ವಾರವಿಡೀ ದೂರ ವೀಕೆಂಡ್‌ನಲ್ಲಿ ಮಾತ್ರ ಜೊತೆ! ಏನಿದು 'ವೀಕೆಂಡ್ ಮ್ಯಾರೇಜ್' ಟ್ರೆಂಡ್​? ಈ ಸಂಬಂಧದ ಬಗ್ಗೆ ಇಲ್ಲಿದೆ ಮಾಹಿತಿ

ಏನಿದು ವೀಕೆಂಡ್​ ಮ್ಯಾರೇಜ್​ ಟ್ರೆಂಡ್​?
ಏನಿದು ವೀಕೆಂಡ್​ ಮ್ಯಾರೇಜ್​ ಟ್ರೆಂಡ್​?
Published on

ಪ್ರಮುಖ ಮುಖ್ಯಾಂಶಗಳು

  • ಮೂರು ಗಂಟು ನೂರಾರು ವರ್ಷಗಳ ನಂಟು
  • ದಾಂಪತ್ಯ ಜೀವನದಲ್ಲಿ ಸುಖವಾಗಿ ಬಾಳುವ ಆಸೆ ಎಲ್ಲರದ್ದು
  • ಅನ್ಯೋನ್ಯತೆ ಅಥವಾ ಒಂದೇ ಮನಸ್ಥಿತಿ ಇಲ್ಲದೆ ಡಿವೋರ್ಸ್​ ಪ್ರಕರಣಗಳಲ್ಲಿ ಹೆಚ್ಚಳ
  • ಈ ಮಧ್ಯೆ ಏನಿದು ವೀಕೆಂಡ್​ ಮ್ಯಾರೇಜ್​?
ಬೆಂಗಳೂರು: ಮೂರು ಗಂಟಿನ ಮದುವೆ ನೂರಾರು ವರ್ಷಗಳ ನಂಟು ಬೆಸೆಯುತ್ತದೆ ಎಂಬ ಹಿರಿಯರ ಮಾತು ಸುಳ್ಳಲ್ಲ ಬಿಡಿ. ದಾಂಪತ್ಯ ಜೀವನಕ್ಕೆ ಕಾಲಿಡುವ ಪ್ರತಿ ಹೆಣ್ಣು-ಗಂಡಿಗೂ ಅವರದ್ದೇ ಆದ ಆಸೆ, ಆಕಾಂಕ್ಷೆಗಳು ಮನದಲ್ಲಿ ಬೆಟ್ಟದಷ್ಟು ಮೂಡಿರುತ್ತವೆ. ಆದ್ರೆ, ವೇಗವಾಗಿ ಓಡುತ್ತಿರುವ ಈ ಡಿಜಿಟಲ್​ ಕಾಲದಲ್ಲಿ ಪ್ರೀತಿ-ಪ್ರೇಮ, ದಾಂಪತ್ಯವು ತೀರ ವಿರಳ ಎನ್ನುವಂತಾಗಿದೆ.    

ದಾಂಪತ್ಯ ಅನ್ನೋದೇ ಕೆಲವರ ಕನಸು...

ಕೆಲವರು ಪ್ರೀತಿಸಿ ವಿವಾಹ ಆಗಬೇಕು ಎಂದು ಬಯಸಿದರೆ, ಇನ್ನೂ ಕೆಲವರು ತಂದೆ-ತಾಯಿಯ ಇಚ್ಛೆಯಂತೆ ಮದುವೆಯಾಗುತ್ತಾರೆ. ಆದರೆ, ಖುಷಿ, ಸಂಭ್ರಮ, ಸಡಗರದ ಛಾಯೆಯಲ್ಲಿ ನಡೆದ ವಿವಾಹ ಒಂದು ಸಣ್ಣ ವಿಚಾರಕ್ಕೆ ಅಥವಾ ತಪ್ಪುಗಳಿಂದ ಮುರಿದು ಬೀಳುವುದು ನಿಜಕ್ಕೂ ಸಹಿಸಲಾಗದು. ಹಲವರು ಡಿವೋರ್ಸ್​ ಕೊಟ್ಟು ಮುಂದೋದರೆ, ಇನ್ನೂ ಕೆಲವರು ಪ್ಯಾರಲಲ್, ವೀಕೆಂಡ್​ ರಿಲೇಶನ್​ಷಿಪ್​ನಲ್ಲಿ ಬದುಕುತ್ತಿರುತ್ತಾರೆ. ಸದ್ಯ ಇದೇ ವಿಷಯ ಜಾಲತಾಣಗಳಲ್ಲಿ ಹೆಚ್ಚಾಗಿ ಕೇಳಿಬರುತ್ತಿದ್ದು, ಏನಿದು ವೀಕೆಂಡ್​​ ಮ್ಯಾರೇಜ್​ ಎಂಬ ಪ್ರಶ್ನೆಯನ್ನು ಮುಂದಿಟ್ಟಿದೆ.  
ಬಾಲ್ಯದಿಂದ ಮದುವೆ ವಯಸ್ಸಿಗೆ ಬರುವವರೆಗೆ ನಾವು ಬದುಕುವ ಜೀವನ ಒಂದು ಲೆಕ್ಕವಾದರೆ, ದಾಂಪತ್ಯದ ಬಳಿಕ ಜೀವಿಸುವ ಜೀವನ ಮತ್ತೊಂದು ಲೆಕ್ಕ. ಕೆಲವರಿಗೆ ಇದು ಸುಮಧುರ, ಹಿತಕರ ಅನಿಸಿದರೆ, ಇನ್ನೂ ಕೆಲವರಿಗೆ ಬೇಡದ ಬದುಕು, ನರಕ ಎಂದೆಲ್ಲ ಅನಿಸಿಬಿಟ್ಟಿರುತ್ತದೆ. ಕಾರಣ, ಅವರಿಗೆ ಸಿಕ್ಕ ವ್ಯಕ್ತಿಗಳು ಮತ್ತು ಅವರೊಂದಿಗೆ ಕಾಡುವ ಹೊಂದಾಣಿಕೆ ಸಮಸ್ಯೆಗಳು. ಈ ಕಾರಣಗಳಿಂದ ಕೆಲವರು ಹೆಚ್ಚು ಸಮಯ ತೆಗೆದುಕೊಳ್ಳದೆ ಮದುವೆಯಾದ ಕೆಲವೇ ತಿಂಗಳಲ್ಲಿ ಕೋರ್ಟ್​ ಮೆಟ್ಟಿಲೇರಿ ಡಿವೋರ್ಸ್​ ಮೊರೆ ಹೋದರೆ, ಒಂದಷ್ಟು ಮಂದಿ ಈ ಪ್ಯಾರಲಲ್, ವೀಕೆಂಡ್​​ ಮ್ಯಾರೇಜ್​ನಲ್ಲಿಯೇ ತೃಪ್ತಿದಾಯಕ ಜೀವನ ಸಾಗಿಸಿಬಿಡುತ್ತಾರೆ. 

ಅಷ್ಟಕ್ಕೂ ಏನಿದು 'ವೀಕೆಂಡ್​ ಮ್ಯಾರೇಜ್​'?

21ನೇ ಶತಮಾನದಲ್ಲಿ ವಿವಾಹದ ವ್ಯಾಖ್ಯಾನ ಬದಲಾಗಿದೆ ಎಂಬುದು ಒಪ್ಪಿಕೊಳ್ಳಬೇಕಾದ ಮಾತು. ಪ್ರೀತಿ ಇದ್ದರೂ ವೃತ್ತಿಜೀವನ, ವೈಯಕ್ತಿಕ ಸ್ವಾತಂತ್ರ್ಯ ಮತ್ತು ಸಣ್ಣ-ಪುಟ್ಟ ಮನಸ್ತಾಪಗಳಿಂದ ಸತಿ-ಪತಿ ವಾರವಿಡೀ ಇತರೆ ನಗರಗಳಲ್ಲಿ ಅಥವಾ ಪ್ರತ್ಯೇಕ ಮನೆಗಳಲ್ಲಿ ವಾಸಿಸುತ್ತಾ, ವಾರಾಂತ್ಯದಲ್ಲಿ ಮಾತ್ರ ತಮ್ಮ ಸಂಗಾತಿಯೊಡನೆ ಒಂದಾಗುವ ಹೊಸ ಟ್ರೆಂಡ್ ಮೆಟ್ರೋ ನಗರಿಗಳಲ್ಲಿ ಹೆಚ್ಚಾಗಿದೆ. ಇದನ್ನೇ ಈಗ 'ವೀಕೆಂಡ್ ಮ್ಯಾರೇಜ್' ಎನ್ನಲಾಗಿದೆ.
ಇಬ್ಬರೂ ಉದ್ಯೋಗಸ್ಥ ದಂಪತಿ, ಪ್ರೀತಿ ಅಥವಾ ಆರೋಗ್ಯಕರ ಸಂಬಂಧವಿದ್ದರೂ, ಒಬ್ಬರ ವೃತ್ತಿ ಬೆಳವಣಿಗೆಗಾಗಿ ಮತ್ತೊಬ್ಬರು ತಮ್ಮ ಕೆಲಸವನ್ನು ತ್ಯಾಗ ಮಾಡಲು ರೆಡಿ ಇರವುದಿಲ್ಲ. ಕೆಲಸದ ಒತ್ತಡದ ನಡುವೆ ಮಾನಸಿಕ ನೆಮ್ಮದಿ, ಸ್ನೇಹಿತರಿಗಾಗಿ ಸಮಯ ಮತ್ತು ಸ್ವಾವಲಂಬಿ ಬದುಕನ್ನು ಉಳಿಸಿಕೊಳ್ಳಲು ಇದೇ ಸರಿಯಾದ ಮಾರ್ಗವೆಂದು ಬಯಸಿ, ತಮ್ಮ ಕಂಪನಿಯ ಸಮೀಪದಲ್ಲಿ ಪ್ರತ್ಯೇಕ ಮನೆಯನ್ನು ಮಾಡಿಕೊಂಡು ವಾರಾಂತ್ಯದಲ್ಲಿ ಸಿಗುವ ಒಂದು ಅಥವಾ ಎರಡು ದಿನಗಳು ಮಾತ್ರ ತಮ್ಮವರ ಜತೆಗೆ ಖಾಸಗಿ ಸಮಯವನ್ನು ಕಳೆಯುತ್ತಾರೆ. 

ದೂರವಿದ್ದರೂ ಪಕ್ಕದಲ್ಲೇ ಇದ್ದಂತೆ ಟೆಕ್ನಾಲಜಿ ಫೀಲ್​ 

ಪ್ರಸ್ತುತ ಸ್ಮಾರ್ಟ್​ಫೋನ್​ ಯುಗ ಎಂದಮೇಲೆ ವಿಡಿಯೋ ಕಾಲ್‌, ವ್ಯಾಟ್ಸ್​ಆ್ಯಪ್​ ಮತ್ತು ಸಾಕಷ್ಟು ಡಿಜಿಟಲ್ ಆ್ಯಪ್​ಗಳ ಸಹಾಯದಿಂದ ದಂಪತಿಗಳು ಮೈಲಿಗಳಷ್ಟು ದೂರವಿದ್ದರೂ ತಮ್ಮವರೊಂದಿಗೆ ಪರಸ್ಪರ ದಿನಚರಿಯ ಬಗ್ಗೆ ಸುಲಭವಾಗಿ ಮಾತಾಡಿಕೊಳ್ಳಬಹುದು. ಇದು ಸಂಬಂಧಗಳ ಕೊಂಡಿ ಕಳಚಿ ಬೀಳದಂತೆ ಸಹಾಯ ಮಾಡುತ್ತದೆ. ಆದ್ರೆ, ಅದರ ಉಪಯೋಗ ಮತ್ತು ಭಾವನೆಗಳ ಬೆಸೆಯುವಿಕೆ ಹೇಗಿರಲಿದೆ ಎಂಬುದು ಆಯಾ ದಂಪತಿಗಳ ಮೇಲೆ ನಿರ್ಧರಿತವಾಗಿದೆ. ಕೇಳೋದಕ್ಕೆ ಆಶ್ಚರ್ಯ ಅನಿಸಿದರೂ ಇಂತಹ ಬೆಳವಣಿಗೆಗಳು ಇತ್ತೀಚಿನ ದಿನಗಳಲ್ಲಿ ಹೊಸ ಪ್ರಯೋಗಗಳಂತೆ ಬೆಳಕಿಗೆ ಬರುತ್ತಿವೆ ಅನ್ನೋದು ಕಟುಸತ್ಯ,(ಏಜೆನ್ಸೀಸ್). 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net