ಸ್ನಾಯುಗಳ ಬಲಕ್ಕೆ ಯೋಗಾಭ್ಯಾಸ

AROGYA
Published on
  • ಎಡೆತೊಡೆಯಲ್ಲಿ ಹರ್ನಿಯಾ ಬಾಧೆ ಇದೆ. ವೈದ್ಯರು ಆಪರೇಷನ್ ಆಗಬೇಕು ಎಂದು ತಿಳಿಸಿದ್ದಾರೆ.ಯೋಗದ ಮೂಲಕ ಏನು ಪರಿಹಾರವಿದೆ?ಯಾವ ಆಸನ ಮಾಡಬೇಕು?

| ಕೆ. ಶಿವಪುತ್ರ ವಿಜಯಪುರ (23 ವರ್ಷ)

ತೊಡೆ ಸಂದು ಅಥವಾ ಒಳತೊಡೆಯ ಸ್ನಾಯುವಿನ ಗೋಡೆಯಲ್ಲಿ ಅಂಗಾಂಶವು ದುರ್ಬಲ ಸ್ಥಳದ ಮೂಲಕ ತಳ್ಳಲ್ಪಟ್ಟಾಗ ತೊಡೆಯೆಲುಬಿನ ಅಂಡವಾಯು ಉಂಟಾಗುತ್ತದೆ. ಯೋಗದ ಭಂಗಿಗಳ ಮೂಲಕ ಗುಣಪಡಿಸಲು ಸಾಧ್ಯವಿಲ್ಲ. ತೀವ್ರ ಸ್ಥಿತಿಯಲ್ಲಿ ಶಸ್ತ್ರಚಿಕಿತ್ಸೆ ಅಗತ್ಯ. ನಿಮ್ಮ ಹೊಟ್ಟೆಯ ಸ್ನಾಯುಗಳನ್ನು ಬಲಪಡಿಸುವ ಮೂಲಕ, ಕೊಬ್ಬನ್ನು ಕಡಿಮೆ ಮಾಡುವ ಮೂಲಕ ಮತ್ತು ದೇಹದ ಅರಿವನ್ನು ಉತ್ತೇಜಿಸುವ ಮೂಲಕ ಯೋಗವು ಮರುಕಳಿಕೆಯನ್ನು ತಪ್ಪಿಸಲು ಸಹಾಯ ಮಾಡುತ್ತದೆ. ಯೋಗವು ರೋಗನಿವಾರಕಕ್ಕಿಂತ ತಡೆಗಟ್ಟುವ ಕೆಲಸ ಮಾಡುತ್ತದೆ. ಹೊಸದಾಗಿ ಬೆಳೆದ ಹರ್ನಿಯಾ ಯೋಗದಿಂದ ಸಾಕಷ್ಟು ಪ್ರಯೋಜನ ಪಡೆಯಬಹುದು. ಹರ್ನಿಯಾ ತಡೆಗಟ್ಟಲು ಬದ್ಧಕೋನಾಸನ, ಮತ್ಸ್ಯಾಸನ, ವಜ್ರಾಸನ, ನೌಕಾಸನ, ಶವಾಸನ ಸಹಕಾರಿಯಾಗುತ್ತದೆ. ಅದರಲ್ಲಿ ವಿಶೇಷವಾಗಿ ಬದ್ಧಕೋನಾಸನ ಹರ್ನಿಯಾ ನಿಯಂತ್ರಣಕ್ಕೆ ಹಾಗೂ ಸ್ನಾಯುಗಳು ಬಲಗೊಳ್ಳಲಿಕ್ಕೆ ಸಹಕಾರಿಯಾಗುತ್ತದೆ. ಒಂದೊಂದು ಕಾಲಿನಲ್ಲಿ ಸೊನ್ನೆ ಬರೆಯುವ ವ್ಯಾಯಮ ಹಾಗೂ ಉತ್ಥಿತ ಏಕಪಾದಸನ ಮೂರರಿಂದ ಆರು ಬಾರಿ ಅಭ್ಯಾಸ ನಡೆಸಿ. ಇದರಿಂದ ಸ್ನಾಯುಗಳು ಬಲಗೊಳ್ಳುತ್ತವೆ.
  • ನನಗೆ ಬಹುಮೂತ್ರ ರೋಗವಿದೆ. ವೈದ್ಯರಲ್ಲಿ ಸ್ಕ್ಯಾನ್ ಮಾಡಿಸಿದೆ. ಪೋ›ಸ್ಟೇಟ್ ಎನ್​ಲಾರ್ಜ್ ಆಗಿದೆ ಎಂದರು. ಔಷಧ ಕೊಟ್ಟರು. ಗುಣ ಆಗಿಲ್ಲ. ಈಗ ಆಪರೇಷನ್ ಮಾಡಿಸಿ ಎಂದಿದ್ದಾರೆ. ನನಗೆ ಅದು ಭಯ. ಯೋಗದ ಪರಿಹಾರ ತಿಳಿಸಿ.

| ಮಾನು ಹುಬ್ಬಳ್ಳಿ 

ಮನುಷ್ಯ ವಯಸ್ಸಾದಂತೆ ಹಾಮೋನ್ ಮಟ್ಟದಲ್ಲಿನ ಬದಲಾವಣೆಗಳಿಂದ ಉಂಟಾಗುತ್ತದೆ. ಹಾಗಿದ್ದರೂ ಪ್ರಾಸ್ಟೇಟ್ ಸಮಸ್ಯೆಗಳು ಕಿರಿಕಿರಿಯನ್ನುಂಟುಮಾಡುತ್ತವೆ. ಅನೇಕ ಪುರುಷರು ರೋಗ ಲಕ್ಷಣಗಳನ್ನು ಸುಧಾರಿಸುವ ಮಾರ್ಗಗಳನ್ನು ಹುಡುಕುತ್ತಾರೆ. ಪ್ರಾಸ್ಟೇಟ್ ದೊಡ್ಡದಾದಾಗ ಇದು ಮೂತ್ರನಾಳದ ಮೇಲೆ ಒತ್ತಡವನ್ನು ಬೀರುತ್ತದೆ. ಇದರಿಂದ ಮೂತ್ರವಿಸರ್ಜನೆ ಕಷ್ಟವಾಗಬಹುದು. ಯೋಗ ಮಾಡುವುದರಿಂದ ಪರಿಸ್ಥಿತಿಯನ್ನು ತಡೆಯಲು ಸಹಾಯ ಮಾಡುತ್ತದೆ. ಸ್ನಾಯುಗಳನ್ನು ಬಲಪಡಿಸಲು ಯೋಗ ಸಹಾಯವಾಗುತ್ತದೆ.

ಸೂಚಿತ ಆಸನಗಳು: ತಾಡಾಸನ, ಅರ್ಧಕಟಿ ಚಕ್ರಾಸನ, ವೀರಭದ್ರಾಸನ, ಬದ್ಧಕೋಣಾಸನ, ಜಾನು ಶೀರ್ಷಾಸನ, ವಜ್ರಾಸನ, ಶಶಾಂಕಾಸನ, ಮಂಡೂಕಾಸನ, ಸೇತುಬಂಧ ಮಾಲಾಸನ, ವಿಪರೀತಕರಣೀ, ಧನುರಾಸನ, ಸುಪ್ತವೀರಾಸನ, ಶವಾಸನ ಗುರುಮುಖೇನ ಕಲಿತು ಆರಂಭದಲ್ಲಿ ಸಾಧ್ಯವಾಗುವಷ್ಟೇ ಮಾಡಿ. ಕೆಲವು ಆಸನಗಳಿಂದ ಚಲನೆ, ನ್ಯೂನತೆ ಮತ್ತು ಬಲವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಜೀವನದ ಗುಣಮಟ್ಟವನ್ನು ಸುಧಾರಿಸಬಹುದು.

ಆರೋಗ್ಯಕರ ಮತ್ತು ನೈರ್ಮಲ್ಯದ ಆಹಾರವನ್ನು ಸೇವಿಸಿ. ಬದ್ಧಕೋಣಾಸನ ಆಸನವನ್ನು ದಿನಕ್ಕೆ ಮೂರು-ನಾಲ್ಕು ಬಾರಿ ಮಾಡಿ. ಮೂತ್ರದೋಷ ನಿಯಂತ್ರಣಕ್ಕೆ ಸಹಕಾರಿಯಾಗುತ್ತದೆ. ಬಹುಮೂತ್ರ ರೋಗ ನಿಯಂತ್ರಣಕ್ಕೆ ಹತ್ತರಿಂದ ಇಪ್ಪತ್ತು ನಿಮಿಷ ಜಲೋದರನಾಶಕ ಮುದ್ರೆ ಅಭ್ಯಾಸ ಮಾಡಿ. ಯೋಗ, ಮುದ್ರೆಗಳನ್ನು ಗುರುಮುಖೇನವೇ ಕಲಿತು ಅಭ್ಯಾಸ ನಡೆಸಿ. ಒಮ್ಮೆ ತಾವು ತಜ್ಞ ವೈದ್ಯರೊಂದಿಗೆ ಸಮಾಲೋಚಿಸಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net