ಆನ್​ಲೈನ್​ನಲ್ಲಿ ಯೋಗಾಭ್ಯಾಸ

Yoga
Published on

# ನಿಮ್ಮ ಆನ್​ಲೈನ್ ಯೋಗದ ತರಗತಿಗೆ ಭಾಗವಹಿಸಬಹುದಾ? ಯಾವ ತಯಾರಿ ಅಗತ್ಯವಾಗಿರುತ್ತದೆ?

| ರಕ್ಷಿತ್ 20 ವರ್ಷ, ಬೇಲೂರು

ಯೋಗದ ತರಗತಿಗಳನ್ನು ಆನ್​ಲೈನ್ ಕಲಿಯಬಹುದೇ ಎಂಬ ಬಗ್ಗೆ ಹಲವರು ಕೇಳುತ್ತಾರೆ. ಯೋಗಕೇಂದ್ರಗಳಿಗೆ ಭೇಟಿ ನೀಡಲು ಇತ್ತೀಚಿನ ದಿನಗಳಲ್ಲಿ ಸಾಧ್ಯವಾಗದು. ಕರೊನಾ ಸಮಸ್ಯೆಯಿಂದ ಹೊರಗೆ ಹೋಗುವುದು ಕಷ್ಟ. ಕರೊನಾ ಸಾಂಕ್ರಾಮಿಕದ ಹತೋಟಿಗೆ ಮನೆಯಲ್ಲಿರುವುದೇ ಔಷಧವಾಗಿದೆ. ಈ ಸಂದರ್ಭದಲ್ಲಿ ಯೋಗವು ಚಿಕಿತ್ಸಕವಾಗಬಹುದು. ಇದನ್ನು ಪ್ರತಿದಿನ ಅಭ್ಯಾಸ ಮಾಡುವುದರಿಂದ ವಿಶ್ರಾಂತಸ್ಥಿತಿಯನ್ನು ಉತ್ತೇಜಿಸಬಹುದು ಮತ್ತು ಮನಸ್ಸನ್ನು ನಿಯಂತ್ರಿಸಬಹುದು.

ಯೋಗವನ್ನು ನೂತನವಾಗಿ ಕಲಿಯ ಬಯಸುವವರು ತಜ್ಞರ ಮಾರ್ಗದರ್ಶನದಲ್ಲಿ ಅಭ್ಯಾಸ ಮಾಡಬೇಕು. ಆದರೂ ಕರೊನಾ ಸಾಂಕ್ರಾಮಿಕದ ಸಮಸ್ಯೆಯಿಂದ ಆರೋಗ್ಯಕರ ಅಂತರವನ್ನು ಕಾಪಾಡಿಕೊಂಡು, ಮುಂಜಾಗ್ರತೆಗಾಗಿ ಮನೆಯಲ್ಲಿದ್ದುಕೊಂಡೇ ಆನ್​ಲೈನ್ ಯೋಗ ತರಗತಿಗಳಿಗೆ ಭಾಗವಹಿಸಬಹುದು. ಇತ್ತೀಚಿನ ದಿನಗಳಲ್ಲಿ ನೇರ ಅಭ್ಯಾಸ ಅಸಾಧ್ಯ. ಉಸಿರಾಟ ಕ್ರಮವನ್ನು ಕ್ರಮಬದ್ಧವಾಗಿ ಮಾಡುತ್ತ ಯೋಗವನ್ನು ಆನ್​ಲೈನ್​ನಲ್ಲಿ ಕಲಿಯಬಹುದು. ಆದರೆ ಜಾಗರೂಕತೆ ಮುಖ್ಯ. ಈ ಮೊದಲು ಯೋಗವನ್ನು ಕಲಿಯದವರೂ ಇಂದಿನ ಪರಿಸ್ಥಿತಿಯಿಂದಾಗಿ ಎಲ್ಲ ಒತ್ತಡ-ಭಯಗಳನ್ನು ಬಿಡುಗಡೆಯಾಗಲು ಯೋಗಾಭ್ಯಾಸ ಮಾಡಬಹುದು. ಈಗಾಗಲೇ ಯೋಗದ ತರಬೇತಿ ಪಡೆದವರಿಗೆ ಆನ್​ಲೈನ್ ಯೋಗತರಗತಿ ಸಹಕಾರಿಯಾಗುತ್ತದೆ. ಮನೆಯಲ್ಲಿ ಒಬ್ಬರೇ ಯೋಗಾಭ್ಯಾಸ ಮಾಡಲು ಕಷ್ಟವಾಗುವವರಿಗೆ ಗುರುಗಳ ಧ್ವನಿಯ ಮುಖಾಂತರ ಅಭ್ಯಾಸ ಮಾಡಲು ಸುಲಭವಾಗುತ್ತದೆ.

ತಯಾರಿ ಹೇಗೆ?: ಸ್ಪಷ್ಟವಾಗಿ ವಿಡಿಯೋ ಕಾಣುವ ಮೊಬೈಲ್, ಐಪ್ಯಾಡ್ ಅಥವಾ ಲ್ಯಾಪ್​ಟಾಪ್ ಇರಬೇಕು. ಪ್ರಾರಂಭಿಸುವ ಮುಂಚೆ ಆನ್​ಲೈನ್ ಯೋಗ ತರಗತಿಯ ಬಗ್ಗೆ ಫೋನ್ ಮೂಲಕ ಮಾತಾಡಿ ವಿವರಗಳನ್ನು ಪಡೆದುಕೊಳ್ಳಿ. ಮನೆಯಲ್ಲಿ ಅಭ್ಯಾಸ ಮಾಡುವ ಕೋಣೆಯಲ್ಲಿ ಗಾಳಿ, ಬೆಳಕು ಹಾಗೂ ಸ್ವಚ್ಛತೆ ಇರಲಿ. ಆರಂಭದಲ್ಲಿ ಕೆಲವು ವಾರ ಸಾಕಷ್ಟು ಗಮನಿಸಿಕೊಂಡು (ಗುರುಗಳ ಪ್ರಾತ್ಯಕ್ಷಿಕೆ) ಯೋಗಾಭ್ಯಾಸ ಪ್ರಾರಂಭಿಸಿ. ಅಭ್ಯಾಸಿಯು ಜಮಖಾನದಲ್ಲಿ ಮಾಡುವ ಭಂಗಿಗಳು ಯೋಗಶಿಕ್ಷಕರಿಗೆ ವೀಕ್ಷಿಸುವ ಸ್ಕ್ರೀನ್​ನಲ್ಲಿ ಸ್ಪಷ್ಟವಾಗಿ (ಆದಷ್ಟು ಕ್ಲೋಸ್ ಅಪ್) ಕಾಣಲಿ. ನೆಟ್ ಅಥವಾ ವೈಫೈ ಕನೆಕ್ಷನ್ ಸರಿಯಾಗಿ ಇರುವಂತೆ ನೋಡಿಕೊಳ್ಳಿ. ಯೋಗಾಭ್ಯಾಸದಲ್ಲಿ ಯಾವುದೇ ಸಂಶಯ ಬಂದರೆ ಗುರುಗಳಲ್ಲಿ ಕೇಳಿ ಪರಿಹರಿಸಿಕೊಳ್ಳಿ. ಮನೆಯಲ್ಲಿ ಇದ್ದುಕೊಂಡು ಆನ್​ಲೈನ್ ಬೋಧಕರನ್ನು ತಿಳಿದುಕೊಂಡು ಆಯ್ಕೆ ಮಾಡಿ.

ನೀವೂ ಪ್ರಶ್ನೆ ಕೇಳಿ

ಯೋಗದ ಮೂಲಕ ಹಲವು ರೋಗಗಳಿಗೆ ಪರಿಹಾರವಿದೆ. ಅನೇಕರನ್ನು ಕಾಡುತ್ತಿರುವ ಸಮಸ್ಯೆಗಳ ಬಗ್ಗೆ ಯೋಗ ಅಂಕಣಕಾರರು ಉತ್ತರ ನೀಡಲಿದ್ದಾರೆ. ಆಸಕ್ತರು ವಯಸ್ಸು, ಸಮಸ್ಯೆ, ಅದರ ತೀವ್ರತೆ, ಈಗಾಗಲೇ ತೆಗೆದುಕೊಳ್ಳುತ್ತಿರುವ ಔಷಧೋಪಚಾರ ಇತ್ಯಾದಿಗಳನ್ನು ಸಂಕ್ಷಿಪ್ತವಾಗಿ ಬರೆದು ಕಳಿಸಬಹುದು.

ವಿಳಾಸ: ಸಂಪಾದಕರು, ಯೋಗಕ್ಷೇಮ ಪ್ರಶ್ನೋತ್ತರ ವಿಭಾಗ, ವಿಜಯವಾಣಿ, ನಂ. 24, ಸಾಯಿರಾಂ ಟವರ್ಸ್, ಮೊದಲ ಮಹಡಿ, ಐದನೇ ಮುಖ್ಯರಸ್ತೆ, ಚಾಮರಾಜಪೇಟೆ, ಬೆಂಗಳೂರು-18.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net