ಹೆಚ್ಚಿನ ರಕ್ತದೊತ್ತಡ ನಿಯಂತ್ರಿಸುವ ಯೋಗ

Yoga 1
Published on

#ಹೆಚ್ಚಿನ ರಕ್ತದೊತ್ತಡ ನಿಯಂತ್ರಣಕ್ಕೆ ಯಾವ್ಯಾವ ಆಸನಗಳು ಸಹಕಾರಿ?

| ಚಂದ್ರಪ್ಪ 51 ವರ್ಷ, ಚಿಕ್ಕಮಗಳೂರು

ಅಧಿಕ ರಕ್ತದೊತ್ತಡವನ್ನು ಮೂಕ ಕೊಲೆಗಾರ ಎಂದು ಕರೆಯುತ್ತಾರೆ. ಹೆಚ್ಚಿನ ರಕ್ತದೊತ್ತಡವು ಮೂತ್ರಪಿಂಡ ಕಾಯಿಲೆ, ಹೃದಯವೈಫಲ್ಯ ಮತ್ತು ಪಾರ್ಶ್ವವಾಯು ಅಪಾಯವನ್ನು ಹೆಚ್ಚಿಸುತ್ತದೆ. ಈ ದೀರ್ಘಕಾಲೀನ ಸ್ಥಿತಿಯ ಕೆಲವು ಸಾಮಾನ್ಯ ಕಾರಣಗಳು ಅನುವಂಶಿಕ. ಅತಿಯಾದ ದೇಹದ ತೂಕ, ಅತಿಯಾದ ಉಪ್ಪು ಬಳಕೆ, ಜಡ ಜೀವನಶೈಲಿ, ಒತ್ತಡ ಮತ್ತು ಅತಿಯಾದ ಮದ್ಯ ಮತ್ತು ಸಿಗರೇಟ್ ಸೇವನೆ ಇತ್ಯಾದಿ.

ಉಸಿರಾಟದ ತೊಂದರೆ, ಕಿವಿಯಲ್ಲಿ ರಿಂಗಿಂಗ್, ತಲೆತಿರುಗುವಿಕೆ ಮತ್ತು ಹೃದಯ ಬಡಿತ ಇವೆಲ್ಲ ತೀವ್ರ ರಕ್ತದೊತ್ತಡದ ಲಕ್ಷಣಗಳು. ಜೀವನಶೈಲಿಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳಬೇಕಾಗುತ್ತದೆ. ಅಧಿಕ ರಕ್ತದೊತ್ತಡವನ್ನು ನೈಸರ್ಗಿಕವಾಗಿ ಕಡಿಮೆ ಮಾಡಲು ಯೋಗ ಸಹಾಯ ಮಾಡುತ್ತದೆ.

ಆಸನಗಳು: ತಾಡಾಸನ, ಅರ್ಧಕಟಿ ಚಕ್ರಾಸನ, ಉತ್ಕಟಾಸನ, ಅಧೋಮುಖ ಶ್ವಾನಾಸನ, ಬದ್ಧಕೋಣಾಸನ, ಪರ್ವತಾಸನ, ವಜ್ರಾಸನ, ಮಾರ್ಜಾಲಾಸನ, ಮರೀಚ್ಯಾಸನ, ಉತ್ಥಿತ ಏಕಪಾದಾಸನ, ಗೋಮುಖಾಸನ, ಪೂವೋತ್ಥಾನಾಸನ, ಪಶ್ಚಿಮೋತ್ಥಾನಾಸನ, ಶವಾಸನ (ದಿನಕ್ಕೆ ಮೂರು ಬಾರಿ). ಹತ್ತು ನಿಮಿಷ ಧ್ಯಾನ, ಪ್ರಾಣಾಯಾಮಗಳನ್ನೂ ಮಾಡಿ. ಜತೆಗೆ ವೈದ್ಯರೊಂದಿಗೆ ಸಮಾಲೋಚಿಸಿ.

# ನಿದ್ರಾಹೀನತೆ ನಿವಾರಿಸುವ ಯೌಗಿಕ ಕ್ರಿಯೆಗಳ ಬಗ್ಗೆ ತಿಳಿಸಿ.

| ವಿಜಯಕುಮಾರ್ ಎಚ್.ಕೆ.

ರಾಯಚೂರು

ಮೊದಲನೆಯದಾಗಿ ನಿದ್ರೆ ಬರುತ್ತಿಲ್ಲ ಎಂದು ಚಿಂತೆ ಮಾಡಬಾರದು. ನಿದ್ರೆ ಬರಲಿಲ್ಲ ಎಂಬ ಚಿಂತೆ ಮಾಡಿದರೆ ಅದುವೇ ಒಂದು ಕಾಯಿಲೆಯಾಗುತ್ತದೆ. ದೇಹವೇ ನಿದ್ರೆ ಬೇಕೆಂದು ಕೇಳುತ್ತದೆ. ಮನಸ್ಸು-ಬುದ್ಧಿಗಳಿಗೆ ಹೆಚ್ಚು ಕೆಲಸ ಕೊಟ್ಟರೆ ನಿದ್ರೆ ಬರುವುದಿಲ್ಲ. ದೇಹ ಬಳಲಿದರೆ ಸಹಜವಾಗಿ ನಿದ್ರೆ ಬರುತ್ತದೆ. ಆದರೂ ದೇಹಕ್ಕೆ ನಿದ್ರೆ ಅಗತ್ಯ. ಮಿದುಳಿನ ಬೆಳವಣಿಗೆಯಲ್ಲಿ ನಿದ್ರೆ ಮಹತ್ವದ ಪಾತ್ರ ವಹಿಸುತ್ತದೆ. ದೀರ್ಘಾವಧಿಯ ಸ್ಮರಣೆಯನ್ನು ಸಂಘಟಿಸುವುದು, ಹೊಸ ಮಾಹಿತಿಯನ್ನು ಸಂಯೋಜಿಸುವುದು, ಅಂಗಾಂಶ-ನರಕೋಶಗಳನ್ನು ಸರಿಪಡಿಸುವುದು ಮತ್ತು ನವೀಕರಿಸುವುದು ಮುಂತಾದ ಪ್ರಮುಖ ಕಾರ್ಯಗಳನ್ನು ನಿರ್ವಹಿಸಲು ನಿದ್ರೆಯು ಮಿದುಳಿಗೆ ಅನುವು ಮಾಡಿಕೊಡುತ್ತದೆ. ನರಮಂಡಲವನ್ನು ಶಮನಗೊಳಿಸಲು ಮತ್ತು ಮನಸ್ಸನ್ನು ಶಾಂತಗೊಳಿಸಲು ಯೋಗ ಸಹಕಾರಿಯಾಗುತ್ತದೆ. ಮಲಗುವ ಕೋಣೆ ಶುಭ್ರವಾಗಿರಲಿ. ವ್ಯಾಯಾಮ-ಯೋಗ ಮಾಡಿ. ಆಯಾಸವಾದಾಗ ನಿದ್ರೆ ಸಹಜವಾಗಿ ಬರುತ್ತದೆ. ಧ್ಯಾನ, ಪ್ರಾಣಾಯಾಮ ಅಭ್ಯಾಸ ನಡೆಸಿ, ಯೋಚನೆಗಳು ಖಾಲಿಯಾಗುತ್ತವೆ.

ನಿದ್ರೆಗಾಗಿ ಕೆಲವು ಟಿಪ್ಸ್​ಗಳು: ಹಾಸಿಗೆಯಲ್ಲಿ ಮಲಗುವ ಮುಂಚೆ ಕುಳಿತು ಉಸಿರನ್ನು ಗಮನಿಸುವ ಚಿಕ್ಕ ಧ್ಯಾನ ಮಾಡಿ. ಆಮೇಲೆ ಚಿನ್ಮುದ್ರೆಯಲ್ಲಿ ಓಂ ಪದ್ಮನಾಭಾಯ ನಮಃ ಎಂದು 108 ಬಾರಿ ಪಠಿಸಿ ಅಥವಾ ಇಷ್ಟದೇವರನ್ನು ಗಮನಿಸಿಕೊಂಡು ಧ್ಯಾನ ಮಾಡಿ. ಅನಂತರ ಹಾಸಿಗೆಯಲ್ಲಿ ಮಲಗಿಕೊಂಡು ತಲಾ ಹತ್ತು ನಿಮಿಷ ಪ್ರಾಣಮುದ್ರೆ, ವಾಯುಶೂನ್ಯಮುದ್ರೆ ಮಾಡಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net