ಮೂತ್ರಪಿಂಡದ ಸಮಸ್ಯೆಯೇ.. ಯೋಗದಲ್ಲಿದೆ ಆರೋಗ್ಯ ಸುಧಾರಕ ಮುದ್ರೆ, ಆಸನಗಳು..

yoga mar 20
Published on

ಕಿಡ್ನಿಯನ್ನು ಆರೋಗ್ಯವಾಗಿಡಲು ಸೂಕ್ತ ಮುದ್ರೆ ಹಾಗೂ ಆಸನಗಳನ್ನು ತಿಳಿಸಿ.

| ರೂಪಾ ಬೆಂಗಳೂರು (32 ವರ್ಷ)

ರಕ್ತದಲ್ಲಿನ ತ್ಯಾಜ್ಯ ಮತ್ತು ವಿಷವನ್ನು ಫಿಲ್ಟರ್ ಮಾಡುವುದು, ದೇಹದಲ್ಲಿನ ದ್ರವಗಳನ್ನು ನಿಯಂತ್ರಿಸುವುದು ಮತ್ತು ರಕ್ತದೊತ್ತಡವನ್ನು ನಿಯಂತ್ರಿಸುವ ಹಾಮೋನುಗಳನ್ನು ಉತ್ಪಾದಿಸುವುದು ಮೂತ್ರಪಿಂಡಗಳ ಸಾಮಾನ್ಯ ಕಾರ್ಯ. ಮೂತ್ರಪಿಂಡ ಹಾನಿಗೊಳಗಾಗಿದ್ದರೆ ಮತ್ತು ಇನ್ನು ಮುಂದೆ ಸರಿಯಾಗಿ ಕೆಲಸ ಮಾಡದಿದ್ದರೆ, ಇದು ಅನಗತ್ಯ ಲಕ್ಷಣಗಳು ಮತ್ತು ತೊಂದರೆಗಳಿಗೆ ಕಾರಣವಾಗಬಹುದು. ಮೂತ್ರಪಿಂಡದ ಕಾಯಿಲೆಯಿಂದ ಬಳಲುತ್ತಿರುವವರಿಗೆ ಯೋಗ ಅತ್ಯುತ್ತಮ ದೈಹಿಕ ಚಿಕಿತ್ಸೆಯಾಗಿದೆ. ಮೂತ್ರಪಿಂಡಗಳ ಒಟ್ಟಾರೆ ಆರೋಗ್ಯದಲ್ಲಿ ಯೋಗ ಪ್ರಮುಖ ಪಾತ್ರ ವಹಿಸುತ್ತದೆ. ಇದು ಮೂತ್ರಪಿಂಡದ ಕಾರ್ಯವನ್ನು ಸುಧಾರಿಸುತ್ತದೆ.

ಕಿಡ್ನಿಯ ಆರೋಗ್ಯ ಸುಧಾರಕ ಮುದ್ರೆಗಳು: ಪ್ರಾಣಮುದ್ರೆ, ಜಲೋದರನಾಶಕ ಮುದ್ರೆ, ವರುಣಮುದ್ರೆ, ಮೂತ್ರಾಶಯಮುದ್ರೆ, ಸೂರ್ಯಮುದ್ರೆ, ಅಪಾನಮುದ್ರೆ ಇವುಗಳನ್ನು ಯೋಗಶಿಕ್ಷಕರ ಮಾರ್ಗದರ್ಶನದಲ್ಲಿ ಅಭ್ಯಾಸ ಮಾಡಿ. ಮೂತ್ರಪಿಂಡದ ಕಾಯಿಲೆಯಿಂದ ಬಳಲುತ್ತಿರುವವರಿಗೆ ಯೋಗ ಅತ್ಯುತ್ತಮ ದೈಹಿಕ ಚಿಕಿತ್ಸೆಯಾಗಿದೆ. ಯೋಗವು ದೈಹಿಕ ಮತ್ತು ಆಧ್ಯಾತ್ಮಿಕ ಅಂಶಗಳನ್ನು ಸಂಯೋಜಿಸುತ್ತದೆ. ದೇಹವನ್ನು ಮತ್ತು ಮನಸ್ಸನ್ನು ಪುನರುಜ್ಜೀವನಗೊಳಿಸಲು ಸಹಾಯ ಮಾಡುತ್ತದೆ. ಯೋಗದಲ್ಲಿನ ಕೆಲವು ಭಂಗಿಗಳು ಮೂತ್ರಪಿಂಡದ ಆರೋಗ್ಯವನ್ನು ಸುಧಾರಿಸಿ ಮೂತ್ರಪಿಂಡದ ಕಾರ್ಯವನ್ನು ಸುಧಾರಿಸುತ್ತವೆ.

ಸೂಚಿತ ಆಸನಗಳು: ಪಾದಹಸ್ತಾಸನ, ಪಾಶ್ವೋತ್ಥಾನಾಸನ, ಬದ್ಧಕೋಣಾಸನ, ಜಾನುಶೀರ್ಷಾಸನ, ಗರ್ಭಪಿಂಡಾಸನ, ಪಶ್ಚಿಮೋತ್ಥಾನಾಸನ, ಮಂಡೂಕಾಸನ, ಅರ್ಧಮತ್ಸೆ್ಯೕಂದ್ರಾಸನ, ಭರದ್ವಾಜಾಸನ, ಹಲಾಸನ, ಭುಜಂಗಾಸನ, ನಾವಾಸನ, ಶಲಭಾಸನ, ಬಕಾಸನ, ಶವಾಸನ ಇತ್ಯಾದಿಗಳು.

ಪ್ರಸಾರಿತ ಪಾದೋತ್ಥಾಸನದ ಬಗ್ಗೆ ತಿಳಿಸಿ.

| ಸೂರ್ಯ ಉಡುಪಿ (25 ವರ್ಷ)

ವಿಧಾನ: ಜಮಖಾನದ ಮೇಲೆ ಅಂಗಾತವಾಗಿ ನೆಟ್ಟಗೆ ಮಲಗಿ. ಉಸಿರನ್ನು ತೆಗೆದುಕೊಳ್ಳುತ್ತ ಕೈಯನ್ನು ಶಿರಸ್ಸಿನ ಹಿಂದಕ್ಕೆ ನೇರವಾಗಿ ಚಾಚಿ. ಆಮೇಲೆ ಸ್ವಲ್ಪ ಹೊತ್ತು ನೆಲೆಸಿ ಉಸಿರನ್ನು ತೆಗೆದುಕೊಳ್ಳುತ್ತ ಎರಡು ಕಾಲುಗಳನ್ನು ಆರಂಭದಲ್ಲಿ 30, 60 ನಂತರ 90 ಡಿಗ್ರಿಯವರೆಗೆ ಎತ್ತಿ ನಿಲ್ಲಿಸಿ. ಸ್ವಲ್ಪ ಹೊತ್ತು ಸಮ ಉಸಿರಾಟದಲ್ಲಿ ನೆಲೆಸಿ. ಉಸಿರನ್ನು ಬಿಡುತ್ತ ನಿಧಾನವಾಗಿ ಕಾಲುಗಳನ್ನು ನೆಲದ ಮೇಲೆ ಇಡಿ. ಈ ರೀತಿ ಮೂರರಿಂದ ಆರು ಬಾರಿ ಅಭ್ಯಾಸ ಮಾಡಿ. ಈ ಆಸನವನ್ನು ಪ್ರತಿಯೊಂದು ಬಾರಿ ಅಭ್ಯಾಸ ಮಾಡಿದಾಗ ಸ್ವಲ್ಪ ಹೊತ್ತು ವಿಶ್ರಾಂತಿ ಪಡೆಯಿರಿ.

ಪ್ರಯೋಜನ: ಈ ಆಸನವನ್ನು ಶಿಸ್ತುಬದ್ಧವಾಗಿ, ಕ್ರಮವತ್ತಾಗಿ, ಉಸಿರಿನ ಗತಿಯೊಂದಿಗೆ ಅಭ್ಯಾಸ ಮಾಡುವುದರಿಂದ ವಿಶೇಷವಾಗಿ ಹೊಟ್ಟೆಯ ಬೊಜ್ಜನ್ನು ಬೇಗನೆ ಕರಗಿಸಬಹುದಾಗಿದೆ. ಮೂತ್ರಜನಕಾಂಗಗಳು ಮತ್ತು ಪಿತ್ತಕೋಶ ಚೆನ್ನಾಗಿ ಕಾರ್ಯ ನಿರ್ವಹಿಸುತ್ತವೆ. ಸೊಂಟನೋವು, ಬೆನ್ನುನೋವು ಪರಿಹಾರಕ್ಕೆ ಈ ಆಸನವು ಉಪಯುಕ್ತವಾಗಿದೆ. ಹೊಟ್ಟೆಯ ಗ್ಯಾಸ್ಟ್ರಿಕ್ ಸಮಸ್ಯೆಗೆ ಉಪಯೋಗವಾಗುತ್ತದೆ. ತೊಡೆಗಳಿಗೆ ಹೆಚ್ಚಿನ ವ್ಯಾಯಾಮ ದೊರಕಿ ಕಾಲುಗಳಿಗೆ ಶಕ್ತಿ ಬರುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net