ಸಾಯುವ ಕಾಲದ ಸಂಗಾತಿ ಯಾವುದು? ಹಣ, ಒಡವೆಯಾ? ಪತ್ನಿ, ಮಕ್ಕಳಾ?

Manollasa 26 april 20
Published on
| ಡಾ.ಕೆ.ಪಿ.ಪುತ್ತೂರಾಯ

ಒಬ್ಬ ರಾಜನಿಗೆ ನಾಲ್ಕು ರಾಣಿಯರು. ಹಲವಾರು ರಾಜ್ಯಗಳನ್ನು ಗೆದ್ದು, ಅಪಾರ ಸೊತ್ತು, ಸಂಪತ್ತನ್ನು ಗಳಿಸಿದ್ದ. ಈ ರಾಜ ಒಮ್ಮೆ ವಿಚಿತ್ರ ಕಾಯಿಲೆಗೆ ತುತ್ತಾಗಿ ಹಾಸಿಗೆ ಹಿಡಿದ. ಸಾವಿನ ದವಡೆಗೆ ಸಿಲುಕಿದ್ದ ಈತನಿಗೆ ತಾನು ಸಾಯೋದು ಖಚಿತವಾಯಿತು. ತಾನೊಬ್ಬನೇ ಈ ಜಗತ್ತನ್ನು ಬಿಟ್ಟು ಹೋಗೋದು ಹೇಗೆ ಎಂಬುದರ ಚಿಂತೆ ಕಾಡತೊಡಗಿತು. ಅಂತೆಯೇ ರಾಜ ತನ್ನ ಚಂದದ ಯುವ ನಾಲ್ಕನೆಯ ಮಡದಿಯನ್ನು ಕರೆದು ಕೇಳಿದ, ‘ಪ್ರಾಣವಲ್ಲಭೆ, ಇನ್ನೇನು ಈ ಇಹಲೋಕವನ್ನು ತ್ಯಜಿಸಿ ಪರಲೋಕಕ್ಕೆ ಹೋಗುವವನಿದ್ದೇನೆ. ನನ್ನ ಜತೆ ನೀನು ಬರುವಿಯಾ?’ ಆಕೆ, ‘ನಾನು ನಿಮ್ಮ ಜೊತೆ ಬಂದರೆ, ನೀವು ನನಗೆ ಉಡುಗೊರೆಯಾಗಿ ಕೊಟ್ಟಿರುವ ಈ ವಜ್ರವೈಢೂರ್ಯ, ಮುತ್ತು, ಹವಳಗಳನ್ನೊಳಗೊಂಡ ಬಂಗಾರದ ಆಭರಣಗಳನ್ನು ಧರಿಸುವವರು ಯಾರು? ನಾ ಬರಲೊಲ್ಲೆ’ ಎಂದಳು.

ಮೂರನೆಯ ರಾಣಿಯನ್ನು ಕರೆದು, ಇದೇ ಪ್ರಶ್ನೆ ಕೇಳಿದ. ಅವಳ ಉತ್ತರವೂ ನಕಾರಾತ್ಮಕವಾಗಿತ್ತು. ಇದೇ ಪ್ರಶ್ನೆಯನ್ನು ಎರಡನೆಯ ರಾಣಿಗೆ ಕೇಳಲಾಗಿ ಆಕೆ ಹೇಳಿದಳು, ‘ರಾಜನೇ, ಈ ನಿನ್ನ ಯಾವ ರಾಣಿಯರಿಂದಲೂ ಆಗದ ಮಕ್ಕಳು ನಿನಗೆ ನನ್ನಿಂದ ಆಗಿವೆ. ನಾನೇನಾದರೂ ನಿನ್ನ ಜೊತೆ ಬಂದರೆ, ಈ ನಮ್ಮ ರಾಜಕುಮಾರರನ್ನು, ಬಂಧುಬಳಗದವರನ್ನು ನೋಡಿಕೊಳ್ಳುವವರು ಯಾರು?’ ರಾಜ, ಕೊನೆಗೆ, ಬಡವರ ಮನೆಯಿಂದ ತಂದ ತನ್ನ ಮೊದಲನೆಯ ಪತ್ನಿಯನ್ನು, ‘ನೀನಾದರೂ ನನ್ನ ಜೊತೆ ಬರುವಿಯಾ’ ಎಂದು ಕೇಳಿದ. ಆಕೆ, ‘ಖಂಡಿತಾ ನಾನು ನಿಮ್ಮ ಜೊತೆ ಬರುತ್ತೇನೆ’ ಎಂದಳು. ಸಂತಸ ಪಟ್ಟ ರಾಜ ಕಾರಣ ಕೇಳಲಾಗಿ, ಆಕೆ ಹೇಳಿದಳು, ‘ಸಲಹಿದಿರಿ ನನ್ನ ಬಂಧುಬಳಗದವರಿಗೆ ಕಷ್ಟಕಾಲದಲ್ಲಿ ನೆರವಾದಿರಿ, ಅವರ ಕಣ್ಣೀರನ್ನು ಒರೆಸಿದಿರಿ. ನಿಮ್ಮಂಥವರ ಕೈ ಬಿಡೋಕಾಗುತ್ತದೆಯೇ?’ ಆಕೆ ಇಷ್ಟು ಹೇಳುವಷ್ಟರಲ್ಲಿ ರಾಜನ ಪ್ರಾಣಪಕ್ಷಿ ಹಾರಿ ಹೋಯಿತು.

ತಾತ್ಪರ್ಯ ಇಷ್ಟೆ: ಸಾಯುವ ಕಾಲಕ್ಕೆ ಯಾರೂ, ಯಾವುದೂ ನಮ್ಮ ಜೊತೆ ಬರಲಾಗದು. ನಾಲ್ಕನೆಯ ಮಡದಿಯಲ್ಲಿದ್ದ ಧನ-ಕನಕ, ಮೂರನೆಯ ಮಡದಿಯಲ್ಲಿದ್ದ ಆಸ್ತಿ, ಎರಡನೆಯ ರಾಣಿಯಿಂದಾದ ಬಂಧು ಬಳಗವೂ ಬಾರದು. ನಮ್ಮ ಜೊತೆ ಬರುವುದು ನಾವು ಗೈದ ಸತ್ಕಾರ್ಯ ಮತ್ತು ಮಾಡಿದ ದಾನ, ಧರ್ಮಗಳು ಮಾತ್ರ.

ನಾವು ಸತ್ತ ಮೇಲೆ ಯಾರ್ಯಾರಿಗೆ ಎಷ್ಟು ಪಾಲು ಎಂಬುದನ್ನು ಮಾರ್ವಿುಕವಾಗಿ ಕವಿಯೊಬ್ಬರು ಹೀಗೆ ಬರೆದಿದ್ದಾರೆ- ‘ಸತ್ತ ಮೇಲೆ, ನಮ್ಮ ಬಟ್ಟೆ ಬರೆ ಬಡಬಗ್ಗರ ಪಾಲು, ಆಸ್ತಿ-ಪಾಸ್ತಿ-ವಸ್ತು ಒಡವೆಗಳು ಮಡದಿ, ಮಕ್ಕಳ ಪಾಲು, ಅಸ್ತಿ ಗಂಗೆಯ ಪಾಲು, ದೇಹ ಮಣ್ಣು ಪಾಲು, ಮಗ ಹಾಕಿದ ಪಿಂಡ ಕಾಗೆಗಳ ಪಾಲು, ಭಾರಿ ದಕ್ಷಿಣೆ ಪುರೋಹಿತರ ಪಾಲು; ಭೂರಿ ಭೋಜನ ಬಂಧುಮಿತ್ರರ ಪಾಲು, ನಾವು ನಾವು ಪಡೆದ ಸತ್ಕೀರ್ತಿ, ಗೈದ ಸತ್ಕರ್ಮ, ಸತ್ಕಾರ್ಯಗಳಷ್ಟೆ ನಮ್ಮ ಪಾಲು. ಇದರಲ್ಲಿ ಯಾರಿಗೂ ಇಲ್ಲ ಬೇರೆ ಪಾಲು’. ಇದುವೆ ಸತ್ಯ, ಇದುವೇ ನಿತ್ಯ.

(ಲೇಖಕರು ಪ್ರಾಧ್ಯಾಪಕರು, ಸಾಹಿತಿ ಹಾಗೂ ವಾಗ್ಮಿ)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net