ಶ್ವಾಸಕೋಶದ ಸಾಮರ್ಥ್ಯ ಹೆಚ್ಚಿಸುವ ಪ್ರಾಣಾಯಾಮ, ಆಸನ

300120 Yoga Dhana Shibira
Published on

ಶೀತ, ಕೆಮ್ಮು ಕಡಿಮೆಯಾಗಲು ಹಾಗೂ ಶ್ವಾಸಕೋಶದ ಸಾಮರ್ಥ್ಯ ಹೆಚ್ಚಿಸಿಕೊಳ್ಳಲು ಪ್ರಾಣಾಯಾಮ-ಆಸನಗಳು ಹೇಗೆ ಸಹಕಾರಿ?

| ಕಿಶೋರ್ ಉಡುಪಿ, 24 ವರ್ಷ

ದುರ್ಬಲ ರೋಗನಿರೋಧಕ ಶಕ್ತಿ ಹೊಂದಿರುವ ಜನರಿಗೆ ಕೆಲವು ವಾತಾವರಣದಲ್ಲಿ ಕೆಮ್ಮು ಮತ್ತು ಶೀತ ಕಾಡುತ್ತದೆ. ಕಾಲಕಾಲಕ್ಕೆ ಕೆಮ್ಮುವುದು ನಮ್ಮ ದೇಹವು ಶ್ವಾಸಕೋಶದಿಂದ ಕಣಗಳು ಮತ್ತು ಸ್ರವಿಸುವಿಕೆಯನ್ನು ತೆರೆವುಗೊಳಿಸಲು ಸಹಾಯ ಮಾಡುತ್ತದೆ ಮತ್ತು ಸೋಂಕನ್ನು ತಡೆಯಲು ಸಹಾಯಮಾಡುತ್ತದೆ. ದೀರ್ಘಕಾಲದ ಕೆಮ್ಮು ಗಂಭೀರವಾಗಿಲ್ಲವಾದರೂ ಅದು ವಾರದಲ್ಲಿ ವಿಸ್ತರಿಸಿದಾಗ ರೋಗಿಗಳಿಗೆ ಅಹಿತಕರ ಅನುಭವನ್ನು ತರುತ್ತದೆ. ಅದು ತಲೆನೋವು, ತಲೆತಿರುಗುವಿಕೆ ಸ್ನಾಯುಗಳ ಒತ್ತಡ, ದೇಹದ ನೋವು, ನಿದ್ರಾಹೀನತೆ ಮತ್ತು ಅತಿಯಾದ ಬೆವರು ಉಂಟಾಗುತ್ತದೆ. ಸುತ್ತಮುತ್ತಲಿನ ಯಾರಾದರೂ ಶೀತ ಅಥವಾ ಕೆಮ್ಮು, ವೈರಸ್ ಸೋಂಕಿಗೆ ಒಳಗಾಗಿದ್ದರೆ, ಈ ವೈರಸ್ ವಾಯುಗಾಮಿ ಆಗಿರುವುದರಿಂದ ಬೇಗನೆ (ಹತ್ತಿರ ಸಂಪರ್ಕದಲ್ಲಿರುವವರಿಗೆ) ಹರಡುತ್ತದೆ. ವೈರಸ್ ಮೂಗು ಮತ್ತು ಗಂಟಲಿನ ಮೂಲಕ ಹಾದು ಹೋಗುತ್ತದೆ. ವೈರಸ್ ಮೇಲೆ ದಾಳಿಮಾಡಲು ಬಿಳಿ ರಕ್ತಕಣಗಳನ್ನು ಕಳುಹಿಸುತ್ತದೆ. ಬಿಳಿ ರಕ್ತಕಣಗಳು ಗಂಟಲು ಕಡೆಗೆ ಸೆಳೆಯಲು ಯೋಗ ಸಹಕಾರಿಯಾಗುತ್ತದೆ. ಯೋಗದ ನಿಯಮಿತ ಅಭ್ಯಾಸವು ದೇಹದ ಶಕ್ತಿ ವ್ಯವಸ್ಥೆ ಅಥವಾ ನಾಡಿಗಳನ್ನು ಸಮತೋಲನಗೊಳಿಸುತ್ತದೆ ಮತ್ತು ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ. ಪ್ರಾಣಾಯಾಮವು (ಉಸಿರಾಟದ ವ್ಯಾಯಾಮಗಳು) ಶ್ವಾಸಕೋಶಕ್ಕೆ ಹೆಚ್ಚಿನ ಆಮ್ಲಜನಕವನ್ನು ಹೀರಿಕೊಳ್ಳಲು ಸಹಾಯ ಮಾಡುತ್ತದೆ. ಕೆಮ್ಮು ಮತ್ತು ಶೀತವನ್ನು ತಡೆಯುತ್ತದೆ.

ಪ್ರಾಣಾಯಾಮಗಳು

ಭಸ್ತ್ರಿಕಾ, ಕಪಾಲಭಾತಿ, ಅನುಲೋಮ-ವಿಲೋಮ ಯಾ ನಾಡಿಶುದ್ಧಿ, ಉಜ್ಜಾಯೀ ಪ್ರಾಣಾಯಾಮ.

ಯೋಗಭಂಗಿಗಳು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ನಮ್ಮ ದೇಹದಲ್ಲಿರುವ ಥೈಮಸ್ ಗ್ರಂಥಿಯ ಹಾಮೋನ್ಸ್​ಗಳು ವೈರಸ್ ಮತ್ತು ಸೋಂಕುಗಳ ವಿರುದ್ಧ ಹೋರಾಡುತ್ತವೆ. ಥೈಮಸ್ ಗ್ರಂಥಿಯನ್ನು ಉತ್ತೇಜಿಸಲು ಆಯ್ದ ಯೋಗಭಂಗಿಗಳು ಸಹಕಾರಿಯಾಗುತ್ತವೆ. ಇದು ರೋಗನಿರೋಧಕ ಶಕ್ತಿಯನ್ನು ಬಲಪಡಿಸಲು ಸಹಾಯ ಮಾಡುತ್ತದೆ. ಎದೆಯ ಪ್ರದೇಶದಲ್ಲಿ ನೆಲೆಗೊಂಡಿರುವ ಈ ಗ್ರಂಥಿಯು ಎದೆಯ ವಿಸ್ತರಣೆಯಿಂದ ಸಕ್ರಿಯಗೊಳ್ಳುತ್ತದೆ. ಈ ಕೆಳಗೆ ತಿಳಿಸಿದ ಆಸನಗಳು ಎದೆಯ ವಿಸ್ತರಣೆ ಹಾಗೂ ವ್ಯಕ್ತಿಯ ಆರೋಗಕ್ಕೆ ಸಹಕಾರಿಯಾಗುತ್ತವೆ.

ಸೂಚಿತ ಆಸನಗಳು: ಅರ್ಧಚಕ್ರಾಸನ, ಪಾದಹಸ್ತಾಸನ, ವೀರಭದ್ರಾಸನ, ಪರ್ವತಾಸನ, ವೃಕ್ಷಾಸನ, ಅರ್ಧ ಉಷ್ಟ್ರಾಸನ, ಉತ್ಥಾನಪಾದಾಸನ, ಸೇತುಬಂಧ, ಸರ್ವಾಂಗಾಸನ, ಭುಜಂಗಾಸನ, ಧನುರಾಸನ, ಚಕ್ರಾಸನ, ಅಧೋಮುಖ ಶ್ವಾನಾಸನ, ಪರ್ಯಂಕಾಸನ, ಶವಾಸನ ಇತ್ಯಾದಿಗಳು.

ಯೋಗವನ್ನು ಯಾವ ಹೊತ್ತಿನಲ್ಲಿ ಎಷ್ಟು ಹೊತ್ತು ಅಭ್ಯಾಸ ಮಾಡಬೇಕು?

| ವಿಷ್ಣು ಸುಳ್ಯ, 30 ವರ್ಷ

ಯೋಗವನ್ನು ಮುಂಜಾನೆ ಖಾಲಿ ಹೊಟ್ಟೆಯಲ್ಲಿ ಅಭ್ಯಾಸ ಮಾಡಿ (ಮುಂಜಾನೆ ಉತ್ತಮ ಸಮಯ). ಎರಡನೆ ಸಮಯ ಸೂರ್ಯಾಸ್ತದ ಆಸುಪಾಸಿನಲ್ಲಿ. ಯೋಗವನ್ನು ಕನಿಷ್ಠ ಮೂವತ್ತು ನಿಮಿಷ ಅಭ್ಯಾಸ ಮಾಡಿ. ಒಂದು ಗಂಟೆಯ ಹೊತ್ತಿನ ಅಭ್ಯಾಸ ಮಾಡಿದರೆ ತುಂಬ ಉತ್ತಮ. ಗುರುಮುಖೇನ ಯೋಗದ ಮಾಹಿತಿ ಅರಿತು, ಶಿಸ್ತುಬದ್ಧವಾಗಿ, ಕ್ರಮವತ್ತಾಗಿ ಉಸಿರಿನ ಗತಿಯೊಂದಿಗೆ ಅಭ್ಯಾಸ ಮಾಡಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net