಳನ್ನು (Non Modifiable Risk Factors)ಚಿಂತಿಸೋಣ. ಇವುಗಳನ್ನು ಬದಲಿಸುವುದು ನಮ್ಮಿಂದ ಆಗದು.

ವಯಸ್ಸು: ವಯಸ್ಸು ಹೆಚ್ಚಿದಂತೆ, ಹೃದಯಾಘಾತದ ಸಂಭವವೂ ಹೆಚ್ಚು. ಮುಖದ ನಿರಿಗೆಗಳು, ಮಾಂಸಖಂಡ ಶಿಥಿಲವಾಗುವುದು - ಹೀಗೆ ಅದರ ಲಕ್ಷಣಗಳನ್ನು ನೋಡಬಹುದು. ಆದರೆ ಒಳಗಿನ ರಕ್ತನಾಳಗಳು ಕಿರಿದಾಗುವುದು ಕಾಣದು. ಅದೂ ವಯಸ್ಸಿನ ಬದಲಾವಣೆಯಲ್ಲಿ ಸೇರುತ್ತದೆ. ಈ ಬದಲಾವಣೆಗಳನ್ನು ತಡೆಯಲಾಗದು. 50-60 ವರ್ಷದ ನಂತರ ಹೃದಯಬಡಿತ ಕಡಿಮೆ ಆಗುವುದು, ಬಿ.ಪಿ. ಏರುವುದು ಸಾಮಾನ್ಯ. ಹೃದಯದ ಕೋಣೆಗಳ ಆಕುಂಚನ ಸಾಮರ್ಥ್ಯವೂ ಕಡಿಮೆ ಆಗುತ್ತದೆ. ಅದಕ್ಕೆಂದೇ, ಕೊಂಚ ನಡೆದರೂ ಕೆಲವರಿಗೆ ಏದುಸಿರು ಬರುತ್ತದೆ. ಅಂದಾಜು 55 ವಯಸ್ಸಿನ ನಂತರ ರಕ್ತನಾಳಗಳು ಗಟ್ಟಿಯಾದರೂ, ಕೊಲೆಸ್ಟರಾಲ್ ಸಂಗ್ರಹ ಚಿಕ್ಕಂದಿನಿಂದಲೇ ಪ್ರಾರಂಭವಾಗುತ್ತದೆ. ಆದರೆ, ಇತ್ತೀಚೆಗೆ ಪಾಶ್ಚಾತ್ಯ ಜೀವನಶೈಲಿಯಿಂದ ಹೆಚ್ಚಿದ ತಂಬಾಕುಸೇವನೆ, ಜಂಕ್​ಫುಡ್ ಸೇವನೆಯಿಂದ, ಆಲಸಿತನದಿಂದ ಹೃದಯಾಘಾತವು 25 ವರ್ಷ ಮೇಲ್ಪಟ್ಟವರಲ್ಲೂ ಕಂಡುಬರುತ್ತಿದೆ. ಅದಕ್ಕೆಂದೇ ಶಾಲೆಗಳಲ್ಲಿ ಶಿಸ್ತಿನ ಜೀವನಶೈಲಿ ಪ್ರಾರಂಭಿಸಬೇಕು. ಯಾವುದೇ ವಯಸ್ಸಿನಲ್ಲಿ ಹೃದಯಾಘಾತ ಕಂಡುಬಂದರೂ ಅದಕ್ಕೆ ತಯಾರಿ ಹತ್ತು ವರ್ಷ ಹಿಂದಿನಿಂದಲೇ ಪ್ರಾರಂಭವಾಗುತ್ತದೆ.

ಲಿಂಗ: ಹೃದಯಾಘಾತ ಪ್ರಮಾಣ ಮಹಿಳೆಯರಿಗಿಂತ ಪುರುಷರಲ್ಲಿ ಹೆಚ್ಚು. ಮಹಿಳೆಯರಿಗೆ ಮುಟ್ಟಿನ ವರ್ಷಗಳಲ್ಲಿ ಈಸ್ಟ್ರೋಜನ್ ಎಂಬ ಹಾರ್ಮೋನ್ ಹೃದಯವನ್ನು ರಕ್ಷಿಸುತ್ತದೆ. ಆದರೆ, ಮುಟ್ಟು ನಿಂತ ನಂತರ ಹೃದಯಾಘಾತದ ಪ್ರಮಾಣ ಪುರುಷರಷ್ಟೇ ಪ್ರಮಾಣದಲ್ಲಿ ಹೆಚ್ಚುತ್ತದೆ. 65 ವರ್ಷಗಳ ನಂತರ ಎರಡೂ ಲಿಂಗಗಳಲ್ಲಿಯೂ ಅದೇ ಪ್ರಮಾಣದಲ್ಲಿ ಹೃದಯಾಘಾತವಾಗುತ್ತದೆ. ಮಧುಮೇಹಿ ಮಹಿಳೆಯರಲ್ಲಿ ಹಾಮೋನಿನಿಂದಾಗುವ ರಕ್ಷಣೆ ಇಲ್ಲದಂತಾಗುತ್ತದೆ. ಅದಕ್ಕೆಂದೇ ಮುಟ್ಟು ಇನ್ನೂ ಇರುವಾಗಲೇ ಮಧುಮಮೇಹಿ ಮಹಿಳೆಯರು ಹೆಚ್ಚಿನ ಕಾಳಜಿ ವಹಿಸಬೇಕು.

ಹೆಣ್ಣುಮಕ್ಕಳಲ್ಲಿ ಹೃದಯಾಘಾತದ ಲಕ್ಷಣಗಳಾದ ಎದೆನೋವು, ದಮ್ಮು ಮುಂತಾದವು ಕೂಡ ಕಡಿಮೆ ತೀವ್ರತೆಯಲ್ಲಿರುತ್ತವೆ. ಅದಕ್ಕೆಂದೇ ಮಹಿಳೆಯರು ತಡವಾಗಿ ಆಸ್ಪತ್ರೆಗೆ ತೋರಿಸುವುದರಿಂದ ಅವರಲ್ಲಿ ಸಾವಿನ ಸಾಧ್ಯತೆ ಕೂಡ ಹೆಚ್ಚು (65 ವಯಸ್ಸಿನ ನಂತರ). ಎಷ್ಟೋ ಹೆಂಗಸರಲ್ಲಿ ಕೇವಲ ಹೆಚ್ಚಿನ ದಣಿವು ಹೃದಯಾಘಾತದ ಲಕ್ಷಣವಾಗಿರುತ್ತದೆ.

ಕೌಟುಂಬಿಕ ಇತಿಹಾಸ: ಹೃದಯಾಘಾತವು ಕುಟುಂಬಗಳಲ್ಲಿ ಆನುವಂಶೀಯತೆಯಿಂದ ಬರುತ್ತದೆ. ತಂದೆ ಅಥವಾ ತಾಯಿಗೆ ಹೃದಯಾಘಾತವಿದ್ದಲ್ಲಿ ಮಕ್ಕಳಿಗೂ ಬರುವ ಸಾಧ್ಯತೆ ಹೆಚ್ಚು. ಒಂದೇ ಕುಟುಂಬದಲ್ಲಿ ಹಲವಾರು ಜನರಿಗೆ ಹೃದಯಾಘಾತವನ್ನು ಕಾಣುತ್ತೇವೆ. ಈ ತರಹದ ಹೃದಯಾಘಾತವು 30-40 ವಯಸ್ಸಿನಲ್ಲಿ ಕಾಣುವುದು ಸಾಮಾನ್ಯ. ಇನ್ನುಳಿದ ಕಾರಣಗಳಾದ ಆಹಾರ, ಬೊಜ್ಜುತನ ಮುಂತಾದವುಗಳೂ ಹೆಚ್ಚಿನ ಹೃದಯಾಘಾತದ ಪ್ರಮಾಣಕ್ಕೆ ಕಾರಣಗಳು. ಅನುವಂಶಿಕತನದ ಹೃದಯಾಘಾತಕ್ಕೆ ಇನ್ನೂ ಯಾವ ಪರೀಕ್ಷೆಗಳು, ಸಂಶೋಧನೆಗಳೂ ಆಗಿಲ್ಲ. ಆ ಕುಟುಂಬದ ಎಲ್ಲರೂ ಟಿಎಂಟಿ, ಇಕೋ, ಕೊರೋನರಿ ಎಂಜಿಯೋಗ್ರಾಫಿ (ಬೇಕಿದ್ದಲ್ಲಿ) ಒಳಪಡಬೇಕಾಗುತ್ತದೆ. ಹೃದಯಾಘಾತಕ್ಕೆ ಒಳಗಾಗುವವರ ಸಂಖ್ಯೆ ಅಮೆರಿಕೆಗಿಂತ ಏಷ್ಯಾಖಂಡದಲ್ಲಿ ಹೆಚ್ಚು. ಯಾರಿಗೆ ಕೌಟುಂಬಿಕ ಹೃದಯಾಘಾತದ ಇತಿಹಾಸ ಇದೆಯೋ ಅವರು ತಮ್ಮ ಮಕ್ಕಳೊಂದಿಗೆ ಚಿಕ್ಕಂದಿನಿಂದಲೇ ಆಹಾರ ಸಮತೋಲತೆ, ವ್ಯಾಯಾಮ (ಜೀವನಶೈಲಿಯಲ್ಲಿ ಬದಲಾವಣೆ) ಇವುಗಳನ್ನು ಅಳವಡಿಸಿಕೊಳ್ಳಲು ತಿಳಿಸಿ ಹೇಳಬೇಕು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net