ಪ್ರತಿನಿತ್ಯ ಬೆಳಗ್ಗೆ ತಿಂಡಿ ತಿನ್ನದಿದ್ರೆ ಏನೆಲ್ಲ ಸಮಸ್ಯೆ? ಆಗುವ ಬದಲಾವಣೆಗಳೇನು? ಇಲ್ಲಿದೆ ಅಚ್ಚರಿ ಮಾಹಿತಿ | Breakfast

ವಿಜಯವಾಣಿ (39)
Published on

Breakfast: ನಮ್ಮ ದಿನ ಆರಂಭಗೊಳ್ಳುವುದೇ ಬೆಳಗ್ಗಿನ ಉಪಹಾರದಿಂದ. ಬಿಸಿ ಬಿಸಿ ಇಡ್ಲಿ, ಬಿಸಿಬೇಳೆ ಬಾತ್​, ಗರಿ ಗರಿಯಾದ ಮಸಾಲೆ ದೋಸೆ ಹೀಗೆ ಬಗೆಬಗೆಯ ತಿಂಡಿಗಳನ್ನು ಸವಿಯುವುದು ಹಲವರ ದಿನಚರಿ. ಬಹುತೇಕರಿಗೆ ಬೆಳಗ್ಗೆ ತಿಂಡಿ ತಿನ್ನದೆ ಹೋದರೆ ದಿನವೇ ಸರಿಯಾಗುವುದಿಲ್ಲ. ಹೀಗಾಗಿ ಮೊದಲ ಉಪಹಾರಕ್ಕೆ ಹೆಚ್ಚು ಆದ್ಯತೆ ನೀಡುತ್ತಾರೆ. ಆದರೆ, ಕೆಲವರು ಮಾತ್ರ ಬೆಳಗ್ಗಿನ ತಿಂಡಿಯನ್ನು ಬಿಟ್ಟು, ನೇರವಾಗಿ ಮಧ್ಯಾಹ್ನ ತಿನ್ನುವ ಅಭ್ಯಾಸವನ್ನು ರೂಢಿಸಿಕೊಂಡಿದ್ದಾರೆ. ಅಸಲಿಗೆ ಹೀಗೆ ಮಾಡುವುದರಿಂದ ದೇಹದಲ್ಲಿ ಏನೆಲ್ಲ ಸಮಸ್ಯೆಗಳು ಕಾಡುತ್ತೆ? ನಿಜಕ್ಕೂ ಅನಾರೋಗ್ಯ ತೊಂದರೆಗಳು ಕಾಡುತ್ತದೆಯೇ ಎಂಬ ಒಂದಷ್ಟು ಪ್ರಶ್ನೆಗಳಿಗೆ ಹೀಗಿದೆ ನೋಡಿ ಉತ್ತರ.

ಬೆಳಗಿನ ಉಪಾಹಾರವು ರಾತ್ರಿ 8ರಿಂದ 10 ಗಂಟೆಗಳ ನಿದ್ರೆಯ ನಂತರ ದೇಹಕ್ಕೆ ಅಗತ್ಯವಿರುವ ಶಕ್ತಿಯನ್ನು ಪುನಃ ನೀಡುತ್ತದೆ. ಅದಕ್ಕಾಗಿಯೇ ಇದು ನಮ್ಮ ದೈನಂದಿನ ಆರೋಗ್ಯದ ಮೇಲೆ ಭಾರಿ ಪರಿಣಾಮ ಬೀರುತ್ತದೆ. ಆದರೆ, ಇತ್ತೀಚಿನ ದಿನಗಳಲ್ಲಿ, ಅನೇಕ ಜನರು ತೂಕ ಇಳಿಸಿಕೊಳ್ಳಲು ಅಥವಾ ಇತರೆ ಕಾರಣದಿಂದ ಬೆಳಗ್ಗೆ ಹೊತ್ತು ತಿಂಡಿ ಮಾಡುವುದನ್ನೇ ಬಿಟ್ಟಿದ್ದಾರೆ. ಇದೊಂದು ಸಣ್ಣ ವಿಷಯವೆಂದು ಭಾವಿಸಿದರೆ ಅದು ಖಂಡಿತ ತಪ್ಪು! ಹೀಗೆ ಮಾಡುವುದರಿಂದ ಅನೇಕ ಆರೋಗ್ಯ ಸಮಸ್ಯೆಗಳು ಕಾಡಲಿದೆ.

ಏನೆಲ್ಲ ಸಮಸ್ಯೆ?

1. ಚಯಾಪಚಯ ಕ್ರಿಯೆ ಮಂದಗತಿ: ತಿಂಡಿ ಬಿಡುವುದರಿಂದ ದೇಹದಲ್ಲಿನ ಚಯಾಪಚಯ ಕ್ರಿಯೆ ನಿಧಾನವಾಗುತ್ತದೆ. ಇದು ದೇಹವು ತಿನ್ನುವ ಆಹಾರವನ್ನು ಜೀರ್ಣಿಸಿಕೊಳ್ಳುವ ಸಾಮರ್ಥ್ಯವನ್ನು ತಡೆಹಿಡಿಯುತ್ತದೆ. ಇದು ತೂಕ ಹೆಚ್ಚಾಗಲು ಸಹ ಕಾರಣವಾಗುತ್ತದೆ.

2. ತೂಕ ಹೆಚ್ಚಳ: ಅನೇಕರು ತೂಕ ಇಳಿಸಿಕೊಳ್ಳಲು ತಿಂಡಿ ಬಿಡುತ್ತಾರೆ. ಹೀಗೆ ಮಾಡುವುದರಿಂದ ಮಧ್ಯಾಹ್ನ ಅಥವಾ ರಾತ್ರಿಯಲ್ಲಿ ಅತಿಯಾಗಿ ತಿನ್ನುವ ಅಭ್ಯಾಸ ಉಂಟಾಗುತ್ತದೆ. ಇದರಿಂದ ಅನಗತ್ಯ ತೂಕ ಹೆಚ್ಚಾಗುವ ಸಾಧ್ಯತೆ ಹೆಚ್ಚು.

3. ನಿಶಕ್ತಿ: ಬೆಳಗ್ಗೆ ಎದ್ದ ಬಳಿಕ ದೇಹಕ್ಕೆ ಶಕ್ತಿಯ ಅಗತ್ಯವಿದೆ. ನೀವು ತಿಂಡಿ ತಿನ್ನುವುದನ್ನು ಬಿಟ್ಟುಬಿಟ್ಟರೆ, ದೇಹಕ್ಕೆ ಬೇಕಾದ ಅಗತ್ಯ ಶಕ್ತಿ ಸಿಗುವುದಿಲ್ಲ. ಇದು ಆಯಾಸ, ಕಿರಿಕಿರಿ ಮತ್ತು ನಿರುತ್ಸಾಹಕ್ಕೆ ಕಾರಣವಾಗುತ್ತದೆ. ವಿದ್ಯಾರ್ಥಿಗಳು ಮತ್ತು ಉದ್ಯೋಗಿಗಳಲ್ಲಿ ಮಾನಸಿಕ ಆರೋಗ್ಯವು ವಿಶೇಷವಾಗಿ ಪರಿಣಾಮ ಬೀರುತ್ತದೆ.

4. ರಕ್ತದಲ್ಲಿನ ಸಕ್ಕರೆ ಮಟ್ಟ: ಉಪಾಹಾರವನ್ನು ಬಿಡುವುದರಿಂದ ರಕ್ತದಲ್ಲಿನ ಗ್ಲೂಕೋಸ್ ಮಟ್ಟಗಳು ಕುಸಿಯುತ್ತವೆ. ಇದು ಆಯಾಸ, ತಲೆತಿರುಗುವಿಕೆ, ಒತ್ತಡ ಮತ್ತು ಕಿರಿಕಿರಿಯಂತಹ ಲಕ್ಷಣಗಳಿಗೆ ಕಾರಣವಾಗಬಹುದು. ದೀರ್ಘಕಾಲದ ಸಕ್ಕರೆ ಸಮಸ್ಯೆಗಳನ್ನು ಉಲ್ಬಣಿಸುವ ಸಾಧ್ಯತೆಗಳು ಹೆಚ್ಚು.

5. ದೀರ್ಘಕಾಲದ ಜೀರ್ಣಕಾರಿ ಸಮಸ್ಯೆ: ತಿಂಡಿ ಮಾಡುವುದನ್ನು ನಿಲ್ಲಿಸಿದರೆ, ಆಮ್ಲೀಯತೆ, ಗ್ಯಾಸ್​, ಆಯಾಸ ಮತ್ತು ಅಜೀರ್ಣದಂತಹ ಸಮಸ್ಯೆಗಳು ಉಂಟಾಗುತ್ತವೆ. ಕರುಳುಗಳು ಖಾಲಿಯಾಗಿರುವುದರಿಂದ, ಹೆಚ್ಚು ಆಮ್ಲ ಉತ್ಪತ್ತಿಯಾಗುತ್ತದೆ. ದೀರ್ಘಾವಧಿಯಲ್ಲಿ, ಗ್ಯಾಸ್ಟ್ರಿಕ್ ಮತ್ತು ಹುಣ್ಣು ಸಮಸ್ಯೆಗಳು ಉಂಟಾಗಬಹುದು.

6. ದುರ್ಬಲಗೊಂಡ ರೋಗನಿರೋಧಕ ವ್ಯವಸ್ಥೆ: ಉಪಾಹಾರವು ದೇಹಕ್ಕೆ ಜೀವಸತ್ವಗಳು ಮತ್ತು ಖನಿಜಗಳನ್ನು ಒದಗಿಸುತ್ತದೆ ಮತ್ತು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಹೀಗಾಗಿ, ತಿಂಡಿ ಬಿಡುವುದರಿಂದ ರೋಗನಿರೋಧಕ ಶಕ್ತಿಯನ್ನು ದುರ್ಬಲಗೊಳಿಸಬಹುದು ಮತ್ತು ವೈರಲ್ ಹಾಗೂ ಇತರ ಆರೋಗ್ಯ ಸಮಸ್ಯೆಗಳು ಹೆಚ್ಚಾಗಬಹುದು.

ಬೆಳಗ್ಗಿನ ತಿಂಡಿ ಮುಖ್ಯವೇ!

  • ಪೌಷ್ಠಿಕ ಆಹಾರಗಳು: ಇಡ್ಲಿ, ದೋಸೆ, ಉಪ್ಮಾ, ಪೊಂಗಲ್, ಅವಲಕ್ಕಿ
  • ಪ್ರೋಟೀನ್‌: ಕೋಳಿ, ಮೊಟ್ಟೆ, ಹಾಲು
  • ನಾರಿನಾಂಶ: ಹಣ್ಣುಗಳು, ಗೋಧಿ ಬ್ರೆಡ್‌

ಬೆಳಗ್ಗಿನ ತಿಂಡಿಯನ್ನು ಬಿಟ್ಟು ನೇರವಾಗಿ ಮಧ್ಯಾಹ್ನ ತಿನ್ನುವ ಅಭ್ಯಾಸವನ್ನು ರೂಢಿಸಿಕೊಂಡಿದ್ದರೆ, ಅದನ್ನು ಬದಲಾಯಿಸಿಕೊಳ್ಳಿ. ನಿಮ್ಮ ದಿನವನ್ನು ಉತ್ತಮ ರೀತಿಯಲ್ಲಿ ಪ್ರಾರಂಭಿಸಲು, ಬೆಳಗ್ಗೆ ಸರಿಯಾದ ಸಮಯದಲ್ಲಿ ಆಹಾರವನ್ನು ಸೇವಿಸುವುದು ಮುಖ್ಯ. ನೀವು ಎಷ್ಟೇ ಬಿಜಿಯಾಗಿದ್ದಾರೂ, ತಿಂಡಿ ತಿನ್ನಲು ಒಂದಷ್ಟು ಸಮಯವನ್ನು ಮೀಸಲಿಡುವುದು ನಿಮ್ಮ ಆರೋಗ್ಯಕ್ಕೆ ಉತ್ತಮ,(ಏಜೆನ್ಸೀಸ್). ವಿಶೇಷ ಸೂಚನೆ: ಲೇಖನದಲ್ಲಿ ಉಲ್ಲೇಖಿಸಲಾದ ಸಲಹೆಗಳು ಸಾಮಾನ್ಯ ಮಾಹಿತಿ ಉದ್ದೇಶಗಳಿಗಾಗಿ ಮಾತ್ರ. ನೀವು ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ, ಯಾವಾಗಲೂ ನಿಮ್ಮ ವೈದ್ಯರನ್ನು ಸಂಪರ್ಕಿಸಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net