

| ಭಾಗ್ಯ ರಾಯಚೂರು (38 ವರ್ಷ)
ಯೋಗವು ಕಾಲುಗಳು ಮತ್ತು ದೇಹದ ಇತರ ಭಾಗಗಳಲ್ಲಿನ ನೋವಿನಿಂದ ದೀರ್ಘಾವಧಿಯ ಪರಿಹಾರವನ್ನು ನೀಡುತ್ತದೆ. ಇದಲ್ಲದೆ ನಿಮಗೆ ಆರೋಗ್ಯವಾಗಿರಲು ಸಹಾಯ ಮಾಡುತ್ತದೆ. ಕೆಲವು ಯೋಗಭಂಗಿಗಳನ್ನು ಪ್ರಯತ್ನಿಸುವ ಮೂಲಕ ಕಾಲುನೋವುಗಳಿಂದ ನಿಯಂತ್ರಣ ಪಡೆಯಬಹುದು. ನಿಂತುಕೊಂಡು ಕೆಲವು ಕಾಲಿನ ಚಲನೆಗೆ ಸಂಬಂಧಿಸಿದ ವ್ಯಾಯಾಮ ಮಾಡಿ. ನಿಮ್ಮ ಪಾದದ ಕೆಳಗೆ ಟೆನಿಸ್ ಬಾಲ್ ಹಾಕಿ. ಚೆಂಡನ್ನು ಹಿಮ್ಮಡಿಯಿಂದ ಕಾಲಿನ ಬೆರಳುಗಳವರೆಗೆ 25ರಿಂದ 50 ಬಾರಿ ರೋಲ್ ಮಾಡಿ.
ಗೋಡೆಯ ಪಕ್ಕದಲ್ಲಿ ಜಮಖಾನ ಹಾಕಿದ ನೆಲದ ಮೇಲೆ ಮಲಗಿಕೊಳ್ಳಿ. ನಿಮ್ಮ ಕಾಲುಗಳನ್ನು ಮೇಲಕ್ಕೆ (ಗೋಡೆಗೆ) ಇರಿಸಿ. ಐದರಿಂದ ಹತ್ತು ನಿಮಿಷ ಇರಿ. ಆಮೇಲೆ ವಿಶ್ರಮಿಸಿ. ಹಾಗೇ ಆಮೇಲೆ ಮಲಗಿಕೊಂಡು ಒಂದೊಂದು ಕಾಲಿನಲ್ಲಿ ಸೊನ್ನೆ ಬರೆಯುವ ವ್ಯಾಯಾಮ ಸ್ವಲ್ಪ ಹೊತ್ತು ಅಭ್ಯಾಸ ನಡೆಸಿ. ಆಮೇಲೆ ಉತ್ಥಿತ ಏಕಪಾದಾಸನ ಒಂಬತ್ತು ಬಾರಿ ಅಭ್ಯಾಸ ಮಾಡಿ, ವಿಶ್ರಮಿಸಿ ಇದನ್ನೆಲ್ಲ ಮುಂಜಾನೆ ಮತ್ತು ಸಂಜೆ ಹೊತ್ತು ಒಂದು ತಿಂಗಳು ಅಭ್ಯಾಸ ಮಾಡಿ. ಆಮೇಲೆ ಯೋಗದ ತರಗತಿಗೆ ಸೇರಿ ಸುಮಾರು ಮೂರು ತಿಂಗಳು ಯೋಗ ಕಲಿತು ಅಭ್ಯಾಸ ಮಾಡಿ. ಕಾಲುನೋವು ಆಯಾಸ ಪರಿಹಾರವಾಗುತ್ತದೆ.
| ವಿವೇಕ್ರಾಜ್ ನೆಲಮಂಗಲ (28 ವರ್ಷ)
ನಾವು ಪ್ರತಿದಿನ ನಮ್ಮ ಬೆನ್ನಿನ ಸ್ನಾಯುಗಳನ್ನು ಎಷ್ಟು ಬಳಸುತ್ತೇವೆ ಎಂದು ಯೋಚಿಸಬೇಕು. ಮೂಟೆ ಹೊರುವವರ ಬೆನ್ನು ಬಲಿಷ್ಠವಾಗಿರುತ್ತದೆ. ಬೆನ್ನನ್ನು ಬಲಪಡಿಸಲು ಸೂಚಿತ ವ್ಯಾಯಾಮಗಳು, ಯೋಗಗಳು ಸಹಕಾರಿಯಾಗುತ್ತದೆ. ಯೋಗ ತರಬೇತಿಯ ಅನುಭವದ ಪ್ರಕಾರ ಯೋಗಾಸನಗಳು ಬೆನ್ನಿನ ಪ್ರದೇಶಕ್ಕೆ ರಕ್ತದ ಹರಿವನ್ನು ಹೆಚ್ಚಿಸುತ್ತದೆ.
ಬಿಗಿತವನ್ನು ಕಡಿಮೆ ಮಾಡುತ್ತದೆ. ಮುಂಜಾನೆ ಖಾಲಿಹೊಟ್ಟೆಯಲ್ಲಿ ಆರಂಭದಲ್ಲಿ ನಿಂತುಕೊಂಡು ಮುಂದಕ್ಕೂ ಹಾಗೂ ಹಿಂದಕ್ಕೆ ಬಾಗುವ ವ್ಯಾಯಾಮಗಳು ಮತ್ತು ಮಲಗಿ ತಿರುಚಿ ಮಾಡುವ ವ್ಯಾಯಾಮಗಳನ್ನು ಮಾಡಿ. ನುರಿತ ಯೋಗ ಶಿಕ್ಷಕರ ಮುಖಾಂತರ ಆಸನಗಳನ್ನು ಕಲಿತು ಅಭ್ಯಾಸ ಮಾಡಿ.
ಸೂಚಿತ ಆಸನಗಳು: ಅರ್ಧಚಕ್ರಾಸನ, ಪಾದಹಸ್ತಾಸನ, ಕಟಿ ಚಕ್ರಾಸನ, ಪಶ್ಚಿಮೋತ್ಥಾನಾಸನ, ವಜ್ರಾಸನ ಹಾಗೂ ಪರ್ವತಾಸನ, ಉಷ್ಟ್ರಾಸನ, ಮಂಡೂಕಾಸನ, ಮರೀಚ್ಯಾಸನ, ವಕ್ರಾಸನ, ಭರದ್ವಾಜಾಸನ, ಜಠರಪರಿವರ್ತನಾಸನ, ಸೇತುಬಂಧ, ಭುಜಂಗಾಸನ, ಧನುರಾಸನ, ಚಕ್ರಾಸನ, ಶವಾಸನ ಮಾಡಿ.