ಕೇಳಿಸಿಕೊಳ್ಳುವ ಕಲೆ ನಮ್ಮದಾಗಲಿ

edit 3
Published on

ಬಹಳ ಕಾಲ ತಮ್ಮಲ್ಲಿ ಅಧ್ಯಾತ್ಮದ ಕುರಿತಂತೆ ಅಭ್ಯಾಸ ಮಾಡಿದ ಮೂವರು ಶಿಷ್ಯರಿಗೆ, ತಾವು ಬೋಧಿಸಿದ ವಿದ್ಯೆ ಎಷ್ಟರ ಮಟ್ಟಿಗೆ ಅರ್ಥವಾಗಿದೆ ಎಂಬುದನ್ನು ತಿಳಿದುಕೊಳ್ಳುವ ಕಾತರ ಅವರ ಗುರುಗಳಿಗೆ ಮೂಡಿತು. ಅದಕ್ಕೊಂದು ಪರೀಕ್ಷೆಯನ್ನು ಏರ್ಪಡಿಸಿದರು. ಮೂರೂ ಶಿಷ್ಯರನ್ನು ಕರೆದು, ಅವರಿಗೆ ಮೂರು ತಲೆಬುರುಡೆ (ಕಪಾಲ)ಗಳನ್ನು ತೋರಿಸುತ್ತ ಕೇಳಿದರು- ‘ಈ ಮೂರು ಕಪಾಲಗಳ ಪೈಕಿ ಯಾವುದು ಮಹಾತ್ಮನ ಕಪಾಲ ಎಂಬುದು ಕಂಡುಹಿಡಿಯಬಲ್ಲಿರಾ?’ ಒಬ್ಬಾತ ಶಿಷ್ಯ, ಗಾತ್ರದಲ್ಲಿ ದೊಡ್ಡದಾಗಿರುವ ಕಪಾಲವನ್ನು ತೋರಿಸಿ, ಇದುವೇ ಮಹಾತ್ಮನ ಕಪಾಲವಾಗಿರಬೇಕೆಂದು ಹೇಳಿದ. ಎರಡನೆಯ ಶಿಷ್ಯ, ಆ ಮೂರು ಕಪಾಲಗಳನ್ನು ಕೈಯಲ್ಲಿ ಹಿಡಿದು ತೂಗಿ, ಹೆಚ್ಚು ಭಾರವಾಗಿರೋದು. ಮಹಾತ್ಮನದೆಂದು ನಿರ್ಧರಿಸಿದ. ಮೂರನೆಯ ಶಿಷ್ಯ ದರ್ಭೆಯ ತುಂಡೊಂದನ್ನು ಎತ್ತಿಕೊಂಡು, ಮೊದಲನೆಯ ಕಪಾಲದ ಕಿವಿಯೊಳಕ್ಕೆ ತೂರಿಸಿದ. ಅದು ಮತ್ತೊಂದು ಕಿವಿಯಿಂದ ಹೊರಬರಲಾಗಿ, ಆತ ಹೇಳಿದ, ‘ಗುರುಗಳೇ, ಇದು ಸಾಮಾನ್ಯ ಮನುಷ್ಯನಿಗೆ ಸೇರಿದ ಕಪಾಲ. ಅದು ಏಕೆಂದರೆ, ಈತ ತಾನು ಕೇಳಿಸಿಕೊಂಡ ಮಾತುಗಳನ್ನು ಗಮನವಿಟ್ಟು ಆಲಿಸದೆ, ಒಂದು ಕಿವಿಯಲ್ಲಿ ಕೇಳಿ ಇನ್ನೊಂದು ಕಿವಿಯಿಂದ ಬಿಡುವ ಮನುಷ್ಯ. ಆದುದರಿಂದ ಈತ ಮಹಾತ್ಮನಲ್ಲ’. ಅನಂತರ ಅವನು ಎರಡನೆಯ ಕಪಾಲದ ಕಿವಿಯೊಳಗೆ ದರ್ಭೆಯನ್ನು ತೂರಿಸಿದ. ಆಗ ಅದರ ಬಾಯಿಯಿಂದ ಹೊರಬಂತು. ಇದನ್ನು ನೋಡಿ ಶಿಷ್ಯ ಹೇಳಿದ-‘ಸ್ವಾಮಿ, ಈತ ಸಾಮಾನ್ಯನೇ. ಹೇಗೆಂದರೆ, ಇವನು ಕೇಳಿದ ಯಾವುದೇ ವಿಷಯವನ್ನಾಗಲೀ, ಬೇರೆಯವರಿಗೆ ಹೇಳದ ಹೊರತು ಇವನಿಗೆ ತೃಪ್ತಿಯಾಗದು; ಸಮಾಧಾನವಾಗದು. ಇವನ ಬಳಿ ಗುಟ್ಟು, ಗುಟ್ಟಾಗಿ ಉಳಿಯದು’. ಮತ್ತೆ ದರ್ಭೆಯನ್ನು ಮೂರನೆಯ ಕಪಾಲದ ಕಿವಿಯೊಳಗೆ ತೂರಿಸಲಾಗಿ, ಅದು ಹೊರ ಬರಲೇ ಇಲ್ಲ. ತಕ್ಷಣ ಆತ ಹೇಳಿದ, ‘ಗುರುಗಳೇ, ಈತನೇ ಮಹಾತ್ಮನಾಗಿರಬೇಕು. ಏಕೆಂದರೆ, ಕೇಳಿದ ವಿಷಯಗಳು ಮಿದುಳಿಗೆ ತಲುಪಿಸಿ, ಅದರ ಬಗ್ಗೆ ಶುಭಚಿಂತನ, ಮನಮಂಥನ ಮಾಡುವ ಸ್ವಭಾವ ಇವನಿಗಿದೆ’. ಶಿಷ್ಯನ ಮಾತಿಗೆ ಪ್ರಸನ್ನಗೊಂಡ ಗುರುಗಳು ತಾನು ಕಲಿಸಿದ ವಿದ್ಯೆ ಮನದಟ್ಟು ಮಾಡಿಕೊಂಡಿರುವವನು ಇವನೇ, ಎಂಬ ನಿರ್ಧಾರಕ್ಕೆ ಬಂದರು.

ತಾತ್ಪರ್ಯವಿಷ್ಟೇ-ಜೀವನದಲ್ಲಿ ನಾವು ಇತರರನ್ನು ಕೇಳಿಸಿಕೊಳ್ಳಬೇಕು. ಬರೀ ನಮ್ಮ ಬಗ್ಗೆಯೇ ಹೇಳುತ್ತ ಹೋದರೆ, ಅದು ಸಂಪೂರ್ಣ ಸಂವಹನ ಎಂದೆನಿಸಲಾರದು. ಜಾಣರು ಕಡಿಮೆ ಮಾತನಾಡುತ್ತಾರೆ; ಹೆಚ್ಚು ಹೆಚ್ಚಾಗಿ ಕೇಳಿಸಿಕೊಳ್ಳುತ್ತಾರೆ. ಈ ಕಾರಣದಿಂದಲ್ಲವೇ, ಭಗವಂತ ನಮಗೆ ಎರಡು ಕಿವಿಗಳನ್ನು ಕೊಟ್ಟು, ಒಂದೇ ನಾಲಿಗೆಯನ್ನು ಕೊಟ್ಟಿರೋದು! ಸಾಮಾನ್ಯವಾಗಿ ನಾಲಿಗೆಗೆ ಎರಡು ಚಪಲಗಳು-ಒಂದು ತಿನ್ನುವ ಚಪಲ, ಇನ್ನೊಂದು ಮಾತನಾಡುವ ಚಪಲ. ಎರಡಕ್ಕೂ ಕಡಿವಾಣ ಹಾಕಬೇಕು. ಇತಿಮಿತಿ ಇಲ್ಲದೆ ತಿಂದರೆ, ಬೇಗನೆ ಗತಿಯನ್ನು ಕಾಣಬೇಕಾಗುತ್ತದೆ. ಅಂತೆಯೇ ಯೋಚಿಸದೆ ಮನಸ್ಸಿಗೆ ತೋಚಿದ್ದನ್ನೆಲ್ಲ ಮಾತನಾಡಿದರೆ ಕಷ್ಟಕ್ಕೆ ಸಿಲುಕಿಕೊಳ್ಳಬೇಕಾಗುತ್ತದೆ. ಕಾರಣ, ಬಾಯಿಯಿಂದ ಹೊರಬೀಳದ ಶಬ್ದ ನಮ್ಮ ಸೇವಕ; ಹೊರಬಿದ್ದುದು ನಮ್ಮ ಒಡೆಯ. ಆಡಿದ ಮಾತು, ಒಡೆದ ಕನ್ನಡಿ ಮತ್ತು ಕಳೆದು ಹೋದ ಸಮಯ ಮರಳಿ ಬಾರದು. ಆದುದರಿಂದ, ಕೇಳೋದು ಹೆಚ್ಚಾಗಿರಲಿ, ಹೇಳೋದು ಕಡಿಮೆ ಆಗಿರಲಿ.

| ಡಾ. ಕೆ.ಪಿ. ಪುತ್ತೂರಾಯ (ಲೇಖಕರು ಪ್ರಾಧ್ಯಾಪಕರು, ಸಾಹಿತಿ ಹಾಗೂ ವಾಗ್ಮಿ)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net