ಏನಿದು ಟೊಮ್ಯಾಟೊ ಜ್ವರ? ಇದಕ್ಕೆ ಈ ಹೆಸರು ಬಂದಿದ್ದು ಹೇಗೆ? ತಡೆಗಟ್ಟುವ ವಿಧಾನ ಏನು?

tomato Flu
Published on

ನವದೆಹಲಿ: ಕಳೆದ ಕೆಲವು ದಿನಗಳಿಂದ ದೇಶದಲ್ಲಿ ‘ಟೊಮ್ಯಾಟೊ ಜ್ವರ’ದ ಹೆಸರು ಬಲವಾಗಿ ಕೇಳಿಬರುತ್ತಿದೆ. ಕೇರಳ ರಾಜ್ಯದ ಕೆಲವು ಭಾಗಗಳಲ್ಲಿ ಇದು ಮಕ್ಕಳನ್ನು ಬಾಧಿಸತೊಡಗಿರುವುದರಿಂದ ದೇಶಾದ್ಯಂತ ಆತಂಕವನ್ನೂ ತಂದೊಡ್ಡಿದೆ.

ಸಾಮಾನ್ಯವಾಗಿ ಮಕ್ಕಳಲ್ಲೇ ಕಾಣಿಸಿಕೊಳ್ಳುವ ಜ್ವರ ಇದು. ರೋಗನಿರೋಧಕ ಶಕ್ತಿ ಕಡಿಮೆ ಇರುವ 5 ವರ್ಷದೊಳಗಿನ ಮಕ್ಕಳು ಹಾಗೂ ವಯಸ್ಕರನ್ನು ಇದು ಹೆಚ್ಚಾಗಿ ಬಾಧಿಸುತ್ತದೆ. ಭಾರತದಲ್ಲಿ ಮೊದಲು ಕಾಣಿಸಿಕೊಂಡಿರುವುದು ಕೇರಳದಲ್ಲಿ. ಸದ್ಯಕ್ಕೆ ಸ್ಥಳೀಯ ಹಂತದಲ್ಲಿಯೇ ಇದ್ದರೂ ಕರ್ನಾಟಕ ಸೇರಿದಂತೆ ನೆರೆ ರಾಜ್ಯಗಳಿಗೆ ಹರಡುವ ಸಾಧ್ಯತೆಗಳಿವೆ. ಹಾಗಾಗಿ ಇದರ ಬಗ್ಗೆ ನಮ್ಮ ರಾಜ್ಯದಲ್ಲಿಯೂ ಅರಿವು ಅಗತ್ಯವಿದೆ. ಈ ವೈರಸ್ ಜೀವಕ್ಕೆ ಅಪಾಯಕಾರಿಯಲ್ಲವಾದರೂ ಕೋವಿಡ್-19 ಸಾಂಕ್ರಾಮಿಕ ರೋಗದ ಭೀಕರತೆ ಅನುಭವಿಸಿರುವ ಜನ, ಯಾವುದೇ ಹೊಸ ವೈರಸ್ ಎಂದರೂ ತಕ್ಷಣ ಆತಂಕಗೊಳ್ಳುತ್ತಾರೆ.

ಟೊಮ್ಯಾಟೊ ಜ್ವರದ ಪ್ರಾಥಮಿಕ ಲಕ್ಷಣಗಳೇನು?
ಈ ರೋಗದ ಗುಣಲಕ್ಷಣಗಳು ಚಿಕೂನ್‌ಗುನ್ಯಾ ಹಾಗೂ ಇತರ ವೈರಸ್ ಸೋಂಕಿನಂತೆಯೇ ಇರುತ್ತವೆ. ತೀವ್ರ ಜ್ವರ, ಮೈ ಮೇಲೆ ದದ್ದು ಕಾಣಿಸಿಕೊಳ್ಳುವುದು, ಕೀಲುಗಳಲ್ಲಿ ತೀವ್ರ ನೋವು, ಆಯಾಸ, ವಾಕರಿಕೆ, ವಾಂತಿ, ಅತಿಸಾರ, ನಿರ್ಜಲೀಕರಣ, ಕೀಲುಗಳಲ್ಲಿ ಊತ, ಮೈಕೈ ನೋವು ಕಂಡುಬರುತ್ತದೆ.

ಈ ಹೆಸರು ಬಂದಿದ್ದು ಯಾಕೆ?
ಟೊಮ್ಯಾಟೊ ಜ್ವರದ ವೈರಸ್‌ನಿಂದಾಗಿ ಆರಂಭದಲ್ಲಿ ತೀವ್ರ ಜ್ವರ ಕಾಣಿಸಿಕೊಂಡು, ಮೈ ಮೇಲೆ ನೋವಿನ ಕೆಂಪು ಗುಳ್ಳೆಗಳೆದ್ದು, ಚರ್ಮದ ತುರಿಕೆ ಉಂಟಾಗುತ್ತದೆ. ಈ ದದ್ದುಗಳು ದೊಡ್ಡವಾಗಿ ಸ್ಫೋಟಗೊಂಡು ಕ್ರಮೇಣ ಟೊಮ್ಯಾಟೊ ಗಾತ್ರಕ್ಕೆ ತಿರುಗುತ್ತದೆ. ಹಾಗಾಗಿ ಈ ಜ್ವರಕ್ಕೆ ಟೊಮ್ಯಾಟೊ ಫ್ಲು ಎಂದು ಹೆಸರಿಸಲಾಗಿದೆ.

ಈ ರೋಗದ ಪತ್ತೆ ಹೇಗೆ?
ರೋಗನಿರೋಧಕ ಶಕ್ತಿ ಕಡಿಮೆ ಇರುವ 5 ವರ್ಷದೊಳಗಿನ ಮಕ್ಕಳನ್ನು ಈ ಜ್ವರ ಹೆಚ್ಚಾಗಿ ಬಾಧಿಸುತ್ತದೆ. ಶಾಲೆಗಳಲ್ಲಿ ಮತ್ತು ಮನೆಯ ಬಳಿ ಆಟವಾಡುವಾಗ ಈಗಾಗಲೇ ಈ ಸೋಂಕು ಇರುವ ಮಕ್ಕಳ ನಿಕಟ ಸಂಪರ್ಕ ಬಂದರೆ ಇತರ ಮಕ್ಕಳಿಗೂ ಇದು ಹರಡುತ್ತದೆ. ಮೊದಲಿಗೆ ಡೆಂಗ್ಯೂ, ಚಿಕೂನ್‌ಗುನ್ಯಾ, ಜಿಕಾ ವೈರಸ್, ವೆರಿಸೆಲ್ಲಾ-ಜೋಸ್ಟರ್ ವೈರಸ್ ಮತ್ತು ಹರ್ಪಿಸ್ ರೋಗಾಣುವಿನ ಆಣ್ವಿಕ ಮತ್ತು ಸೆರೋಲಾಜಿಕಲ್ ಪರೀಕ್ಷೆಗಳನ್ನು ಮಾಡಿಸಲಾಗುತ್ತದೆ. ಈ ಮೇಲಿನ ಯಾವುದೂ ವೈರಸ್‌ಗಳು ದೃಢಪಡದಿದ್ದರೆ ಇದು ಟೊಮ್ಯಾಟೊ ವೈರಸ್ ಎಂದು ಧೃಢೀಕರಿಸಲಾಗುತ್ತದೆ.

ಟೊಮ್ಯಾಟೊ ಜ್ವರಕ್ಕೆ ಚಿಕಿತ್ಸೆ ಏನು?
ಚಿಕೂನ್‌ಗುನ್ಯಾ, ಡೆಂಗ್ಯೂ, ಕೈ-ಕಾಲು-ಬಾಯಿ ರೋಗವನ್ನು ಇದು ಹೋಲುವುದರಿಂದ, ಆ ರೋಗಗಳಿಗೆ ನೀಡುವ ಚಿಕಿತ್ಸೆಯನ್ನೇ ಟೊಮ್ಯಾಟೊ ಜ್ವರಕ್ಕೂ ನೀಡಲಾಗುತ್ತದೆ. ಈ ವೈರಸ್ ಸೋಂಕಿನ ರೋಗಿಯನ್ನು ಪ್ರತ್ಯೇಕವಾಗಿ ಉಳಿಸಿ, ಅವರಿಗೆ ನಿರ್ಜಲೀಕರಣವಾಗದಂತೆ ಸಾಕಷ್ಟು ದ್ರವ ಪದಾರ್ಥಗಳನ್ನು ನೀಡಬೇಕು. ಮೈಮೇಲೆ ಕಾಣಿಸಿಕೊಂಡ ಗುಳ್ಳೆಗಳ ಕಿರಿಕಿರಿ ಕಡಿಮೆ ಮಾಡಲು ಬೆಚ್ಚಗಿನ ನೀರಿನಲ್ಲಿ ಮೈ ಒರೆಸುತ್ತಿರಬೇಕು. ಜ್ವರಕ್ಕಾಗಿ ವೈದ್ಯರಲ್ಲಿ ಔಷಧಿಗಳನ್ನು ಪಡೆದು ಅವರು ತಿಳಿಸಿದ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು.

ಟೊಮ್ಯಾಟೊ ಜ್ವರಕ್ಕೆ ನಿರ್ದಿಷ್ಟ ಔಷಧಿಯನ್ನು ಇನ್ನೂ ಕಂಡುಹಿಡಿದಿಲ್ಲ. ಈ ರೋಗವು ಇತರ ವೈರಸ್‌ಗಳಿಂದ ಉಂಟಾಗುವ ಜ್ವರದ ಸಾಮ್ಯತೆ ಹೊಂದಿರುವುದರಿಂದ ಅವುಗಳಿಗೆ ನೀಡುವ ಚಿಕಿತ್ಸೆಯನ್ನೇ ಇದಕ್ಕೂ ಸಾಮಾನ್ಯವಾಗಿ ನೀಡಲಾಗುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net