ವ್ಯರ್ಥ ಪ್ರಯಾಸವೆಂದರೇನು?

effort
Published on
Chidambara
ಚಿದಂಬರ ಮುನವಳ್ಳಿ
ಬಹಳ ಹಿಂದಿನ ಕಾಲದಲ್ಲಿ ಒಬ್ಬ ವ್ಯಾಪಾರಿ ಊರಿಂದೂರಿಗೆ ನಡೆದುಕೊಂಡು ವ್ಯಾಪಾರ ಮಾಡುತ್ತಿದ್ದ. ಈಗಿನ ಹಾಗೆ ಬ್ಯಾಂಕು, ನೋಟುಗಳು, ಕಾರ್ಡ್ ಇತ್ಯಾದಿ ಇಲ್ಲದ ಆ ದಿನಗಳಲ್ಲಿ ತಿರುಗಿ ಬರುವಾಗ ಗಳಿಸಿದ ನಾಣ್ಯಗಳನ್ನು ಒಂದು ಬಟ್ಟೆಯಲ್ಲಿ ಕಟ್ಟಿ ಅದನ್ನು ಸೊಂಟದ ಸುತ್ತ ಸುತ್ತಿ ಅದರ ಮೇಲೆ ತನ್ನ ಪೋಷಾಕು ಹಾಕಿಕೊಂಡು ಹಣವಿದ್ದದ್ದು ಯಾರಿಗೂ ತಿಳಿಯದ ಹಾಗೆ ಬರುತ್ತಿದ್ದ. ಒಂದು ಸಲ ಕಾಡಿನಲ್ಲಿ ಬರುತ್ತಿರಬೇಕಾದರೆ ಒಂದು ಕ್ರೋಧಿತ ಕರಡಿ ಎದುರಿನಿಂದ ಬಂದದ್ದೇ ಅವನ ಮೇಲೆ ಆಕ್ರಮಣ ಮಾಡಿತು. ಇವನೂ ಹೆದರದೆ ಉಪಾಯದಿಂದ ತನ್ನ ಕೈಗಳಿಂದ ಅದರ ಎರಡೂ ಕಿವಿಗಳನ್ನು ಗಟ್ಟಿಯಾಗಿ ಹಿಡಿದು ಅದನ್ನು ತಡೆಯಲು ಪ್ರಯತ್ನಿಸಿದ್ದರಿಂದ ಅದು ನಿಯಂತ್ರಣಕ್ಕೇನೋ ಬಂತು. ಆದರೆ ತಪ್ಪಿಸಿಕೊಳ್ಳಲು ತನ್ನ ಮುಖವನ್ನು ಜೋರಾಗಿ ಅಲುಗಾಡಿಸತೊಡಗಿತು. ಜೊತೆಗೆ ಇವನ ದೇಹವೂ ಅಲುಗಾಡತೊಡಗಿದ ಪರಿಣಾಮ ನಾಣ್ಯದ ಗಂಟು ಸಡಿಲವಾಗಿ ಒಂದೊಂದೇ ನಾಣ್ಯಗಳು ಕೆಳಗೆ ಬೀಳತೊಡಗಿದವು. ಆದರೆ ಕರಡಿಯ ಕಿವಿ ಬಿಟ್ಟರೆ ಜೀವಕ್ಕೆ ಅಪಾಯ. ಅಷ್ಟರಲ್ಲಿ ಅದೇ ಪ್ರದೇಶದಲ್ಲಿ ವಾಸಿಸುತ್ತಿದ್ದ ದಾರಿಹೋಕನೊಬ್ಬಈ ದೃಶ್ಯವನ್ನು ನೋಡಿದ. ಅವನು ಕರಡಿಗಳನ್ನೇನೋ ಸಾಕಷ್ಟು ನೋಡಿದ್ದ. ಆದರೆ ಇಷ್ಟೊಂದು ದುಡ್ಡು ನೋಡಿರಲಿಲ್ಲ. ಅವನ ಗಮನವೆಲ್ಲ ಕೆಳಗೆ ಬೀಳುತ್ತಿರುವ ನಾಣ್ಯಗಳ ಕಡೆಗೇ.

ಅವನು ವ್ಯಾಪಾರಿಗೆ ಹೇಳಿದ, ‘ಇದೊಂದು ದುಡ್ಡು ಕೊಡುವ ವಿಚಿತ್ರ ಕರಡಿ ಎನಿಸುತ್ತದೆ’. ವ್ಯಾಪಾರಿ ಒಮ್ಮೆಲೇ ನುಡಿದ, ‘ಹೌದು ಹೌದು. ಇದೊಂದು ಚಮತ್ಕಾರದ ಮಾಯಾ ಕರಡಿ. ಇದರ ಕಿವಿ ಹಿಡಿದು ಅಲ್ಲಾಡಿಸಿದರೆ ಸಾಕು ದುಡ್ಡಿನ ಸುರಿಮಳೆ ಆಗುತ್ತದೆ’. ಅವನು ತಡಮಾಡದೆ ಓಡಿ ಬಂದು ಅದರ ಎರಡೂ ಕಿವಿಗಳನ್ನು ಗಟ್ಟಿಯಾಗಿ ಹಿಡಿದ. ವ್ಯಾಪಾರಿ ಹೇಳಿದ, ‘ಸ್ವಲ್ಪ ಹೀಗೆಯೇ ಹಿಡಿದಿರು. ನಾನು ಈಗಾಗಲೇ ಉದುರಿಸಿದ ದುಡ್ಡನ್ನು ತೆಗೆದುಕೊಳ್ಳುತ್ತೇನೆ. ನೀನು ನಂತರ ಪ್ರಯತ್ನಿಸು’ ಎಂದವನೇ ತನ್ನ ಹಣ ತೆಗೆದುಕೊಂಡು ಪಲಾಯನ ಮಾಡಿದ.

ಕೆಲವೊಬ್ಬರು ಜೀವನವಿಡೀ ಕಷ್ಟ ಪಟ್ಟರೂ ಫಲ ಸಿಗುವುದಿಲ್ಲ, ಏನನ್ನೂ ಸಾಧಿಸಲಾಗುವುದಿಲ್ಲ. ಹಾಗೂ ಅದು ಅವರಿಗೆ ತಿಳಿಯುವುದೂ ಇಲ್ಲ. ಅವರು ಸದಾ ಪ್ರಪಂಚವನ್ನು ದೂಷಿಸುತ್ತ ದುಃಖಿಯಾಗಿರುತ್ತಾರೆ. ಸರಿಯಾದ ಮಾರ್ಗ ತೋರಿಸುವವರನ್ನೂ ಶತ್ರುಗಳೆಂದು ತಿಳಿಯುತ್ತಾರೆ. ಭಗವದ್ಗೀತೆಯಲ್ಲಿ ಇದಕ್ಕೆ ‘ಮೋಘಾಶಾ ಮೋಘಕರ್ವಣೋ ಮೊಘಜ್ಞಾನಾ ವಿಚೇತಸಃ’ ಅಂದರೆ ‘ವ್ಯರ್ಥವಾದ ಆಸೆ, ವ್ಯರ್ಥವಾದ ಕಾರ್ಯ ಮತ್ತು ವ್ಯರ್ಥವಾದ ಜ್ಞಾನವುಳ್ಳ ಜನರು ಇಂಥ ವ್ಯಾಮೋಹಕ್ಕೆ ಒಳಗಾಗಿ ಸತ್ಯಾಸತ್ಯತೆ ತಿಳಿಯದೆ ಜೀವನ ಹಾಳು ಮಾಡಿಕೊಳ್ಳುತ್ತಾರೆ’ ಎಂದಿದೆ. ಇಡೀ ಪ್ರಾಣಿಪ್ರಪಂಚದಲ್ಲಿ ದೇವರು ಮನುಷ್ಯನಿಗೆ ಮಾತ್ರ ವಿವೇಚನಾ ಸಾಮರ್ಥ್ಯ, ಮಾನವೀಯ ಚೈತನ್ಯ ಕೊಟ್ಟಿದ್ದಾನೆ. ಅದನ್ನು ಬಳಸಿಕೊಂಡು ದಿವ್ಯತೆಯೆಡೆಗೆ ಸಾಗುವುದು ಅಥವಾ ಅಸುರೀ ಪ್ರವೃತ್ತಿ ಬೆಳೆಸಿಕೊಂಡು ಅಧಃಪತನ ಹೊಂದುವದು ಎರಡನ್ನೂ ನಮಗೇ ಬಿಟ್ಟಿದ್ದಾನೆ.

(ಲೇಖಕರು ನಿವೃತ್ತ ಬ್ಯಾಂಕ್ ಅಧಿಕಾರಿ)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net