ಕಾರು, ಬೈಕ್​ ಆ್ಯಕ್ಸಿಡೆಂಟ್​ ನಡೆದ ಎಷ್ಟು ದಿನಗಳಲ್ಲಿ ವಿಮೆ ಕ್ಲೈಮ್​ ಮಾಡ್ಬೇಕು? ವಿಳಂಬ​ ಮಾಡಿದ್ರೆ ಏನಾಗುತ್ತೆ? ಇಲ್ಲಿದೆ ಮಾಹಿತಿ

ವಾಹನಗಳ ಇನ್ಶೂರೆನ್ಸ್​ ಕ್ಲೈಮ್​
ವಾಹನಗಳ ಇನ್ಶೂರೆನ್ಸ್​ ಕ್ಲೈಮ್​
Published on

ಪ್ರಮುಖ ಮುಖ್ಯಾಂಶಗಳು

  • ಕಾರು, ಬೈಕ್ ಆ್ಯಕ್ಸಿಡೆಂಡ್​ ಆದ ದಿನವೇ ಇನ್ಶೂರೆನ್ಸ್​ ಏಕೆ ಕ್ಲೈಮ್​ ಮಾಡಬೇಕು?
  • ತಡವಾಗಿ ವಿಮೆ ಕ್ಲೈಮ್ ಮಾಡಿಕೊಂಡರೆ ಏನು ಸಮಸ್ಯೆ?
Vehicle Insurance Claim: ಮನುಷ್ಯನ ಬದುಕೇ ಒಂದು ಇಂಜಿನ್​ ಹೊಂದಿರುವ ಗಾಡಿಯಂತೆ. ದಿನಪೂರ್ತಿ ಶರವೇಗದಲ್ಲಿ ಸಾಗುತ್ತಿರುತ್ತದೆ. ಬೆಳಗ್ಗೆ, ರಾತ್ರಿ ಅನ್ನೋದು ತಿರುಗಿ ನೋಡುವುದರಲ್ಲಿ ಕಳೆದು ಹೋಗುತ್ತದೆ. ಹೀಗಿರುವಾಗ, ಕಚೇರಿಗೆ, ಮನೆಗೆ, ಊರಿಂದ ಊರಿಗೆ ಪ್ರಯಾಣಿಸಲು ಬೈಕ್​ ಅಥವಾ ಕಾರುಗಳನ್ನು ಬಳಸುವ ಮಂದಿ ಅದೆಷ್ಟೋ. ಪ್ರತಿದಿನ ರಸ್ತೆ ಅಪಘಾತಗಳು ಅಪಾರ ಸಂಖ್ಯೆಯಲ್ಲಿ ನಡೆಯುತ್ತಿವೆ. ಈ ನಿಟ್ಟಿನಲ್ಲಿ, ವಾಹನಗಳಿಗೆ ಮಾಡಿಸುವ ಇನ್ಶೂರೆನ್ಸ್​ ಎಷ್ಟು ಮುಖ್ಯ? ಅದನ್ನು ಕ್ಲೈಮ್​ ಮಾಡಿಕೊಳ್ಳುವ ಸಮಯ ಕೂಡ ಏಕೆ ಅವಶ್ಯ ಎಂಬುದರ ವಿವರ ಇಲ್ಲಿದೆ ನೋಡಿ.  
ಇತ್ತೀಚಿನ ದಿನಗಳಲ್ಲಿ ಭಾರತದಲ್ಲಿ ರಸ್ತೆ ಅಪಘಾತಗಳ ಸಂಖ್ಯೆ ವಿಪರೀತವಾಗುತ್ತಿದೆ. ಬೈಕ್​ ಆಗಲಿ, ಕಾರಾಗಲಿ ಅಪಘಾತ ಸಂಭವಿಸಿದ ದಿನವೇ ಇನ್ಶೂರೆನ್ಸ್ ಕಂಪನಿಗೆ ಘಟನೆ ಬಗ್ಗೆ ಮಾಹಿತಿ ಹಂಚಿಕೊಳ್ಳಬೇಕು. ಇದನ್ನು ಅನೇಕರು ಮರೆತು ಬಿಡುತ್ತಾರೆ. ಅದೇ ವಿಮೆಯ ಕ್ಲೈಮ್​ಗೆ ದೊಡ್ಡ ಸಮಸ್ಯೆಯಾಗಿ ಮುಂದಿನ ದಿನಗಳಲ್ಲಿ ಕಾಡುತ್ತದೆ ಎಂಬುದು ಸಾಕಷ್ಟು ಮಂದಿಗೆ ಇಂದಿಗೂ ತಿಳಿದಿಲ್ಲ. 
ಬಹುತೇಕ ಮಂದಿ ಮಾಡುವ ಸಾಮಾನ್ಯ ತಪ್ಪೆಂದರೆ, ಅದುವೆ ಅಪಘಾತ ಸಂಭವಿಸಿದ ಕೂಡಲೇ ವಿಮಾ ಕಂಪನಿಗೆ ಮಾಹಿತಿ ಹಂಚಿಕೊಳ್ಳುವುದಿಲ್ಲ. ಬದಲಿಗೆ ನಿರ್ಲಕ್ಷ್ಯ ವಹಿಸುತ್ತಾರೆ. ಆ್ಯಕ್ಸಿಡೆಂಟ್​ ಆದ ಮೂರ್ನಾಲ್ಕು ಅಥವಾ ಐದಾರು ದಿನಗಳ ನಂತರ ಅಪ್ಲೈ ಮಾಡಿದರಾಯಿತು ಎಂದು ಸಮ್ಮನಾಗುತ್ತಾರೆ. ಇಲ್ಲೇ ನೀವು ಮಾಡುವ ಬಿಗ್ ಮಿಸ್ಟೇಕ್​. ಈ ನಿಮ್ಮ ತಪ್ಪು ಇನ್ಶೂರೆನ್ಸ್​ ರಿಜೆಕ್ಟ್​ ಆಗಲು ಮುಖ್ಯ ಕಾರಣವಾಗುತ್ತದೆ.
ಪ್ರತಿಯೊಂದು ವಿಮಾ ಪಾಲಿಸಿಯೂ ಕಟ್ಟುನಿಟ್ಟಾದ ನಿಯಮಗಳನ್ನು ಫಾಲೋ ಮಾಡುತ್ತವೆ. ಅದರ ಪ್ರಕಾರ, ನಿಗದಿತ ಸಮಯದೊಳಗೆ ಕ್ಲೈಮ್ ಸಲ್ಲಿಸಬೇಕು. ಇಲ್ಲದಿದ್ದರೆ, ಕಂಪನಿಯು ಅದನ್ನು ತಿರಸ್ಕರಿಸುವ ಸಾಧ್ಯತೆಗಳು ಹೆಚ್ಚು. ಈಗ ಅಪಘಾತದ ನಡೆದ ಎಷ್ಟು ದಿನಗಳ ನಂತರ ವಿಮೆ ಕ್ಲೈಮ್ ಸಲ್ಲಿಸಬಹುದು ಎಂಬುದಕ್ಕೆ ಹೀಗಿದೆ ನೋಡಿ ಉತ್ತರ.

24ರಿಂದ 72 ಗಂಟೆಯೊಳಗೆ

ಹೆಚ್ಚಿನ ಪ್ರಮುಖ ವಿಮಾ ಕಂಪನಿಗಳು ಸಾಮಾನ್ಯವಾಗಿ ಅಪಘಾತ ಸಂಭವಿಸಿದ 24ರಿಂದ 72 ಗಂಟೆಗಳ (ಒಂದರಿಂದ ಮೂರು ದಿನಗಳು) ಕ್ಲೈಮ್ ಅಧಿಸೂಚನೆ ಅವಧಿಯನ್ನು ಒದಗಿಸುತ್ತವೆ ಎಂಬುದನ್ನು ನಾವಿಲ್ಲಿ ಗಮನಿಸಬೇಕು. ಪಾಲಿಸಿ ನಿಯಮಗಳಲ್ಲಿ ಈ ಸಮಯ ಮಿತಿ ಮಾಹಿತಿ ಬಹಳ ಮುಖ್ಯವಾಗಿದೆ.

ಸಂಪರ್ಕಿಸಿ ಮಾಹಿತಿ ನೀಡಿ

ಅಪಘಾತವು ಸಣ್ಣದೇ ಇರಲಿ ಅಥವಾ ದೊಡ್ಡದಾಗಿರಲಿ, ನೀವು ಈ ಅವಧಿಯೊಳಗೆ ವಿಮೆ ಸಂಸ್ಥೆಯ ಕಸ್ಟಮರ್​ ಕೇರ್​ ಸಂಖ್ಯೆಗೆ ಕರೆ ಮಾಡುವ ಮೂಲಕ ಅಥವಾ ನೇರವಾಗಿ ಅವರ ಅಧಿಕೃತ ವೆಬ್‌ಸೈಟ್, ಅಪ್ಲಿಕೇಶನ್ ಮೂಲಕ ಅಪಘಾತವನ್ನು ವರದಿ ಮಾಡಬೇಕು. ನಿಮಗೆ ನೀಡಲಾದ ಗಡುವಿಗೂ ಮುನ್ನವೇ ಕಂಪನಿಯನ್ನು ಸಂಪರ್ಕಿಸಿ ಮಾಹಿತಿ ನೀಡಬೇಕು. ಅಕಸ್ಮಾತ್​ ಮಿಸ್​ ಆದರೆ, ವಿಳಂಬಕ್ಕೆ ಸೂಕ್ತ ಕಾರಣವನ್ನು ತಿಳಿಸಬೇಕು. ಇಲ್ಲದಿದ್ದರೆ, ಕಂಪನಿಯು ನಿಮ್ಮ ಕ್ಲೈಮ್ ಅನ್ನು ವಿಳಂಬ ಮಾಡಬಹುದು ಅಥವಾ ತಿರಸ್ಕರಿಸುವ ಎಲ್ಲ ಸಾಧ್ಯತೆಯಿದೆ.
ಕಾರು ಅಪಘಾತ ಬೆನ್ನಲ್ಲೇ ವಿಮಾ ಕಂಪನಿಗೆ ಮಾಹಿತಿ ನೀಡಿ. ಕ್ಲೈಮ್​ಗಾಗಿ ಕೆಲವು ಪ್ರಮುಖ ವಿವರಗಳ ಬಗ್ಗೆ ಜಾಗರೂಕರಾಗಿರಿ. ಉದಾಹರಣೆಗೆ, ಅಪಘಾತದ ಸ್ಥಳ, ವಾಹನಕ್ಕೆ ಹಾನಿ ಮತ್ತು ಸಂಬಂಧಿತ ಫೋಟೋಗಳು ಅಥವಾ ವಿಡಿಯೊಗಳನ್ನು ಒದಗಿಸಿ. ಕಂಪನಿಯ ಸರ್ವೇಯರ್ ಬರುವ ಮೊದಲು ನಿಮ್ಮ ವಾಹನವನ್ನು ಸ್ಥಳೀಯ ಗ್ಯಾರೇಜ್‌ ಅಥವಾ ಕಾರಿನ ಶೋರೂಂಗೆ ರಿಪೇರಿಗೆ ಬಿಡಿ. 

ಇದ್ಯಾಕೆ ಹೀಗೆ?

ಕಂಪನಿಯು ನೀವು ಕಳಿಸುವ ಫೋಟೋ ಅಥವಾ ವಿಡಿಯೋದಿಂದ ಮಾತ್ರ ವಾಹನಕ್ಕೆ ಏನೆಲ್ಲ ಹಾನಿಯಾಗಿದೆ ಎಂಬುದನ್ನು ನಿಖರವಾಗಿ ಅಂದಾಜು ಮಾಡಲು ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ, ಕ್ಲೈಮ್​ ಅರ್ಜಿಯನ್ನು ಭರ್ತಿ ಮಾಡುವಾಗ ಅಪಘಾತದ ಬಗ್ಗೆ ನಿಖರ ಹಾಗೂ ವಿವರವಾದ ಮಾಹಿತಿಯನ್ನು ತುಂಬಿಸಿ. ನೀವು ಮಾಹಿತಿಯನ್ನು ಮರೆಮಾಡಿದ್ದೀರಿ ಅಥವಾ ಸುಳ್ಳು ಮಾಹಿತಿಯನ್ನು ಕೊಟ್ಟಿದ್ದೀರಿ ಎಂದು ಕಂಪನಿಗೆ ಅನುಮಾನ ಬಂದರೆ, ಸರಿಯಾದ ಸಮಯಕ್ಕೆ ನೀವು ಅರ್ಜಿ ಸಲ್ಲಿಸಿದರೂ ಸಹ ನಿಮ್ಮ ಕ್ಲೈಮ್​ ರಿಜೆಕ್ಟ್​ ಆಗಬಹುದು ನೆನಪಿಡಿ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net