

ರಾಮಸುಬ್ರಾಯ ಶೇಟ್
ಭೌಮಾಸುರನು ಭೂದೇವಿ ಮತ್ತು ನಾರಾಯಣರಿಗೆ ಜನಿಸಿದವ. ಆದರೆ ಬಾಲ್ಯದಲ್ಲಿ ಸಿಗಬೇಕಾದ ಪೋಷಕರ ಮಾರ್ಗದರ್ಶನದಿಂದ ವಂಚಿತನಾದ ಭೌಮಾಸುರ, ಎಲ್ಲೆಲ್ಲೊ ಯಾರಲ್ಲೋ ಬೆರೆತು ಬೆಳೆದು ಕೆಟ್ಟವರ ಸಹವಾಸದಿಂದ ದುಶ್ಚಟಗಳನ್ನು ಬೆಳೆಸಿಕೊಂಡ. ಅಸುರರ ಸಹವಾಸದಲ್ಲಿ ನಾಯಕತ್ವ ಪಡೆದುಕೊಂಡ. ಅಡ್ಡದಾರಿಯನ್ನೇ ಸರಿಯಾದುದೆಂದು ಆಯ್ಕೆಯನ್ನು ಮಾಡಿಕೊಂಡ. ರಾಕ್ಷಸತ್ವ ಹಿತವೆನಿಸಿತು. ಅದೇ ಮಾರ್ಗದಲ್ಲಿ ಮುನ್ನಡೆದು ದುರ್ಬಲರನ್ನು ಕೈವಶಪಡಿಸಿಕೊಂಡು ಅಸುರರ ಪ್ರಮುಖ ಗುರಿಯಾದ ಮರಣ ಗೆಲ್ಲಲು ತಪವನ್ನಾಚರಿಸಿದ. ಬ್ರಹ್ಮನು ಮರಣದ ಆಯ್ಕೆ ಆತನಿಗೇ ಬಿಟ್ಟಾಗ ‘ತಂದೆ- ತಾಯಂದಿರು ಒಂದಾಗಿ ಬಂದು ಕೊಂದರೆ ಮಾತ್ರ ಸಾವು’ ಎಂದು ವರ ಪಡೆದ.
ವರ ಬಲದಿಂದ ಕೊಬ್ಬಿದ ಭೌಮಾಸುರ ಸ್ವರ್ಗವನ್ನು ಆಕ್ರಮಿಸಿ ಎಲ್ಲ ಸುವಸ್ತುಗಳನ್ನು ಅಪಹರಿಸಿದ. ಆತನ ಉಪಟಳ ಎಲ್ಲೆ ಮೀರಿತು, ದೇವತೆಗಳು ಕಂಗಾಲಾದರು. ಇನ್ನು ಉಪಟಳ ತಡೆಯಲಾರದಾಗ ಶ್ರೀಕೃಷ್ಣನಲ್ಲಿ ದೇವತೆ ಮತ್ತು ಋಷಿಗಳು ಧಾವಿಸಿ ‘ಪ್ರಭುವೇ, ಭೌಮಾಸುರ ಸ್ವರ್ಗವನ್ನೇ ನರಕವನ್ನಾಗಿಸಿ, ನರಕಾಸುರನಾಗಿದ್ದಾನೆ. ಆತ ಮಾಡಿರುವ ಪಾಪಕಾರ್ಯಗಳು ಅಷ್ಟಿಷ್ಟಲ್ಲ. ಹಾಗಾಗಿ, ಅವನ ಅಂತ್ಯವಾಗಲೇಬೇಕು. ಇಲ್ಲದಿದ್ದರೆ ದೇವತೆಗಳಿಗೇ ಕಷ್ಟ’ ಎಂದು ಬೇಡಿಕೊಂಡರು. ಶ್ರೀಕೃಷ್ಣ ಅಭಯವನ್ನೇನೋ ನೀಡಿದ. ಆದರೆ, ಭೌಮಾಸುರನ ಸಾವಿಗೆ ಸತ್ಯಭಾಮೆ ಜೊತೆಗಿರಬೇಕು ಎಂದು ಕೃಷ್ಣನಿಗೆ ಅರಿವಾಯಿತು. ಆದರೆ ಯಾವ ತಾಯಿ ಮಗನನ್ನು ಕೊಲ್ಲುತ್ತಾಳೆ? ಹಾಗಂತ ಉದ್ದೇಶಿತ ಕಾರ್ಯ ಕೈಬಿಡುವಂತೆಯೂ ಇಲ್ಲ. ಧರ್ಮಪಾಲನೆ ನಿಟ್ಟಿನಲ್ಲಿ ಇದು ತನ್ನ ಕರ್ತವ್ಯವೆಂದು ಭಾವಿಸಿದ ಕೃಷ್ಣ ಉಪಾಯದಿಂದ ಪ್ರಾಗ್ಜೋತಿಷ್ಯ ನಗರಕ್ಕೆ ಸತ್ಯಭಾಮೆಯನ್ನು ಕರೆದೊಯ್ದ. ಯುದ್ಧದಲ್ಲಿ ತಾನು ಸೋತಂತೆ ನಟಿಸಿ ಭಾಮೆಯೂ ಬಾಣ ಬಿಡುವಂತೆ ಮಾಡಿ ಜೀವದಾನ ಒಲ್ಲದ ನರಕಾಸುರನಿಗೆ, ಮೋಕ್ಷ ಕರುಣಿಸಿದ. ಅವನಿಚ್ಛೆಯಂತೆ ಲೋಕದಲ್ಲಿ ನರಕ ಚತುರ್ದಶಿಯು ಅಜ್ಞಾನವೆಂಬ ಕತ್ತಲೆ ಕಳೆದು ಜ್ಞಾನದ ದೀಪ ಬೆಳಗುವ ದೀಪಾವಳಿಯಾಗಿ ಆಚರಿಸಲ್ಪಡುತ್ತಿದೆ.
ನರಿಯ ಗುಂಪಿನಲ್ಲಿ ಬೆಳೆದ ಸಿಂಹದ ಮರಿ ಗರ್ಜಿಸುತ್ತಿರಲಿಲ್ಲ. ಎರಡು ಗಿಳಿಗಳಲ್ಲಿ ಕಟುಕನ ವಶವಾದ ಗಿಳಿ ಕೊಲ್ಲಲು ಹೇಳಿದರೆ, ಋಷಿಯ ಬಳಿ ಬೆಳೆದ ಮರಿ ಅತಿಥಿ ಸತ್ಕಾರ ಮಾಡುತ್ತಿತ್ತು. ಅದಕ್ಕೆ ಬಾಲ್ಯದಲ್ಲಿ ಉತ್ತಮ ಮಾರ್ಗದರ್ಶನ, ಸಂಸ್ಕಾರ, ಜೀವನಮೌಲ್ಯ ಸಿಕ್ಕರೆ ಸಜ್ಜನರಾಗುತ್ತಾರೆ, ಸಾತ್ವಿಕರಾಗುತ್ತಾರೆ. ಶ್ರೇಯಸ್ಸು ಪಡೆದು ಲೋಕೋಪಕಾರಿಯಾಗುತ್ತಾರೆ. ಅದೇ ವ್ಯತಿರಿಕ್ತವಾದರೆ, ಸಂಸ್ಕಾರಹೀನರಾದರೆ ನರಕನಂತೆ ಶ್ರೇಷ್ಠರಲ್ಲಿ ಜನಿಸಿದರೂ ದುರ್ಜನರ ಸಹವಾಸದಿಂದ ದುರಾಚಾರಿ, ದುಷ್ಟರಾಗಿ, ಲೋಕಕಂಟಕರಾಗುತ್ತಾರೆ. ಎಳೆಯರನ್ನು ಭಯೋತ್ಪಾದಕರನ್ನಾಗಿ ಮಾಡುವ, ಮಾದಕವಸ್ತುಗಳ ಬಲೆಯಲ್ಲಿ ಬಂಧಿಸುವ ಲೋಕಕಂಟಕ ಕ್ರೌರ್ಯ ಮುಂದುವರಿಯುತ್ತಿರುವುದು ಮಹಾದುರಂತ. ಇದನ್ನರಿತು ಪಾಲಕರೂ ಶಿಕ್ಷಕರೂ ವೈಯಕ್ತಿಕ ಪ್ರತಿಷ್ಠೆ, ಸ್ವಾರ್ಥ ಬದಿಗಿಟ್ಟು ಎಳೆಯರನ್ನು ಸದ್ಗುಣಿಗಳನ್ನಾಗಿ, ಸದಾಚಾರಿಗಳನ್ನಾಗಿ ಬೆಳೆಸಬೇಕಾದದ್ದು ಆದ್ಯಕರ್ತವ್ಯ. ಮತ್ತು ಸಮಾಜಕ್ಕೆ ನೀಡುವ ಮಹತ್ವದ ಕೊಡುಗೆ. ಒಳ್ಳೆಯ ವ್ಯಕ್ತಿತ್ವ ನಿರ್ವಣದಿಂದಲೇ ಮಾತ್ರ ಸಮಾಜದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಾಧ್ಯ ಎಂಬುದನ್ನು ಮರೆಯದಿರೋಣ. ಹಾಗಾಗಾಗಿಯೇ, ಬಾಲ್ಯದಲ್ಲೇ ಸದ್ಗುಣಗಳನ್ನು ಬಿತ್ತಿ, ಪೋಷಿಸುವ ಕೆಲಸ ಆಗಬೇಕು.
(ಲೇಖಕರು ಗಮಕ ವ್ಯಾಖ್ಯಾನಕಾರರು)