ಹೊಟ್ಟೆಯ ಬೊಜ್ಜನ್ನು ಕರಗಿಸುವ ಆಸನ

yoga kshema
Published on

* ನನಗೆ ದೊಡ್ಡ ಹೊಟ್ಟೆ ಇದೆ. ಹೆಚ್ಚು ಆಸನಗಳನ್ನು ಮಾಡಲು ಸಮಯ ಇಲ್ಲ. ಹೊಟ್ಟೆಯ ಬೊಜ್ಜನ್ನು ಕರಗಿಸುವ ಊರ್ಧ್ವ ಪ್ರಸಾರಿತ ಪಾದಾಸನದ ಬಗ್ಗೆ ಮಾಹಿತಿ ತಿಳಿಸಿ.

| ಸಿದ್ಧಲಿಂಗ 42 ವರ್ಷ

_ ನಲವತ್ತು ವರ್ಷ ದಾಟಿದ ಮೇಲೆ ಹೊಟ್ಟೆ ದೊಡ್ಡದು ಇದ್ದರೆ ಕಾಯಿಲೆಗಳಿಗೆ ಆಹ್ವಾನ ಕೊಟ್ಟಂತೆಯೇ ಎಂದು ನಮ್ಮ ಹಿರಿಯರು ಹೇಳುತ್ತಾರೆ. ಒಮ್ಮೆ ದೊಡ್ಡ ಹೊಟ್ಟೆ ಬಂದರೆ ಹೊಟ್ಟೆಯನ್ನು ಸಣ್ಣದಾಗಿಸಲು ಬಹಳ ಕಷ್ಟಪಡಬೇಕಾಗುತ್ತದೆ. ಕೆಲವು ಆಯ್ದ ಯೋಗಾಸನಗಳ ಮೂಲಕ ಹೊಟ್ಟೆಯ ಕೊಬ್ಬನ್ನು ಕರಗಿಸಬಹುದಾಗಿದೆ. ಆದರೆ ಯೋಗವನ್ನು ಗುರುಮುಖೇನ ಕಲಿತು ಅಭ್ಯಾಸ ಮಾಡಿದಾಗ ಹೊಟ್ಟೆಯ ಬೊಜ್ಜನ್ನು ಸಾಕಷ್ಟು ಕರಗಿಸಬಹುದು.

ಊರ್ಧ್ವ ಪ್ರಸಾರಿತ ಪಾದಾಸನ

ವಿಧಾನ: ಅಂಗಾತವಾಗಿ ನೆಟ್ಟಗೆ ಮಲಗಿ. ಕೈಗಳನ್ನು ದೇಹಕ್ಕೆ ತಾಗಿಸಿ ಅಂಗೈಗಳನ್ನು ನೆಲದ ಮೇಲೆ ಇಡಿ. ಅನಂತರ ಉಸಿರನ್ನು ತೆಗೆದುಕೊಳ್ಳುತ್ತ ಎರಡು ಕಾಲುಗಳನ್ನು 60 ಡಿಗ್ರಿ ಕೋನದವರೆಗೆ ನಿಧಾನವಾಗಿ ಎತ್ತಿ ಮೇಲೆ ನಿಲ್ಲಿಸಿ. ಸ್ವಲ್ಪ ಹೊತ್ತು ಸಮ ಉಸಿರಾಟದಲ್ಲಿ ಇದ್ದ ನಂತರ ಎರಡೂ ಕಾಲುಗಳನ್ನು ನಿಧಾನವಾಗಿ ಉಸಿರು ಬಿಡುತ್ತ ಕೆಳಗಿಳಿಸಿ. ಈ ರೀತಿ ಮೂರರಿಂದ ಆರು ಬಾರಿ ಅಭ್ಯಾಸ ಮಾಡಿ. ಈ ಆಸನವನ್ನು ಪ್ರತಿಯೊಂದು ಬಾರಿ ಅಭ್ಯಾಸ ಮಾಡಿದಾಗ ಸ್ವಲ್ಪ ಹೊತ್ತು ವಿಶ್ರಾಂತಿ ಪಡೆಯಿರಿ.

ಪ್ರಯೋಜನ: ಹೊಟ್ಟೆಯ ಬೊಜ್ಜನ್ನು ಬೇಗನೆ ಕರಗಿಸಬಹುದಾಗಿದೆ. ಮೂತ್ರಜನಕಾಂಗಗಳು ಮತ್ತು ಪಿತ್ತಕೋಶ ಚೆನ್ನಾಗಿ ಕಾರ್ಯ ನಿರ್ವಹಿಸುತ್ತದೆ. ಹೊಟ್ಟೆಯ ಗ್ಯಾಸ್ಟ್ರಿಕ್ ಸಮಸ್ಯೆಗೆ ಉಪಯೋಗವಾಗುತ್ತದೆ. ತೊಡೆಗಳಿಗೆ ಹೆಚ್ಚಿನ ವ್ಯಾಯಾಮ ದೊರಕಿ ಕಾಲುಗಳಿಗೆ ಶಕ್ತಿ ಬರುತ್ತದೆ.

ಹೊಟ್ಟೆಯ ಬೊಜ್ಜು ಇದ್ದವರು ಮಲಗಿಕೊಂಡು ಮಾಡುವ, ತಿರುಚುವಿಕೆ ವ್ಯಾಯಾಮಗಳು ಹಾಗೂ ಊರ್ಧ್ವಪ್ರಸಾರಿತ ಪಾದಾಸನ, ಜಠರಪರಿವರ್ತನಾಸನ, ಹಲಾಸನ, ಭುಜಂಗಾಸನ, ಶಲಭಾಸನ, ಧನುರಾಸನ, ಚಕ್ರಾಸನ ಇತ್ಯಾದಿ ಆಸನಗಳನ್ನು ಹೆಚ್ಚು ಬಾರಿ ಅಭ್ಯಾಸ ಮಾಡಿ. ಬೊಜ್ಜನ್ನು ಸಹಜ ರೀತಿಯಲ್ಲಿಯೇ ಕರಗಿಸಬೇಕು. ಇಲ್ಲಿ ಸಹಜ ರೀತಿಯ ವಿಧಾನದಲ್ಲಿ ದೈಹಿಕ ಚಟುವಟಿಕೆ ಮಾಡಿದಾಗ ಹೊಟ್ಟೆಯ ಕೊಬ್ಬು ಕರಗುತ್ತದೆ. ಆರೋಗ್ಯವೂ ಒದಗುತ್ತದೆ. ತೂಕ ಕರಗಿಸಲು ದೈಹಿಕ ಚಟುವಟಿಕೆ ಬಹಳ ಅಗತ್ಯ.

ಗಮನಿಸಿ, ತೀವ್ರ ಸೊಂಟ ನೋವು ಇದ್ದವರು ಈ ಆಸನ ಅಭ್ಯಾಸ ನಡೆಸುವುದು ಬೇಡ. ಬರೀ ಯೋಗವೊಂದರಿಂದಲೇ ಕೊಬ್ಬು ಕರಗಿಸಲು ಸಾಧ್ಯವಿಲ್ಲ. ಜೊತೆಗೆ ಸೇವಿಸುವ ಆಹಾರದ ಮೇಲೆ ನಿಯಂತ್ರಣ ಅಗತ್ಯ.

* ಯೋಗದ ಕೆಲವು ಹಿಂದಕ್ಕೆ ಬಾಗುವ ಭಂಗಿಗಳನ್ನು ತಿಳಿಸಿ. ಸಂಕ್ಷಿಪ್ತ ಪ್ರಯೋಜನ ತಿಳಿಸಿ.

| ನಾಗೇಂದ್ರ ಕೊಪ್ಪಳ 24 ವರ್ಷ

- ಅರ್ಧಚಕ್ರಾಸನ, ಅರ್ಧ ಉಷ್ಟ್ರಾಸನ, ಉಷ್ಟ್ರಾಸನ, ಚಕ್ರಾಸನ, ಮತ್ಸ್ಯಾಸನ, ಪರ್ಯಂಕಾಸನ, ಸುಪ್ತವೀರಾಸನ, ಊರ್ಧ್ವಧನುರಾಸನ, ಲಘುವಜ್ರಾಸನ, ವಾಲಿಖಿಲ್ಯಾಸನ ಇತ್ಯಾದಿಗಳು.

ಪ್ರಯೋಜನ: ಬೆನ್ನುಮೂಳೆಯ ಸ್ನಾಯುಗಳು ಬಲಗೊಳ್ಳುತ್ತವೆ. ಕಿಬ್ಬೊಟ್ಟೆ ಭಾಗ ಬಲಿಷ್ಠವಾಗುತ್ತದೆ. ಜೀರ್ಣಶಕ್ತಿ ಸುಧಾರಿಸುತ್ತದೆ. ಥೈರಾಯ್್ಡ ಗ್ರಂಥಿಯ ಆರೋಗ್ಯ ವರ್ಧನೆಯಾಗುತ್ತದೆ. ಎದೆ ಮತ್ತು ಗಂಟಲು ಭಾಗಕ್ಕೆ ಮೃದುವಾದ ವ್ಯಾಯಾಮ ದೊರೆಯುತ್ತದೆ. ಗೂನುಬೆನ್ನು ಪರಿಹಾರಕ್ಕೆ ಈ ಆಸನಗಳು ಉತ್ತಮವಾಗಿರುತ್ತವೆ. ಬೆನ್ನೆಲುಬು ಬಲಿಷ್ಠವಾಗಲು ಸಹಕಾರಿಯಾಗುತ್ತದೆ. ಹೊಟ್ಟೆಯ ಬೊಜ್ಜು ಕರಗಲು ಸಹಾಯವಾಗುತ್ತದೆ.

08

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net