

ಪ್ರಾಣಾಯಾಮಕ್ಕೆ ಪೂರಕವಾದ ಆಸನ ಎಂದರೆ ಪದ್ಮಾಸನ. ಹಠರತ್ನಾವಳಿಯಲ್ಲಿ ಶ್ರೀನಿವಾಸನು ಪದ್ಮಾಸನ ಕುರಿತ ವ್ಯಾಖ್ಯೆಯನ್ನು ಈ ರೀತಿ ಕೊಡುತ್ತಾನೆ.
ಪಾದಾಂಗುಷ್ಠೌ ಚ ಬಧ್ನಿಯಾತ್ ಹಸ್ತಾಭ್ಯಾಂ ಚ ಕ್ರಮೇಣತು |
ಊವೋರುಪರಿ ವಿಪ್ರೇಂದ್ರ ಕೃತ್ವಾ ಪಾದತಲೇ ಉಭೇ |
ಪದ್ಮಾಸನಂ ಭವೇದೇತತ್ ಸರ್ವೆಷಾಮಪಿ ಪೂಜ್ಯತೇ ||
ಪದ್ಮಾಸನ ಮಾಡುವುದು ಹೇಗೆ?: ಚಾಪೆ ಅಥವಾ ಕಂಬಳಿ ಹಾಸಿ ಕುಳಿತುಕೊಳ್ಳಿ. ಬಲಗಾಲನ್ನು ಎಡತೊಡೆಯ ಮೇಲೆ, ಬಲಗಾಲಿನ ಹಿಮ್ಮಡಿ ಕೆಳಹೊಟ್ಟೆಗೆ ತಾಗುವ ರೀತಿಯಲ್ಲಿ ಇಟ್ಟುಕೊಳ್ಳಿ. ಎಡಗಾಲನ್ನು ಬಲತೊಡೆಯ ಮೇಲೆ, ಎಡಗಾಲಿನ ಹಿಮ್ಮಡಿ ಕೆಳಹೊಟ್ಟೆಗೆ ತಾಗುವ ರೀತಿಯಲ್ಲಿ ಇಟ್ಟುಕೊಳ್ಳಿ. ಅಂಗಾಲುಗಳು ಮೇಲ್ಮುಖವಾಗಿಲ್ಲದಿದ್ದರೆ ಚೆನ್ನ. ಅವು ಹಿಂಬದಿಗೆ ನೋಡುವ ರೀತಿಯಲ್ಲಿ ಹಿಮ್ಮುಖವಾಗಿ ಇರಿಸಿಕೊಂಡರೆ ಒಳ್ಳೆಯದು. ಬೆನ್ನನ್ನು ನೇರವಾಗಿರಿಸಿಕೊಳ್ಳಿ. ನಿಧಾನವಾಗಿ ಹತ್ತು ಸಲ ಉಸಿರಾಡಿ.
ಲಾಭಗಳು: ಮಂಡಿ ಹಾಗೂ ತೊಡೆಗಳಲ್ಲಿ ಕಾಣಿಸುವ ನೋವನ್ನು ನಿವಾರಿಸುತ್ತದೆ. ಈ ಆಸನ ರಕ್ತದ ಒತ್ತಡವನ್ನು ನಿಯಂತ್ರಿಸುತ್ತದೆ. ಧ್ಯಾನಕ್ಕೆ ಪೂರಕವಾದ ಈ ಆಸನ ಪ್ರಾಣಾಯಾಮಕ್ಕೆ ತುಂಬ ಪ್ರಶಸ್ತ. ಮನಸ್ಸನ್ನು ಶಾಂತಗೊಳಿಸುತ್ತದೆ. ಮನದ ಏಕಾಗ್ರತೆ ಹೆಚ್ಚಿಸಿಕೊಳ್ಳಲು ಪೂರಕ. ಮೇರುದಂಡ ನೇರ ಹಾಗೂ ದೃಢವಾಗಲು ಶರೀರ ಭಂಗಿ ಸುಂದರವಾಗಲು ಸಹಾಯಕ. ಸಯಾಟಿಕ್ ಹಾಗೂ ಋತುಬಂಧ ಸಮಸ್ಯೆ ಪರಿಹಾರಕ. ಕಾಲುಗಂಟು ಅಸ್ಥಿರಜ್ಜುವಿನ ನಮನೀಯತೆಗೆ ಪರಿಣಾಮಕಾರಿ ಆಸನ.
ಬದ್ಧಕೋನಾಸನ ಮಾಡುವ ವಿಧಾನ: ಚಾಪೆ ಅಥವಾ ಕಂಬಳಿ ಹಾಸಿ ಕುಳಿತುಕೊಳ್ಳಿ. ಎರಡೂ ಪಾದಗಳು ಒಂದಕ್ಕೊಂದು ಅಂಟಿಕೊಳ್ಳುವಂತೆ ಎಂದರೆ, ಅಂಗಾಲುಗಳು ಪರಸ್ಪರ ಮುಚ್ಚಿಕೊಳ್ಳುವಂತೆ ಎರಡೂ ಕಾಲುಗಳನ್ನು ಹೊರಮುಖವಾಗಿ ಮಡಚಿ. ಎರಡೂ ಪಾದಗಳ ಹಿಮ್ಮಡಿಗಳನ್ನು ತೊಡೆಗಳ ಬುಡಕ್ಕೆ ತಾಗುವಂತೆ ಇಟ್ಟುಕೊಳ್ಳಿ. ಕೈಗಳನ್ನು ನೇರವಾಗಿ ಇಳಿಬಿಟ್ಟು, ಮಂಡಿಗಳಿಗೆ ತಾಗುವಂತೆ ಇಟ್ಟು ಬೆರಳುಗಳನ್ನು ಚಿನ್ಮುದ್ರೆಯಲ್ಲಿ ಇಟ್ಟುಕೊಳ್ಳಿ. ಹತ್ತು ಸಲ ದೀರ್ಘವಾಗಿ ಉಸಿರಾಡಿ.
ಲಾಭಗಳು: ಇದು ಪ್ರಾಣಾಯಾಮಕ್ಕೆ ಪೂರಕವಾದ ಆಸನ. ಮಹಿಳೆಯರ ಮೂತ್ರಕೋಶ, ಗರ್ಭಕೋಶ, ಮಾಸಿಕ ತೊಂದರೆಗಳ ನಿವಾರಣೆಗೆ ಸಹಕಾರಿ. ಕಿಬ್ಬೊಟ್ಟೆಯ ಸ್ನಾಯುಗಳ ಪ್ರಚೋದನೆಯಿಂದ ಮೂತ್ರಪಿಂಡ, ಮೂತ್ರಕೋಶ, ಅಂಡಾಣುಗಳು, ಪ್ರಾಸ್ಟೇಟ್ ಗ್ರಂಥಿಗಳ ಕಾರ್ಯಕ್ಷಮತೆ ಹೆಚ್ಚುವುದು. ಬೆನ್ನುಮೂಳೆಯ ನೇರ ಸ್ಥಿರ ಭಂಗಿಯ ಕಾರಣ ಶರೀರದ ಎಲ್ಲ ಅಂಗಗಳಿಗೆ ಸಹಜ ರಕ್ತಚಲನೆಗೆ ಸಹಕಾರಿ. ಒಳತೊಡೆ, ಸ್ನಾಯು, ತೊಡೆಸಂದು ಹಾಗೂ ಕಾಲುಗಂಟು ಬಲಗೊಳ್ಳುವುದು. ಖಿನ್ನತೆ, ಉದ್ವೇಗ, ಆಯಾಸಗಳಿಗೆ ಪರಿಹಾರ ಲಭಿಸುವುದು. ಸಯಾಟಿಕ್ ತೊಂದರೆಯವರು ಅಗತ್ಯವಾಗಿ ಮಾಡುವುದು ಒಳ್ಳೆಯದು.