ನರಗಳ ಕಾರ್ಯಗಳನ್ನು ಸುಧಾರಿಸುವ ಯೋಗ

yoga april
Published on

ನನಗೆ ಇತ್ತೀಚೆಗೆ ಕೇಳುವಿಕೆ ಸಮಸ್ಯೆ ಉಂಟಾಗಿದೆ. ಕಿವಿತಜ್ಞರ ಬಳಿ ಪರಿಶೀಲಿಸಿದಾಗ ಕೇಳುವಿಕೆ ಸಮಸ್ಯೆ ಶೇ. 40ರಷ್ಟಿದೆ ಎಂದು ತಿಳಿಸಿದ್ದಾರೆ. ವೈರಲ್​ನಿಂದ ಆಗಿದೆ ಎಂದು ತಿಳಿಸಿದ್ದಾರೆ. ನನ್ನ ಶ್ರವಣದೋಷ ಹೋಗಲಾಡಿಸುವ ಯೋಗಮುದ್ರೆಗಳನ್ನು ತಿಳಿಸಿ.

| ಪಾಪಣ್ಣ ಹಿರಿಯೂರು, 37 ವರ್ಷ

ಕೆಲವು ವೈರಲ್ ಸೋಂಕುಗಳು ಒಳಗಿನ ಕಿವಿಯ ರಚನೆಗಳನ್ನು ನೇರವಾಗಿ ಹಾನಿಗೊಳಿಸುತ್ತವೆ. ಇನ್ನೂ ಕೆಲವು ಸೂಕ್ಷ್ಮತೆ ಅಥವಾ ಬ್ಯಾಕ್ಟೀರಿಯಾ ಅಥವಾ ಶಿಲೀಂದ್ರಗಳ ಸೋಂಕನ್ನು ಹೆಚ್ಚಿಸಬಹುದು. ಇದು ಶ್ರವಣನಷ್ಟಕ್ಕೆ ಕಾರಣವಾಗುತ್ತದೆ. ಯೋಗವು ದೈಹಿಕ, ಮಾನಸಿಕ, ಆಧ್ಯಾತ್ಮಿಕ ಮತ್ತು ಭಾವನಾತ್ಮಕ ಆಯಾಮಗಳ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಕಾರಿಯಾಗುತ್ತದೆ. ಯೋಗದ ಅಭ್ಯಾಸವು ಕಿವಿ ಮತ್ತು ಮಿದುಳಿನಲ್ಲಿ ರಕ್ತಸಂಚಲನೆಯನ್ನು ಹೆಚ್ಚಿಸುವುದು. ಏಕೆಂದರೆ ಹೆಚ್ಚಿದ ರಕ್ತ ಸಂಚಲನೆಯು ನರಗಳ ಕಾರ್ಯಗಳನ್ನು ಸುಧಾರಿಸಲು ಸಹಾಯ ಮಾಡುತ್ತದೆ. ತ್ಯಾಜ್ಯ ಜೀವಾಣುಗಳನ್ನು ತೆಗೆದುಹಾಕಲು ಸಹಕಾರಿಯಾಗುತ್ತದೆ. ವೃಕ್ಷಾಸನ, ಪಾದಹಸ್ತಾಸನ, ಪದ್ಮಾಸನ, ತ್ರಿಕೋಣಾಸನ, ಶಶಾಂಕಾಸನ, ಕರ್ಣಪೀಡಾಸನ, ಭುಜಂಗಾಸನ, ಶವಾಸನ ಮಾಡಬಹುದು. ಭ್ರಾಮರಿ, ಉಜ್ಜಾಯಿ, ನಾಡೀಶುದ್ಧಿ, ತಲಾ ಹತ್ತು ನಿಮಿಷ ಅಭ್ಯಾಸ ಮಾಡಿ. ಮುಂಜಾನೆ ಹಾಗೂ ಸಂಜೆ ಸುಮಾರು 15 ನಿಮಿಷ ಸಾಮಾನ್ಯ ಉಸಿರನ್ನು ಗಮನಿಸುವ ಧ್ಯಾನ ಮಾಡಿ. ಶೂನ್ಯಮುದ್ರೆ 30 ನಿಮಿಷ, ಆಕಾಶಮುದ್ರೆಯಲ್ಲಿ ಓಂ ನಮೋ ನಮೋ ಭಗವತೇ ವಾಸುದೇವಾಯ ಎಂದು 108 ಬಾರಿ ಪಠಿಸಿ.

ಶೂನ್ಯಮುದ್ರೆಯ ಬಗ್ಗೆ ಮಾಹಿತಿ ತಿಳಿಸಿ.

| ಚೆನ್ನಪ್ಪ ಸೊರಬ, 40 ವರ್ಷ

ಈ ಮುದ್ರೆಗೆ ಆಕಾಶಶಾಮಕ ಮುದ್ರೆ ಎಂಬ ಹೆಸರೂ ಇದೆ. ಪಂಚಭೂತಗಳಲ್ಲಿ ಒಂದಾದ ಆಕಾಶತತ್ವದ ಅಂಶ ವ್ಯತ್ಯಾಸವಾದಾಗ ಕೇಳುವ ಅಂಶ ಕಡಿಮೆಯಾಗುತ್ತದೆ. ಇಲ್ಲಿ ಮಧ್ಯದ ಬೆರಳನ್ನು ಹೆಬ್ಬೆರಳಿನ ಬುಡದಲ್ಲಿ ಇರಿಸಿದಾಗ ಆಕಾಶ ತತ್ತ್ವದ ಪರಿಣಾಮ ಕಡಿಮೆಯಾಗಿ ಶಿರಸ್ಸಿಗೆ ಹಾಗೂ ಕಿವಿಗೆ ಸಂಬಂಧಪಟ್ಟ ಸಮಸ್ಯೆಗಳು ನಿಯಂತ್ರಣವಾಗುತ್ತದೆ.

ಶೂನ್ಯ ಎಂಬ ಪದವು ಜಾಗವನ್ನು (ಮುಕ್ತತೆ) ಸೂಚಿಸುತ್ತದೆ. ಶೂನ್ಯ ಎಂದರೆ ಮುದ್ರಾ (ಸೀಲ್) ಎಂದು ಕರೆಯುತ್ತಾರೆ. ಈ ಮುದ್ರೆ ನಮ್ಮ ದೇಹದಲ್ಲಿನ ಬಾಹ್ಯಾಕಾಶ ಅಂಶವನ್ನು ನಿಯಂತ್ರಿಸುತ್ತದೆ. ಇದು ಮಧ್ಯದ ಬೆರಳಿನ ಅಭ್ಯಾಸವನ್ನು ಒಳಗೊಂಡಿದೆ. ಅದು ಆಕಾಶ ಅಥವಾ ಸ್ವರ್ಗ ಎಂದು ಸೂಚಿಸುತ್ತದೆ. ಆದ್ದರಿಂದ ಇದನ್ನು ಸ್ವರ್ಗಮುದ್ರೆ ಎಂದೂ ಕರೆಯುತ್ತಾರೆ.

ವಿಧಾನ: ಜಮಖಾನದಲ್ಲಿ ಕುಳಿತುಕೊಂಡು ಎರಡೂ ಕೈಗಳ ಮಧ್ಯದ ಬೆರಳನ್ನು ಮಡಚಿ ಹೆಬ್ಬೆರಳಿನ ಬುಡಕ್ಕೆ ರ್ಸ³ಸಿ. ಈಗ ಹೆಬ್ಬೆರಳನ್ನು ಮಧ್ಯದ ಮೇಲೆ ಮೃದುವಾಗಿ ಒತ್ತಿ. ಉಳಿದ ಮೂರು ಬೆರಳುಗಳು ನೇರವಾಗಿರಲಿ. ಈ ಎರಡೂ ಕೈಗಳನ್ನು ಮಂಡಿ ಮೇಲೆ ಇರಿಸಿ ಸುಮಾರು ಮೂವತ್ತರಿಂದ ನಲ್ವತ್ತು ನಿಮಿಷ ಅಭ್ಯಾಸ ಮಾಡಿ. ಬಳಿಕ ಹತ್ತರಿಂದ ಮೂವತ್ತು ನಿಮಿಷಗಳವರೆಗೆ ಪ್ರಾಣಮುದ್ರೆಯನ್ನು ಮಾಡಿ.

ಪ್ರಯೋಜನ: ಶ್ರವಣಸಂಬಂಧಿತ ಸಮಸ್ಯೆಗಳನ್ನು ನಿಭಾಯಿಸುವಲ್ಲಿ ಇದು ಅತ್ಯುತ್ತಮವಾಗಿದೆ. ಕಿವಿಯಲ್ಲಿ ಏನೋ ಸದ್ದಾದಂತೆ ಭಾಸವಾಗುವುದು ಕಡಿಮೆಯಾಗುತ್ತದೆ. ತಲೆ ಸುತ್ತುವಿಕೆ (ವರ್ಟಿಗೋ) ಸಮಸ್ಯೆ ನಿಯಂತ್ರಣಕ್ಕೆ ಬರುತ್ತದೆ. ಆದರೆ ಹುಟ್ಟಿನಿಂದ ಬಂದ ಕಿವುಡುತನಕ್ಕೆ ಈ ಶೂನ್ಯಮುದ್ರೆ ಸಹಾಯವಾಗುವುದಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net