

ಕಳೆದ ವರ್ಷ 15-20 ಕೆ.ಜಿ. ತೂಕ ಎತ್ತಿದಾಗ ನನ್ನ ಬೆನ್ನಿನ ನರಗಳಲ್ಲಿ ನೋವು ಬಂದಿತ್ತು. ಆನಂತರ ಎಡಗಾಲಿನ ಶಕ್ತಿ ಸ್ವಲ್ಪ ಮಟ್ಟಿಗೆ ಕಡಿಮೆ ಆಯಿತು. ನಡೆಯಲು ಕಷ್ಟವಾಗುತ್ತಿದೆ. ಹಲವು ಚಿಕಿತ್ಸೆಗಳನ್ನು ನಡೆಸಿದರೂ ಸುಧಾರಣೆ ಕಂಡಿಲ್ಲ. ಯೋಗದ ಉಪಚಾರ ತಿಳಿಸಿ.
| ವೆಂಕಟರಮಣ ಭಟ್ (70 ವರ್ಷ)
ತೂಕ ಎತ್ತುವ ಸಂದರ್ಭ ನಿಮ್ಮ ಕೆಳಬೆನ್ನಿನಲ್ಲಿ ಮತ್ತು ಎಡಗಾಲು ನೋವು ಉಂಟಾಗಿದೆ. ಬೆನ್ನುಮೂಳೆಯ ಸುತ್ತಲಿನ ಮಾಂಸಖಂಡ ಹಾಗೂ ನರಗಳಿಗೆ ಅತಿ ಒತ್ತಡ ಉಂಟಾಗಿ ನೋವು ಬಂದಿದೆ. ಇದಕ್ಕೆ ಆರಂಭದಲ್ಲಿ ವಿಶ್ರಾಂತಿ ನೀಡಬೇಕಿತ್ತು. ನರಗಳ ಬಲ ಹೆಚ್ಚಿಸುವ ಆಸನಗಳನ್ನು ಮಾತ್ರ ನಿಧಾನವಾಗಿ ಯೋಗ ಚಿಕಿತ್ಸಕರದ ಮುಖಾಂತರ ಕಲಿತು ಅಭ್ಯಾಸ ಮಾಡಿ. ಮುಂದಕ್ಕೆ ಬಾಗುವ ಆಸನಗಳನ್ನು ಅಭ್ಯಾಸ ಮಾಡುವುದು ಬೇಡ. ಆರಂಭದಲ್ಲಿ ಮಲಗಿಕೊಂಡು ಒಂದೊಂದು ಕಾಲನ್ನು ಎತ್ತುವ ಉತ್ಥಿತ ಏಕಪಾದಾಸನವನ್ನು 6ರಿಂದ 9 ಬಾರಿ ಮಾಡಿ. ತಿರುಚುವಿಕೆಯ ಮತ್ತು ಇತರ ಆಸನಗಳನ್ನು (ಭರದ್ವಾಜಸನ, ವಕ್ರಾಸನ, ಕಟಿಚಕ್ರಾಸನ, ಅರ್ಧಕಟಿಚಕ್ರಾಸನ, ಮಾರ್ಜಾಲಾಸನ, ಮಕರಾಸನ, ಬಾಲಾಸನ, ಶಲಭಾಸನ ಕೊನೆಯಲ್ಲಿ ಶವಾಸನ ಸಹಕಾರಿ. ಕುರ್ಚಿಯಲ್ಲಿ ಕುಳಿತು ಮುಂಜಾನೆ ತಲಾ ಹತ್ತು ನಿಮಿಷ ಪ್ರಾಣಾಯಾಮ, ಧ್ಯಾನ ಅಭ್ಯಾಸ ಮಾಡಿ. ಬಿಡುವಿನ ವೇಳೆಯಲ್ಲಿ ತಲಾ ಇಪ್ಪತ್ತು ನಿಮಿಷ ವಾಯುಶೂನ್ಯಮುದ್ರೆ ಹಾಗೂ ಪ್ರಾಣಮುದ್ರೆ ಮಾಡಿ. ಸಂಜೆ ಹೊತ್ತು ನೋವು ಇರುವ ಭಾಗಕ್ಕೆ ಸ್ವಲ್ಪ ಬಿಸಿ ಎಳ್ಳೆಣ್ಣೆಯನ್ನು ಹಚ್ಚಿ ಒಂದು ತಾಸು ಬಿಡಿ.
ಮಲಗಿಕೊಂಡು ಮಾಡುವ ಉತ್ಥಿತ ಏಕಪಾದಾಸನ ಬಗ್ಗೆ ಮಾಹಿತಿ ತಿಳಿಸಿ.
| ಸುಬ್ರಹ್ಮಣ್ಯ ಹೈದರಾಬಾದ್ (58 ವರ್ಷ)
ಬೆನ್ನುನೋವು ಹಾಗೂ ಕಾಲುಗಳ ಸೆಳೆತದ ನಿಯಂತ್ರಣಕ್ಕೆ ಇರುವ ಸರಳ ಆಸನವಾಗಿದೆ. ಸಾಮಾನ್ಯ ಎಲ್ಲ ಸಮಸ್ಯೆ ಇದ್ದವರು ಈ ಆಸನವನ್ನು ಸುಲಭವಾಗಿ ಮಾಡಬಹುದು. ಜಮಖಾನ ಹಾಸಿದ ನೆಲದ ಮೇಲೆ ಮಲಗಿ ಬೆನ್ನು ನೆಲಕ್ಕೆ, ಕಾಲುಗಳು ಜೋಡಣೆ ಕೈಗಳನ್ನು ತೊಡೆಯ ಪಕ್ಕದಲ್ಲಿ ಇರಿಸಿ. ಉಸಿರನ್ನು ತೆಗೆದುಕೊಳ್ಳುತ್ತ ಬಲಗಾಲನ್ನು ಸಾದ್ಯವಾಗುವಷ್ಟು ಮೇಲಕ್ಕೆ ಎತ್ತಿ. ಸ್ವಲ್ಪ ಹೊತ್ತು ಸಹಜ ಉಸಿರಾಟ ನಡೆಸುತ್ತ ಇದ್ದು ಆಮೇಲೆ ಉಸಿರನ್ನು ಬಿಡುತ್ತ ನಿಧಾನವಾಗಿ ಕೆಲಕ್ಕೆ ಇಳಿಸಿ. ಇದೇ ರೀತಿ ಎಡಗಾಲಿನಲ್ಲಿಯೂ ಅಭ್ಯಸಿಸಿ. ಈ ರೀತಿ ಮೂರರಿಂದ ಆರು ಯಾ ಒಂಬತ್ತು ಭಾರಿ ಅಭ್ಯಾಸ ಮಾಡಿ. ವಿಶ್ರಾಂತಿ ಪಡೆಯಿರಿ.
ಪ್ರಯೋಜನ: ಕಾಲುಗಳಿಗೆ ಹೆಚ್ಚು ಶಕ್ತಿ ಒದಗಿಬರುತ್ತದೆ. ಬೆನ್ನಿನ ಹಾಗೂ ಕಾಲಿನ ನರಗಳು ಬಲಗೊಳ್ಳುತ್ತವೆ. ಸೊಂಟ ಮತ್ತು ಕಾಲಿನ ಸ್ನಾಯುಗಳನ್ನು ಬಲಪಡಿಸುತ್ತದೆ. ಪಾದದ ಕೀಲುಗಳು ಬಲಯುತವಾಗುತ್ತದೆ. ಕೆಳಬೆನ್ನನ್ನು ಸಡಿಲಗೊಳಿಸುತ್ತದೆ. ಪಿತ್ತಜನಕಾಂಗ, ಮತ್ತು ಮೂತ್ರಕೋಶಗಳ ಕಾರ್ಯ ಸಮರ್ಪಕವಾಗಿ ನಿರ್ವಹಿಸುತ್ತದೆ.