ಇದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಭಾರತ ಮೂಲದ ಫಲ

wood apple
Published on

ಅಪ್ಪಟ ಭಾರತೀಯ ಮೂಲದ ಫಲ ಬೇಲದ ಹಣ್ಣು. ಈ ಹಣ್ಣಿಗೆ ಕನ್ನಡದಲ್ಲಿ ಬೇಲ, ಬ್ಯಾಲ, ಬಳೂಲ, ಬೆಳವಲ ಮುಂತಾದ ಹೆಸರುಗಳಿವೆ. ಸಂಸ್ಕೃತದಲ್ಲಿ ದಂತಫಲ, ಗಂಧಫಲ, ಗೋಪಕರ್ಣ, ಗ್ರಂಥಿಫಲ, ಕಪಿಪ್ರಿಯ, ಕಪಿತ್ಥ, ಮನ್ಮಥ ಎಂಬ ಹೆಸರುಗಳಿವೆ. ಭಾರತದೇಶವನ್ನು ಬಿಟ್ಟರೆ ಶ್ರೀಲಂಕಾ, ಬಾಂಗ್ಲಾ, ಚೀನಾ ಹಾಗೂ ದಕ್ಷಿಣ ಏಷ್ಯದ ಕೆಲವು ದೇಶಗಳಲ್ಲಿಯೂ ಇದು ಕಂಡುಬರುತ್ತದೆ. ಮಧ್ಯಮ ಗಾತ್ರದಿಂದ ದೊಡ್ಡ ಗಾತ್ರದವರೆಗಿರವ ಇದರ ಹಣ್ಣುಗಳು ಗೋಲಾಕಾರದಲ್ಲಿರುತ್ತವೆ. ಹಣ್ಣಿನ ಮೇಲ್ಭಾಗ ಒರಟಾಗಿದ್ದು ಬೂದುಬಣ್ಣವನ್ನು ಹೊಂದಿದ್ದರೆ, ಕರಟದ ಭಾಗವು ಗಡುಸಾಗಿರುತ್ತದೆ. ಅದನ್ನು ಕತ್ತರಿಸಿದಲ್ಲಿ ವಿಶಿಷ್ಟ ವಾಸನೆಯ ಸಿಹಿ-ಹುಳಿ ಮಿಶ್ರಣದ ಮೃದು ತಿರುಳಿದ್ದು, ಅದರಲ್ಲಿ ಅನೇಕ ಸಣ್ಣ ಬೀಜಗಳಿರುತ್ತವೆ. ಹಣ್ಣು ನೋಡಲು ಬಿಲ್ವದ ಹಣ್ಣನ್ನು ಹೋಲುತ್ತದೆ.

ಬೇಲದಲ್ಲಿ ನಿರ್ದಿಷ್ಟ ತಳಿಗಳಿಲ್ಲವಾದರೂ ಸಣ್ಣ ಗಾತ್ರ ಮತ್ತು ದೊಡ್ಡ ಗಾತ್ರದ ಎರಡು ಬಗೆಗಳಿವೆ. ಮೊದಲ ಬಗೆಯು ಹುಳಿಯಿಂದ ಕೂಡಿದ್ದರೆ ಎರಡನೆಯದು ಸಿಹಿಯಾಗಿರುತ್ತದೆ. ಆಯುರ್ವೆದ ಗ್ರಂಥಗಳಾದ ಚರಕ ಮತ್ತು ಸುಶ್ರುತ ಸಂಹಿತೆಗಳಲ್ಲಿ ಈ ಹಣ್ಣಿನ ವೈದ್ಯಕೀಯ ಪ್ರಯೋಜನಗಳ ಬಗ್ಗೆ ವಿವರಿಸಲಾಗಿದೆ. ಬೇಲದ ಹಣ್ಣಿನಲ್ಲಿ ಸಾಕಷ್ಟು ಪ್ರಮಾಣದಲ್ಲಿ ಪ್ರೊಟೀನು, ಪಿಷ್ಟ, ನಾರಿನಂಶ, ಕ್ಯಾಲ್ಸಿಯಂ, ಕಬ್ಬಿಣ, ಸಿ ಹಾಗೂ ಬಿ ವಿಟಮಿನ್​ಗಳಿವೆ. ಇದನ್ನು ತಿನ್ನುವುದರಿಂದ ನಮ್ಮ ದೇಹಕ್ಕೆ ಬೇಕಾಗುವ ಉತ್ತಮ ಪೌಷ್ಟಿಕಾಂಶಗಳು ದೊರೆಯುತ್ತವೆ. ಇದರಲ್ಲಿರುವ ವಿಟಮಿನ್ ಸಿ ಉತ್ತಮವಾದ ರೋಗನಿರೋಧಕ ಶಕ್ತಿಯನ್ನು ಹೊಂದಿದೆ. ಮತ್ತು ವಿಟಮಿನ್ ಸಿ ಕೊರತೆಯಿಂದ ಬರುವ ಕಾಯಿಲೆಯನ್ನು ತಡೆಯಲು ಸಹಕಾರಿಯಾಗುತ್ತದೆ. ಮಧುಮೇಹಿಗಳಿಗೂ ಬೇಲ ಉತ್ತಮ ಹಣ್ಣು. ಯಾಕೆಂದರೆ ಇದು ಸಕ್ಕರೆ ಅಂಶವನ್ನು ಕಡಿಮೆ ಮಾಡುತ್ತದೆ. ಈ ಹಣ್ಣಿನಲ್ಲಿ ರಂಜಕದ ಅಂಶ ಇರುವುದರಿಂದ ಹಣ್ಣಿನ ಸೇವನೆಯು ಮಿದುಳು ಮತ್ತು ನರಗಳನ್ನು ಬಲಗೊಳಿಸಿ ಕಾರ್ಯಕ್ಷಮತೆಯನ್ನು ಹೆಚ್ಚಿಸಿ ಜ್ಞಾಪಕಶಕ್ತಿಯನ್ನು ವೃದ್ಧಿಸುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net