

ಮಧ್ಯಮಪಾಂಡವ ಎಂದು ಪ್ರಸಿದ್ಧನಾದವನು ಅರ್ಜುನ. ಮೂರುಲೋಕಗಳಲ್ಲಿಯೇ ಏಕೈಕ ಅದ್ವಿತೀಯ ಧನುರ್ಧಾರೀ ಎಂದು ಗುರು ದ್ರೋಣಾಚಾರ್ಯರಿಂದ ಪ್ರಶಸ್ತಿ ಪಡೆದ ಮಹಾಮೇಧಾವಿ. ಕೌರವ-ಪಾಂಡವರ ನಡುವೆ ನಡೆದ ಮಹಾಸಂಗ್ರಾಮದಲ್ಲಿ ಅತಿರಥ-ಮಹಾರಥರನ್ನು ಗೆದ್ದವ. ಭೀಮನ ನಂತರ ಕೌರವರ ಸೇನೆಯನ್ನು ಅತಿಹೆಚ್ಚು ನಾಶಪಡಿಸಿದ ಅದ್ಭುತ ಪರಾಕ್ರಮಿ. ಶ್ರೀಕೃಷ್ಣನಿಗೆ ಪ್ರೀತಿಪಾತ್ರ ವ್ಯಕ್ತಿ.
ಶ್ರೀಕೃಷ್ಣ ಪರಂಧಾಮಕ್ಕೆ ತೆರಳಿದ ನಂತರ, ಒಮ್ಮೆ ಅನೇಕ ಸ್ತ್ರೀಯರನ್ನು ಬೇರೊಂದು ಊರಿಗೆ ಕರೆದುಕೊಂಡು ಹೋಗಬೇಕಾದ ಪ್ರಸಂಗ ಬಂತು. ಗಾಂಢೀವ ಹಿಡಿದು, ರಥದಲ್ಲಿ ಕುಳಿತು, ಸೇನೆಯ ಸಮೇತ ಸ್ತ್ರೀಯರನ್ನು ಸುರಕ್ಷಿತವಾಗಿ ಕರೆದೊಯ್ಯುವಾಗ ಮಾರ್ಗಮಧ್ಯದಲ್ಲಿ ಯವನರು ದಾಳಿ ಮಾಡಿದರು. ಕುರುಕ್ಷೇತ್ರ ಯುದ್ಧದಲ್ಲಿ ಅತಿರಥ-ಮಹಾರಥರನ್ನು ಗೆದ್ದ ಬಲಶಾಲಿ ಅರ್ಜುನನಿಗೆ ಈಗ ಯವನರನ್ನು ಗೆಲ್ಲಲಾಗಲಿಲ್ಲ! ಅರ್ಜುನ ಪರಾಜಿತನಾಗಿ ಅವಮಾನಿತನಾದ.
ಹೀಗೇಕೆ ಆಯಿತು? ಕೃಷ್ಣಪರಮಾತ್ಮ ಎಲ್ಲಿಯವರೆಗೆ ಜೊತೆಯಲ್ಲಿದ್ದ ಅಲ್ಲಿಯವರೆಗೂ ಗೆಲುವು ಕಾಣುತ್ತಿದ್ದ ಅರ್ಜುನ. ಯಾವಾಗ ಕೃಷ್ಣ ಜೊತೆಯಲ್ಲಿ ಇಲ್ಲ, ‘ನಾನೊಬ್ಬನೇ ಸಾಕು’ ಎಂಬ ಅಹಂಕಾರ ಅರ್ಜುನನ ಮನಸ್ಸಿನಲ್ಲಿ ಮೂಡಿದಾಗ ಸೋಲಾಗುತ್ತಿದೆ. ಮಹಾಭಾರತದಲ್ಲಿ ಬರುವ ಈ ಪ್ರಸಂಗ ನಮ್ಮ ಜೀವನದಲ್ಲಿ ಬಹುದೊಡ್ಡ ಸಂದೇಶ ನೀಡುತ್ತಿದೆ. ನಮ್ಮ ಜೀವನದಲ್ಲಿ ನಡೆಯುವ ಸಣ್ಣಪುಟ್ಟ ಘಟನೆಗಳು ಇರಬಹುದು, ದೊಡ್ಡ ದೊಡ್ಡ ಪ್ರಸಂಗಗಳಿರಬಹುದು. ಪ್ರತಿಯೊಂದು ಘಟನೆಯ ಹಿನ್ನೆಲೆಯಲ್ಲಿಯೂ ಭಗವಂತನ ಕೈವಾಡವಿರುತ್ತದೆ.
ನಾನು ನನ್ನದು ಎನಬೇಡ ಎಲ್ಲವನು ಆಡಿಸುವವ ಭಗವಂತ ಅವನೆದುರು ನೀನಾವ ಕುನ್ನಿಯೋ ಮನುಜ!
ಎಂದು ಹಿರಿಯರು ಹೇಳುವಂತೆ, ನಾವೆಲ್ಲ ಆಟವಾಡುವ ಬೊಂಬೆಗಳಾದರೆ, ಮೇಲೆ ನಿಂತು ಆಟ ಆಡಿಸುವವನು ಭಗವಂತ. ‘ಕ್ರೀಡಾರ್ಥಮಾತ್ಮನ ಇದಂ ತ್ರಿಜಗತ್ ಕೃತಂ ತೇ’ ಎಂಬುದಾಗಿ ಬಲಿಚಕ್ರವರ್ತಿಯ ಹೆಂಡತಿ ವಿಂಧ್ಯಾವಲೀ ಇದೇ ಮಾತನ್ನು ಹೇಳಿದ್ದಾಳೆ. ಭಗವಂತನ ಕೃಪೆ ಇದ್ದರೆ ಎಲ್ಲವೂ ಸುಗಮ. ಭಗವಂತನ ಕೃಪೆ, ದೃಷ್ಟಿ ಇರುವವರೆಗೂ ಗೆಲುವು ದೊರೆಯುತ್ತಿರುತ್ತದೆ. ಸೋಲು ಸನಿಹಕ್ಕೂ ಸುಳಿಯುವುದಿಲ್ಲ. ಬಾಹ್ಯ, ಆಂತರಿಕ ಶತ್ರುಗಳು ನಾಶವಾಗುತ್ತಾರೆ. ಅದೇ ಭಗವಂತನ ಕೃಪೆ ತಪ್ಪಿದರೆ ಸಣ್ಣ ಕಾರ್ಯವೂ ದುರ್ಗಮವೇ. ಅರ್ಜುನನಿಗೆ ಆದಂತೆ ಗೆಲುವು ದೂರವಾಗಿ, ಸೋಲು ಆವರಿಸಿಕೊಳ್ಳುತ್ತದೆ. ಇದು ಎಲ್ಲರ ಜೀವನದಲ್ಲಿಯೂ ಬರುವಂತಹ ಅನುಭವ. ಇದೇ ಭಗವಂತನ ಸ್ವಾತಂತ್ರ್ಯ. ಅದನ್ನು ಅರಿತು ‘ನಾನು ದೊಡ್ಡವ’, ‘ನಾನು ಶ್ರೀಮಂತ’, ‘ನಾನು ಅಧಿಕಾರಿ’ ಇತ್ಯಾದಿ ಅಹಂಕಾರಗಳನ್ನು ಬದಿಗೊತ್ತಿ, ಆ ದೈವಕ್ಕೆ ಶರಣು ಹೋಗುವುದು ವಿವೇಕ. ಭಗವಂತನ ಕೃಪೆ ಇದ್ದಲ್ಲಿ ಎಲ್ಲವೂ ಸಾಧ್ಯ ಎಂಬ ಸತ್ಯವನ್ನು ಮನಗಾಣೋಣ. ಅಹಂಕಾರ, ಒಣ ಪ್ರತಿಷ್ಠೆ, ದೊಡ್ಡಸ್ತಿಕೆಯನ್ನೆಲ್ಲ ತೊರೆದು, ಹೃದಯದಲ್ಲಿ ಭಗವಂತನ ವಾಸವಾಗಲಿ ಎಂದು ಪ್ರಾರ್ಥಿಸೋಣ. ಭಗವತ್ ಕೃಪೆಗಾಗಿ ಸತತವಾಗಿ ಪ್ರಯತ್ನಿಸೋಣ.
(ಲೇಖಕರು ಸಂಸ್ಕೃತ ವಿದ್ವಾಂಸರು) (ಪ್ರತಿಕ್ರಿಯಿಸಿ: manollasavv@gmail.com)