

ಜಿಪುಣನೊಬ್ಬ ತಾನು ದುಡಿದು ಕೂಡಿಟ್ಟ ಹಣ, ಬಂಗಾರವನ್ನು ಕುಟುಂಬದೊಂದಿಗೆ ಹಂಚಿಕೊಳ್ಳ ಬೇಕಾಗುತ್ತದೆಂಬ ಭಯದಿಂದ ಮದುವೆಯನ್ನೇ ಆಗಲಿಲ್ಲ. ತನ್ನ ಸಂಪತ್ತಿನ ಬಗ್ಗೆ ಯಾರಿಗೂ ತಿಳಿಯಬಾರ ದೆಂದು ನೆಲಮಾಳಿಗೆ ನಿರ್ವಿುಸಿ ಅದರಲ್ಲಿ ಶೇಖರಿಸಿಟ್ಟಿದ್ದ. ಪ್ರತಿ ರಾತ್ರಿ ಅಲ್ಲಿಗೆ ತಪ್ಪದೇ ಹೋಗಿ ಆ ಎಲ್ಲ ಸಂಪತ್ತನ್ನು ಕಣ್ತುಂಬಿಸಿಕೊಂಡು ವಾಪಸ್ಸಾಗುತ್ತಿದ್ದ. ಅತ್ಯಗತ್ಯವಿರುವ ಖರ್ಚು ಮಾಡಲು ಸಹ ಹಿಂದೆ ಮುಂದೆ ನೋಡುತ್ತಿದ್ದ. ಪೈಸೆೆ ಪೈಸೆ ಉಳಿಸಿ ಕೂಡಿಸಿಡುತ್ತಿದ್ದ. ಒಮ್ಮೆ ಅನೇಕ ದಿನಗಳವರೆಗೆ ಆತ ಕಾಣಿಸಿಕೊಳ್ಳಲಿಲ್ಲ. ಜಿಪುಣನ ನಿಗೂಢ ನಾಪತ್ತೆ ವಿಚಾರ ಊರಲೆಲ್ಲ ಹಬ್ಬಿತು. ಅವನ ಸಂಪತ್ತಿಗೆ ಮತ್ತು ಮನೆಗೆ ಯಾರೂ ವಾರಸುದಾರ ಇಲ್ಲದ್ದರಿಂದ ಕೊನೆಗೆ ಸರ್ಕಾರವೇ ಸಂಪತ್ತನ್ನು ಕಾನೂನಾತ್ಮಕವಾಗಿ ವಶಪಡಿಸಿಕೊಂಡು ಬೇರೆಯವರಿಗೆ ಮಾರಿತು. ಆ ಆಸ್ತಿಯ ಹೊಸ ಒಡೆಯ ಹಲವು ದಿನಗಳ ನಂತರ ಮನೆಯ ವಿಸ್ತರಣೆಗೆ ಮುಂದಾದಾಗ ಆತನಿಗೆ ಅಚ್ಚರಿ ಕಾದಿತ್ತು. ಬಂಗಾರದ ಆಭರಣ ಮತ್ತು ರೂಪಾಯಿಗಳ ರಾಶಿಯ ನಡುವೆ ಜಿಪುಣನ ಕೊಳೆತು ನಾರುತ್ತಿದ್ದ ಶವ ಕಂಡಿತು. ಜಿಪುಣನ ಬಾಯಲ್ಲಿ ಮೇಣದ ಬತ್ತಿಯ ಚೂರಿತ್ತು. ಅಂದರೆ ಬಹುಶಃ ಆತ ಮೇಣದ ಬತ್ತಿ ತಿಂದು ತನ್ನ ಹಸಿವನ್ನು ಇಂಗಿಸಿಕೊಳ್ಳಲು ಪ್ರಯತ್ನಿಸಿದನೆಂದು ಕಾಣುತ್ತದೆ.
ಬಹಳಷ್ಟು ಜನ ಕೂಡಿಡುವ ಹುಚ್ಚಿಗೆ ಸಿಲುಕಿಕೊಳ್ಳುತ್ತಿದ್ದಾರೆ. ಜಿಪುಣತನದಿಂದ ಕೂಡಿಟ್ಟಿದ್ದೆಲ್ಲ ನಾಶವಾಗುತ್ತದೆ. ಯಾವುದಕ್ಕೂ ಉಪಯೋಗವಾಗುವುದಿಲ್ಲ. ಸಿಕ್ಕಾಪಟ್ಟೆ ಆಸ್ತಿ, ಒಡವೆ, ವಸ್ತ್ರಾಭರಣಗಳನ್ನು ಪೇರಿಸಿಡುವುದರಿಂದ ಶ್ರೀಮಂತರಾಗುತ್ತೇವೆಂಬ ಭ್ರಮೆಯಲ್ಲಿದ್ದೇವೆ. ‘ನಿಸರ್ಗ ನಮ್ಮೆಲ್ಲರ ಅಗತ್ಯಗಳನ್ನು ಪೂರೈಸಬಲ್ಲುದೇ ಹೊರತು ನಮ್ಮ ದುರಾಸೆಗಳನ್ನಲ್ಲ’ ಎಂದು ಪ್ರಾಜ್ಞರು ಹೇಳಿದ ಮಾತನ್ನು ಮರೆಯಬಾರದು. ದುರಾಸೆ ದುಃಖಕ್ಕೆ ದಾರಿ ಮಾಡಿಕೊಡುತ್ತದೆ. ಅಗತ್ಯವಿರುವುದನ್ನು ಮಾತ್ರ ಶೇಖರಿಸಿಡುವ ವಿವೇಕವನ್ನು ಬೆಳೆಸಿಕೊಳ್ಳಬೇಕು. ನಾಳೆಗೆ ಇಲ್ಲವೇ ನಾಡಿದ್ದಕ್ಕೆ ಬರುತ್ತದೆಂದು ಆಹಾರವನ್ನು ಮುಚ್ಚಿಟ್ಟು ಕೆಡಿಸುವುದಕ್ಕಿಂತ ಹಸಿದವರಿಗೆ ದಾನ ಮಾಡುವುದು ಉತ್ತಮ. ಅನ್ನದಾನ, ವಿದ್ಯಾದಾನ, ಶ್ರಮದಾನ, ರಕ್ತದಾನ, ಅಂಗಾಂಗ ದಾನ, ಆರ್ಥಿಕ ದಾನಗಳು ಶ್ರೇಷ್ಠತೆಯನ್ನು ಮೆರೆಯುತ್ತವೆ. ಮಾನವೀಯತೆಯನ್ನು ಸಾರುತ್ತವೆ. ಉಳ್ಳವರು, ಉದ್ಯಮಿಗಳು, ಉದಾರಿಗಳು ತಮ್ಮ ಲಾಭಾಂಶದ ಅರ್ಧದಷ್ಟನ್ನು ಹಿಂದುಳಿದವರ, ಸೌಲಭ್ಯವಂಚಿತರ ಊಟ, ವಸತಿ, ಶಾಲಾ ಶುಲ್ಕ, ಪುಸ್ತಕ, ಸಮವಸ್ತ್ರ ಕೊಳ್ಳುವಿಕೆಗಾಗಿ ಖರ್ಚುಮಾಡುವ ನಿದರ್ಶನಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವುದು ಸ್ವಾಗತಾರ್ಹ. ಇಲ್ಲದವರಿಗೆ ಕೊಡುವುದಕ್ಕೆ ದೊಡ್ಡ ಆಸ್ತಿ, ಅಂತಸ್ತು, ಸಿರಿವಂತಿಕೆ ಇರಲೇಬೇಕು ಅಂತೇನಿಲ್ಲ. ಸಮಾನತೆಯನ್ನು ಮೆರೆಯುವ ಉದಾರತನದ ಸಿರಿತನವಿದ್ದರೆ ಸಾಕು.
ಜಗದಲ್ಲಿರುವ ಎಲ್ಲ ವಸ್ತುಗಳ ಉಪಯೋಗ ಎರಡು ರೀತಿಯದ್ದಾಗಿದೆ. ಒಂದು ವ್ಯಕ್ತಿಗತ. ಇನ್ನೊಂದು ಸುತ್ತಲಿನವರನ್ನು ಗಮನದಲ್ಲಿಟ್ಟುಕೊಂಡು ವಿವೇಚನೆಯಿಂದ ಬಳಸುವಂಥದ್ದು. ನಿಜವಾದ ಸಂಪತ್ತು ನಮ್ಮೊಳಗೆ ಎಂಥ ಮಾನವೀಯ ಗುಣಗಳಿವೆ ಎಂಬುದರಲ್ಲಿದೆ ಹೊರತು ನಮ್ಮ ಬಳಿ ಏನಿದೆ ಎಂಬುದರಲ್ಲಿಲ್ಲ. ನಮ್ಮ ಸಂಪಾದನೆಯ ಸ್ವಲ್ಪ ಭಾಗವನ್ನು ಅಗತ್ಯವಿರುವವರಿಗೆ ಕೊಟ್ಟರೆ ಸುಖ, ಸಂತೋಷ ಹೆಚ್ಚುತ್ತದೆ. ನಿಜವಾದ ಸಂತೃಪ್ತಿ ದೊರೆಯುತ್ತದೆ. ನಾವಿರುವ ತಾಣವೇ ಸ್ವರ್ಗವೆನಿಸುತ್ತದೆ.
(ಲೇಖಕಿ ಆಂಗ್ಲಭಾಷಾ ಉಪನ್ಯಾಸಕಿ)