ದಂತಚಿಕಿತ್ಸೆಯನ್ನು ಏಕೆ ಮುಂದೂಡಬಾರದು?

Dental
Published on

ದಂತವೈದ್ಯರನ್ನು ಭೇಟಿ ಮಾಡುವುದೆಂದರೆ ಹಲವರಿಗೆ ಕಷ್ಟಸಾಧ್ಯ. ಇದಕ್ಕೆ ಅವರದೇ ಕಾರಣಗಳನ್ನು ಹುಡುಕಿಕೊಂಡು ವೈದ್ಯರೊಂದಿಗಿನ ಭೇಟಿಯನ್ನು ಮುಂದೂಡುತ್ತಿರುತ್ತಾರೆ. ಆದರೆ ಇದರಿಂದ ಹೆಚ್ಚು ಹಾನಿಯೇ ಹೊರತು ಯಾವುದೇ ರೀತಿಯ ಅನುಕೂಲವಾಗುವುದಿಲ್ಲ.

ಹಲ್ಲಿನ ತೊಂದರೆ ಅಥವಾ ಕಾಯಿಲೆಯು ನಿರಂತರವಾಗಿ ಬೆಳವಣಿಗೆ ಹೊಂದುತ್ತಿರುತ್ತದೆ ಮತ್ತು ಯಾವುದೇ ಹಂತದಲ್ಲೂ ಅದಕ್ಕೆ ಚಿಕಿತ್ಸೆಯನ್ನು ನೀಡದೆ ಬದಲಾಯಿಸಲಾಗುವುದಿಲ್ಲ. ಹಲ್ಲುನೋವು ಬರುವ ತನಕ ಕಾಯದೆ

ಆರಂಭಿಕ ಹಂತದಲ್ಲೇ ಚಿಕಿತ್ಸೆಯನ್ನು ಪಡೆದುಕೊಳ್ಳುವುದು ಉತ್ತಮ. ಇದರಿಂದ ಚಿಕಿತ್ಸೆಯು ವೇದನಾರಹಿತವಾಗಿರುತ್ತದೆ. ಅಲ್ಲದೆ ಸಮಯ ಹಾಗೂ ಹಣದ ಉಳಿತಾಯವೂ ಆಗುತ್ತದೆ. ಹಲ್ಲು ಹುಳುಕಾದಲ್ಲಿ ಅದನ್ನು ಆರಂಭಿಕ ಹಂತದಲ್ಲೇ ವೈದ್ಯರಲ್ಲಿ ತೋರಿಸಿದರೆ ಸರಳವಾದ ಫಿಲಿಂಗ್​ನಿಂದ ಅದರ ಚಿಕಿತ್ಸೆ ಸಾಧ್ಯ. ಅದನ್ನು ಮುಂದೂಡಿದರೆ ಮುಂದಿನ ಹಂತದ ಚಿಕಿತ್ಸೆಯಾಗಿ ರೂಟ್ ಕೆನಾಲ್ ಚಿಕಿತ್ಸೆ ಮಾಡಬೇಕಾಗುತ್ತದೆ. ಇನ್ನೂ ಕೆಲವರು ರೂಟ್ ಕೆನಾಲ್ ಚಿಕಿತ್ಸೆಯನ್ನು ಮಾಡಿಸಲು ಭಯಪಟ್ಟು ಅಥವಾ ಇನ್ಯಾವುದೋ ಕಾರಣದಿಂದ ಚಿಕಿತ್ಸೆಯನ್ನು ಮುಂದೂಡಿದಾಗ ಹುಳುಕು ನಿರಂತರ ಬೆಳವಣಿಗೆ ಹೊಂದಿ ಹಲ್ಲುಗಳನ್ನು ಉಳಿಸಲು ಸಾಧ್ಯವಾಗದೆ ತೆಗೆಯಬೇಕಾಗಬಹುದು. ಇದರಿಂದಾಗಿ ಇಂಪ್ಲಾಂಟ್ ಅಥವಾ ಬ್ರಿಡ್ಜ್ ಕೂಡ ಮಾಡಿಸಬೇಕಾಗುತ್ತದೆ ಈ ಎಲ್ಲ ಚಿಕಿತ್ಸೆಯ ವೆಚ್ಚ ಕೂಡ ಹೆಚ್ಚಾಗುತ್ತದೆ.

ಕೆಲವು ಸಲ ವಸಡಿನಿಂದ ರಕ್ತಸ್ರಾವವಾಗುತ್ತಿದ್ದು ಅದನ್ನು ಕಡೆಗಣಿಸಿ ಚಿಕಿತ್ಸೆಯನ್ನು ಮುಂದೂಡುತ್ತಿರುತ್ತಾರೆ. ಇದರಿಂದ ಒಸಡಿನ ಕಾಯಿಲೆ ಮುಂದುವರಿದು ಹಲ್ಲುಗಳು ಸಡಿಲಗೊಳ್ಳುವ ಸಾಧ್ಯತೆ ಹೆಚ್ಚಿರುತ್ತದೆ. ಆದ್ದರಿಂದ ಪ್ರತಿ ಆರು ತಿಂಗಳಿಗೊಮ್ಮೆ ದಂತವೈದ್ಯರ ಬಳಿ oral prophylaxis (ಹಲ್ಲುಗಳನ್ನು ಶುಚಿಗೊಳಿಸುವುದು) ಮಾಡಿಸಿಕೊಳ್ಳುವುದು ಉತ್ತಮ.

ಕೆಲವರು ಬಾಯಿಯ ದುರ್ವಾಸನೆಯಿಂದ ಮುಜುಗರಕ್ಕೆ ಒಳಗಾಗುತ್ತಿದ್ದರೂ ದಂತವೈದ್ಯರನ್ನು ಭೇಟಿ ಮಾಡಲು ಹಿಂಜರಿಯುತ್ತಿರುತ್ತಾರೆ. ಇದು ಹಲ್ಲುಹುಳುಕು, ನಾಲಗೆ ಮೇಲಿನ ಲೇಪನ, ವಸಡಿನ ಕಾಯಿಲೆ ಅಥವಾ ಹಲ್ಲಿನ ಕೀವಿನಿಂದಾಗಿಯೂ ಇರಬಹುದು. ಯಾವುದೇ ಹಂತದಲ್ಲಿ ಚಿಕಿತ್ಸೆ ಪಡೆಯಬಹುದಾದರೂ ಆರಂಭಿಕ ಹಂತದಲ್ಲಿ ಚಿಕಿತ್ಸೆ ತೆಗೆದುಕೊಳ್ಳುವುದರಿಂದ ಚಿಕಿತ್ಸೆಯು ಸರಳ ಹಾಗೂ ವೇದನಾರಹಿತವಾಗಿರುತ್ತದೆ. ಕೆಲವರು ಯಾವುದೋ ಕಾರಣಕ್ಕಾಗಿ ಹಲ್ಲುಗಳನ್ನು ತೆಗೆಸಿ ಅದನ್ನು ಮತ್ತೆ ಕಟ್ಟಿಸದೆ ಹಾಗೆಯೇ ಬಿಟ್ಟಿರುತ್ತಾರೆ. ಇದರಿಂದ ಆರಂಭಿಕ ಹಂತದಲ್ಲಿ ಯಾವುದೇ ರೀತಿಯ ತೊಂದರೆಯಾಗದಿದ್ದರೂ ಕ್ರಮೇಣ ಅಕ್ಕಪಕ್ಕದ ಹಲ್ಲುಗಳು ಆ ಜಾಗದತ್ತ ಜರುಗುತ್ತವೆ. ಇದರಿಂದ ಮೂಳೆಗಳು ಸವೆಯುತ್ತವೆ.

ಇನ್ನು ಮಕ್ಕಳಲ್ಲಿ - ಹೇಗಿದ್ದರೂ ಹಾಲುಹಲ್ಲುಗಳು ಬಿದ್ದು ಹೊಸ ಹಲ್ಲುಗಳು ಬರುತ್ತವೆ ಎಂದು ನಿರ್ಲಕ್ಷಿಸಿ ಚಿಕಿತ್ಸೆಯನ್ನು ಮಾಡಿಸದೆ ಇರುವುದುಂಟು. ಆದರೆ ಇದು ಶಾಶ್ವತ ಹಲ್ಲುಗಳ ಮೇಲೆ ದುಷ್ಪರಿಣಾಮವನ್ನು ಉಂಟುಮಾಡುತ್ತದೆ ಮತ್ತು ಅವಧಿಗೂ ಮುನ್ನ ಹಾಲುಹಲ್ಲುಗಳನ್ನು ಕಳೆದುಕೊಂಡರೆ ವಕ್ರದಂತ ಸಮಸ್ಯೆ ಉಂಟಾಗಬಹುದು.

ದಂತವೈದ್ಯರು ಹಾಳಾದ ಹಲ್ಲುಗಳಿಗೆ ಚಿಕಿತ್ಸೆ ನೀಡುವುದಲ್ಲದೆ ಹಲ್ಲುಗಳನ್ನು ಸ್ವಚ್ಛಗೊಳಿಸುವುದರ ಮೂಲಕ ನಿಮ್ಮ ಹಲ್ಲುಗಳು ಮತ್ತು ವಸಡು ಆರೋಗ್ಯವಾಗಿರುವಂತೆ ನೋಡಿಕೊಳ್ಳುತ್ತಾರೆ. ಇದರೊಂದಿಗೆ ಯಾವುದೇ ರೀತಿಯ ಅಸಹಜತೆ ಕಂಡುಬಂದಲ್ಲಿ ಮುಂದೆ ಉಂಟಾಗಬಹುದಾದ ದೊಡ್ಡ ಸಮಸ್ಯೆಯನ್ನು ತಪ್ಪಿಸಲು ಸಾಧ್ಯವಾಗುತ್ತದೆ. ಆದ್ದರಿಂದ ಯಾವುದೇ ರೀತಿಯ ದಂತಚಿಕಿತ್ಸೆಯನ್ನು ಮುಂದೂಡದೆ ತಕ್ಷಣ ಚಿಕಿತ್ಸೆಯನ್ನು ತೆಗೆದುಕೊಳ್ಳುವುದು ಸೂಕ್ತ. ಜತೆಗೆ ಪ್ರತಿ ಆರು ತಿಂಗಳಿಗೊಮ್ಮೆ ನಿಯಮಿತವಾಗಿ ವೈದ್ಯರ ಬಳಿ ತಪಾಸಣೆ ಮಾಡಿಸಿಕೊಳ್ಳುವುದರಿಂದ ಮೌಖಿಕ ಮತ್ತು ದೇಹದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.

ಪ್ರಶ್ನೋತ್ತರ

ಮೂರು ವರ್ಷಗಳಿಂದ ರಾತ್ರಿ 2-3 ಸಲ ನೀರು ಕುಡಿದರೂ ನಾಲಿಗೆ ಒಣಗುತ್ತಿದೆ. ಆಗಾಗ ಮೂತ್ರವಿಸರ್ಜನೆಗೂ ಹೋಗಬೇಕಾಗುತ್ತದೆ. ಇಲ್ಲದಿದ್ದರೆ ತಲೆನೋವು ಬರುತ್ತದೆ. ಈ ಸಮಸ್ಯೆಗೆ ಪರಿಹಾರ ಸೂಚಿಸಿ.

| ಕೆ.ಎಂ. ಪ್ರಕಾಶ್ ಹೊಸಪೇಟೆ

ನೀವು ನಿದ್ರೆ ಮಾಡುವಾಗ ನಿಮಗರಿವಿಲ್ಲದೆಯೇ ಬಾಯಿಯಿಂದ ಉಸಿರಾಡುತ್ತಿರಬಹುದು. ಇದನ್ನು ಗಮನಿಸಿ ಹಾಗೂ ತಜ್ಞ ವೈದ್ಯರನ್ನು ಭೇಟಿ ಮಾಡಿ ಸೂಕ್ತ ಸಲಹೆ ಪಡೆಯುವುದು ಉತ್ತಮ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net