

ಕಣ್ಣಿನ ದೃಷ್ಟಿಯನ್ನು ಹೇಗೆ ಸುಧಾರಿಸುವುದು? ಯಾವ ಯೋಗ ಮುದ್ರೆಗಳನ್ನು ಅಭ್ಯಾಸ ಮಾಡಬೇಕು?
| ಯಶವಂತ ಗೌಡ ಬೆಂಗಳೂರು ಮತ್ತು ಅರ್ಜುನ್, ಸಜ್ಜನ್ ಆರ್. ಬಂಟ್ವಾಳ
ಸಮೀಪದೃಷ್ಟಿ ಯಾ ದೂರದೃಷ್ಟಿಯಿಂದ ಬಳಲುತ್ತಿದ್ದರೆ ಸ್ವಾಭಾವಿಕವಾಗಿ ಸುಧಾರಿಸಲು ಯಾವುದೇ ನಿರ್ದಿಷ್ಟ ಯೋಗ ಪರಿಹಾರಗಳಿಲ್ಲ. ನಿಮ್ಮ ಕಣ್ಣಿನ ವೈದ್ಯರನ್ನು ಸಂರ್ಪಸಿ ಪರೀಕ್ಷೆ ಮಾಡಿಸಿ. ಆದಗ್ಯೂ ಕಣ್ಣಿನ ಆರೋಗ್ಯವನ್ನು ಕಾಪಾಡಿಕೊಳ್ಳಲು, ದೃಷ್ಟಿಯನ್ನು ಕಾಪಾಡಿಕೊಳ್ಳಲು ಆರೋಗ್ಯಕರ ಜೀವನಶೈಲಿಯ ಆಯ್ಕೆಗಳು, ಯೋಗ, ಕ್ರಿಯೆಗಳು (ತ್ರಾಟಕ), ಅಗತ್ಯದಷ್ಟು ನಿದ್ರೆ ಮಾಡುವುದು. ಕಣ್ಣಿನ ಒತ್ತಡವನ್ನು ಕಡಿಮೆ ಮಾಡುವುದು ಇತ್ಯಾದಿ ಸೂಚನೆಗಳನ್ನು ಪಾಲಿಸಿ.
ಪಾದಹಸ್ತಾಸನ, ಸೇತುಬಂಧ, ಶಶಾಂಕಾಸನ, ಮಂಡೂಕಾಸನ, ಉಷ್ಟ್ರಾಸನ, ಮಕರಾಸನ, ಅಧೋಮುಖ ಶ್ವಾನಾಸನ, ಶವಾಸನ ಕಣ್ಣಿನ ಆರೋಗ್ಯಕ್ಕೆ ಸಹಕಾರಿಯಾಗುತ್ತದೆ. ಪ್ರಾಣಾಯಾಮಗಳನ್ನು (ನಾಡಿಶುದ್ಧಿ, ಭ್ರಾಮರಿ) ಅಭ್ಯಾಸ ಮಾಡಿ ಹಾಗೂ ಹತ್ತು ನಿಮಿಷದ ಧ್ಯಾನ ಮಾಡಿ.
ಮುದ್ರೆಗಳು: ಪ್ರಾಣಮುದ್ರೆ ನಲ್ವತ್ತು ನಿಮಿಷ, ತಲಾ ಹತ್ತು ನಿಮಿಷದಂತೆ ಚಿನ್ಮುದ್ರೆ, ವಾಯುಮುದ್ರೆ, ಪೃಥ್ವಿಮುದ್ರೆ ಮಾಡಿ. ಕಣ್ಣಿನ ಸ್ನಾಯುಗಳು ಬಲಗೊಳ್ಳುವ, ಮನಸ್ಸಿನ ಒತ್ತಡ ಕಡಿಮೆಗೊಳಿಸುವ ಶಾಂಭವಿಮುದ್ರೆಯನ್ನು ಸ್ವಲ್ಪ ಹೊತ್ತು ಮಾಡಿ.
ನಾನು ಅಲರ್ಜಿಯಿಂದ ಬಳಲುತ್ತಿದ್ದೇನೆ. ಯಾವ ಪ್ರಾಣಾಯಾಮವನ್ನು ಅಭ್ಯಾಸ ಮಾಡಬಹುದು?
| ಸುರೇಶ್ ಮೈಸೂರು
ಅಲರ್ಜಿ ಪರಿಸ್ಥಿತಿಗಳು ವಿಶ್ವದಾದ್ಯಂತ ಸಾರ್ವಜನಿಕ ಆರೋಗ್ಯದ ಪ್ರಮುಖ ಸವಾಲಾಗಿದೆ. ಆಯ್ದ ಆಸನಗಳು, ಸೂರ್ಯನಮಸ್ಕಾರ, ಕ್ರಿಯೆಗಳು, ಪ್ರಾಣಾಯಾಮ, ಧ್ಯಾನ ಮತ್ತು ಮುದ್ರೆಗಳು ಅಲರ್ಜಿಯ ನಿಯಂತ್ರಣಕ್ಕೆ ಸಹಕಾರಿಯಾಗುತ್ತವೆ. ಪ್ರಾಣಾಯಾಮ ಅಭ್ಯಾಸವು ಶಕ್ತಿಯ ಹರಿವನ್ನು ಗರಿಷ್ಟಗೊಳಿಸುವ ಗುರಿಯನ್ನು ಹೊಂದಿದೆ. ಅಲರ್ಜಿಗಳು ವಾಯುಮಾರ್ಗದ ಉರಿಯೂತ ಮತ್ತು ಸೂಕ್ಷ್ಮತೆಯಿಂದ ಉಂಟಾಗುತ್ತದೆ. ನಾವು ಉಸಿರಾಡುವ ಗಾಳಿಯು ವಾಯುಮಾರ್ಗಗಳನ್ನು ಕೆರಳಿಸುವ ಕಾರಣ ಪ್ರಚೋದಿಸಬಹುದು. ನಮ್ಮ ದೇಹವು ಅಲರ್ಜಿಗಳಿಗೆ ನೈಸರ್ಗಿಕವಾಗಿ ಹಿಸ್ಟಮೆನ್ ಅನ್ನು ಉತ್ಪಾದಿಸುತ್ತದೆಯಾದರೂ ಪ್ರಾಣಾಯಾಮವು ಉಸಿರಾಟದ ಶುಚಿಗೊಳಿಸುವಿಕೆಗೆ ಸಹಾಯ ಮಾಡುತ್ತದೆ. ಇದು ಅಲರ್ಜಿಗಳಿಗೆ ಮಾತ್ರವಲ್ಲದೆ ಅಸ್ತಮಾ ಇರುವವರಿಗೂ ಸಹಾಯ ಮಾಡುತ್ತದೆ.
ಸೂಚಿತ ಪ್ರಾಣಾಯಾಮಗಳು: ನಾಡಿಶುದ್ಧಿ, ಶೀತಲೀ, ಭಸ್ತ್ರಿಕಾ, ಉಜ್ಜಾಯೀ, ಭ್ರಾಮರಿ ಮತ್ತು ಕಪಾಲಭಾತಿ ಕ್ರಿಯೆ. ಯೋಗಕ್ಷೇಮ ಅಂಕಣದಲ್ಲಿ ಈ ಹಿಂದೆ ಪ್ರಾಣಾಯಾಮಗಳ ಅಭ್ಯಾಸವನ್ನು ತಿಳಿಸಲಾಗಿದೆ. ಗುರು ಮಾರ್ಗದರ್ಶನದಲ್ಲಿ ಶಿಸ್ತುಬದ್ಧವಾಗಿ ಪ್ರಾಣಾಯಾಮ ಅಭ್ಯಾಸ ಮಾಡಿ. ಮೂರು ತಿಂಗಳಲ್ಲಿ ಸಾಕಷ್ಟು ನಿಯಂತ್ರಣವಾಗುತ್ತದೆ.