ಗರ್ಭಾಶಯದ ಆರೋಗ್ಯಕ್ಕೆ ಯಾವ್ಯಾವ ಯೋಗ ಮತ್ತು ಮುದ್ರೆಗಳು  ಸಹಾಯಕ?

yogq kesma april
Published on

ನನಗೆ ತಿಂಗಳ ಋತುಚಕ್ರದ ಅವಧಿಯಲ್ಲಿ ತೀವ್ರ ರಕ್ತಸ್ರಾವ ಆಗುತ್ತದೆ. ತೀವ್ರ ಹೊಟ್ಟೆನೋವು, ಸೊಂಟನೋವು ಬರುತ್ತದೆ. ಯೋಗದ ಪರಿಹಾರ ತಿಳಿಸಿ.

| ಜಯಶ್ರೀ ಮೈಸೂರು, 29 ವರ್ಷ

ಪ್ರತಿಯೊಬ್ಬ ಮಹಿಳೆಯ ಮುಟ್ಟಿನ ಹರಿವು ಮತ್ತು ಚಕ್ರವು ವಿಭಿನ್ನವಾಗಿರುತ್ತದೆ. ಅಸಹಜವಾಗಿ ಭಾರೀ ಮುಟ್ಟಿನ ರಕ್ತಸ್ರಾವವನ್ನು ಅನುಭವಿಸುವ ಮಹಿಳೆಯರಿಗೆ ರಕ್ತಹೀನತೆ ಮತ್ತು ತೀವ್ರವಾದ ಸೆಳೆತಕ್ಕೆ ಕಾರಣವಾಗಬಹುದು. ನೀವು ಒಮ್ಮೆ ತಜ್ಞವೈದ್ಯರೊಂದಿಗೆ ಸಮಾಲೋಚಿಸಿ ಸೂಕ್ತ ಚಿಕಿತ್ಸೆ ಪಡೆಯಿರಿ.

ಪ್ರಥಮವಾಗಿ ಮುಟ್ಟಿನ ಸಂದರ್ಭದಲ್ಲಿ ನೀವು ಕಡ್ಡಾಯವಾಗಿ ವಿಶ್ರಾಂತಿ ಪಡೆಯಿರಿ. ಮುಟ್ಟಿನ ಸಮಯದಲ್ಲಿ ಯೋಗಾಭ್ಯಾಸ ಬೇಡ. ಉಳಿದ ಸಮಯದಲ್ಲಿ ಆರೋಗ್ಯ ರಕ್ಷಣೆಗೆ, ಮುಟ್ಟಿನ ನೋವು ನಿಯಂತ್ರಣಕ್ಕೆ ದಿನವೂ ಒಂದು ಗಂಟೆ ಯೋಗ, ಪ್ರಾಣಾಯಾಮ, ಮುದ್ರೆ, ಧ್ಯಾನ ಅಭ್ಯಾಸ ಮಾಡಿ. ಯೋಗಾಸನಗಳಿಂದ ದೇಹದ ಒಳಗಿನ ಅಂಗಕ್ಕೆ ವ್ಯಾಯಾಮ ದೊರಕಿ, ರಕ್ತ ಪರಿಚಲನೆ ಸುಗಮವಾಗುವುದು.

ಆಸನಗಳಲ್ಲಿ ಪಾದಹಸ್ತಾಸನ, ಅರ್ಧಚಕ್ರಾಸನ, ಭರದ್ವಾಜಾಸನ, ನೌಕಾಸನ, ಪಾಶ್ವೋತ್ಥಾನಾಸನ, ಬದ್ಧಕೋಣಾಸನ, ಜಾನುಶೀರ್ಷಾಸನ, ಸುಪ್ತ ಬದ್ಧಕೋಣಾಸನ, ವಜ್ರಾಸನ, ವಕ್ರಾಸನ, ಮಂಡೂಕಾಸನ, ಸುಪ್ತ ವೀರಾಸನ, ಸೇತುಬಂದಾಸನ, ಉತ್ಥಿತಪಾದಾಸನ, ಭುಜಂಗಾಸನ, ಅಧೋಮುಖ ಶ್ವಾನಾಸನ, ಶವಾಸನ ಮಾಡಿ. ಆರಂಭದಲ್ಲಿ ತೋಳಿನ ಚಲನೆಗಳು, ಕಾಲು ಮತ್ತು ಮೊಣಕಾಲು ಚಲನೆಯ ವ್ಯಾಯಾಮಗಳನ್ನು ಮಾಡಿ. ಕೆಲವು ಆಸನಗಳಿಂದ ಕಿಬ್ಬೊಟ್ಟೆಯ ಭಾಗಕ್ಕೆ ಮಸಾಜ್ ದೊರಕುತ್ತದೆ. ಅತಿಯಾದ ರಕ್ತಸ್ರಾವ, ಸೆಳೆತ ನಿಯಂತ್ರಣವಾಗುತ್ತದೆ. ಮನಸ್ಸಿಗೆ ಶಾಂತತೆ ದೊರಕುತ್ತದೆ. ಸೌಮ್ಯವಾದ (ತಿರುಚುವಿಕೆಯ) ಆಸನಗಳಿಂದ ಸೊಂಟನೋವು, ಹೊಟ್ಟೆನೋವು ನಿಯಂತ್ರಣವಾಗುತ್ತದೆ. ಮುದ್ರೆಗಳಲ್ಲಿ ಯೋನಿಮುದ್ರೆ, ವರುಣಮುದ್ರೆ, ಜಲೋದರನಾಶಕ ಮುದ್ರೆ, ವಾಯುಶೂನ್ಯ ಮುದ್ರೆ, ಪ್ರಾಣಮುದ್ರೆ. ಯೋಗ ಮತ್ತು ಮುದ್ರೆಗಳನ್ನು ಗುರುಗಳ ಮಾರ್ಗದರ್ಶನದಲ್ಲಿಯೇ ಅಭ್ಯಾಸ ಮಾಡಿ.

ನನಗೆ ಗರ್ಭಕೋಶ ಜಾರಿದೆ. ಯೋಗ, ಮುದ್ರೆಗಳ ಪರಿಹಾರ ತಿಳಿಸಿ. | ಪುಷ್ಪ ದಾವಣಗೆರೆ, 52 ವರ್ಷ

ಗರ್ಭಾಶಯದಲ್ಲಿ (ಅಥವಾ ಸೊಂಟದೊಳಗೆ) ವಿವಿಧ ಸ್ನಾಯುಗಳು, ಅಂಗಾಂಶಗಳು ಮತ್ತು ಅಸ್ಥಿರಜ್ಜುಗಳು ಇರುತ್ತವೆ. ಕೆಲವೊಮ್ಮೆ ಕೆಲವು ಕಾರಣಗಳಿಂದ ಕೆಲವು ಮಹಿಳೆಯರಿಗೆ ಸ್ನಾಯುಗಳು ದುರ್ಬಲಗೊಳ್ಳುತ್ತವೆ. ಅಲ್ಲದೆ ವಯಸ್ಸಾದಂತೆ ಈಸ್ಟ್ರೋಜನ್ ಹಾಮೋನ್ ಸ್ವಾಭಾವಿಕವಾಗಿ ನಷ್ಟವಾಗುವುದರಿಂದ ಗರ್ಭಾಶಯವು ಜಾರುತ್ತದೆ. ಇದಕ್ಕೆ ವೈದ್ಯಕೀಯ ಚಿಕಿತ್ಸಾ ವಿಧಾನಗಳೂ ಇವೆ. ನಿಯಮಿತ ವ್ಯಾಯಾಮ, ಜೀವನಶೈಲಿಯ ಬದಲಾವಣೆಯನ್ನು ಶಿಫಾರಸು ಮಾಡಲಾಗುತ್ತದೆ. ಯೋಗವು ಸ್ನಾಯುಗಳನ್ನು ಬಲಪಡಿಸಲು ಮತ್ತು ಸ್ಥಿತಿಯ ಜೊತೆಗೆ ಬರುವ ಅಸ್ವಸ್ಥತೆ ಮತ್ತು ಒತ್ತಡವನ್ನು ಕಡಿಮೆ ಮಾಡುತ್ತದೆ. ಬಂಧಗಳು (ನರಸ್ನಾಯುಕ ಬೀಗಗಳು) ಸಹಾಯ ಮಾಡುತ್ತವೆ.

ಸೂಚಿತ ಆಸನಗಳು: ಬದ್ಧಕೋಣಾಸನ, ಉತ್ಥಿತ ಏಕಪಾದಾಸನ, ನೌಕಾಸನ, ಜಾನುಶೀರ್ಷಾಸನ, ವಿಪರೀತಕರಣಿ, ಹಲಾಸನ, ಭುಜಂಗಾಸನ, ಶವಾಸನ, ನಾಡೀಶುದ್ಧಿ ಪ್ರಾಣಾಯಾಮ, ಮುದ್ರೆಗಳಲ್ಲಿ ಯೋನಿಮುದ್ರೆ ಹತ್ತು ನಿಮಿಷದಂತೆ ಎರಡು ಬಾರಿ, ವರುಣಮುದ್ರೆ, ಪ್ರಾಣಮುದ್ರೆ ಹತ್ತು ನಿಮಿಷ ಮಾಡಿ. ಉಡ್ಡಿಯಾನ ಬಂಧ ಹಾಗೂ ಮೂಲಬಂಧ ಸಹಕಾರಿಯಾಗುತ್ತವೆ. ಗುರುಮುಖೇನವೇ ಕಲಿತು ಅಭ್ಯಾಸ ಮಾಡಿ. ಉತ್ತಮ ಪೋಷಕಾಂಶ ಸೇವಿಸಿ, ಹೆಚ್ಚು ತೂಕದ ವಸ್ತುಗಳನ್ನು ಎತ್ತಬೇಡಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net