ಆಹಾರದ ಪರಿಪೂರ್ಣ ವಿವರಣೆ ನಮಗೆ ಸಿಗುವುದೆಲ್ಲಿ?

Food
Published on

ಆಹಾರ, ನಿದ್ರೆ ಹಾಗೂ ಬ್ರಹ್ಮಚರ್ಯಗಳು ಮಾನವನ ದೇಹವನ್ನು ಪೋಷಿಸಿ ಬೆಳೆಸುವ ಮೂರು ಉಪ ಆಧಾರ ಸ್ತಂಭಗಳು ಎಂದು ಆಯುರ್ವೆದ ಹೇಳಿರುವುದರ ಹಿಂದೆ ಅಮೂಲ್ಯವಾದ ವೈಜ್ಞಾನಿಕ ಚಿಂತನೆಯಿದೆ. ತಿನ್ನಲು ಸಾಧ್ಯವಿರುವುದೆಲ್ಲ ಒಳ್ಳೆಯ ಆಹಾರವಾಗಿರುವುದಿಲ್ಲ. ಆಯುರ್ವೆದದ ಆದಿ ಗ್ರಂಥವಾದ ಚರಕಸಂಹಿತೆಯ ನುಡಿಯೊಂದು ಈ ದಿಶೆಯಲ್ಲಿ ಗಮನ ಸೆಳೆಯುತ್ತದೆ. ಕೇವಲ ಅತಿಯಾದ ಆಸೆಯಿಂದ ಆಗಲಿ ಅಥವಾ ವಿಶೇಷವಾದ ತಿಳಿವಳಿಕೆ ಇಲ್ಲದೆಯಾಗಲಿ ಆಹಾರವನ್ನು ಉಪಯೋಗಿಸಬಾರದು. ಸರಿಯಾಗಿ ಪರೀಕ್ಷಿಸಿ ನಮಗೆ ಹಿತವಾದುದನ್ನೇ ಉಣ್ಣಬೇಕು. ಏಕೆಂದರೆ ದೇಹವು ಆಹಾರದಿಂದಲೇ ಇರುವುದು ಹಾಗೂ ಬೆಳೆಯುವುದು! ಆಹಾರವಿಲ್ಲದೆ ದೇಹವಿಲ್ಲ ಎಂಬ ನುಡಿಯಲ್ಲಿ ನೂರಾರು ವಿಮರ್ಶೆ ಹಾಗೂ ಪರಾಮರ್ಶೆಗಳು ಸೇರಿಕೊಂಡಿವೆ.

ಆಹಾರದ ವಸ್ತುವಿನ ಮೂಲ ಗುಣಧರ್ಮ, ಬೆಳೆದ ಪ್ರದೇಶ, ತಿನ್ನುವ ಸ್ಥಳ, ಋತುವಿನ ಗುಣ, ದಿನದಲ್ಲಿ ಕಾಲದ ಪ್ರಭಾವ, ಸೇವಿಸುವ ವ್ಯಕ್ತಿಯ ವಯಸ್ಸು, ದೇಹಪ್ರಕೃತಿ, ಮಾನಸಿಕ ಸ್ವಭಾವ, ಶರೀರದ ಸ್ಥಿತಿ, ಮನಸ್ಸಿನ ಪರಿಸ್ಥಿತಿ, ಜೀರ್ಣಿಸಬಲ್ಲ ಶಕ್ತಿ, ಆಹಾರ ದ್ರವ್ಯದ ಪಕ್ವಾಪಕ್ವ ಅವಸ್ಥೆ, ಆಹಾರ ಸಿದ್ಧಪಡಿಸಿದ ಕಾಲ, ತಯಾರಿಸಿದ ರೀತಿ, ಪಾಕ ಮಾಡುವ ಕ್ರಮ, ಆಹಾರ ಸೇವನೆಗೆ ಉಪಯೋಗಿಸಬೇಕಾದ ಆಸನ, ಪಾತ್ರೆಗಳ ಬಳಕೆ, ಭೋಜನ ಸ್ವೀಕರಿಸುವ ವಿಧಾನ, ಆಹಾರದ ಪ್ರಮಾಣ, ಸೇವನೆಗೆ ಸೂಕ್ತವಾದ ಕಾಲ, ದೇಹಕ್ಕೆ ಹಿತವಾದ, ಅಹಿತವಾದ ಆಹಾರ ನಿರ್ಣಯ, ಪಥ್ಯ ಅಪಥ್ಯ ಆಹಾರಗಳ ಮಾಹಿತಿ, ವಿರುದ್ಧಾಹಾರಗಳ ಪರಿಗಣನೆ, ಆಹಾರ ಸೇವನೆಯ ನಡುವಿನ ಅಂತರ, ದಿನದಲ್ಲಿ ಎಷ್ಟು ಬಾರಿ ಆಹಾರ ಸೇವನೆಯೆಂಬ ವಿಚಾರ, ಆಹಾರದಲ್ಲಿ ರುಚಿ ಅಳವಡಿಕೆಯ ನಿಯಮ, ದೇಹಕ್ಕೆ ಸಾತ್ಮ್ಯವಾದ ಆಹಾರ, ಅಸಾತ್ಮ್ಯ ಆಹಾರ, ಆಹಾರದ ದ್ರವ್ಯಗಳ ವಿಂಗಡಣೆ, ಆಹಾರದಲ್ಲಿ ದೇಹಧಾತು ಪೋಷಣೆಯ ಅಂಶಗಳು, ಆಹಾರ ವ್ಯಂಜನಗಳ ಕೃತಾನ್ನದ ಸಂಗ್ರಹ, ವಿಷಪೂರಿತ ಆಹಾರದ ಲಕ್ಷಣ, ಅವುಗಳ ಶುದ್ಧಿ ಮುಂತಾದ ಕ್ರಮಗಳು, ಔಷಧಿಗಳ ಮೇಲೆ ಆಹಾರದ ಪರಿಣಾಮ, ಆಹಾರ ಪದಾರ್ಥವನ್ನು ಯಾವ ಅವಧಿಯೊಳಗೆ ಬಳಸಬೇಕು, ಅವಧಿ ಮೀರಿದ ಆಹಾರದ ಗುಣದೋಷಗಳು, ಆಹಾರ ತಯಾರಿಗೆ ನೀರಿನ ಬಳಕೆ, ವಿವಿಧ ಬಗೆಯ ನೀರಿನ ಗುಣಧರ್ಮಗಳು, ಪರಿಣಾಮದಲ್ಲಿ ಹಳೆಯ ಧಾನ್ಯ ಹಾಗೂ ಹೊಸ ಧಾನ್ಯಗಳ ನಡುವಿನ ಗುಣವ್ಯತ್ಯಾಸ, ಭಕ್ಷ್ಯ ಭೋಜ್ಯಾದಿ ವಿಂಗಡಣೆ, ದೇಹದ ವಿಭಿನ್ನ ಅಂಗಗಳ ಮೇಲೆ ಆಹಾರ ಪದಾರ್ಥಗಳಿಂದಾಗುವ ಪರಿಣಾಮ, ಮನಸ್ಸಿನ ಗುಣಗಳ ಮೇಲೆ ಆಹಾರದ ಪ್ರಭಾವ, ದ್ರವಾಹಾರ ಸೇವನೆ ಏಕೆ, ಹೇಗೆಂಬ ವಿಚಾರ, ಭೋಜನಕ್ಕಿಂತ ಮೊದಲು ಮತ್ತು ಭೋಜನದ ನಂತರ ಪಾಲಿಸಬೇಕಾದ ನಿಯಮಗಳು, ಅನುಪಾನದ ವಿವರಣೆ, ರೋಗಿಯ ಪರಿಸ್ಥಿತಿಗೆ, ಅನುಗುಣವಾಗಿ ಆಹಾರ, ರೋಗದ ಹಂತಕ್ಕೆ ಹೊಂದಿಕೊಂಡು ಪಥ್ಯದ ವಿವೇಚನೆ, ವ್ಯಾಧಿಯ ಪ್ರಬಲತೆಯನ್ನು ಗಣಿಸಿಕೊಂಡು ಆಹಾರ ವ್ಯವಸ್ಥೆ... ಹೀಗೆ ಆಹಾರ ಸಂಬಂಧವಾಗಿ ಯಾವ ವಿಚಾರವನ್ನೂ ಬಾಕಿಬಿಡದೆ ಸಮಗ್ರವಾಗಿ ಸಹಸ್ರಾರು ವರ್ಷಗಳ ಹಿಂದೆಯೇ ಲಿಖಿತ ದಾಖಲೆಗಳೊಂದಿಗೆ ವಿವರಿಸಿದ ಕೀರ್ತಿ ಆಯುರ್ವೆದಕ್ಕೆ ಸಲ್ಲುತ್ತದೆ! ಆಧುನಿಕವಾಗಿ ಇಂದು ಪೋಷಕಾಂಶಗಳು ಮತ್ತು ದೊರೆಯುವ ಕ್ಯಾಲೊರಿಗಳನ್ನು ಮಾತ್ರ ವಿವರಿಸುತ್ತಿರುವುದನ್ನು ನೋಡಿದರೆ ಆಹಾರ ಸಲಹೆಯ ವಿಚಾರದಲ್ಲಿ ಆಯುರ್ವೆದಕ್ಕೆ ಪರಮಾಧಿಕಾರ ಯಾಕೆ ಇದೆಯೆಂಬುದು ವೇದ್ಯವಾಗುತ್ತದೆ.

ಇಂದಿಗೂ ಜನರು ವ್ಯಾಧಿಗ್ರಸ್ತರಾದಾಗ ಆಹಾರ ನಿರ್ಬಂಧನೆ ಏನನ್ನಾದರೂ ಹೇಳಿದರೆ ಆಯುರ್ವೆದದತ್ತಲೇ ನೋಡುತ್ತಾರೆ! ಆಯುರ್ವೆದ ಔಷಧಿ ಸೇವಿಸಬೇಕಾದರೆ ಪಥ್ಯ ಮಾಡಬೇಕೆಂದು ಭಾವಿಸುತ್ತಾರೆ. ಇದು ನಿಜಕ್ಕೂ ಮೂಢನಂಬಿಕೆ. ಮಧುಮೇಹಿಗಳು ಸಕ್ಕರೆ, ಬೆಲ್ಲ ತಿನ್ನಬಾರದು ಎಂಬುದು ಆಯುರ್ವೆದ ಔಷಧಿ ಮಾಡುವಾಗ ಮಾತ್ರ ತಿಳಿದಿರಬೇಕಾದ ವಿಚಾರ ಅಲ್ಲವಲ್ಲ. ಆಯುರ್ವೆದ ಮೊದಲಾಗಿ ಈ ಜ್ಞಾನವನ್ನು ಅರುಹಿದ್ದರಿಂದ ಪಥ್ಯ-ಅಪಥ್ಯ ಆಚರಣೆ ಎಂದರೆ ಅದು ಆಯುರ್ವೆದಕ್ಕೆ ಸಂಬಂಧಿಸಿದ್ದೆಂದು ತಪ್ಪಾಗಿ ಕಲ್ಪಿಸಿಕೊಳ್ಳುತ್ತೇವೆ. ಆಹಾರವು ಆಯಸ್ಸು, ತೇಜಸ್ಸು, ಓಜಸ್ಸು, ಉತ್ಸಾಹ, ಸ್ಮೃತಿ, ಪಚನಶಕ್ತಿಗಳನ್ನು ಹೆಚ್ಚಿಸುತ್ತದೆ ಎಂಬ ಸುಶ್ರುತ ಸಂಹಿತೆಯ ವಾಕ್ಯದಲ್ಲಿ ಎಲ್ಲವೂ ಸೇರಿಕೊಂಡಿದೆ. ಅಷ್ಟಾಂದ ಸಂಗ್ರಹವೆಂಬ ಗ್ರಂಥದಲ್ಲಿ ಆಹಾರ ಸೇವನೆ ಹೇಗೆ ಮಾಡಬೇಕು ಎಂಬುದನ್ನು ವಿವರಿಸುತ್ತಾ ತಾನು ಭೋಜನ ಸ್ವೀಕರಿಸುವುದಕ್ಕಿಂತ ಮುಂಚಿತವಾಗಿ ಪಿತೃಗಳನ್ನು, ದೇವತೆಗಳನ್ನು, ಅತಿಥಿಗಳನ್ನು, ಬಾಲಕರನ್ನು, ಗುರುಹಿರಿಯರನ್ನು ಆಹಾರದಿಂದ ಸಂತೃಪ್ತರನ್ನಾಗಿಸಿ ಮನೆಯಲ್ಲಿರುವ ಸಾಕುಪ್ರಾಣಿಗಳಿಗೂ ಮರೆಯದೆ ಆಹಾರ ನೀಡಬೇಕು. ಆ ಬಳಿಕವೇ ಆಹಾರ ಸ್ವೀಕರಿಸಬಹುದು. ಇಷ್ಟವಾದ ಆಹಾರವನ್ನು ಇಷ್ಟವಾದ ಜನರೊಡನೆ ತನ್ಮನಸ್ಕನಾಗಿ ಸೇವಿಸಬೇಕು, ಬಡಿಸುವವರು ಪ್ರೀತಿಯಿಂದ ಶುಚಿತ್ವದೊಂದಿಗೆ ಕೂಡಿರಬೇಕು ಎಂಬೆಲ್ಲಾ ಮಾಹಿತಿಗಳು ಯುಗಗಳು ಕಳೆದರೂ ಉತ್ಕೃಷ್ಟ ಜೀವನ ಮೌಲ್ಯವಾಗಿ ಉಳಿಯುವಂತಹುದು. ಈಗ ಆಹಾರದ ಸಮಗ್ರ ವಿವೇಚನೆ ಎಲ್ಲಿದೆಯೆಂಬುದು ಪ್ರಶ್ನೆಯಾಗಿ ಉಳಿಯುವುದಿಲ್ಲ.

(ಪ್ರತಿಕ್ರಿಯಿಸಿ: vvsudina@gmail.com)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net