ಯೋಗಕ್ಷೇಮ; ಧಾರ್ವಿುಕ ವಿಧಿಗಳಲ್ಲಿ ಪ್ರಾಣಾಯಾಮ

PRANA YAMA
Published on
ನಮ್ಮ ಎಲ್ಲ ಧಾರ್ವಿುಕ ವಿಧಿವಿಧಾನಗಳಲ್ಲಿ ಸಂಕಲ್ಪದ ಪೂರ್ವದಲ್ಲಿ ಪ್ರಾಣಾಯಾಮ ಅಭ್ಯಾಸ ಮಾಡಲೇಬೇಕಾಗಿದೆ. ಹಿರಿಯರು ಪ್ರಾಣಾಯಾಮಕ್ಕೆ ಅಷ್ಟೊಂದು ಮಹತ್ವ ನೀಡಿರುವರು. ಪ್ರಾಣಶಕ್ತಿಯನ್ನು ಬೇಕಾಬಿಟ್ಟಿಯಾಗಿ ದುಂದು ಮಾಡದೆ ರಕ್ಷಿಸಿಕೊಂಡು ಅದನ್ನು ಕ್ರಿಯಾಶೀಲವಾಗಿಸುವುದೊಂದು ವಿಶಿಷ್ಟಕಲೆ. ಈ ಕಲೆಯನ್ನು ಕರಗತ ಮಾಡಿಕೊಂಡರೆ ದೈಹಿಕ, ಮಾನಸಿಕ ಹತೋಟಿ ನಮಗೆ ಸಾಧ್ಯ ಎನ್ನುವುದನ್ನು ತೋರಿಸಿಕೊಡುವ ಅಭ್ಯಾಸಕ್ರಮವೇ ಪ್ರಾಣಾಯಾಮ.

ಪ್ರಾಣ ಎಂದರೆ ಇಡಿಯ ವಿಶ್ವದ ಸೃಷ್ಟಿಯ ಮೂಲಮಾತೃಕೆ. ಪ್ರಾಣ ಇರುವ ಇರದ ಆದರೆ ಚಲಿಸುವ ಎಲ್ಲ ವಸ್ತುಗಳು ಅದರಿಂದಲೇ ಉದ್ಭವಿಸಿದವು. ಪ್ರಾಣ ಎಂದರೆ ಕೇವಲ ಉಸಿರಷ್ಟೇ ಅಲ್ಲ, ಸೃಷ್ಟಿಯ ಪ್ರಕ್ರಿಯೆ ಆರಂಭಗೊಂಡ ಕ್ಷಣದಿಂದ ಅದರ ಪ್ರವಹನವೂ ಶುರುವಾಯಿತು.

ಪ್ರಾಣದ ಅಭಿವ್ಯಕ್ತಿಯ ಲಕ್ಷಣ ಎಂದರೆ ನಿರಂತರ ಚಲನೆ ಅಥವಾ ವಸ್ತುಗಳಲ್ಲಿನ ಜೀವಕೋಟಿಗಳಲ್ಲಿನ ಸ್ಪಂದನಗುಣ, ಬೆಳಕು, ಉಷ್ಣ, ವಿದ್ಯುತ್, ಭೌತಿಕ ಶಕ್ತಿಗಳು, ಆಕರ್ಷಣಶಕ್ತಿ, ಆಯಸ್ಕಾಂತ ಶಕ್ತಿ, ದೇಹದ ಹುಟ್ಟು, ನಾಡಿಕಾರ್ಯ, ಜೀವ, ವಿಚಾರ, ಜಾಣ್ಮೆ ವಿದ್ಯುತ್​ಪ್ರವಾಹದಿಂದ ಪ್ರಾಣಾಯಾಮದ ಕೆಲಸವೂ ಇದೇ ಆಗಿದೆ. ನಮ್ಮ ದೇಹದ ಒಳಗೆ ಅಂಗ ಉಪಾಂಗಗಳಲ್ಲಿ 72 ಸಾವಿರ ನಾಡಿಗಳಲ್ಲಿ ಮೂಲೆ ಮುಡುಕುಗಳಲ್ಲಿ ಚಂಚಲವಾಗಿ ಪ್ರವಹಿಸುವ ಪ್ರಾಣವನ್ನು ಶಿಸ್ತುಬದ್ಧವಾಗಿ ತಡೆದು ಅದನ್ನು ಕ್ರಮವಾಗಿ ಕೆಲಸ ಮಾಡಿಸುವ ಕ್ರಿಯೆ ತಂತ್ರವೇ ಪ್ರಾಣಾಯಾಮ.

ಪ್ರಾಣವಾಯು ದೇಹದೊಳಗೆ ಪ್ರವೇಶಿಸುವ ಅವಧಿ ನಾಲ್ಕು ಎಣಿಕೆಯಿರಬೇಕು. ಮನುಷ್ಯನು ದಿನವೊಂದಕ್ಕೆ 21,600 ಬಾರಿ ಉಸಿರಾಟ ನಡೆಸುತ್ತಾನೆ. ಉಸಿರಾಟಕ್ಕೂ ಮನಸ್ಸಿಗೂ ನಿಕಟ ಸಂಬಂಧ. ಉಸಿರಾಟಕ್ಕೂ ಹೃದಯ, ಶ್ವಾಸಕೋಶ, ನರನಾಡಿಗಳಿಗೂ ಸಂಬಂಧವಿದೆ. ಸರಿಯಾದ ಪ್ರಾಣಾಯಾಮ ಕ್ರಮದಿಂದ ಮನ ಹಾಗೂ ನಾಡೀಶುದ್ಧಿ, ಭಾವಸಂಸ್ಕಾರ ಲಭಿಸುತ್ತದೆ.

ವಿಭಾಗೀಯ ಉಸಿರಾಟ: ಇದು ಪ್ರಾಣಾಯಾಮ ಅಭ್ಯಾಸ ಪೂರ್ವಸಿದ್ಧತೆ. ಈ ಉಸಿರಾಟ ಕ್ರಮದಲ್ಲಿ ನಾಲ್ಕು ಭಾಗಗಳಿವೆ. ಅವು ಉದರ (ಕನಿಷ್ಠ), ಉರ (ಮಧ್ಯಮ), ಗ್ರೀವ (ಜೇಷ್ಠ) ಹಾಗೂ ಪೂರ್ಣ ಯೌಗಿಕ ಉಸಿರಾಟಗಳು.

ಉದರ ಉಸಿರಾಟ: ಹೊಟ್ಟೆ ಭಾಗದ ಶ್ವಾಸೋಚ್ಛ್ವಾಸ.

ಅಭ್ಯಾಸ ಕ್ರಮ: ವಜ್ರಾಸನ, ಪದ್ಮಾಸನ ಅಥವಾ ಸುಖಾಸನದಲ್ಲಿ ಕುಳಿತುಕೊಳ್ಳೋಣ. ಬೆನ್ನು, ಕುತ್ತಿಗೆ ನೇರ ಇರಲಿ. ಶ್ವಾಸ ಸಂಪೂರ್ಣ ಹೊರಹಾಕೋಣ. ಶ್ವಾಸ ತೆಗೆದುಕೊಳ್ಳುತ್ತ ಹೊಟ್ಟೆಯ ಭಾಗವನ್ನು ಗಾಳಿಯಿಂದ ತುಂಬಿಸೋಣ. ಹೀಗೆ ಮಾಡುವಾಗ ವಪೆಯು ಕೆಳೆಗೆಳೆಯಲ್ಪಟ್ಟು ಉಸಿರು ಶ್ವಾಸಕೋಶದ ಕೆಳಭಾಗದ ಚೀಲದಲ್ಲಿ ಸಂಪೂರ್ಣವಾಗಿ ತುಂಬುತ್ತದೆ. ನಂತರ ಹೊಟ್ಟೆಯ ಭಾಗವನ್ನು ಒಳಗೆ ಸೆಳೆದುಕೊಳ್ಳುತ್ತ ನಿಧಾನವಾಗಿ ಶ್ವಾಸವನ್ನು ಹೊರಬಿಡೋಣ.

ಅನುಭವಕ್ಕಾಗಿ ಕೈಗಳ ಸಹಾಯವನ್ನು ಪಡೆದುಕೊಳ್ಳೋಣ. ಹೆಬ್ಬೆರಳು ಸೊಂಟದ ಪಕ್ಕ, ಉಳಿದ ನಾಲ್ಕು ಬೆರಳುಗಳು ನಾಭಿಯ ಎದುರು ಬರುವಂತೆ ತೋರುಬೆರಳು ಹೊಟ್ಟೆಗೆ ತಾಗಿ ಉಳಿದ ಬೆರಳುಗಳು ಅದರ ಎದುರು ಜೋಡಿಸಿರುವಂತೆ ಇಟ್ಟುಕೊಳ್ಳೋಣ. ಶ್ವಾಸ ತೆಗೆದುಕೊಳ್ಳುವಾಗ ಹೊಟ್ಟೆಯ ಭಾಗ ಉಬ್ಬುವಂತೆ ಕೈಬೆರಳುಗಳು ಚಲಿಸುತ್ತ ದೂರವಾಗಿ ಶ್ವಾಸ ಬಿಡುವಾಗ ಜೊತೆಯಲ್ಲೇ ಸಂಕೋಚಗೊಳ್ಳುತ್ತ ಹತ್ತಿರವಾಗಿ ಬರುವುದನ್ನು ಗಮನಿಸೋಣ. ಕನಿಷ್ಠ ಹತ್ತು ಬಾರಿ ಅಭ್ಯಾಸ ಮುಂದುವರಿಸೋಣ.

ಲಾಭಗಳು: ರಕ್ತದ ಪರಿಚಲನೆ ಸುಸೂತ್ರವಾಗುತ್ತದೆ. ಹೊಟ್ಟೆಯ ಒಳಭಾಗದ ಅಂಗಗಳಿಗೆ ಉತ್ತಮ ಚಾಲನೆ ದೊರೆತಂತಾಗಿ ಅವುಗಳು ಚುರುಕುಗೊಳ್ಳುತ್ತವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net