

ರಾಜನೋರ್ವ ಪರಿವಾರದೊಂದಿಗೆ ಬೇಟೆಯಾಡಲು ಕಾಡಿಗೆ ತೆರಳಿದ. ದಟ್ಟವಾದ ಕಾಡಿನಲ್ಲಿ ಒಬ್ಬರಿಂದೊಬ್ಬರು ಬೇರ್ಪಟ್ಟು ದಾರಿ ತಪ್ಪಿಸಿಕೊಂಡರು. ಪರಿವಾರದವರನ್ನು ಕಳೆದುಕೊಂಡು ಏಕಾಂಗಿಯಾದ ರಾಜನಿಗೆ ಆ ಕಾಡಿನಲ್ಲಿ ಋಷ್ಯಾಶ್ರಮವೊಂದು ಕಣ್ಣಿಗೆ ಬಿತ್ತು. ಆಶ್ರಮದ ಒಳಹೊಕ್ಕು ಋಷಿಗಳಿಗೆ ನಮಸ್ಕರಿಸಿ, ‘ಮಹರ್ಷಿಗಳೇ, ನನ್ನ ಪರಿವಾರದವರು ಇತ್ತ ಬಂದಿರುವರೆ?’ ಎಂದು ಕೇಳಿದ. ಅದಕ್ಕೆ ಆ ಋಷಿಯು, ‘ಹೌದು ಮೊದಲು ಸೈನಿಕ, ನಂತರದಲ್ಲಿ ಸೇನಾಧಿಪತಿ, ಆನಂತರ ಮಂತ್ರಿ ಒಬ್ಬೊಬ್ಬರಾಗಿ ಇದೇ ದಾರಿಯಲ್ಲಿ ಹೋಗಿದ್ದಾರೆ’ ಎಂದ. ಆ ಋಷಿಯೋರ್ವ ಅಂಧ ಎಂಬುದು ರಾಜನಿಗೆ ಆನಂತರ ಗೊತ್ತಾಯಿತು. ‘ಮಹರ್ಷಿಗಳೇ ನಿಮಗೆ ಕಣ್ಣು ಕಾಣಿಸದಿದ್ದರೂ ಹೇಗೆ ಸೈನಿಕ, ಸೇನಾಪತಿ, ಮಂತ್ರಿಯರೆಲ್ಲ ಈ ದಾರಿಯಲ್ಲಿ ಹೋಗಿದ್ದಾರೆ ಎಂದು ಖಚಿತವಾಗಿ ಹೇಳಿದಿರಿ?’ ಎಂದು ಆಶ್ಚರ್ಯದಿಂದ ರಾಜ ಕೇಳಿದಾಗ ಆ ಋಷಿ, ‘ಮಹಾರಾಜರೇ, ಮೊದಲು ಬಂದಾತ, ನನ್ನನ್ನು ಉದ್ದೇಶಿಸಿ ಲೋ ಜೋಗಿ ಎಂದು ಕರೆದ. ನಂತರ ಬಂದಾತ ಸಾಧುಗಳೇ ಎಂದ. ಆನಂತರದವ ತಪಸ್ವಿಗಳೇ ಎಂದು ಸಂಬೋಧಿಸಿದ. ನೀವು ಮಹರ್ಷಿಗಳೇ ಎಂದು ಸಂಬೋಧಿಸಿದಿರಿ. ಕಣ್ಣುಗಳಿಂದ ಕಾಣದಿದ್ದರೂ ಮಾತಿನಿಂದಲೇ ವ್ಯಕ್ತಿಯ ಆಂತರ್ಯ, ಅಂತಸ್ತು ಎಲ್ಲವನ್ನೂ ಅರಿಯಬಲ್ಲೆ’ ಎಂದ.
ನಿಜ, ಮಾತು ವ್ಯಕ್ತಿಯ ಅಂತರಂಗವನ್ನು ಪ್ರದರ್ಶಿಸುತ್ತದೆ. ಮಾತಿನಿಂದಲೇ ವ್ಯಕ್ತಿಯ ಸತ್ವಪರೀಕ್ಷೆಯೂ ಆಗುತ್ತದೆ. ಸಮಾಜದಲ್ಲಿ ಉನ್ನತಮಟ್ಟಕ್ಕೇರಿ, ಸಂಬಂಧ ವೃದ್ಧಿಯಾಗಿ, ಗೌರವಾದರಗಳನ್ನು ಪಡೆಯಬೇಕೆಂತಾದರೆ ನಯ-ವಿನಯಯುತ ಮಾತುಗಳನ್ನಾಡಬೇಕು. ಶ್ರೀರಾಮನನ್ನು ಮೊದಲ ಬಾರಿಗೆ ಭೇಟಿಯಾದಾಗ ಹನುಮಂತನು ತನ್ನ ಮೃದು ಮನೋಜ್ಞವಾದ ಮಾತುಗಳಿಂದ ರಾಮನ ಗಮನ ಸೆಳೆದನು. ಆ ಸಂಭಾಷಣೆಯೇ ಮುಂದೆ ರಾಮ-ಸುಗ್ರೀವ-ಹನುಮಂತರ ಬಾಂಧವ್ಯ ಗಟ್ಟಿಯಾಗಲು ಭೂಮಿಕೆಯಾಯಿತು. ಮಾತನಾಡಲು ಗೊತ್ತಿದ್ದರೆ ಜಗವನ್ನೇ ಗೆಲ್ಲಬಹುದು. ಹಾಗೆಂದು ಕಠಿಣವಾದ ಮಾತುಗಳನ್ನಾಡಿ ಪ್ರಭಾವ ಬೀರಿ ಗೆದ್ದುಬಿಡಬಹುದೆಂಬ ಭ್ರಮೆ ಬೇಡ. ರೋಷಾವೇಶದಲ್ಲೋ, ಅಹಂಕಾರ-ಅಸೂಯೆಗಳಿಂದಲೋ ಮಾತನಾಡಿ ತಮ್ಮ ವ್ಯಕ್ತಿತ್ವವನ್ನೇ ನಾಶಪಡಿಸಿಕೊಳ್ಳುವ, ಇತರರನ್ನು ನೋಯಿಸುವ ಜನರು ಲೆಕ್ಕವಿಲ್ಲದಷ್ಟು ಸಿಗುತ್ತಾರೆ. ನಾಲಿಗೆಯ ಮೇಲೆ ಹಿಡಿತ ಸಾಧಿಸಿಕೊಂಡವ ಮಾತ್ರ ಅಜಾತಶತ್ರುವಾಗಬಲ್ಲ. ಭರ್ತೃಹರಿಯ ಸುಭಾಷಿತವೊಂದು ಇಲ್ಲಿ ಸ್ಮರಣೀಯ:
ಕೇಯೂರಾಣಿ ನ ಭೂಷಯಂತಿ ಪುರುಷಂ ಹಾರಾ ನ ಚಂದ್ರೋಜ್ವಲಾ
ನ ಸ್ನಾನಂ ನ ವಿಲೇಪನಂ ನ ಕುಸುಮಂ ನಾಲಂಕೃತಾ ಮೂರ್ಧಜಾಃ|
ವಾಣ್ಯೇಕಾ ಸಮಲಂಕರೋತಿ ಪುರುಷಂ ಯಾ ಸಂಸ್ಕ ೃಾ ಧಾರ್ಯತೇ
ಕ್ಷೀಯಂತೇ ಖಲು ಭೂಷಣಾನಿ ಸತತಂ ವಾಗ್ಭೂಷಣಂ ಭೂಷಣಮ್|
‘ನಾವು ತೊಡುವ ಕೇಯೂರಾದಿ ಆಭರಣಗಳು, ಹಾರ, ಸ್ನಾನ, ಸುಗಂಧದ್ರವ್ಯಲೇಪನ, ಹೂವು ಇತ್ಯಾದಿ ಎಲ್ಲವೂ ಕ್ಷಣಿಕ. ಸುಸಂಸ್ಕ ೃವಾದ ಮಾತು ಮಾತ್ರವೇ ಮನುಷ್ಯನನ್ನು ಸದಾಕಾಲ ಅಲಂಕರಿಸುತ್ತವೆ. ಸುಸಂಸ್ಕ ೃ ವಾದ ಮಾತುಗಳೇ ಮನುಷ್ಯನಿಗೆ ಅಲಂಕಾರಿಕ’ ಎಂಬುದು ಈ ಸುಭಾಷಿತದ ಅರ್ಥ. ಆಡುವ ಮಾತಿನ ಬಗ್ಗೆ ಅಸಡ್ಡೆ ಬೇಡ. ಉದ್ವೇಗವನ್ನುಂಟುಮಾಡದ, ಪ್ರಿಯವನ್ನು, ಹಿತವನ್ನೂ ಉಂಟುಮಾಡುವ ಯಥಾರ್ಥದ ನುಡಿಗಳು ತಪ್ಪಸ್ಸೇ ಆಗಿರುತ್ತದೆಯೆಂದು ಶ್ರೀಕೃಷ್ಣನು ಭಗವದ್ಗೀತೆಯಲ್ಲಿ ಹೇಳಿರುವ ಹಾಗೆ ನಯ, ವಿನಯಯುತ ಮಾತುಗಳನ್ನಾಡಿ ಯಶೋಮಂತರಾಗೋಣ.
(ಲೇಖಕರು ಸಂಸ್ಕೃತ ಉಪನ್ಯಾಸಕರು ಹಾಗೂ ರೇಡಿಯೋ ನಿರೂಪಕರು)