

ಗಣಪತಿ ಪ್ರದಕ್ಷಿಣೆ ನಮಸ್ಕಾರ ವ್ಯಾಯಾಮ: ಪೂರ್ವಕ್ಕೆ ಮುಖ ಮಾಡಿ ನಿಲ್ಲಿ. ಶರೀರ ನೇರವಾಗಿರಲಿ. ಕೈಗಳನ್ನು ಎರಡೂ ಪಕ್ಕಕ್ಕೆ ನೆಲಕ್ಕೆ ಸಮಾನಾಂತರವಾಗಿ ಇರುವಂತೆ ಚಾಚಿ. ನಿಂತಲ್ಲೇ ಎಡದಿಂದ ಬಲಕ್ಕೆ ನಿಯಂತ್ರಣ ತಪ್ಪದೆ ಪ್ರದಕ್ಷಿಣಾಕಾರವಾಗಿ ಗಡಿಯಾರದ ಸುತ್ತಿನಂತೆ ಸುತ್ತಿ. ಮುಖದಲ್ಲಿ ಪ್ರಸನ್ನತೆಯಿರಲಿ. ಸುತ್ತು ಹಾಕಲು ಪ್ರಾರಂಭಿಸುವ ಮೊದಲು ತಲೆಯ ನೇರವಾಗಿ ಒಂದು ಕೇಂದ್ರದ ಮೇಲೆ ನಿಮ್ಮ ದೃಷ್ಟಿಯನ್ನು ಕೇಂದ್ರೀಕರಿಸಿ. ಅದು ಓಂಕಾರ ಅಥವಾ ನಿಮ್ಮ ಇಷ್ಟದೇವರ ಮೂರ್ತಿ ಅಥವಾ ಚಿತ್ರವಾಗಬಹುದು. ಸುತ್ತುವುದನ್ನು ಪ್ರಾರಂಭಿಸಿದ ಮೇಲೂ ಸಾಧ್ಯವಾದಷ್ಟು ಸಮಯ ಆ ಕೇಂದ್ರವನ್ನೇ ನೋಡುತ್ತಿರಿ. ಏಕೆಂದರೆ, ನಿಮ್ಮ ಶರೀರದೊಡನೆ ತಲೆಯೂ ತಿರುಗಲೇಬೇಕಾಗುತ್ತದೆ. ಹೀಗಾದಾಗ ಎಷ್ಟು ಬೇಗ ಆಗುವುದೋ ಅಷ್ಟು ಬೇಗ ತಲೆಯನ್ನು ತಿರುಗಿಸಿ. ಆ ಕೇಂದ್ರದ ಮೇಲೇ ದೃಷ್ಟಿ ಇಡಿ. ಈ ರೀತಿ ಮಾಡುವಾಗ ಆ ನಿರೀಕ್ಷಣಾ ಕೇಂದ್ರವು ನಿಮ್ಮನ್ನು ದುರ್ಬಲಗೊಳ್ಳದಂತೆ, ತಲೆ ಸುತ್ತದಂತೆ ರಕ್ಷಿಸುತ್ತದೆ.
ಮೊದಮೊದಲು ಐದು ಬಾರಿ ಸುತ್ತುವುದರಲ್ಲಿ ದೊಡ್ಡವರಿಗೆ ತಲೆ ತಿರುಗಬಹುದು. ಹಾಗೆ ತಲೆ ತಿರುಗುವಂತಾದರೆ ನಿಲ್ಲಿಸಿ. ಪ್ರಾರಂಭಿಸುವಾಗ ಹೆಚ್ಚು ಬಾರಿ ಸುತ್ತಲು ಪ್ರಯತ್ನಿಸಬೇಡಿ. ತಲೆ ತಿರುಗಿದಾಗ ನಿಂತರೆ-ಕುಳಿತರೆ ಅಥವಾ ಮಲಗಿದರೆ ಸರಿಯಾದೇನು ಎಂದು ಅನಿಸಿದರೆ ಹಾಗೆ ಮಾಡಿ, ತೊಂದರೆ ಇಲ್ಲ. ಪ್ರಾರಂಭದ ದಿನಗಳಲ್ಲಿ ಈ ಕ್ರಿಯೆಗಳನ್ನು ಸ್ವಲ್ಪವೇ ಸ್ವಲ್ಪ ತಲೆಸುತ್ತುವಂತೆ ಆಗುವವರೆಗೆ ಮಾಡಿ ನಿಲ್ಲಿಸಿ. ಕ್ರಮೇಣ ಇಪ್ಪತ್ತೊಂದು ಸುತ್ತು ಹಾಕುವವರೆಗೂ ಮುಂದುವರಿಸಿ. ಸುತ್ತು ಹಾಕುತ್ತಿರುವಾಗ ಪ್ರತಿ ಪ್ರದಕ್ಷಿಣೆಗೆ ‘ಓಂ ಗಂ ಗಣಪತಯೇ ನಮಃ’ - ಒಂದು, ‘ಓಂ ಗಂ ಗಣಪತಯೇ ನಮಃ’ - ಎರಡು ಎಂದು ಎಣಿಸುತ್ತ ಹೋಗಿ, ಇಪ್ಪತ್ತೊಂದು ಬಾರಿ ಆದ ನಂತರ ನಿಲ್ಲಿಸಿ.
ಈ ಪ್ರದಕ್ಷಿಣೆ ನಮಸ್ಕಾರ ವ್ಯಾಯಾಮವು ಋಣಾತ್ಮಕ ಶಕ್ತಿಯನ್ನು ಹೊರಹಾಕುತ್ತ ಭಾವನಾತ್ಮಕ ಸಂತುಲನವನ್ನು ನೀಡುತ್ತದೆ. ಇಪ್ಪತ್ತೊಂದು ಸುತ್ತು ಮುಗಿದ ಕೂಡಲೇ ಪೂರ್ವಾಭಿಮುಖವಾಗಿ ನಿಲ್ಲಿ. ಕೈ ಜೋಡಿಸಿ ಕಣ್ಣುಗಳನ್ನು ಮುಚ್ಚಿಕೊಳ್ಳಿ. ನಾಲ್ಕಾರು ಬಾರಿ ದೀರ್ಘ ಶ್ವಾಸೋಚ್ಛಾಸವನ್ನು, ವಿಶ್ರಾಂತಿಯನ್ನು ಪಡೆಯಿರಿ.
ಹೊಟ್ಟೆ ತುಂಬ ತುಂಬುವಂತೆ ಹೊಟ್ಟೆ ಹಿಗ್ಗಿಸಿ, ಉಸಿರನ್ನು ಒಳಗೆಳೆದುಕೊಳ್ಳುತ್ತ ‘ಓಂ ಗಂ ಗಣಪತಯೇ ನಮಃ’ ಎಂದು ಮನದಲ್ಲೇ ಹೇಳಿ. ಅನಂತರ ಇಡೀ ಉಸಿರನ್ನು ಒಂದೇ ಬಾರಿಗೆ ಬಾಯಿಯಿಂದ ಹೊರಗೆ ಹಾಕುತ್ತ ಮುಖಧೌತಿ ಮಾಡಿ. ಶರೀರದಲ್ಲಾಗುವ ವ್ಯತ್ಯಾಸ, ಆಯಾಸ, ಹೃದಯ ಬಡಿತ, ದೇಹದ ಉಷ್ಣತೆ ಸಮಸ್ಥಿತಿಗೆ ಬರುವುದನ್ನು ಹೊಸತನವನ್ನು ಗಮನಿಸಿ.
ಚಿತ್ರ
1. ಎರಡೂ ಕೈಗಳನ್ನು ಎರಡೂ ಬದಿಗೆ ಚಾಚಿರುವುದು
2. ಬಲಗಾಲು ಮುಂದಿರಿಸಿ ನಮಸ್ಕರಿಸುತ್ತಿರುವುದು