

ಸ್ವಲ್ಪ ಮೊಸರನ್ನು ಹಾಲಿಗೆ ಹಾಕಿದಾಗ, ಮೊಸರಿನಲ್ಲಿರುವ ಲ್ಯಾಕ್ಟೋಬ್ಯಾಸಿಲಸ್ ಬ್ಯಾಕ್ಟೀರಿಯಾ ಹಾಲಿನಲ್ಲಿರುವ ಸಕ್ಕರೆಯ ಅಂಶವನ್ನು ತಿಂದು ಲ್ಯಾಕ್ಟಿಕ್ ಆಮ್ಲವನ್ನು ಉತ್ಪತ್ತಿಮಾಡಿ ಹಾಲನ್ನು ಹುಳಿ ಮಾಡುತ್ತವೆ ಮತ್ತು ಲ್ಯಾಕ್ಟಿಕ್ ಆಮ್ಲವು ಹಾಲಿನಲ್ಲಿರುವ ಪೊ›ಟೀನ್ನನ್ನು ವಿಘಟನೆ ಮಾಡಿ ಅಮಿನೋ ಆಮ್ಲವನ್ನು ಉತ್ಪತ್ತಿ ಮಾಡಿ ಕೆಲ ಗಂಟೆಗಳ ನಂತರ ಅದು ಮೊಸರಾಗುತ್ತದೆ. ಆದರೆ, ಅದೇ ಮೊಸರನ್ನು ಉಪಯೋಗಿಸದೆ ಕೆಲವು ದಿನಗಳು ಬಿಟ್ಟರೆ ಅಲ್ಲಿ ಹುಳಗಳು ಬಂದಿರುತ್ತವೆ. ಆ ಹುಳಗಳು ಹೇಗೆ ಹುಟ್ಟಿಕೊಂಡವು?
ಮೊದಲನೆಯದಾಗಿ ಗಾಳಿ ಹಲವು ಜೀವಿಗಳಿಗೆ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಹೋಗಲು ಸಹಾಯ ಮಾಡುತ್ತದೆ. ಅದೇ ರೀತಿ ಅತಿ ಸೂಕ್ಷ್ಮವಾದ ಹಲವು ಜಾತಿಯ ಬ್ಯಾಕ್ಟೀರಿಯಾ, ವೈರಸ್, ಶಿಲೀಂಧ್ರಗಳು, ಶೈವಲಗಳು, ಧೂಳು, ಪಕ್ಷಿಗಳ ಪುಕ್ಕ, ರಾಸಾಯನಿಕ ಅನಿಲಗಳು ಮುಂತಾದವು ಗಾಳಿಯಲ್ಲಿ ತೇಲುತ್ತಿರುತ್ತವೆ. ಹಾಲು ಮತ್ತು ಮೊಸರನ್ನು ತೆರೆದ ಪಾತ್ರೆಗಳಲ್ಲಿ ಗಾಳಿಯಾಡುವ ರೀತಿಯಲ್ಲಿ ಇಟ್ಟಿರುತ್ತೇವೆ. ಗಾಳಿಯಲ್ಲಿರುವ ಬ್ಯಾಕ್ಟೀರಿಯಾ, ಶಿಲೀಂಧ್ರಗಳು (ಯೀಸ್ಟ್) ಇತರ ಕೀಟಗಳ ಸಾವಿರಾರು ಬಹುಸೂಕ್ಷ್ಮ ಮೊಟ್ಟೆಗಳು ತೆರೆದ ಪಾತ್ರೆಯಲ್ಲಿಟ್ಟಿರುವ ಹಾಲಿಗೆ ಸೇರುತ್ತವೆ. ಬ್ಯಾಕ್ಟೀರಿಯಾ ಹಾಲನ್ನು ಹುಳಿಮಾಡಿ ಅಂತಹ ಮೊಟ್ಟೆಗಳು ಮರಿಗಳಾಗಿ ಬರುತ್ತವೆ. ಅದೇ ರೀತಿ ಗಾಳಿಯಿಂದ ಬಂದ ಯೀಸ್ಟ್ ಕೊಳೆತ ಆಹಾರದಲ್ಲಿ ಸೇರಿ ಬೂಷ್ಟ್ ಹುಟ್ಟುತ್ತದೆ. ತೆರೆದ ಸ್ಥಳಗಳಲ್ಲಿ ಮಾಂಸ, ಹಣ್ಣು ತರಕಾರಿಗಳನ್ನು ಇಟ್ಟಾಗ ಕೀಟಗಳು ಬಂದು ಮೊಟ್ಟೆಯಿಡುತ್ತವೆ. ಕೆಲವು ದಿವಸದ ನಂತರ ಅದು ಕೊಳೆತು ಕೀಟಗಳ ಮೊಟ್ಟೆಗಳು ಹುಳಗಳಾಗುತ್ತವೆ. ಆದ್ದರಿಂದ ಮನೆಗಳಲ್ಲಿ ಆಹಾರವನ್ನು ಯಾವಾಗಲೂ ಮುಚ್ಚಿ ಇಡಬೇಕು. ಮನೆಯ ಒಳಗಿರುವ ಗಾಳಿಯೇ ಅಷ್ಟೊಂದು ಮಾಲಿನ್ಯವಾಗಿ ದ್ದರೆ ಇನ್ನು ಹೊರಗಿನ ಗಾಳಿ ಎಷ್ಟೊಂದು ಮಾಲಿನ್ಯವಾಗಿರಬಹುದು. ನಗರಗಳಲ್ಲಿ ರಸ್ತೆ ಕಸ ಗುಡಿಸುವ ಸಂದರ್ಭದಲ್ಲಿ, ಬಸ್, ಲಾರಿಗಳು ವೇಗವಾಗಿ ಹೋಗುವಾಗ ಅತಿಯಾದ ಧೂಳು ಗಾಳಿಯನ್ನು ಸೇರುತ್ತದೆ. ಅಂತಹ ಧೂಳಿನ ಜತೆಗೆ, ಗಾಳಿಯಲ್ಲಿರುವ ಕೀಟಗಳ ಮೊಟ್ಟೆಗಳು ಅಕ್ಕಪಕ್ಕದ ಹೋಟೆಲ್ ಮತ್ತು ರಸ್ತೆ ಬದಿಯ ತಿಂಡಿ-ತಿನಿಸುಗಳನ್ನು ಸೇರುತ್ತವೆ. ಆದ್ದರಿಂದ ರಸ್ತೆ ಬದಿಗಳಲ್ಲಿ ತಿಂಡಿ ತಿನ್ನುವಾಗ ಸ್ವಲ್ಪ ಯೋಚಿಸಬೇಕು.
- ಬಿ.ಎನ್.ಸುರೇಶ್