ಕರೊನಾ ಕಾಯಿಲೆ ಬಂದಾಗ ಯೋಗ ಪ್ರಯೋಜನಕಾರಿಯಲ್ಲ...

Coronavirus 21 march 20
Published on

ಜನರನ್ನು ಕಾಡುತ್ತಿರುವ ಕರೊನಾ ವೈರಸ್ ಎದುರಿಸಲು ಯೋಗ ಮುದ್ರೆಯು ಹೇಗೆ ಸಹಕಾರಿಯಾಗಬಹುದು?

| ಡಾ. ಈಶ್ವರ ಭಟ್ ಮಂಗಳೂರು

ಕರೊನಾ ವೈರಸ್​ಗಳು ಒಂದು ದೊಡ್ಡ ಕುಟುಂಬವಾಗಿದ್ದು ತೀವ್ರ ಉಸಿರಾಟದ ಸಿಂಡ್ರೋಮ್ಂತಹ ಕಾಯಿಲೆಗಳಿಗೆ ಕಾರಣವಾಗುತ್ತವೆ. ಉಸಿರಾಟದ ಲಕ್ಷಣಗಳು, ಜ್ವರ, ಕೆಮ್ಮು, ಉಸಿರಾಟದ ತೊಂದರೆಗಳು, ಸೋಂಕು, ನ್ಯುಮೋನಿಯಾ ಇತ್ಯಾದಿಗಳು ಸೋಂಕಿನ ಸಾಮಾನ್ಯ ಚಿಹ್ನೆಗಳು.

ಕರೊನಾ ಕಾಯಿಲೆ ಬಂದಾಗ (ಜ್ವರವಿದ್ದಾಗ ಯೋಗ ಮಾಡಬಾರದು) ಯೋಗ ಹೆಚ್ಚು ಪ್ರಯೋಜನವಾಗುವುದಿಲ್ಲ. ಉಸಿರಾಟದ ತೊಂದರೆಗಳ ನಿಯಂತ್ರಣ ಹಾಗೂ ಶ್ವಾಸಕೋಶದ ಸಾಮರ್ಥ್ಯ ಹೆಚ್ಚಿಸಲು ಅರ್ಧಚಕ್ರಾಸನ, ಪ್ರಸಾರಿತ ಪಾದೋತ್ಥಾನಾಸನ, ಪರ್ವತಾಸನ, ವಜ್ರಾಸನ, ಅರ್ಧ ಉಷ್ಟ್ರಾಸನ, ಸೇತುಬಂಧ ಸರ್ವಾಂಗಾಸನ, ಹಲಾಸನ, ಮಕರಾಸನ, ಭುಜಂಗಾಸನ, ಅಧೋಮುಖ ಶ್ವಾನಾಸನ ಸಹಕಾರಿಯಾಗುತ್ತದೆ. ಶವಾಸನವನ್ನು ದಿನಕ್ಕೆ ಮೂರು ಬಾರಿ ಮಾಡಿ. ಸೂಚಿತ ಆಸನಗಳು, ಪ್ರಾಣಾಯಾಮ (ನಾಡೀಶುದ್ಧಿ ಪ್ರಾಣಾಯಾಮ, ಉಜ್ಜಯೀ ಪ್ರಾಣಾಯಾಮ, ಇತ್ಯಾದಿ) ಇವು ಶಾಂತವಾಗಿರಲು, ನಿದ್ರೆಯನ್ನು ಪಡೆಯಲು, ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಕರಿಸುತ್ತವೆ.

ಮುದ್ರೆಗಳು: ಮುದ್ರೆಗಳಲ್ಲಿ ಹತ್ತು ನಿಮಿಷ ಸಹಜ ಶಂಖಮುದ್ರೆ (ಓಂ ವಿಷ್ಣವೇ ನಮಃ ಎಂದು 108 ಬಾರಿ ಪಠಿಸಿ), ಇಪ್ಪತ್ತು ನಿಮಿಷ ಶಂಖಮುದ್ರೆ, ತಲಾ ಹತ್ತು ನಿಮಿಷ ಭ್ರಮರಮುದ್ರೆ, ಲಿಂಗಮುದ್ರೆ, ಪ್ರಾಣ ಮುದ್ರೆ ಅಭ್ಯಾಸ ಮಾಡಿ.

ಕರೊನಾ ಕಾಯಿಲೆ ಮುಖ್ಯವಾಗಿ ಪಾಲಿಸಬೇಕಾದ ಸೂಚನೆಗಳೆಂದರೆ - ಸೋಂಕು ಹರಡುವುದನ್ನು ತಡೆಗಟ್ಟಲು ಪ್ರಮಾಣಿತ ಶಿಫಾರಸುಗಳನ್ನು ಪಾಲಿಸಿ. ನಿಯತವಾಗಿ ಕೈತೊಳೆಯುವುದು, ಕೆಮ್ಮುವಾಗ, ಸೀನುವಾಗ ಬಾಯಿ ಮತ್ತು ಮೂಗನ್ನು ಮುಚ್ಚಿಕೊಳ್ಳುವುದು, ಜತೆಗೆ ವೈದ್ಯಕೀಯ ಸಲಹೆಯನ್ನು ಪಡೆಯಿರಿ.

ಶೀತ, ಕೆಮ್ಮು, ನಿಯಂತ್ರಣಕ್ಕೆ ಯಾವ ಮುದ್ರೆ ಮಾಡಬೇಕು ತಿಳಿಸಿ.

| ವಿಶ್ವನಾಥ್ ಮಂಗಳೂರು (23 ವರ್ಷ)

ಶೀತ, ಕೆಮ್ಮು, ಸೈನಸ್, ಮತ್ತು ಒಣಗಿದ ಕಫವನ್ನು ನಿಯಂತ್ರಿಸಲು ಮುದ್ರೆಗಳು ಸಹಕಾರಿಯಾಗುತ್ತವೆ. ಪ್ರಥಮವಾಗಿ ಶೀತ, ಕೆಮ್ಮಿನ ಕಾರಣವನ್ನು ವೈದ್ಯರ ಮೂಲಕ ತಿಳಿದುಕೊಂಡು ಉಪಚಾರ ಪಡೆಯಿರಿ. ಮುದ್ರೆಗಳಲ್ಲಿ ಒಟ್ಟು 30 ನಿಮಿಷ ಪ್ರಮುಖವಾಗಿ ಲಿಂಗಮುದ್ರೆ (108 ಬಾರಿ ಓಂ ನಮಃ ಶಿವಾಯ ಎಂದು ಪಠಿಸಿ), ಶಂಖಮುದ್ರೆ (108 ಬಾರಿ

ಓಂ ನಮೋ ಭಗವತೇ ವಾಸುದೇವಾಯ ಎಂದು ಪಠಿಸಿ) ಮಾಡಿ. ಭ್ರಮರಮುದ್ರೆ ಹತ್ತು ನಿಮಿಷ, ಪ್ರಾಣ ಮುದ್ರೆ ಹತ್ತು ನಿಮಿಷ ಅಭ್ಯಾಸ ಮಾಡಿ. ಗುರುಮುಖೇನ ಕಲಿತು ಅಭ್ಯಸಿಸಿ.

ಲಿಂಗಮುದ್ರೆ: ಎರಡೂ ಕೈಬೆರಳುಗಳನ್ನು ಪರಸ್ಪರ ಹೆಣೆದು ಒಂದು ಹೆಬ್ಬೆರಳು ನೇರವಾಗಿಸಬೇಕು. ಸುಮಾರು ಐದರಿಂದ ಹತ್ತು ನಿಮಿಷ ಅಭ್ಯಾಸ ಮಾಡಿದರೆ ಸಾಕು. ಕೊನೆಯಲ್ಲಿ ಹತ್ತು ನಿಮಿಷ ಪ್ರಾಣಮುದ್ರೆ ಮಾಡಿ.

ಪ್ರಯೋಜನ: ಆಗಾಗ್ಗೆ ಕಾಡುವ ಶೀತಗಳು, ಸೈನಸೈಟಿಸ್ ತೊಂದರೆಗಳು ಮತ್ತು ಉಸಿರಾಟದ ತೊಂದರೆಯನ್ನು ಈ ಮುದ್ರೆಯ ಸಹಾಯದಿಂದ ಬೇಗನೆ ನಿಯಂತ್ರಿಸಬಹುದು. ಗಮನಿಸಿ, ಈ ಮುದ್ರೆಯಿಂದ ದೇಹದಲ್ಲಿ ಶಾಖ ಹೆಚ್ಚುತ್ತದೆ. ಈ ಸಂದರ್ಭದಲ್ಲಿ ನೀರು, ನಿಂಬೆ ಶರಬತ್ತು ಇತ್ಯಾದಿ ಪಾನೀಯಗಳನ್ನು ಕುಡಿಯಿರಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net