

ಪರಮ ಸಾಧ್ವಿ ಎನಿಸಿದ ಅಹಲ್ಯೆ ಯಾರಿಗೆ ಗೊತ್ತಿಲ್ಲ ಹೇಳಿ? ಅವಳ ತಂದೆಯೇ ಮುದ್ಗಲ ಮಹರ್ಷಿಗಳು. ಅವರಿವರ ಹೊಲಗಳಲ್ಲಿ ಬಿದ್ದಿದ್ದ ಭತ್ತವನ್ನು ಆಯ್ದು ತಂದು ಕುಟ್ಟಿ ಆ ಅಕ್ಕಿಯನ್ನು ಬೇಯಿಸಿ ಹಸಿದವರ ಹೊಟ್ಟೆ ತುಂಬಿಸುವುದು ಅವರ ಕುಟುಂಬದ ನಿತ್ಯದ ಕಾಯಕವಾಗಿತ್ತು. ತಮ್ಮ ಹಸಿವನ್ನೂ ಲೆಕ್ಕಿಸದೆ ಸದಾ ಅತಿಥಿ ಸತ್ಕಾರದಲ್ಲಿ ತೊಡಗಿಸಿಕೊಂಡ ಅವರನ್ನು ಒಮ್ಮೆ ದೂರ್ವಾಸ ಮುನಿಗಳು ಸ್ವರ್ಗಕ್ಕೆ ಕರೆಸಿಕೊಳ್ಳಲು ಬಯಸಿದರು. ದೂರ್ವಾಸರ ಇಚ್ಛೆಯಂತೆ ಮುದ್ಗಲರನ್ನು ಸ್ವರ್ಗಕ್ಕೆ ಕರೆದುಕೊಂಡು ಹೋಗಲು ದಿವ್ಯಪುರುಷನೊಬ್ಬ ರಥವನ್ನು ತೆಗೆದುಕೊಂಡು ಬಂದ. ಮುದ್ಗಲರು ಅವನಿಗೆ ‘ಸ್ವರ್ಗವು ಹೇಗಿರುವುದು ಹೇಳುವೆಯಾ?’ ಎಂದು ಕೇಳಿದರು. ಆತ ಸ್ವರ್ಗವನ್ನು ಬಣ್ಣಿಸುತ್ತ- ‘ಸಕಲ ಭೋಗ ಭಾಗ್ಯಗಳೆಲ್ಲ ಸ್ವರ್ಗದಲ್ಲಿಯೇ ನೆಲಸಿವೆ. ಅಷ್ಟೈಶ್ವರ್ಯಗಳೂ, ಕಲ್ಪವಕ್ಷ, ಕಾಮಧೇನು, ಅಪ್ಸರೆಯರು ನೆಲೆಸಿರುವುದು ಸ್ವರ್ಗದಲ್ಲಿಯೇ. ಅಲ್ಲಿ ಶೋಕವಿಲ್ಲ, ರೋಗವಿಲ್ಲ. ಬೆವರಿನ ವಾಸನೆಯಿಲ್ಲ. ಇಲ್ಲಿಯ ಹಾಗೆ ನೀನು ಭತ್ತ ಹೆಕ್ಕಿ, ಕುಟ್ಟುವ ಕಾಯಕವೂ ಇಲ್ಲ. ತಡ ಮಾಡದೇ ಹೋಗೋಣ’ ಎಂದ. ಮುದ್ಗಲರು ಒಂದು ಕ್ಷಣ ದಿಗ್ಭಾ›ಂತರಾದರು. ‘ನನ್ನ ಭತ್ತ ಕುಟ್ಟುವ ಕಾಯಕಕ್ಕೆ ಅಲ್ಲಿ ಜಾಗವಿಲ್ಲವೇ? ಹಾಗಾದರೆ ಆ ಸ್ವರ್ಗ ನನಗೆ ಬೇಡ. ಅತಿಥಿಗಳನ್ನು ಸತ್ಕರಿಸುವಾಗ ನನಗೆ ಸಿಗುವ ತೃಪ್ತಿ ಅಲ್ಲಿ ಖಂಡಿತ ಸಿಗಲಾರದು. ನೀನಿನ್ನು ಹೋಗಿ ಬಾ’ ಎಂದು ಹೇಳಿ ಅವನನ್ನು ಕಳುಹಿಸಿದರು.
ಹೇಗಾದರೂ ಮಾಡಿ ಆರಾಮಾಗಿ ಇದ್ದುಬಿಡೋಣ ಅಂದುಕೊಳ್ಳುವವರು ಅನೇಕರು. ಹಣವೋ, ಅಧಿಕಾರವೋ ಇದ್ದರೆ ಕರ್ತವ್ಯ ನಿರ್ವಹಣೆಯಿಂದ ಪಾರಾಗಬಹುದೆಂದು ಲೆಕ್ಕ ಹಾಕುವವರಿದ್ದಾರೆ. ಆದರೆ ಕರ್ತವ್ಯ ಭ್ರಷ್ಟತೆಯೇ ಮನುಷ್ಯನನ್ನು ಮತ್ತೆ ಮತ್ತೆ ಸಂಕಷ್ಟದಲ್ಲಿ ಸಿಲುಕುವಂತೆ ಮಾಡುತ್ತದೆ ಎಂಬುದನ್ನು ತಿಳಿಯುವುದೇ ಇಲ್ಲ. ಭಗವದ್ಗೀತೆಯಲ್ಲಿ ಶ್ರೀಕಷ್ಣನು ‘ಕರ್ಮಣೈವ ಹಿ ಸಂಸಿದ್ಧಿಮಾಸ್ಥಿತಾ ಜನಕಾದಯಃ’ ಎಂಬುದಾಗಿ ಜ್ಞಾನ, ಭಕ್ರಿಗಳ ಜೊತೆಗೆ ಕರ್ಮವೂ ಕೂಡ ಗುರಿ ತಲುಪಲು ಇರುವ ಮಾರ್ಗವೆಂದಿದ್ದಾನೆ. ಕರ್ಮನಿಷ್ಠೆಗೆ ಉದಾಹರಣೆಯಾಗಿ ಕೃಷ್ಣನು ಉದಾಹರಿಸುವುದು ಜನಕರಾಜನ ಹೆಸರು. ರಾಜನಾದ ಕಾರಣಕ್ಕೆ ಜನಕನ ಬಳಿ ಹಣವಿತ್ತು. ಅಧಿಕಾರವೂ ಇತ್ತು. ಆದರೂ ಜ್ಞಾನವನ್ನು ಸಂಪಾದಿಸಿ, ತನ್ನ ಕರ್ತವ್ಯವನ್ನು ಸರಿಯಾಗಿ ನಿಭಾಯಿಸಿಯೇ ಆತ ಎತ್ತರದ ಸ್ಥಾನ ತಲುಪಿದನು ಎಂಬುದು ಗಮನಾರ್ಹ. ಅಂತೆಯೇ, ಸ್ವತಃ ಕೃಷ್ಣನು ದೇವಾಂಶ ಸಂಭೂತನಾದರೂ ಹೇಗೆ ತನ್ನ ಕರ್ತವ್ಯ ನಿರ್ವಹಿಸಿದ ಎಂಬುದನ್ನು ಮಹಾಭಾರತದ ಉದ್ದಗಲಕ್ಕೂ ಕಾಣುತ್ತೇವೆ. ಆದಿ ಶಂಕರಾಚಾರ್ಯರು ಸೀಮಿತ ಆಯಸ್ಸಿನಲ್ಲಿಯೇ ದೇಶವಿಡೀ ಕಾಲ್ನಡಿಗೆಯಲ್ಲಿಯೇ ಸಂಚರಿಸಿ ಸಂಕಲ್ಪವನ್ನು ಸಾಕಾರಗೊಳಿಸಿದರು. ಬಸವಣ್ಣ ‘ಕಾಯಕವೇ ಕೈಲಾಸ’ವೆಂದು ಸಾರಿ ಹೇಳಿ, ಕಾಯಕದ ಮೂಲಕವೇ ಜನರು ಸ್ವರ್ಗ ಕಾಣುವ ಹಾಗೆ ಮಾಡಿದರು. ರಾಷ್ಟ್ರಕವಿ ಕುವೆಂಪು ಕಾಯಕದ ಗುಟ್ಟನ್ನು ‘ಫಲವನು ಬಯಸದ ಸೇವೆಯೇ ಪೂಜೆಯು ಕರ್ಮವೆ ಇಹ ಪರ ಸಾಧನವು’ ಎಂದು ಬಣ್ಣಿಸಿದ್ದಾರೆ. ನಾವೆಲ್ಲರೂ ನಮ್ಮ ಮೇಲಿರುವ ಹೊಣೆಗಾರಿಕೆಯನ್ನು ನಿಸ್ವಾರ್ಥವಾಗಿ ನಿಭಾಯಿಸೋಣ. ಕರ್ಮವೇ ನರನನ್ನು ನಾರಾಯಣನನ್ನಾಗಿ ಮಾಡುತ್ತದೆ ಎಂಬುದನ್ನು ಮರೆಯದಿರೋಣ.
| ಡಾ. ಗಣಪತಿ ಆರ್. ಭಟ್
(ಲೇಖಕರು ಸಂಸ್ಕೃತ ಉಪನ್ಯಾಸಕರು ಹಾಗೂ ರೇಡಿಯೋ ನಿರೂಪಕರು