

ಚಿಕ್ಕಬಳ್ಳಾಪುರ : ರಾಜ್ಯದ ಇತರೆ ಜಿಲ್ಲೆಗಳ ಮಾದರಿಯಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲೂ ರೋಗಿಗಳಿಗೆ ಕರೊನಾ ಸೋಂಕು ಗುಣಪಡಿಸುವ ಲಸಿಕೆಯ ವಿತರಣೆಗೆ ಜಿಲ್ಲಾಡಳಿತ ಸಹ ಸಿದ್ಧತೆ ಪ್ರಾರಂಭಿಸಿದೆ.
ಜಿಲ್ಲಾಡಳಿತ ಭವನದಲ್ಲಿ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಆರ್.ಲತಾ ಅಧ್ಯಕ್ಷತೆಯಲ್ಲಿ ಬುಧವಾರ ಆಯೋಜಿಸಿದ್ದ ಕರೊನಾ ಲಸಿಕಾ ಪೂರ್ವ ಸಿದ್ಧತಾ ತಯಾರಿ ಸಂಬಂಧ ಜಿಲ್ಲಾ ಟಾಸ್ಕ್ ಪೋರ್ಸ್ ಸಭೆಯಲ್ಲಿ ನಿಯಮಾನುಸಾರ ಲಸಿಕೆ ವಿತರಣೆ ಯೋಜನೆಯ ಬಗ್ಗೆ ಚರ್ಚಿಸಲಾಯಿತು. ಕರೊನಾ ಸೋಂಕಿನ ಲಸಿಕೆಯು ಶೀಘ್ರದಲ್ಲೇ ಲಭ್ಯವಾಗಲಿದ್ದು ಸರ್ಕಾರದ ಆದೇಶದಂತೆ ಜಿಲ್ಲೆಯಲ್ಲಿ ಮೊದಲ ಹಂತದಲ್ಲಿ ಆರೋಗ್ಯ ಇಲಾಖೆ ಮತ್ತು ಖಾಸಗಿ ಆಸ್ಪತ್ರೆ ಸಿಬ್ಬಂದಿಗೆ ಆದ್ಯತೆ ಮೇರೆಗೆ ನೀಡಲು ಲಾನುಭವಿಗಳ ಮಾಹಿತಿ ಸಂಗ್ರಹಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಲತಾ ತಿಳಿಸಿದರು.
ಜಿಲ್ಲೆಯಲ್ಲಿ ಕರೊನಾ ಸೋಂಕು ಗುಣವಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿರುವ, ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿರುವವರ ಆರೋಗ್ಯದ ಮೇಲೆ ನಿಗಾ ವಹಿಸಲು ತಾಲೂಕು ಮಟ್ಟದ ಅಧಿಕಾರಿಗಳಿಗೆ ಸೂಚಿಸಿದರು.
ಕರೊನಾ ಲಸಿಕಾ ಪೂರ್ವ ಸಿದ್ಧತಾ ತಯಾರಿ ವಿಚಾರವಾಗಿ ಜಿಲ್ಲಾ ಲಸಿಕಾ ಮತ್ತು ಶೀತಲಾ ಸರಪಳಿ ವ್ಯವಸ್ಥಾಪಕಿ ಎಂ.ಮಮತಾ ಮಾಹಿತಿ ನೀಡಿದರು.
ಜಿ.ಪಂ.ಸಿಇಒ ಪಿ. ಶಿವಶಂಕರ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಇಂದಿರಾ ಆರ್ ಕಾಬಾಡೆ, ಆರ್‌ಸಿಎಚ್ ಅಧಿಕಾರಿ ಡಾ. ಚನ್ನಕೇಶವ ರೆಡ್ಡಿ, ಜಿಲ್ಲಾ ಶಸಚಿಕಿತ್ಸಕ ಡಾ. ರಮೇಶ್ ಮತ್ತಿತರರು ಇದ್ದರು.