ಇಂದು ವಿಶ್ವ ಹೃದಯ ದಿನ; ಹೆಲ್ದಿ ಹಾರ್ಟ್​ಗೆ ಬೇಕು ಹೆಲ್ದಿ ಫುಡ್​, ಲೈಫ್​ಸ್ಟೈಲ್​

Heart Healthy Food
Published on

ಜಯದೇವ ಹೃದ್ರೋಗ ಸಂಸ್ಥೆ ನಿರ್ದೇಶಕ ಡಾ. ಬಿ. ದಿನೇಶ್ ಪ್ರಸ್ತುತ ಕಾಲಘಟ್ಟದಲ್ಲಿ ಬಾಲ್ಯಾವಸ್ಥೆಯಿಂದಲೇ ಒತ್ತಡದ ಜೀವನ ಆರಂಭವಾಗುತ್ತದೆ. ಹಾಗಾಗಿ ಶಾಲಾ ಮಕ್ಕಳಲ್ಲೂ ಹೃದಯ ಸಮಸ್ಯೆಯ ಪ್ರಕರಣಗಳು ಹೆಚ್ಚು ಹೆಚ್ಚು ವರದಿಯಾಗುತ್ತಿವೆ. ಆನುವಂಶಿಕತೆ ಒಂದು ಕಾರಣವಾದರೆ, ಹೃದಯದಲ್ಲಿ ರಂಧ್ರ, ಹೃದಯ ಬಡಿತದಲ್ಲಿ ಏರುಪೇರು ಇತ್ಯಾದಿ ಕಾರಣಗಳು ಇರುತ್ತವೆ. ಇವಲ್ಲದೆ ಶಾಲೆಗೆ ಸೇರುತ್ತಲೇ ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಮಕ್ಕಳು ಪ್ರತಿಯೊಂದರಲ್ಲೂ ಸ್ಪರ್ಧೆಗೆ ಇಳಿಯಬೇಕಾಗುತ್ತದೆ. ಜತೆಗೆ ಜಂಕ್ ಫುಡ್ ಸೇವನೆಯೂ ಸಾಮಾನ್ಯವಾಗಿದೆ. ಇವು ಮಕ್ಕಳಲ್ಲಿ ಅತಿಯಾದ ಒತ್ತಡ ಹಾಗೂ ಬೊಜ್ಜಿಗೆ ಕಾರಣವಾಗಿ ಹೃದಯದ ಸಮಸ್ಯೆಗಳು ಹೆಚ್ಚುತ್ತಿವೆ. ಹಾಗಾಗಿ ಪಾಲಕರು ತಮ್ಮ ಮಕ್ಕಳ ಓದಿನ ಬಗೆಗೆ ಮಾತ್ರವಲ್ಲದೇ ಆರೋಗ್ಯದ ಬಗ್ಗೆಯೂ ಕಾಳಜಿ ವಹಿಸಬೇಕಿದೆ. ಕಳೆದ ಕೆಲವು ವರ್ಷಗಳಿಂದ ಸರಿಸುಮಾರು 30-40 ವಯಸ್ಸಿನ ಯುವ ಜನತೆಯಲ್ಲಿ ಹೃದಯಾಘಾತ ಪ್ರಮಾಣ ಏರಿಕೆಯಾಗಿದೆ. ಮೊದಲೆಲ್ಲಾ 50-60ರ ವಯೋಮಾನದವರಲ್ಲಿ ಹೃದಯಾಘಾತ ಪ್ರಕರಣಗಳು ಹೆಚ್ಚಾಗಿರುತ್ತಿದ್ದವು. ಆದರೀಗ ಚಿಕ್ಕ ವಯಸ್ಸಿನವರಲ್ಲಿ ಹೃದಯಾಘಾತ ಪ್ರಕರಣಗಳು ವರದಿಯಾಗುತ್ತಿವೆ. 30-40 ವರ್ಷ ವಯಸ್ಸಿನಲ್ಲಿ ಸಾಮಾನ್ಯವಾಗಿ ಜೀವನದ ಬಗ್ಗೆ ಹೊಸ ಗುರಿ ಇರಿಸಿಕೊಂಡು ದುಡಿಯುವ ಕಾಲ. ಕೆಲವರು ದಿನದ 10-12 ತಾಸು ಕಂಪ್ಯೂಟರ್ ಮುಂದೆ ಕುಳಿತು ಕೆಲಸ ಮಾಡುತ್ತಾರೆ. ಹೀಗೆ ಮಾಡುವುದು 8-10 ಸಿಗರೇಟ್ ಸೇದಿದ್ದಕ್ಕೆ ಸಮ. ಈ ಎಲ್ಲ ಕಾರಣಗಳಿಂದ ಯುವಜನರಲ್ಲಿ ಹೃದಯಾಘಾತ ಪ್ರಕರಣಗಳು ಹೆಚ್ಚು ಸಂಭವಿಸುತ್ತಿವೆ.

ಇತ್ತೀಚಿನ ವರ್ಷಗಳಲ್ಲಿ ಯಾವುದೇ ವಯೋಭೇದವಿಲ್ಲದೆ ಕಿರಿಯರಿಂದ ವೃದ್ಧರವರೆಗೂ ಹೃದ್ರೋಗಿಗಳ ಸಂಖ್ಯೆ ಏರುತ್ತಿದ್ದು, ಇದಕ್ಕೆ ಕಾರಣಗಳು ಹಲವು. ಅದರಲ್ಲೂ ಹೃದಯಾಘಾತದಿಂದ ಯುವಜನರು ಸಾವಿಗೀಡಾಗುತ್ತಿರುವುದು ಆಘಾತಕಾರಿ ವಿಚಾರ. ಈ ಕುರಿತು ‘ವಿಜಯವಾಣಿ’ ನಡೆಸಿದ ಸಂವಾದದಲ್ಲಿ ಜಯದೇವ ಹೃದ್ರೋಗ ಸಂಸ್ಥೆಯ ನಿರ್ದೇಶಕ ಡಾ. ಬಿ. ದಿನೇಶ್ ಪಾಲ್ಗೊಂಡು, ಹೃದಯ ಸಮಸ್ಯೆಗಳಿಗೆ ಕಾರಣಗಳು, ಚಿಕಿತ್ಸೆ ಮತ್ತು ಪರಿಹಾರಗಳ ಬಗ್ಗೆ ವಿಸõತವಾಗಿ ವಿವರಿಸಿದ್ದಾರೆ. ಆ ಉಪಯುಕ್ತ ಮಾಹಿತಿಯನ್ನು ಅವರದೇ ಮಾತುಗಳಲ್ಲಿ ಕೇಳೋಣ ಬನ್ನಿ.

ಮನೆ ಆಹಾರವೇ ಪರಿಹಾರ

ಬದಲಾದ ಜೀವನಶೈಲಿ ಮತ್ತು ಆಹಾರ ಪದ್ಧತಿ ಹೃದಯ ಸಂಬಂಧಿ ಕಾಯಿಲೆಗಳಿಗೆ ಪ್ರಮುಖ ಕಾರಣವಾಗುತ್ತಿವೆ. ನಮ್ಮ ಹಿರಿಯರು ಬಹುಪಾಲು ಮನೆಯ ಆಹಾರವನ್ನಷ್ಟೇ ಸೇವಿಸುತ್ತಿದ್ದರು. ಇದರಿಂದ ಅವರು ಆರೋಗ್ಯವಂತರಾಗಿ ಇರುತ್ತಿದ್ದರು. ಆದರೀಗ ಹೋಟೆಲ್ ಮತ್ತು ಹೊರಗಿನ ಆಹಾರವನ್ನು ಹೆಚ್ಚಾಗಿ ಸೇವಿಸುತ್ತಿರುವುದರಿಂದ ಸಮಸ್ಯೆಯಾಗುತ್ತಿದೆ. ಸಾಮಾನ್ಯವಾಗಿ ಸಸ್ಯಾಹಾರಿಗಳು ತಮಗೆ ಹೆಚ್ಚಿನ ಅಪಾಯವಿಲ್ಲ ಎಂಬ ತಪು್ಪ ಕಲ್ಪನೆಯಲ್ಲಿರುತ್ತಾರೆ. ಸಸ್ಯಾಹಾರಿಗಳು ಕೂಡ ಎಚ್ಚರ ವಹಿಸಬೇಕು. ಒಂದು ಉದ್ದಿನ ವಡೆಯಲ್ಲಿ 4 ಚಮಚ ಎಣ್ಣೆ ಇರುತ್ತದೆ! ಒಂದು ಸಾಫ್ಟ್ ಡ್ರಿಂಕ್​ನಲ್ಲಿ 7 ಚಮಚ ಸಕ್ಕರೆ ಇರುತ್ತದೆ. ಇಂಥವುಗಳನ್ನು ಹೆಚ್ಚು ಸೇವಿಸಬಾರದು. ಒಂದು ಅಧ್ಯಯನದ ಪ್ರಕಾರ ದಿನಕ್ಕೆ 2 ಅಥವಾ 3 ಬಾರಿ ಕಾಫಿ ಕುಡಿಯುವುದು ಹೃದಯದ ಆರೋಗ್ಯಕ್ಕೆ ಪೂರಕ.

ವಂಶವಾಹಿಯೂ ಕಾರಣ

ಹೆಚ್ಚಿನ ಹೃದಯಾಘಾತ ಪ್ರಕರಣಗಳಲ್ಲಿ ಕುಟುಂಬದಲ್ಲಿ ಹಿನ್ನೆಲೆ ಕಾರಣವಾಗಿರುತ್ತದೆ. ತಂದೆ-ತಾಯಿ ಅಥವಾ ಇತರ ರಕ್ತಸಂಬಂಧಿಗಳಲ್ಲಿ ಯಾರಿಗಾದರೂ ಒಬ್ಬರಿಗೆ ಹೃದಯಾಘಾತ ಆಗಿರುತ್ತದೆ. ಅಂತಹವರ ಜೀವನಶೈಲಿ ಕ್ರಮಬದ್ಧವಾಗಿರದಿದ್ದರೆ ಹೃದಯಾಘಾತ ತಪ್ಪಿದ್ದಲ್ಲ. ಹಾಗಾಗಿ ಹೃದಯಾಘಾತ ಕುರಿತಂತೆ ಕೌಟುಂಬಿಕ ಹಿನ್ನೆಲೆ ಹೊಂದಿದ್ದಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಹೃದಯ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವುದು ಉತ್ತಮ. ಉಳಿದಂತೆ ಆಹಾರ ಕ್ರಮ ಹಾಗೂ ಜೀವನ ಶೈಲಿಯಿಂದ ಉಂಟಾಗಲಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಹೃದಯ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವುದು ಸೂಕ್ತ.

ರಿಫೈನ್ಡ್ ಆಯಿಲ್​ನಿಂದ ಸಮಸ್ಯೆ

ಹಿಂದಿನ ಕಾಲದಲ್ಲಿ ಕೇವಲ ಗಾಣದ ಎಣ್ಣೆಯನ್ನು ಮಾತ್ರ ಉಪಯೋಗಿಸುತ್ತಿದ್ದರು. ಕಳೆದ ಕೆಲವು ದಶಕದಿಂದ ಈಚೆಗೆ ರಿಫೈನ್ಡ್ ಆಯಿಲ್ ಬಳಕೆಗೆ ಬಂತು. ಆನಂತರ ರೋಗಗಳು ಹೆಚ್ಚಾದವು. ವಿಶೇಷವಾಗಿ ಹೃದಯ ಸಂಬಂಧಿ ಕಾಯಿಲೆಗಳಿಗೆ ಅತಿಯಾದ ಎಣ್ಣೆ ಬಳಕೆ ಪ್ರಮುಖ ಕಾರಣವಾಗಿದೆ. ಕೇರಳದಲ್ಲಿ ಕೊಬ್ಬರಿ ಎಣ್ಣೆಯನ್ನು ಹಾಗೂ ಕರ್ನಾಟಕದಲ್ಲಿ ಹೆಚ್ಚಾಗಿ ಶೇಂಗಾ ಎಣ್ಣೆಯನ್ನು ಬಳಸುತ್ತಿದ್ದರು. ಈಗಲೂ ಮಿತವಾಗಿ ಶುದ್ಧವಾದ ಶೇಂಗಾ ಎಣ್ಣೆ, ಕೊಬ್ಬರಿ ಎಣ್ಣೆ ಬಳಸುವುದು ಒಳಿತು. ಎಣ್ಣೆ ಪದಾರ್ಥಗಳನ್ನು ಆದಷ್ಟು ಕಡಿಮೆ ಸೇವಿಸುವುದನ್ನು ರೂಢಿಸಿಕೊಳ್ಳಬೇಕು.

ತೂಕ ಇಳಿಕೆ ಹೆಸರಲ್ಲಿ ದಂಧೆ

ಇತ್ತೀಚೆಗೆ ತೂಕ ಇಳಿಕೆ ಹೆಸರಲ್ಲಿ ಮಾರುಕಟ್ಟೆಗಳಲ್ಲಿ ಒಂದು ರೀತಿಯ ದಂಧೆ ನಡೆಯುತ್ತಿದೆ. ಸರ್ಕಾರದ ಅಧಿಕೃತ ವೈದ್ಯಕೀಯ ಪ್ರಮಾಣೀಕೃತ ಪ್ರಕ್ರಿಯೆ ಇಲ್ಲದೆಯೇ ಹಲವು ಕಂಪನಿಗಳು ಸ್ವಯಂ ಪ್ರಚಾರದ ಮೂಲಕ ಜನರನ್ನು ಮರುಳು ಮಾಡುತ್ತಿವೆ. ತೂಕ ಇಳಿಕೆ ಮತ್ತು ಏರಿಕೆಗಾಗಿ ವಿವಿಧ ಪ್ರೊಟೀನ್ ಪೌಡರ್, ಲಿಕ್ವಿಡ್​ಗಳನ್ನು ಸೇವಿಸುವುದು ಅಡ್ಡಪರಿಣಾಮಕ್ಕೆ ಕಾರಣವಾಗುತ್ತವೆ. ರಿವರ್ಸ್ ಡಯಾಬಿಟೀಸ್ ಎಂಬುದನ್ನೂ ನಂಬಬೇಡಿ. ಮಧುಮೇಹ, ರಕ್ತದೊತ್ತಡ ಮುಂತಾದವು ಒಮ್ಮೆ ಮನುಷ್ಯನಲ್ಲಿ ಕಾಣಿಸಿಕೊಂಡರೆ ಜೀವನಪರ್ಯಂತ ಇರುತ್ತವೆ. ಸೂಕ್ತ ಔಷಧ ಸೇವನೆಯ ಮೂಲಕ ಅವುಗಳನ್ನು ನಿರ್ವಹಿಸಿ, ನಿಯಂತ್ರಿಸಿ ಆರೋಗ್ಯವಂತ ವ್ಯಕ್ತಿಯಂತೆ ದೀರ್ಘ ಕಾಲ ಬದುಕಲು ಸಾಧ್ಯ.

ದಿಕ್ಕು ತಪ್ಪಿಸುತ್ತಿರುವ ಜಾಲತಾಣಗಳು

ಸಾಮಾಜಿಕ ಜಾಲತಾಣಗಳ ಅಬ್ಬರ ಹೆಚ್ಚಾದ ಮೇಲೆ ಆರೋಗ್ಯ ಕ್ಷೇತ್ರದ ಕುರಿತು ಹಲವು ತಪು್ಪ ಮಾಹಿತಿಗಳು ವೈರಲ್ ಆಗುತ್ತಿರುತ್ತವೆ. ಇವುಗಳ ಮೇಲೆ ಯಾರದೇ ನಿಯಂತ್ರಣ ಮತ್ತು ನಿರ್ಬಂಧ ಇಲ್ಲದಿರುವುದರಿಂದ, ವಿಷಯ ಜ್ಞಾನ ಇಲ್ಲದ ಯಾರ್ಯಾರೋ ಅನಾಮಧೇಯರು ಮನಸ್ಸಿಗೆ ಬಂದಂತೆ ಹೆಲ್ತ್ ಟಿಪ್ಸ್ ಕೊಡುತ್ತಿದ್ದಾರೆ. ಇದರಿಂದ ಜನರಿಗೆ ತಪು್ಪ ಮಾಹಿತಿ ಹೋಗಿ ಕೆಲವು ಸಮಸ್ಯೆಗಳನ್ನೂ ಅನುಭವಿಸುತ್ತಿದ್ದಾರೆ. ಕೇವಲ ವಿಡಿಯೋ ತುಣುಕುಗಳನ್ನು ನೋಡಿ, ಪ್ರಯೋಗ ಮಾಡಬಾರದು. ಸಂಬಂಧಪಟ್ಟ ಅಧಿಕೃತ ತಜ್ಞರನ್ನೇ ಸಂರ್ಪಸಬೇಕು.

ಆಲಸ್ಯತನದ ಪರಿಣಾಮ

ಯುವಜನರಲ್ಲಿ ಆಲಸ್ಯತನ ಹೆಚ್ಚುತ್ತಿದ್ದು, ಜೀವನಶೈಲಿ, ಆಹಾರ ಕ್ರಮದಲ್ಲಿ ಬದಲಾವಣೆ, ಧೂಮಪಾನ, ಮದ್ಯಪಾನ, ಉದ್ದೀಪನ ಮದ್ದುಗಳ ಸೇವನೆ, ಚಟುವಟಿಕೆ ರಹಿತ ಜೀವನ ವಿಧಾನಗಳಿಂದ ಇತ್ತೀಚಿನ ವರ್ಷಗಳಲ್ಲಿ ಯುವಜನರಲ್ಲಿ ಹೃದಯಾಘಾತ ಪ್ರಕರಣಗಳು ಹೆಚ್ಚು ವರದಿಯಾಗುತ್ತಿವೆ. ಇದರ ಜತೆಗೆ ಉದ್ಯೋಗದಲ್ಲಿ ಒತ್ತಡ, ಸಮಯಕ್ಕೆ ಸರಿಯಾಗಿ ಆಹಾರ ಸೇವನೆ ಹಾಗೂ ನಿದ್ರೆ ಮಾಡದಿರುವುದು, ಅಧಿಕ ರಕ್ತದೊತ್ತಡ, ಬೊಜ್ಜು ಹಾಗೂ ಆನುವಂಶೀಯತೆ ಹೃದ್ರೋಗಕ್ಕೆ ಪ್ರಮುಖ ಕಾರಣಗಳಾಗಿವೆ.

ಅತಿಯಾದ ಜಿಮ್ ಅಪಾಯಕಾರಿ

ಕಾರ್ಡಿಯಾಲಜಿ ಪ್ರಕಾರ, ಪ್ರತಿದಿನ ಬಾಡಿ ಬಿಲ್ಡಿಂಗ್ ಹೆಸರಲ್ಲಿ ಅನಿಯಮಿತ ಜಿಮ್ ಮಾಡುವುದು ಅಪಾಯಕಾರಿ. ಅತಿಯಾಗಿ ಜಿಮ್ ಮಾಡುವುದರಿಂದ ಹೃದಯದ ಮೇಲೆ ಒತ್ತಡ ಹೆಚ್ಚಾಗುತ್ತದೆ. ವ್ಯಾಯಾಮದಿಂದ ಎಲ್ಲ ಸಮಸ್ಯೆಗಳಿಗೂ ಪರಿಹಾರ ಕಂಡುಕೊಳ್ಳಲು ಸಾಧ್ಯವಿಲ್ಲ. ಒಂದು ದಿನಕ್ಕೆ 30 ನಿಮಿಷ ಟ್ರೆಡ್​ವಿುಲ್ ಮಾಡಬಹುದಷ್ಟೇ. ಅದಕ್ಕಿಂತ ದಿನಕ್ಕೆ 40 ನಿಮಿಷ ವಾಕ್ ಮಾಡುವುದು ಒಳಿತು. ಸೂರ್ಯ ನಮಸ್ಕಾರ, ಪ್ರಾಣಾಯಾಮ, ಯೋಗಾಭ್ಯಾಸದಿಂದ ಹೃದಯದ ಆರೋಗ್ಯ ವೃದ್ಧಿಯಾಗುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net