

ಈ ವರ್ಷ ವಿಶ್ವ ಶ್ರವಣ ದಿನದಂದು ವಿಶ್ವ ಆರೋಗ್ಯ ಸಂಸ್ಥೆಯು ಹೊಸ ಘೋಷಣೆಯನ್ನು ಅಳವಡಿಸಿಕೊಂಡಿದೆ. ನಿಮ್ಮ ಸಾಮರ್ಥ್ಯಕ್ಕೆ ಶ್ರವಣ ದೋಷ ಅಡ್ಡಿಯಾಗದಿರಲಿ ’ (ಹಿಯರಿಂಗ್ ಫಾರ್ ಲೈಫ್: ಡೋಂಟ್ ಲೆಟ್ ಹಿಯರಿಂಗ್ ಲಾಸ್ ಲಿಮಿಟ್ ಯೂ). ಶ್ರವಣ ದಿನ ಹಾಗೂ ಶ್ರವಣ ದೋಷದ ಕುರಿತ ಸಮಗ್ರ ವರದಿ ಇಲ್ಲಿದೆ.
ಹುಟ್ಟುತ್ತಲೇ ಕಾಡುವ ಶ್ರವಣ ದೋಷ ಹಾಗೂ ವಯೋಸಹಜ ಶ್ರವಣ ಸಮಸ್ಯೆಗಳನ್ನು ಪತ್ತೆ ಹಚ್ಚುವ ಹಾಗೂ ಚಿಕಿತ್ಸೆ ನೀಡುವ ನಿಟ್ಟಿನಲ್ಲಿ ವೈದ್ಯಕೀಯ ಕ್ಷೇತ್ರದಲ್ಲಿ ನಿರಂತರ ಆವಿಷ್ಕಾರಗಳು ನಡೆಯುತ್ತಿದ್ದು, ಇಂದು ಹಲವಾರು ತಂತ್ರಜ್ಞಾನ ಆಧಾರಿತ ಸೌಲಭ್ಯಗಳು ಲಭ್ಯವಿದೆ. ಶ್ರವಣ ದೋಷಕ್ಕೆ 1940ರ ನಂತರ ಹಂತ ಹಂತವಾಗಿ ಆವಿಷ್ಕಾರಗಳು ನಡೆಯುತ್ತಾ ಬಂದಿದ್ದು, ಹುಟ್ಟುತ್ತಲೇ ಎದುರಾಗುವ ಶ್ರವಣ ಸಮಸ್ಯೆಗಳಿಗೂ ಇಂದು ಹಿಯರಿಂಗ್ ಏಡ್, ಕಾಕ್ಲಿಯರ್ ಇಂಪ್ಲಾಂಟ್ ನಂತಹ ಶ್ರವಣ ಸಾಧನಗಳು ಲಭ್ಯವಿದೆ. ಇದಲ್ಲದೆ ಶ್ರವಣ ಸಮಸ್ಯೆಗಳನ್ನು ಪತ್ತೆ ಹಚ್ಚುವ ನಿಟ್ಟಿನಲ್ಲೂ ಹಿಯರ್ ಡಬ್ಲ್ಯೂಎಚ್ಒ, ವಾಕ್ ನಾದ ದಂತ ಬಹಳಷ್ಟು ತಂತ್ರಜ್ಞಾನ ಆಧಾರಿತ ವ್ಯವಸ್ಥೆಗಳು ಜಾರಿಯಲ್ಲಿವೆ.
ಸಮಸ್ಯೆ ಉಲ್ಬಣಿಸುವ ಮುನ್ನ: ಸಾಮಾನ್ಯವಾಗಿ ಜನರು ವಯೋಸಹಜ ಶ್ರವಣ ದೋಷವನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ. ಹೀಗಾಗಿ ಸಮಸ್ಯೆ ತೀವ್ರಗೊಂಡಾಗ ವೈದ್ಯರಲ್ಲಿ ಹೋಗುತ್ತಾರೆ. ಇದರಿಂದ ಚಿಕಿತ್ಸೆಯೂ ಕ್ಲಿಷ್ಟಕರವಾಗಿರುತ್ತದೆ. ಹಿಂದೆಲ್ಲಾ ಶ್ರವಣ ಸಮಸ್ಯೆ ಉಳ್ಳವರು ಎದುರು ಇರುವವರಿಗೆ ಜೋರಾಗಿ ಮಾತನಾಡುವಂತೆ ಹೇಳುತ್ತಿದ್ದರು. ರೇಡಿಯೋ, ಟಿವಿ ನೋಡುವಾಗ ಜೋರಾಗಿ ಶಬ್ದ ಇಡುವುದು, ಫೋನ್ ನಲ್ಲಿ ಜೋರಾಗಿ ಮಾತನಾಡಲು ಕೋರುತ್ತಿದ್ದರು. ಎಲ್ಲಿಯವರೆಗೂ ಕೇಳಿಸುವುದಿಲ್ಲವೋ ಅಲ್ಲಿಯವರೆಗೂ ವೈದ್ಯರ ಬಳಿ ಹೋಗುತ್ತಿರಲಿಲ್ಲ. ಆದರೆ ಈಗ ಸಮಸ್ಯೆಯನ್ನು ಆರಂಭದಲ್ಲೇ ಪತ್ತೆ ಹೆಚ್ಚುವ ನಿಟ್ಟಿನಲ್ಲಿಯೂ ಹಲವು ತಂತ್ರಜ್ಞಾನ ಆಧಾರಿತ ಆವಿಷ್ಕಾರಗಳಾಗಿವೆ.
ತಮಗೆ ತಾವೇ ಶ್ರವಣ ಸಮಸ್ಯೆ ಗುರುತಿಸಿ ಸಕಾಲದಲ್ಲಿ ಚಿಕಿತ್ಸೆ ಪಡೆಯಲು ಅನುವಾಗುವಂತೆ ಕಳೆದ ವರ್ಷ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯೂಎಚ್ಒ) ಶ್ರವಣ ದೋಷ ಪರೀಕ್ಷೆ ಮಾಡುವ ವಿಶೇಷ ಆಪ್ (ಏಉಅಗಏಣ) ಅನ್ನು ಸಾರ್ವಜನಿಕರಿಗೆ ಪರಿಚಯಿಸಿತ್ತು.
ಈ ಆಪ್ ಅನ್ನು ಕಂಪ್ಯೂಟರ್ ಅಥವಾ ಸ್ಮಾರ್ಟ್ ಪೋನ್ ಮೂಲಕ ಉಚಿತವಾಗಿ ಡೌನ್ಲೋಡ್ ಮಾಡಿಕೊಂಡು, ಇಯರ್ ಫೋನ್ ಮೂಲಕ ಸ್ವತಃ ತಮ್ಮ ಶ್ರವಣ ಸಾಮರ್ಥ್ಯವನ್ನು ಪರೀಕ್ಷಿಸಿಕೊಂಡು, ಸಮಸ್ಯೆ ಇದ್ದಲ್ಲಿ ಚಿಕಿತ್ಸೆ ಪಡೆಯಬಹುದಾಗಿದೆ.
ಇದರ ಮುಂದುವರಿದ ಭಾಗವಾಗಿ ಬೆಂಗಳೂರಿನ ನಾಯಕ್ಸ್ ವಾಕ್ ಮತ್ತು ಶ್ರವಣ ಸಂಸ್ಥೆಯು ಈ ವರ್ಷ ‘ವಾಕ್ ನಾದ’ ಎಂಬ ನೂತನ ಶ್ರವಣ ಪರೀಕ್ಷೆ ವಿಧಾನವನ್ನು ಬಿಡುಗಡೆ ಮಾಡಿದೆ. ಸಂಸ್ಥೆಯ ನುರಿತ ಶ್ರವಣ ತಜ್ಞರ ತಂಡದ ಸಂಶೋಧನೆಯ ಫಲವಾಗಿ ಅನ್ವೇಷಿಸಿರುವ ಈ ಸೌಲಭ್ಯದಿಂದ ಜನಸಾಮಾನ್ಯರು ಯಾವುದೇ ಖರ್ಚುವೆಚ್ಚ ಇಲ್ಲದೆ ತಮಗೆ ತಾವೇ ಶ್ರವಣ ಸಮಸ್ಯೆ ಇರುವುದನ್ನು ತಿಳಿಯಬಹುದಾಗಿದೆ.
ವಾಕ್ ನಾದ ಪರೀಕ್ಷೆಯಲ್ಲಿ 20 ಬಗೆಯ ತರಂಗಗಳ ಶಬ್ದಗಳು ಹಾಗೂ 20 ಜೋಡಿ ಪದಗಳ (ಕನ್ನಡ ಮತ್ತು ಇಂಗ್ಲಿಷ್ ಭಾಷೆಯಲ್ಲಿ) ಪಟ್ಟಿ ಒಳಗೊಂಡಿರುತ್ತದೆ. ಪರೀಕ್ಷೆಗೆ ಒಳಪಡುವಾಗ ಇಬ್ಬರಿಗಿಂತ ಹೆಚ್ಚು ಜನರು ಇರಬೇಕು. ಟಿವಿ, ಕಂಪ್ಯೂಟರ್ ಅಥವಾ ಮೊಬೈಲ್ 6-7 ಅಡಿ ದೂರದಲ್ಲಿ ಕುಳಿತು ವಾಕ್ ನಾದವನ್ನು ಕೇಳಿಸಿಕೊಳ್ಳಬೇಕು. ಇದರಲ್ಲಿ ಯಾರಿಗೆ ಎಷ್ಟು ತರಂಗ ಶಬ್ದಗಳು ಹಾಗೂ ಎಷ್ಟು ಜೋಡಿ ಪದಗಳು ಕೇಳಿಸಿದವು ಎಂದು ಪಟ್ಟಿ ಮಾಡಿಕೊಳ್ಳಬೇಕು. 20ಕ್ಕೂ ಹೆಚ್ಚು ಶಬ್ದಗಳು ಕೇಳಿದಲ್ಲಿ ಶ್ರವಣ ಸಮಸ್ಯೆ ಇರುವುದಿಲ್ಲ. 20ಕ್ಕಿಂತ ಕಡಿಮೆ ಕೇಳಿಸಿಕೊಂಡರೆ ಸಮಸ್ಯೆ ಇದೆ ಎಂದರ್ಥ. ಅಂತಹವರು ಕೂಡಲೇ ಶ್ರವಣ ತಜ್ಞರಲ್ಲಿ ಪರೀಕ್ಷಿಸಿಕೊಳ್ಳಬೇಕು ಎನ್ನುತ್ತಾರೆ ನಾಯಕ್ಸ್ ವಾಕ್ ಮತ್ತು ಶ್ರವಣ ಸಂಸ್ಥೆಯ ಸಂಸ್ಥಾಪಕ ನಿರ್ದೇಶಕ ಡಾ. ಎಂ.ಎಸ್.ಜೆ. ನಾಯಕ್.
1900ರಲ್ಲಿ ಪಾಕೆಟ್ ಹಿಯರ್ ಏಡ್ ಗಳು ಬಂದವು. ಜೇಬಿನಲ್ಲಿ ಸ್ಪೀಕರ್ ಇಟ್ಟುಕೊಂಡು ಅದರ ಮೂಲಕ ಹಾದುಹೋಗುವ ವೈರ್ ಕಿವಿಯಲ್ಲಿನ ಯಂತ್ರಕ್ಕೆ ಶಬ್ಧ ರವಾನಿಸುತ್ತಿತ್ತು. 1940-50ರಲ್ಲಿ ಮೈಕ್ ಮತ್ತು ಸ್ಪೀಕರ್ ಒಟ್ಟಿಗೆ ಇರುವ ಹಿಯರಿಂಗ್ ಏಡ್ ಅನ್ನು ಕಿವಿಯ ಹಿಂಭಾಗದಲ್ಲಿ ಅಳವಡಿಸಲಾಗುತ್ತಿತ್ತು. 1950-60ರಲ್ಲಿ ಮೈಕ್ ಮತ್ತು ಸ್ಪೀಕರ್ ಅಳವಡಿಕೆಯ ಕನ್ನಡಕ ಬಳಕೆಗೆ ಬಂದಿತು. 1970ರಲ್ಲಿ ಕಿವಿಯೊಳಗೆ ಸಣ್ಣ ಶ್ರವಣ ಸಾಧನ ಅಳವಡಿಕೆ ಮಾಡಲಾಗುತ್ತಿತ್ತು. ಇದೀಗ ಕಿವಿಯ ಆಳದಲ್ಲಿ ಕಾಣದ ರೀತಿಯ ಅತೀ ಸಣ್ಣ ಶ್ರವಣ ಸಾಧನೆ (ಇನ್ವಿಸಿಬಲ್ ಇನ್ ದ ಕೆನಾಲ್) ಅಳವಡಿಸಲಾಗುತ್ತಿದೆ. ಈ ಮೇಲಿನ ಸಾಧನಗಳಿಂದಲೂ ಕಿವಿ ಕೇಳಿಸದವರಿಗೆ ಅಂತಿಮವಾಗಿ ಕಾಕ್ಲಿಯರ್ ಇಂಪ್ಲಾಟ್ ಮಾಡಲಾಗುತ್ತದೆ. ಅಂದರೆ ಮಿದುಳಿಗೆ ಶಬ್ದ ತಲುಪಿಸುವ ನರಕ್ಕೆ ಶಸ್ತ್ರಚಿಕಿತ್ಸೆ ಮಾಡಿ ಎಲೆಕ್ಟೊ›ಡ್ ಹಾಗೂ ಕಿವಿಯ ಹೊರಭಾಗದಲ್ಲಿ ಡಿಜಿಟಲ್ ತಂತ್ರಜ್ಞಾನ ಆಧಾರಿತ ಸೆನ್ಸಾರ್ ಅಳವಡಿಸುವುದು. ಇದು ವಯೋಸಹಜ ಶ್ರವಣ ದೋಷವುಳ್ಳವರಿಗೆ ಮಾತ್ರವಲ್ಲದೆ ಹುಟ್ಟುತ್ತಲೇ ಶ್ರವಣ ಸಮಸ್ಯೆ ಹೊಂದಿರುವ ಮಕ್ಕಳಿಗೂ ವರದಾನವಾಗಿದೆ. ಆದರೆ ಇದರ ಅಳವಡಿಕೆ ಬಹಳ ದುಬಾರಿ.
ಶ್ರವಣ ದೋಷ ಪತ್ತೆ ಹೆಚ್ಚಲು 1940ರಿಂದ ಪರೀಕ್ಷಾ ವಿಧಾನಗಳು ಜಾರಿಗೆ ಬಂದವು. ಮೊದಲಿಗೆ ಆಡಿಯೋಮೆಟ್ರಿ (ಶ್ರವಣ ಮಾಪನ). 1970ರಲ್ಲಿ ಟೆಂಪಾಮಾನಿಟರಿ ಇದರಿಂದ ಒಳಕಿವಿ, ಕಿವಿ ತಮಟೆ, ಶಬ್ಧವನ್ನು ಮಿದುಳಿಗೆ ಸಾಗಿಸುವ ನರಗಳು ಹೀಗೆ ಹಲವು ಸಮಸ್ಯೆಗಳನ್ನು ಪತ್ತೆ ಮಾಡಲಾಗುತ್ತದೆ. 1980ರಲ್ಲಿ ಅಡಿಟರಿ ಬ್ರೖೆನ್ಸ್ಟೆಮ್ ರೆಸ್ಪಾನ್ಸ್ (ಎಬಿಆರ್) ಇದು ಶ್ರವಣ ಸಾಮರ್ಥ್ಯವನ್ನು ಅಳೆಯುವುದರ ಜತೆಗೆ ಮಕ್ಕಳ (ಬುದ್ದಿಮಾಂದ್ಯಮಕ್ಕಳಿಗೂ ಅನುಕೂಲ)ಶ್ರವಣದಲ್ಲಿನ ನರಗಳ ಕಾರ್ಯನಿರ್ವಹಣೆಯ ಬಗ್ಗೆಯೂ ಮಾಹಿತಿ ನೀಡುತ್ತದೆ. 1990ರಲ್ಲಿ ಅಕೋಸ್ಟಿಕ್ ಎಮಿಷನ್ ಟೆಸ್ಟಿಂಗ್ (ಎಇಟಿ) ಇದನ್ನು ಬಳಸಿ ಶ್ರವಣ ದೋಷವನ್ನು ಸುಲಭವಾಗಿ ಪತ್ತೆ ಮಾಡಬಹುದಾಗಿದೆ. ಇವುಗಳ ನಂತರ ಬಂದ ಹಿಯರ್ ಡಬ್ಲ್ಯೂಎಚ್ಒ ಆಪ್ ಮತ್ತು ಇದೀಗ ಬಿಡುಗಡೆಯಾಗಿರುವ ವಾಕ್ ನಾದ ಜನರು ತಮಗೆ ತಾವೇ ಶ್ರವಣ ದೋಷ ಪತ್ತೆ ಮಾಡಲು ಸಹಕಾರಿಯಾಗಿದೆ.
‘ವಾಕ್ ನಾದ’ ದಿಂದ ಜನರು ಸ್ವಯಂ ಶ್ರವಣ ಪರೀಕ್ಷೆ ಮಾಡಿಕೊಳ್ಳಬಹುದಾಗಿದೆ. ಈ ಕುರಿತು www.nayakshearing careclinic.com ಭೇಟಿ ನೀಡಿ ಉಚಿತವಾಗಿ ಮಾಹಿತಿ ಪಡೆಯಬಹುದಾಗಿದೆ. | ಡಾ. ಎಂ.ಎಸ್.ಜೆ. ನಾಯಕ್, ಸಂಸ್ಥಾಪಕ ನಿರ್ದೇಶಕ, ನಾಯಕ್ಸ್ ವಾಕ್ ಮತ್ತು ಶ್ರವಣ ಸಂಸ್ಥೆ
| ಪಂಕಜ ಕೆ.ಎಂ. ಬೆಂಗಳೂರು