ನಿರ್ಧಾರ ಮಾದರಿಯಾಗುವಂತಿರಲಿ

edit 3
Published on

ನವ ವಿವಾಹಿತ ಜೋಡಿಯೊಂದು ಮಧುಚಂದ್ರಕ್ಕೆಂದು ಬಸ್ಸೊಂದರಲ್ಲಿ ಗಿರಿಧಾಮಕ್ಕೆ ಹೊರಟಿತ್ತು. ಪರ್ವತ ಶ್ರೇಣಿಯ ಸೌಂದರ್ಯ ಕಂಡು ಆಕರ್ಷಿತಗೊಂಡ ಅವರಿಗೆ ಒಂದು ಯೋಚನೆ ಬಂತು. ಅವರಿಬ್ಬರೂ ಮಾತನಾಡಿಕೊಂಡರು-‘ಇನ್ನೇನು ನಾವು ತಲುಪುವ ಸ್ಥಳ ಒಂದೆರಡು ಕಿಲೋಮೀಟರು ಮಾತ್ರ ಇದೆ. ನಾವು ಇಲ್ಲಿಯೇ ಇಳಿದು ನಿಸರ್ಗವನ್ನು ಆಸ್ವಾದಿಸುತ್ತ ನಡೆದುಕೊಂಡು ಹೋಗೋಣ’. ಈ ವಿಚಾರ ಬಂದಿದ್ದೇ ತಡ ಚಾಲಕನಿಗೆ ಹೇಳಿ ಬಸ್ಸು ನಿಲ್ಲಿಸಿ ಇಬ್ಬರೂ ಕೆಳಗಿಳಿದರು. ಆ ಬಸ್ಸು ಸ್ವಲ್ಪ ಮುಂದೆ ಹೋಗುತ್ತಲೇ, ದೊಡ್ಡದಾದ ಬಂಡೆಯೊಂದು ಪರ್ವತದ ಮೇಲಿಂದ ಉರುಳುತ್ತ ಬಂದು ಬಸ್ಸಿಗೆ ಅಪ್ಪಳಿಸಿ ಅದನ್ನು ಕಣಿವೆಯ ಪ್ರಪಾತಕ್ಕೆ ತಳ್ಳಿ ಬಿಟ್ಟಿತು. ಬಸ್ಸಿನಲ್ಲಿದ್ದ ಕೆಲವರಿಗೆ ಗಾಯಗಳಾದವು.

ಇದನ್ನು ನೋಡುತ್ತಿದ್ದ ಅವನು, ‘ನಾವು ಇಲ್ಲಿಯೇ ಇಳಿದಿದ್ದು ಎಷ್ಟು ಒಳ್ಳೆಯದಾಯಿತು, ಇಲ್ಲದಿದ್ದರೆ ನಮ್ಮ ಪರಿಸ್ಥಿತಿ ಏನಾಗುತ್ತಿತ್ತೋ ಏನೋ?’ ಎಂದ. ಆದರೆ ಅವಳು ಅಪರಾಧಿಭಾವ ತುಂಬಿದ ದನಿಯಲ್ಲಿ, ‘ನಮ್ಮ ಸ್ವಂತದ ಆನಂದಕ್ಕಾಗಿ ತೆಗೆದುಕೊಂಡ ಈ ನಿರ್ಧಾರದಿಂದಾಗಿ ಇಷ್ಟು ದಿನ ನಮ್ಮೊಡನೆ ಪ್ರವಾಸ ಮಾಡಿದ ಅನೇಕ ಮಿತ್ರರು ನೋವು ಅನುಭವಿಸಬೇಕಾಯಿತಲ್ಲ’ ಎಂದು ಹಲುಬಿದಳು. ‘ಅದ್ಹೇಗೆ? ಇದರಲ್ಲಿ ನಮ್ಮದೇನೂ ತಪ್ಪಿಲ್ಲವಲ್ಲ!’ ಆಗ ಅವಳು ಕಂಬನಿದುಂಬಿ ಹೇಳಿದಳು, ‘ನಾವು ಒಂದು ವೇಳೆ ಇಲ್ಲಿ ಇಳಿಯುವ ಯೋಚನೆ ಕಾರ್ಯರೂಪಕ್ಕೆ ತರದೇ ಸುಮ್ಮನೆ ಕುಳಿತುಕೊಂಡಿದ್ದರೆ ಬಸ್ಸು ನಮ್ಮನ್ನು ಇಳಿಸಲು ಸ್ವಲ್ಪ ಸಮಯ ನಿಲ್ಲುತ್ತಿರಲಿಲ್ಲ. ಅದು ಹಾಗೆಯೇ ಮುಂದೆ ಹೋಗಿ ಆ ಬಂಡೆ ಬೀಳುವ ಮೊದಲೇ ರಸ್ತೆಯ ಆ ಭಾಗವನ್ನು ದಾಟಿ ಮುಂದೆ ಹೋಗಿರುತ್ತಿತ್ತು, ಅಲ್ಲವೇ?’

ಜೀವನದಲ್ಲಿ ಹೀಗೆಯೇ ಕೆಲವೊಂದು ಘಟನೆಗಳು ಆಗಿ ಹೋಗುತ್ತವೆ. ಅವು ನಡೆದು ಹೋದ ಮೇಲೆ ನಾವದನ್ನು ತಪ್ಪಿಸಬಹುದಾಗಿತ್ತೆಂಬ ಅರಿವು ಆಗುತ್ತದೆ. ನಾವು ತೆಗೆದುಕೊಂಡ ಒಂದು ನಿರ್ಧಾರ ಸ್ವಂತಕ್ಕೆ ಸ್ವಲ್ಪ ಕಷ್ಟವಾದರೂ ಬೇರೆ ಎಷ್ಟೋ ಜನರಿಗೆ ಸಂತೋಷವನ್ನುಂಟು ಮಾಡಬಹುದೆಂಬುದು ನಮ್ಮ ಗಮನಕ್ಕೆ ಬರುವುದೇ ಇಲ್ಲ. ಮನಸ್ಸು ಯಾವಾಗಲೂ ಸ್ವಂತದ ಬಗ್ಗೆ ಮಾತ್ರ ಯೋಚಿಸುತ್ತದೆ.

ನಿರಭೃವಾದ ನೀಲಿ ಆಕಾಶವಿರಬೇಕಾದ ಆಶ್ವಿನ ಮಾಸದಲ್ಲಿ ಇಂದ್ರನು ಕೇವಲ ತನ್ನ ಶಕ್ತಿ ಪ್ರದರ್ಶನಕ್ಕಾಗಿ ಏಳು ದಿನ ಸತತವಾಗಿ ಸುರಿಸಿದ ಚಂಡಮಾರುತ ಹಾಗೂ ಆಲಿಕಲ್ಲಿನ ಮಳೆಯಿಂದ ತತ್ತರಿಸಿದ ಜನ ಹಾಗೂ ಗೋವುಗಳನ್ನು ಶ್ರೀಕೃಷ್ಣನು ಗೋವರ್ಧನ ಬೆಟ್ಟ ಎತ್ತಿ ಅದರ ಕೆಳಗೇ ಸಂರಕ್ಷಿಸಿದ. ಹೊರಗೆ ಹೋಗುವುದೊಂದು ಬಿಟ್ಟರೆ ಎಲ್ಲವೂ ಸುರಕ್ಷಿತ. ದೈನಂದಿನ ಆಹಾರ ನಿದ್ರೆಗಳಿಗೇನೂ ಕೊರತೆ ಇಲ್ಲ. ಇದರಲ್ಲಿ ಸ್ವಂತಕ್ಕೆ ಪಡೆಯಬೇಕಾದದ್ದು ಏನೂ ಇಲ್ಲದಿದ್ದರೂ ತನ್ನ ಈ ಆಚರಣೆ ಪರೋಪಕಾರವಾಗುವುದರ ಜತೆಗೆ ಮುಂದಿನ ಜನರಿಗೆ ಮಾದರಿಯಾಗಲೆಂಬ ದೃಷ್ಟಿಯಿಂದ ಅವನು ಕರ್ಮ ಪ್ರವೃತ್ತನಾದನು. ಅದನ್ನು ಪಾಲಿಸಿದವರು ಸುಖಿಗಳಾದರು. ಇತರರೂ ಸುಖಿಯಾಗಿದ್ದರೆ ಮಾತ್ರ ತಾನೂ ಸುಖಿಯಾಗಿರಲು ಸಾಧ್ಯ ಎಂಬುದನ್ನು ಅರಿತು ಬದುಕೋಣ, ಬದುಕಿಸೋಣ.

* ಚಿದಂಬರ ಮುನವಳ್ಳಿ (ಲೇಖಕರು ನಿವೃತ್ತ ಬ್ಯಾಂಕ್ ಅಧಿಕಾರಿ)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net