ಶರೀರ, ಮನಗಳನ್ನು ಪಳಗಿಸುವ ಯೋಗ

AROGYA
Published on
ಯೋಗಾಸನಗಳ ಸೂತ್ರಗಳಲ್ಲಿ ಆಸನಗಳ ಭಂಗಿ ಮಾಡುವ ವಿಧಾನ ಗಮನಿಸಿದರೆ ಸ್ಥಿರಂ ಸುಖಂ ಆಸನಂ ಎಂದಷ್ಟೇ ಹೇಳಲಾಗಿದೆ. ಕ್ರಮಬದ್ಧ ಶಾರೀರಿಕ ಚಲನೆಯ ನಂತರ ದೈಹಿಕ ಸ್ಥಿರತೆ, ಮಾನಸಿಕ ಸುಖವನ್ನು ನೀಡುವ ಭಂಗಿಯೇ ಆಸನ ಎಂದು ಸೂತ್ರೀಕರಿಸಬಹುದು. ಪತಂಜಲಿ ನಂತರದ ಹಠಯೋಗಿಗಳು ಹಠಯೋಗ ಪ್ರದೀಪಿಕೆ, ಘೕರಂಡ ಸಂಹಿತೆ, ಹಠಯೋಗ ರತ್ನಾವಳಿ ಮುಂತಾದ ಗ್ರಂಥಗಳಲ್ಲಿ ಯೋಗಾಸನ ಕುರಿತು ಸುದೀರ್ಘ ವಿವರಣೆ ನೀಡುತ್ತಾರೆ.

ಯೋಗಾಸನಗಳು ಶಾರೀರಿಕ ದೃಢತೆ ಮತ್ತು ಮಾನಸಿಕ ಸ್ಥಿರತೆ ಈ ಎರಡನ್ನೂ ಒದಗಿಸಬಲ್ಲವು. ಶರೀರ ಬಗ್ಗಿಸಿ, ಮನಸ್ಸನ್ನು ತೀಡುವುದೇ ಆಸನ ಎಂಬ ಮಾತಿದೆ. ಕ್ರಮಬದ್ಧವಾಗಿ ಶರೀರ ಬಗ್ಗಿಸುವುದರೊಂದಿಗೆ ಮನಸ್ಸನ್ನೂ ಪಳಗಿಸುವ ಕ್ರಿಯೆ ಇಲ್ಲಿ ನಡೆಯುತ್ತದೆ. ನಾವು ಮೈಮುರಿದು, ಬೆವರು ಸುರಿಸಿ ಕೆಲಸ ಮಾಡುತ್ತೇವೆ; ವೇಗನಡಿಗೆ ಮಾಡುತ್ತೇವೆ; ಒಳ್ಳೆಯ ಆಟ ಆಡುತ್ತೇವೆ; ವ್ಯಾಯಾಮ ಮಾಡುತ್ತೇವೆ; ನಮಗೆ ಯೋಗ ಏಕೆ ಬೇಕು ಎಂದು ಕೇಳುವವರಿದ್ದಾರೆ. ಹೌದು. ಇವೆಲ್ಲ ಶಾರೀರಿಕ ಸ್ವಾಸ್ಥ್ಯಕ್ಕೆ ಪ್ರಾಧಾನ್ಯ ನೀಡುತ್ತವೆ. ಯೋಗ ಎಂದರೆ ವ್ಯಾಯಾಮ ಎಂದು ವ್ಯಾಖ್ಯಾನಿಸುವವರೂ ಇದ್ದಾರೆ. ಆದರೆ ಆಸನಗಳಿಗೂ, ವ್ಯಾಯಾಮಗಳಿಗೂ ಹಲವು ವ್ಯತ್ಯಾಸ ಇದೆ. ಅವುಗಳಲ್ಲಿ ಕೆಲವನ್ನು ಇಲ್ಲಿ ಗಮನಿಸಬಹುದು.

ವ್ಯಾಯಾಮ: ವೇಗಗತಿಯ ಅಭ್ಯಾಸ ·ಶಾರೀರಿಕ ಶ್ರಮ ಅಧಿಕ ·ಉಸಿರಾಟಕ್ಕೆ ಪ್ರಾಧಾನ್ಯವಿಲ್ಲ. ·ಸ್ನಾಯುಗಳ ಮೇಲೆ ಹೆಚ್ಚು ಪ್ರಭಾವದ ಕಾರಣದಿಂದಾಗಿ ಸ್ನಾಯುಗಳಲ್ಲಿ ಒತ್ತಡ ಬಿಗಿತ ·ಶಾರೀರಿಕ ಚಾಲನೆಗೆ ಹೆಚ್ಚು ಪ್ರಾಧಾನ್ಯ ·ಶಕ್ತಿಯ ವ್ಯಯ ಹೆಚ್ಚು ·ರೋಗರಹಿತ ಶರೀರವನ್ನು ಸದೃಢಗೊಳಿಸುವುದು ·ಬಹಿಮುಖ ಸಾಧನೆಗೆ ಹೆಚ್ಚು ಗಮನ ·ಪ್ರದರ್ಶನಕ್ಕೆ ಪ್ರಾಧಾನ್ಯತೆ ·ಮನುಷ್ಯಸ್ವಭಾವಗಳ, ವರ್ತನೆಗಳ ಮೇಲೆ ಪರಿಣಾಮ ಕಡಿಮೆ

ಆಸನಗಳು: ·ನಿಧಾನಗತಿಯ ಅಭ್ಯಾಸ ·ಶಾರೀರಿಕ ಶ್ರಮ ಕಡಿಮೆ ·ಉಸಿರಾಟಕ್ಕೆ ಪ್ರಾಧಾನ್ಯ- ಶ್ವಾಸದೊಡನೆ ಅಭ್ಯಾಸ ·ಸ್ನಾಯು, ಗ್ರಂಥಿಗಳ ಮೇಲೂ ಪ್ರಭಾವ ·ಸ್ನಾಯುಗಳಿಗೆ ಸಡಿಲತೆ, ಚುರುಕುತನ ·ಶರೀರದೊಡನೆ ಮನಸ್ಸನ್ನು ಪಳಗಿಸುವ ಕ್ರಿಯೆ ·ಶಕ್ತಿಯ ವೃದ್ಧಿ ·ಆಂತರಿಕ ಸಾಧನೆಗೆ ಪೂರಕ. ·ಅಂತರ್ದರ್ಶನಕ್ಕೆ ಸಹಕಾರಿ ·ಇಚ್ಛಾಶಕ್ತಿ, ಸಂಕಲ್ಪಶಕ್ತಿಯ ವರ್ಧನೆ ·ವರ್ತನೆಯಲ್ಲಿ ಪರಿವರ್ತನೆ, ಮಾನಸಿಕ ಸಂಸ್ಕಾರ ವರ್ಧನೆ ·ರೋಗಮುಕ್ತ ಶರೀರವನ್ನು ರೋಗರಹಿತವನ್ನಾಗಿ ಮಾಡಿ ಕಾಂತಿಯುಕ್ತವನ್ನಾಗಿಸುತ್ತ ರೋಗನಿರೋಧಕ ಶಕ್ತಿಯ ವರ್ಧನೆ

ಭದ್ರಾಸನ: ನೆಲದ ಮೇಲೆ ಚಾಪೆ ಅಥವಾ ಕಂಬಳಿ ಹಾಸಿ ತುದಿಗಾಲಲ್ಲಿ ಕುಳಿತುಕೊಳ್ಳಿ. ಕಾಲಿನ ಎಲ್ಲ ಬೆರಳುಗಳ ಮೇಲೆ ಭಾರ ಬಿಟ್ಟುಕೊಂಡು, ಎಂದರೆ ಪಾದದ ಮುಂಭಾಗ ಊರಿಕೊಂಡು ಇರಬೇಕು. ಎರಡೂ ಕಾಲಿನ ಹಿಮ್ಮಡಿಗಳು ಪೃಷ್ಠಭಾಗಕ್ಕೆ ಸಮಾನಾಂತರವಾಗಿ ತಾಗಿಕೊಳ್ಳಬೇಕು. ಅಂದರೆ, ಹಿಮ್ಮಡಿಗಳ ಮೇಲೆ ಪೃಷ್ಠಭಾಗ ಆಧಾರಿತವಾಗಿ ಇರಬೇಕು. ಹೊಟ್ಟೆಯ ಮುಂದುಗಡೆ ಕೈಗಳನ್ನು ಬ್ರಹ್ಮಮುದ್ರೆಯಲ್ಲಿ ಇಟ್ಟುಕೊಳ್ಳಿ. ಈ ಆಸನ ಮಾಡಿದಾಗ ಬೆನ್ನು ಸಹಜವಾಗಿ ನೆಟ್ಟಗಿರುತ್ತದೆ. ಕತ್ತು ಕೂಡ ನೇರವಾಗಿ ಇರುತ್ತದೆ. ಧ್ಯಾನಕ್ಕೆ ಪೂರಕವಾದ ಆಸನ.

ಲಾಭಗಳು: ಕಾಲಿಗೆ ನಮನೀಯತೆ ಪ್ರಾಪ್ತಿ, ಜೀರ್ಣಕ್ರಿಯೆ ಹೆಚ್ಚುವುದು, ಮೇರುದಂಡ, ತೊಡೆ, ಪೃಷ್ಠ ಸ್ನಾಯು ಬಲಗೊಳ್ಳುವುದು, ಮೂಲಾಧಾರ ಚಕ್ರ ಪ್ರಚೋದನೆಗೆ ಸಹಕಾರಿ, ಪ್ರಸೂತಿ ಸುಗಮವಾಗಲು ಪೂರಕ, ಮನಶಕ್ತಿ ವರ್ಧನೆ ಸಾಧ್ಯ, ಏಕಾಗ್ರತೆ ಹೆಚ್ಚಲು ಆಯಾಸ ನಿವಾರಣೆ ನೀಡುವುದು, ಪ್ರಾಣಾಯಾಮಕ್ಕೂ ಪರಿಣಾಮಕಾರಿ ಆಸನ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net